ಎಂಬಿಕೆ ಆಯ್ಕೆ ರದ್ಧತಿಗೆ ಆಗ್ರಹ ಕೋಡಿಂಬಾಡಿ ಗ್ರಾ.ಪಂ. ಸಾಮಾನ್ಯ ಸಭೆ

0

ಉಪ್ಪಿನಂಗಡಿ: ಕೋಡಿಂಬಾಡಿ ಗ್ರಾ.ಪಂ.ನ ಸಂಜೀವಿನಿ ಒಕ್ಕೂಟದ ಎಂಬಿಕೆ ಅವರ ಆಯ್ಕೆ ಪ್ರಕ್ರಿಯೆ ಸರಕಾರ ಸೂಚಿಸಿದ ಮಾನದಂಡದಂತೆ ನಡೆದಿಲ್ಲ. ಆದ್ದರಿಂದ ಈ ಆಯ್ಕೆಯನ್ನು ರದ್ದುಗೊಳಿಸಬೇಕೆಂಬ ನಿರ್ಣಯವನ್ನು ಕೋಡಿಂಬಾಡಿ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಕೈಗೊಳ್ಳಲಾಯಿತು.
ಗ್ರಾ.ಪಂ. ಅಧ್ಯಕ್ಷೆ ಮಲ್ಲಿಕಾ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಭವನದಲ್ಲಿ ಸೆ.22ರಂದು ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಜಗನ್ನಾಥ ಶೆಟ್ಟಿ ನಡುಮನೆಯವರು ನಾವು ಯಾವುದೇ ಕಾರಣಕ್ಕೂ ಕೋಡಿಂಬಾಡಿಯ ಮಹಾಲಿಂಗೇಶ್ವರ ಸಂಜೀವಿನಿ ಒಕ್ಕೂಟದ ವಿರೋಧಿಗಳಲ್ಲ. ನಮ್ಮ ಹೋರಾಟ ಒಕ್ಕೂಟದ ವಿರೋಧವೂ ಅಲ್ಲ. ಆದರೆ ಈ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರ (ಎಂಬಿಕೆ)ರಾದ ಸಂಧ್ಯಾ ರಾಮಚಂದ್ರ ಅವರ ಆಯ್ಕೆ ಪ್ರಕ್ರಿಯೆ ಸರಕಾರ ಹೊರಡಿಸಿದ ಸುತ್ತೋಲೆಯಲ್ಲಿದ್ದ ಮಾನದಂಡದಂತೆ ನಡೆದಿಲ್ಲ. ಇದಕ್ಕೆ ಅರ್ಹರಾದ ವ್ಯಕ್ತಿಗಳು ಇಲ್ಲಿದ್ದರೂ, ಅವರು ಸುಳ್ಳು ಮಾಹಿತಿ ನೀಡಿ ಈ ಹುದ್ದೆಯನ್ನು ತನ್ನದಾಗಿಸಿಕೊಂಡಿದ್ದಾರೆ. ಆದ್ದರಿಂದ ಇದನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಗ್ರಾ.ಪಂ. ಅಧ್ಯಕ್ಷೆ ಮಲ್ಲಿಕಾ, ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, ಸದಸ್ಯರಾದ ಗೀತಾ, ಪುಷ್ಪಾ ಲೋಕಯ್ಯ ನಾಯ್ಕ, ಪೂರ್ಣಿಮಾ ಯತೀಶ್ ಶೆಟ್ಟಿ ಧ್ವನಿಗೂಡಿಸಿದರಲ್ಲದೆ, ಎಂಬಿಕೆಯನ್ನು ರದ್ಧತಿಗೆ ನಿರ್ಣಯ ಕೈಗೊಳ್ಳುವಂತೆ ಆಗ್ರಹಿಸಿದರು. ಇದಕ್ಕೆ ಗ್ರಾ.ಪಂ. ಸದಸ್ಯರಾದ ರಾಮಣ್ಣ ಗೌಡ, ರಾಮಚಂದ್ರ ಪೂಜಾರಿ, ಮೋಹಿನಿ, ವಿಶ್ವನಾಥ ವಿರೋಧ ವ್ಯಕ್ತಪಡಿಸಿದರೆ, ಉಷಾ ಲಕ್ಷ್ಮಣ ಪೂಜಾರಿ ತಟಸ್ಥ ನಿಲುವನ್ನು ಕೈಗೊಂಡರು. ಈ ಬಗ್ಗೆ ಪರ- ವಿರೋಧ ಚರ್ಚೆಗಳು ನಡೆದು ಬಳಿಕ ಕೋಡಿಂಬಾಡಿ ಗ್ರಾ.ಪಂ.ನ ಸಂಜೀವಿನಿ ಒಕ್ಕೂಟದ ಎಂಬಿಕೆಯ ಆಯ್ಕೆಯನ್ನು ರದ್ದುಗೊಳಿಸಲು ತಾ.ಪಂ.ನ ಕಾರ್ಯನಿರ್ವಹಣಾಧಿಕಾರಿಯವರನ್ನು ಕೋರಿ ಪತ್ರ ಬರೆಯಲು ನಿರ್ಣಯ ಕೈಗೊಳ್ಳಲಾಯಿತು.

