ಈ ಬಾರಿ ರಂಗೇರಲಿರುವ ಪುತ್ತೂರು ಶಾರದೋತ್ಸವ

0

  • ಶೋಭಾಯಾತ್ರೆಯಲ್ಲಿ ಅತ್ಯುತ್ತಮ ಕಲಾಪ್ರದರ್ಶನಕ್ಕೆ ನಗದು ಬಹುಮಾನ
  • ಪುತ್ತೂರು ಶಾರದೋತ್ಸವ ಸಮಿತಿ ಸಭೆಯಲ್ಲಿ ನಿರ್ಣಯ

ಪುತ್ತೂರು: ಕಳೆದ 88 ವರ್ಷಗಳಿಂದ ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದ ಸಮಿತಿಯಿಂದ ನಡೆಯುತ್ತಿದ್ದ ಪುತ್ತೂರು ಶಾರದೋತ್ಸವಕ್ಕೆ ಈ ಬಾರಿ ಉತ್ಸವ ಸಮಿತಿ ಜೋಡಣೆಗೊಂಡಿದ್ದು, ಶಾರದೋತ್ಸವಕ್ಕೆ ಹೆಚ್ಚಿನ ಮೆರುಗು ಸಿಗಲಿದೆ. ಶಾರದೋತ್ಸವದ ಶೊಭಾಯಾತ್ರೆಯಲ್ಲಿ ಸ್ತಭ್ದಚಿತ್ರಗಳು, ಕಲಾಪ್ರದರ್ಶನಗಳು ಆಕರ್ಷಣೆಯಾಗಿದ್ದು ಅತ್ಯುತ್ತಮ ತಂಡಗಳಿಗೆ ನಗದು ಬಹುಮಾನ ನೀಡುವ ಕುರಿತು ಪುತ್ತೂರು ಶಾರದೋತ್ಸವ ಸಮಿತಿ ಸಭೆಯಲ್ಲಿ ನಿರ್ಣಯಿಸಲಾಗಿದೆ.
ಸೆ.23ರಂದು ಸಂಜೆ ಶಾರದಾ ಭಜನಾ ಮಂದಿರದಲ್ಲಿ ಉತ್ಸವ ಸಮಿತಿ ಅಧ್ಯಕ್ಷ ರಾಜೇಶ್ ಬನ್ನೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಸಮಿತಿಯ ಸದಸ್ಯರೊಂದಿಗೆ ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಿ ನಿರ್ಣಯ ಕೈಗೊಳ್ಳಲಾಗಿದೆ. ರಾಜೇಶ್ ಬನ್ನೂರುರವರು ಮಾತನಾಡಿ ಮಂದಿರದಲ್ಲಿ 9 ದಿನಗಳ ನವರಾತ್ರಿ ಉತ್ಸವ, ಶಾರದೋತ್ಸವವನ್ನು ಅದ್ದೂರಿಯಿಂದ ಆಚರಿಸಲು ಉದ್ದೇಶಿಸಲಾಗಿದೆ ಎಂದು ಹೇಳಿ ಶಾರದೋತ್ಸವ ವಿವಿಧ ಕಾರ್ಯಕ್ರಮ ಕುರಿತು ಮಾಹಿತಿ ನೀಡಿದರು.
ಜಿಲ್ಲೆಯ ಪ್ರಸಿದ್ಧ ತಂಡಗಳಿಂದ ಸ್ಪರ್ಧೆ: ಶಾರದೋತ್ಸವ ಶೋಭಾಯಾತ್ರೆ ಸಮಿತಿ ಸಂಚಾಲಕ ಸೀತಾರಾಮ ರೈ ಕೆದಂಬಾಡಿಗುತ್ತು ಮಾತನಾಡಿ ಶೋಭಾಯಾತ್ರೆಯಲ್ಲಿ ಜಿಲ್ಲೆಯ ಪ್ರಸಿದ್ಧ ತಂಡಗಳಿಂದ ಸ್ಪರ್ಧೆ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಕುಣಿತ ಭಜನೆ, ಸ್ಯಾಕ್ಸೋಫೋನ್ ವಾದನ, ಚೆಂಡೆ, ಹುಲಿವೇಷ, ಟ್ಯಾಬ್ಲೋ ಮುಂತಾದ ಯಾವುದೇ ಪ್ರದರ್ಶನ ನೀಡಲು ಅವಕಾಶವಿದೆ ಅತ್ಯುತ್ತಮ ಪ್ರದರ್ಶನ ನೀಡಿದ ತಂಡಗಳಿಗೆ ಪ್ರಶಸ್ತಿ, ನಗದು ಬಹುಮಾನ ನೀಡುವ ಕುರಿತು ಚಿಂತನೆ ಮಾಡಲಾಗಿದೆ. ಈ ಕುರಿತು ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಥಳೀಯ ಗಣ್ಯರಿಂದಲೇ ನಿತ್ಯ ಕಾರ್ಯಕ್ರಮ ಉದ್ಘಾಟನೆ: ಉತ್ಸವ ಸಮಿತಿ ಸಂಚಾಲಕ ಪಿ.ಜಿ. ಜಗನ್ನಿವಾಸ ರಾವ್ ಮಾತನಾಡಿ ಪ್ರತಿದಿನ ನಡೆಯುವ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಸ್ಥಳೀಯ ಗಣ್ಯ ವ್ಯಕ್ತಿಗಳಿಂದ ಮಾಡಿಸಬೇಕು. ಶಾರದೆ ವಿಗ್ರಹವನ್ನು ತರುವುದು, ವಿಗ್ರಹ ಜಲಸ್ಥಂಭನ ಮಾಡುವುದು ಅತ್ಯಂತ ಜವಾಬ್ದಾರಿ ಕೆಲಸ ಅದನ್ನು ಮಹಾಲಿಂಗೇಶ್ವರ ದೇವಸ್ಥಾನದ ನಿತ್ಯಕರಸೇವಕರ ತಂಡದ ಸದಸ್ಯರು ಜವಾಬ್ದಾರಿ ವಹಿಸಿಕೊಳ್ಳಬೇಕೆಂದು ವಿನಂತಿಸಿದರು.
ವೇದಿಕೆಯಲ್ಲಿ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಮುರಳೀಕೃಷ್ಣ ಹಸಂತ್ತಡ್ಕ, ಕಾರ್ಯದರ್ಶಿ ಅಜಿತ್ ರೈ ಹೊಸಮನೆ, ಮಂದಿರದ ಅಧ್ಯಕ್ಷ ಸಾಯಿರಾಮ ರಾವ್ ವಿವಿಧ ಸಲಹೆ ಸೂಚನೆ ನೀಡಿದರು. ಮಂದಿರದ ಪ್ರಧಾನ ಕಾರ್ಯದರ್ಶಿ ಜಯಂತ ಉರ್ಲಾಂಡಿ ವಂದಿಸಿದರು.
ಸಭೆಯಲ್ಲಿ ಮಂದಿರದ ಉಪಾಧ್ಯಕ್ಷ, ಎಚ್ ಗೋಪಾಲ ನೈಕ್, ಕೋಶಾಧಿಕಾರಿ ತಾರನಾಥ್ ಹೆಚ್, ಪೊಲೀಸ್ ಇಲಾಖೆ ನಿವೃತ್ತ ಸಹಾಯಕ ಉಪನಿರೀಕ್ಷಕ ರಘುರಾಮ ಹೆಗ್ಡೆ, ರಮಾನಂದ ರಾವ್, ರಾಧಾಕೃಷ್ಣ ರಾವ್, ಲಿಂಗಪ್ಪ ಗೌಡ, ಹೆಚ್. ವಿಜಯಾ, ಸುಧೀರ್, ದೇವದಾಸ್, ಪದ್ಮನಾಭ, ಪಕೀರ ಗೌಡ, ನಿಖಿಲ್‌ರಾಜ್, ಶ್ರೀಧರ ಆಚಾರ್ಯ, ಅಶೋಕ್ ಕುಂಬ್ಲೆ, ಸುದರ್ಶನ್ ಮುರ, ಯೋಗಾನಂದ ರಾವ್, ಜಯಕಿರಣ್, ಪ್ರಸಾದ್ ಮಯ್ಯ, ರಂಜಿತ್ ಜೈನ್, ದಿನೇಶ್ ಪಂಜಿಗ, ಮನೀಶ್, ಜಲಜಾಕ್ಷಿ ಹೆಗ್ಡೆ, ಉಮಾ ನೈಕ್, ಮಲ್ಲಿಕಾ ಜೆ. ಶೆಟ್ಟಿ, ಗುಲಾಬಿ ಮತ್ತಿತರರು ಉಪಸ್ಥಿತರಿದ್ದರು.

