ಪುತ್ತೂರು, ಉಪ್ಪಿನಂಗಡಿ ವಿಟ್ಲ ಬ್ಲಾಕ್ ಯುವ ಕಾಂಗ್ರೆಸ್ ಕಾರ್ಯಕರ್ತರ ಸಭೆ

0

ಜಾತಿ, ಧರ್ಮ, ಪಕ್ಷ ನೋಡದೆ ಎಲ್ಲರಿಗೂ ಕಾರ್ಯಕರ್ತರು ನೆರವಾಗಬೇಕು: ಅಶೋಕ್ ರೈ

ಪುತ್ತೂರು: ಕಾಂಗ್ರೆಸ್ ಎಂದೂ ಕೋಮುವಾದವನ್ನು ಮಾಡುವುದಿಲ್ಲ ಮತ್ತು ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ಕೆಲಸವನ್ನು ಮಾಡುವುದಿಲ್ಲ, ಅಭಿವೃದ್ದಿಯೋಂದೇ ಕಾಂಗ್ರೆಸ್ ಧ್ಯೇಯವಾಗಿದ್ದು ಪಕ್ಷದ ಯುವ ಕಾರ್ಯಕರ್ತರು ಜಾತಿ, ಧರ್ಮ, ಪಕ್ಷ ನೋಡದೆ ಸಮಾಜದ ಪ್ರತೀಯೊಬ್ಬರಿಗೂ ನೆರವು ನೀಡಬೇಕು. ಅ ಮೂಲಕ ಪಕ್ಷವನ್ನು ಕಟ್ಟುವ ಕೆಲಸ ಮಾಡಬೇಕು ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಅವರು ಶಾಸಕರ ಸಭಾಂಗಣದಲ್ಲಿ ನಡೆದ ಪುತ್ತೂರು ಮತ್ತು ವಿಟ್ಲ ಉಪ್ಪಿನಂಗಡಿ ಬ್ಲಾಕ್ ಯುವ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ನೆಮ್ಮದಿಯ ಜೀವನ ನಡೆಸಬೇಕು ಎಂಬ ಉದ್ದೇಶದಿಂದ ರಾಜ್ಯದಲ್ಲಿ ಜನತೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದಾರೆ. ಕಾಂಗ್ರೆಸ್ ಜನತೆಗೆ ನೀಡಿದ ಐದು ಗ್ಯಾರಂಟಿ ಯೋಜನೆಗಳು ಪ್ರತೀ ಕುಟುಂಬಕ್ಕೂ ತಲುಪಿದೆ. ಪ್ರತೀಯೊಬ್ಬರೂ ಇದರ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಕಾಂಗ್ರೆಸ್‌ನಿಂದ ಮಾತ್ರ ಜನಪರ ಯೋಜನೆಗಳು ಸಾಧ್ಯ ಎಂಬುದು ಜನರಿಗೆ ಮನದಟ್ಟಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಜನರನ್ನು ಕಾಂಗ್ರೆಸ್‌ನತ್ತ ಸೆಳೆಯುವ ಕೆಲಸವನ್ನು ಮಾಡಬೇಕು. ಧರ್ಮಗಳ ನಡುವೆ ವಿಷ ಬೀಜ ಬಿತ್ತಿ ಅಧಿಕಾರಕ್ಕೇರುವ ಬಿಜೆಪಿಯವರ ಕೋಮು ರಾಜಕೀಯಕ್ಕೆ ಯುವ ಕಾಂಗ್ರೆಸ್ ಕಾರ್ಯಕರ್ತರು ಇತಿಶ್ರೀ ಹಾಡಬೇಕು ಎಂದು ಹೇಳಿದರು. ಊರಿನ ದೇವಸ್ಥಾನ, ದೈವಸ್ಥಾನ, ಮಂದಿರ, ಮಸೀದಿಗಳಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಜನರ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಯುವ ಕಾಂಗ್ರೆಸ್ ಕಾರ್ಯಕರ್ತರು ಒಟ್ಟಾಗಿ ಸಮರೋಪಾದಿಯಲ್ಲಿ ಪಕ್ಷ ಸಂಘಟನೆಯ ಕೆಲಸವನ್ನು ಮಾಡಿದರೆ ಪುತ್ತೂರು ಸೇರಿದಂತೆ ಜಿಲ್ಲೆಯಲ್ಲಿ ಕಾಂಗ್ರೆಸ್ ಹವಾ ಸೃಷ್ಟಿಸಲು ಸಾಧ್ಯವಾಗುತ್ತದೆ. ಉಚಿತ ವೈದ್ಯಕೀಯ ಶಿಬಿರ, 94ಸಿ/94 ಸಿಸಿ, ಅಕ್ರಮ ಸಕ್ರಮವನ್ನು ಮಾಡಿಸಿಕೊಡುವುದು ಸೇರಿದಂತೆ ಮನೆ ಇಲ್ಲದ, ಅನಾರೋಗ್ಯ ಪೀಡಿತ ಕುಟುಂಬವನ್ನು ಭೇಟಿಯಾಗಿ ಅವರಿಗೆ ನೆರವು, ಸಾಂತ್ವನ ನೀಡುವ ಕೆಲಸ ಯುವಕರಿಂದ ಆಗಬೇಕು ಎಂದ ಶಾಸಕರು ಇದಕ್ಕೆ ಬೇಕಾದ ಎಲ್ಲಾ ನೆರವುಗಳನ್ನು ನೀಡಲು ಶಾಸಕನೆಂಬ ನೆಲೆಯಲ್ಲಿ ನಾನು ನಿಮ್ಮೊಂದಿಗಿದ್ದೇನೆ ಎಂದು ಹೇಳಿದರು.
ಯುವ ಕಾಂಗ್ರೆಸ್ ಮುಖಂಡರುಗಳಾದ ಗ್ರಾಪಂ ಸದಸ್ಯ ಕಮಲೇಶ್ ಸರ್ವೆ ಸೇರಿದಂತೆ ಯುವ ಕಾಂಗ್ರೆಸ್ ಕಾರ್ಯಕರ್ತರು ಸಭೆಯಲ್ಲಿ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ನಾವು ಎಲ್ಲದಕ್ಕೂ ಸಿದ್ದವಾಗಿಯೇ ಇದ್ದೇವೆ: ಶ್ರೀಪ್ರಸಾದ್
ಪುತ್ತೂರಿನಲ್ಲಿ ಯುವ ಕಾಂಗ್ರೆಸ್ ದುರ್ಬಲವಾಗಿಲ್ಲ, ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದ್ದೇವೆ. ಕಾರ್ಯಕರ್ತರ ಕೊರತೆಯೂ ಇಲ್ಲ , ಶಾಸಕರ ನೇತೃತ್ವದಲ್ಲಿ ಯುವ ಕಾಂಗ್ರೆಸ್ ಪಕ್ಷವನ್ನು ಕಟ್ಟಲು ಸದಾ ಮುಂಚೂಣಿಯಲ್ಲಿರುತ್ತದೆ ಎಂದು ಹೇಳಿದರು. ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳಲ್ಲಿ ಧರ್ಮದ ಕಾರ್ಯಗಳು, ಧರ್ಮದ ಬಗ್ಗೆ, ಆಚಾರ, ವಿಚಾರಗಳ ಬಗ್ಗೆ ಹಿಂದೂ ಬಂಧುಗಳಿಗೆ ಬೋಧನೆ ಮಾಡುವ ಬದಲು ಧಾರ್ಮಿಕ ಕೇಂದ್ರಗಳಲ್ಲಿ ನಡೆಯುವ ಉತ್ಸವಗಳಿಗೆ ಕೆಲವೊಂದು ಕೋಮುವಾದಿಗಳನ್ನು ಕರೆಸಿ ಭಾಷಣ ಮಾಡಿಸಿ ಧರ್ಮದ ನಡುವೆ ವಿಷ ಬೀಜ ಬಿತ್ತುವ ಕೆಲಸವನ್ನು ಮಾಡಲಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಸರಕಾರ ಮುಂದಾಗಬೇಕು. ಪವಿತ್ರ ಧಾರ್ಮಿಕ ಸ್ಥಳಗಳನ್ನು ಬಿಜೆಪಿ ರಾಜಕೀಯಕ್ಕೆ ಬಳಕೆ ಮಾಡುತ್ತಿದೆ. ಕಾಂಗ್ರೆಸ್ ಎಂದೂ ಧರ್ಮದ ಆಧಾರದಲ್ಲಿ ದೇಶವನ್ನು, ಸಮಾಜವನ್ನು ಒಡೆಯುವ ಕೆಲಸ ಮಾಡಿಲ್ಲ. ಬಿಜೆಪಿ ಜೊತೆ ನಂಟು ಹೊಂದು ಹಿಂದೂ ಸಂಘಟನೆಗಳು ಎಂಬ ಹಣೆ ಪಟ್ಟಿ ಇರುವ ಎಲ್ಲಾ ಸಂಘಟನೆಗಳು ಹಿಂದೂ ಧರ್ಮದ, ಹಿಂದೂ ಧರ್ಮಿಯರ ಶ್ರೇಯಸ್ಸಿಗೆ ಕೆಲಸ ಮಾಡುತ್ತಿಲ್ಲ ಬದಲಾಗಿ ಅವುಗಳೆಲ್ಲವೂ ಬಿಜೆಪಿ ಓಟು ಬ್ಯಾಂಕ್ ಸೃಷ್ಟಿಸುವ ಸಂಘಟನೆಗಳಾಗಿದೆ ಎಂದು ಆರೋಪಿಸಿದರು.