ಗ್ರಾ.ಪಂ. ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು ಮಾತನಾಡಿ, ಭ್ರಷ್ಟಾಚಾರ ರಹಿತ ಆಡಳಿತ ನೀಡುವಲ್ಲಿ ಹಾಗೂ ಗ್ರಾಮದ ಅಭಿವೃದ್ಧಿಯ ವಿಚಾರದಲ್ಲಿ ಎಲ್ಲಾ ಸದಸ್ಯರು ಒಂದಾಗಿ ಸಾಗೋಣ. ಗ್ರಾಮದ ಸ್ವಚ್ಛತೆಗೆ ಮೊದಲ ಆದ್ಯತೆ ನೀಡೋಣ ಎಂದರು. ಸ್ವಚ್ಛತೆಯ ವಿಷಯ ಚರ್ಚೆಯಾಗಿ ಸ್ವಚ್ಛತೆಯ ವಿಷಯದಲ್ಲಿ ಮಾದರಿ ಗ್ರಾ.ಪಂ. ಒಂದನ್ನು ಗುರುತಿಸಿ, ಅಲ್ಲಿಗೆ ಎಲ್ಲರೂ ಭೇಟಿ ನೀಡಿ ಅವರು ಸ್ವಚ್ಛತೆಗೆ ಅನುಸರಿಸುವ ಕ್ರಮಗಳ ಬಗ್ಗೆ ಮಾಹಿತಿ ತಿಳಿಯೋಣ. ನಮ್ಮ ಗ್ರಾಮದಲ್ಲಿರುವ ಎಂಟು ಅಂಗನವಾಡಿಗಳಲ್ಲಿಯೂ ಆ ವ್ಯಾಪ್ತಿಯ ಗ್ರಾಮಸ್ಥರನ್ನು ಸೇರಿಸಿಕೊಂಡು ಸ್ವಚ್ಛತೆಯ ಬಗ್ಗೆ ಸಭೆ ಕರೆದು ಚರ್ಚಿಸೋಣ. ಅಂಗನವಾಡಿಗಳ ಬಳಿಯೇ ಕಸವನ್ನು ಶೇಖರಿಸುವ ವ್ಯವಸ್ಥೆ ಮಾಡಿ ಅಲ್ಲಿಗೆ ಕಸದ ವಾಹನವನ್ನು ಕಳುಹಿಸಿ ಅಲ್ಲಿಂದ ಕಸವನ್ನು ಡಂಪ್ ಮಾಡುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಯಿತು. ಅಲ್ಲದೇ, ವರ್ತಕರ ಸಭೆ ಕರೆದು ಅವರಲ್ಲಿಯೂ ಸ್ವಚ್ಛತೆಯ ಬಗ್ಗೆ ಚರ್ಚಿಸಲು ತೀರ್ಮಾನಿಸಲಾಯಿತು.
ಗ್ರಾ.ಪಂ. ವ್ಯಾಪ್ತಿಯಲ್ಲಿ ಹಲವರು ಹಲವಾರು ವರ್ಷಗಳಿಂದ ಕುಡಿಯುವ ನೀರಿನ ಬಿಲ್ ಬಾಕಿಯಿರಿಸಿಕೊಂಡಿದ್ದು, ಪ್ರತಿ ವಾರ್ಡ್‌ನಲ್ಲಿ ನೀರಿನ ಸ್ಥಾವರದ ಬಳಿ ಕುಡಿಯುವ ನೀರಿನ ಬಳಕೆದಾರರ ಸಭೆ ಕರೆದು ನೀರಿನ ಬಿಲ್ ಅನ್ನು ಪಾವತಿಸುವಂತೆ ಮನವರಿಕೆ ಮಾಡಲು ತೀರ್ಮಾನಿಸಲಾಯಿತು. ಈ ಸಂದರ್ಭ ಸದಸ್ಯ ರಾಮಚಂದ್ರ ಪೂಜಾರಿ ಮಾತನಾಡಿ, ಪ್ರತಿ ಅನುದಾನದಲ್ಲಿ ಎಸ್‌ಸಿಗಳ ಅಭಿವೃದ್ಧಿ ಕಾರ್ಯಕ್ಕೆಂದು ಶೇ.25ರಷ್ಟು ಅನುದಾನವನ್ನು ಮೀಸಲಿಡಬೇಕು. ಕುಡಿಯುವ ನೀರಿನ ಬಳಕೆದಾರರಾದ ಎಸ್‌ಸಿಗಳು ಬಾಕಿಯಿರಿಸಿಕೊಂಡಿರುವ ಕುಡಿಯುವ ನೀರಿನ ಬಿಲ್‌ನಲ್ಲಿ ಶೇ.50ರಷ್ಟು ಹಣವನ್ನು ಅವರು ಕಟ್ಟಿದರೆ, ಶೇ.50ರಷ್ಟು ಹಣವನ್ನು ಪಂಚಾಯತ್ ಎಸ್‌ ಸಿ ಗಳಿಗೆಂದು ಮೀಸಲಿಡುವ ಅನುದಾನದಲ್ಲಿ ಕಟ್ಟೋಣ ಎಂದು ಸಲಹೆ ನೀಡಿದರು. ಇದಕ್ಕೆ ಸಭೆಯಲ್ಲಿ ವಿರೋಧ ವ್ಯಕ್ತವಾಯಿತ್ತಲ್ಲದೆ, ಆ ಹಣವನ್ನು ಅವರ ಸಮುದಾಯದ ಅಭಿವೃದ್ಧಿ ಕಾರ್ಯಗಳಿಗೆ ಬಳಸೋಣ. ನೀರಿನ ಬಿಲ್ ಕಟ್ಟಲು ಬೇಡ ಎಂಬ ಸಲಹೆಗಳು ವ್ಯಕ್ತವಾಯಿತು. ಆಗ ಪ್ರತಿಕ್ರಿಯಿಸಿದ ಪಿಡಿಒ ಎಸ್‌ ಸಿ ಗಳ ಅಭಿವೃದ್ಧಿಗೆಂದು ಮೀಸಲಿಟ್ಟ ಅನುದಾನದಲ್ಲಿ ನೀರಿನ ಬಿಲ್ ಕಟ್ಟಲು ಅವಕಾಶವಿಲ್ಲ ಎಂದು ಚರ್ಚೆಗೆ ತೆರೆ ಎಳೆದರು.
ಸರಕಾರದ ಸುತ್ತೋಲೆ ಪ್ರಕಾರ ಎಲ್ಲಾ ಕಾರ್ಯಕ್ರಮಗಳನ್ನು ನಡೆಸಲು ಹಾಗೂ ಗ್ರಾ.ಪಂ. ವ್ಯಾಪ್ತಿಯಲ್ಲಿ ತಕರಾರಿರುವ ದಾರಿ ಸಮಸ್ಯೆಯನ್ನು ಮಾತುಕತೆಗಳ ಮೂಲಕ ಬಗೆಹರಿಸಲು ಪ್ರಯತ್ನಿಸುವ ಬಗ್ಗೆ ತೀರ್ಮಾನಿಸಲಾಯಿತು.
ಗ್ರಾ.ಪಂ.ನ ಪ್ರಭಾರ ಅಭಿವೃದ್ಧಿ ಅಧಿಕಾರಿ ವಿಲ್ಫ್ರೇಡ್ ಲಾರೆನ್ಸ್ ರೊಡ್ರಿಗಸ್ ಸ್ವಾಗತಿಸಿ, ಕಾರ್ಯದರ್ಶಿ ಅಣ್ಣು ಪಿ. ವಂದಿಸಿದರು.

LEAVE A REPLY

Please enter your comment!
Please enter your name here