ಸಮಯಕ್ಕೆ ಆದ್ಯತೆ ನೀಡಬೇಕು: ಯಾವುದೇ ಕಾರ್ಯಕ್ರಮ ಇರಲಿ ಅಲ್ಲಿ ಸಮಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಉದ್ಘಾಟನೆಗೆ ಸಮಯ ನೀಡಿದ ಬಳಿಕ ಎಷ್ಟೋ ಮಂದಿ ಭಕ್ತರನ್ನು ಕಾಯಿಸುವ ಪರಿಸ್ಥಿತಿ ನಿರ್ಮಾಣ ಆಗಬಾರದು. ಸಮಯಕ್ಕೆ ಸರಿಯಾಗಿ ಶೋಭಾಯಾತ್ರೆ ಹೊರಡಬೇಕು. ಶೋಭಾಯಾತ್ರೆ ಹೋಗುವ ಸಂದರ್ಭದಲ್ಲೂ ಸ್ತಬ್ದ ಚಿತ್ರಗಳ ಪ್ರದರ್ಶನಕ್ಕೂ ಇಂತಿಷ್ಟೆ ಸಮಯ ಕೊಡಬೇಕೆಂಬ ಸಂಕಲ್ಪ ನಮ್ಮ ಮನದಲ್ಲಿದೆ. ಈ ಕುರಿತು ಸದಸ್ಯರ ಸಲಹೆ ಅಗತ್ಯ. ಸೀತಾರಾಮ ರೈ ಕೆದಂಬಾಡಿಗುತ್ತು, ಶಾರದೋತ್ಸವ ಶೋಭಾಯಾತ್ರೆ ಸಮಿತಿ ಸಂಚಾಲಕರು

LEAVE A REPLY

Please enter your comment!
Please enter your name here