ಹಿಂದೂ ಸಂಘಟನೆಯೆಂದರೆ ಅದರಲ್ಲಿ ಪ್ರತೀಯೊಬ್ಬ ಹಿಂದೂ ಇರಬೇಕು ಆದರೆ ಬಿಜೆಪಿ ಕೃಪಾಪೋಷಿತ ಹಿಂದೂ ಸಂಘಟನೆಗಳಲ್ಲಿ ಬಿಜೆಪಿಗೆ ಪೂರಕವಾಗಿರುವ ಹಿಂದುಗಳಿಗೆ ಮಾತ್ರ ಅವಕಾಶ ಕಲ್ಪಿಸಿ ಆ ಮೂಲಕ ಸಮಾಜದಲ್ಲಿ ದ್ವೇಷವನ್ನು ಸೃಷ್ಟಿಸುವ ಕೆಲಸ ಮಾಡುತ್ತಿದ್ದು ಕಾಂಗ್ರೆಸ್ ಸರಕಾರ ಇದಕ್ಕೆಲ್ಲಾ ಕಡಿವಾಣ ಹಾಕಬೇಕು ಎಂದು ಹೇಳಿದರು.

ಪುತ್ತೂರು ಎಸಿಎಫ್ ಬಿಜೆಪಿ ವಕ್ತಾರರೋ?
ನಾನು ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಕಾರ್ಯಕರ್ತನಾಗಿದ್ದೇನೆ, ನನ್ನ ದಿನದ ಬಹುತೇಕ ಸಮಯವನ್ನು ಪಕ್ಷಕ್ಕಾಗಿ ಮೀಸಲಿಟ್ಟಿದ್ದೇನೆ. ನಾನು ಕಾಂಗ್ರೆಸ್ ಪರ ಕೆಲಸ ಮಾಡುತ್ತಿದ್ದೇನೆ ಎಂಬ ಏಕೈಕ ಕಾರಣಕ್ಕೆ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ನನ್ನ ಸಹೋದರನಿಗೆ ಪುತ್ತೂರು ಅರಣ್ಯ ಇಲಾಖೆಯ ಎಸಿಎಫ್ ರವರು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಎಸಿಎಫ್‌ರವರು ಬಿಜೆಪಿ ವಕ್ತಾರನಂತೆ ಕೆಲಸ ಮಾಡುತ್ತಿದ್ದಾರೆ ಎಂದು ಕೊಳ್ತಿಗೆ ಕಾಂಗ್ರೆಸ್ ಮುಖಂಡ ಪವನ್ ಆರೋಪಿಸಿದರು. ಪವನ್ ಸೇರಿದಂತೆ ಕಾರ್ಯಕರ್ತರ ತಂಡ ಎಸಿಎಫ್ ರವರ ಕಾರ್ಯವೈಖರಿ ಬಗ್ಗೆ ಶಾಸಕರಿಗೆ ದೂರು ನೀಡಿದರು. ಕಾಂಗ್ರೆಸ್ ಕಾರ್ಯಕರ್ತರನ್ನು ಹುಡುಕಿ ಹುಡುಕಿ ಅವರಿಗೆ ಮಾನಸಿಕ ಕಿರುಕುಳ ನೀಡುವ ಕೆಲಸವನ್ನು ಎಸಿಎಫ್ ಮಾಡುತ್ತಿದ್ದು ನಾವು ಹೇಗೆ ಪಕ್ಷಕ್ಕಾಗಿ ಕೆಲಸ ಮಾಡುವುದು ಇಂಥವರ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಪವನ್ ಮತ್ತು ಇತರರು ಆಗ್ರಹಿಸಿದರು. ಪ್ರತಿಕ್ರಿಯೆ ನೀಡಿದ ಶಾಸಕರು ಪಕ್ಷದ ಕಾರ್ಯಕರ್ತರಿಗೆ ಯಾರೇ ಆಗಲಿ ವೃಥಾ ಅನ್ಯಾಯ ಮಾಡಿದರೆ ನಾನು ಸುಮ್ಮನೆ ಇರುವುದಿಲ್ಲ, ಕಾರ್ಯಕರ್ತರೇ ಪಕ್ಷಕ್ಕೆ ಜೀವಾಳವಾಗಿದ್ದಾರೆ. ಈ ಬಗ್ಗೆ ವಿಚಾರಿಸುವುದಾಗಿ ಶಾಸಕರು ಹೇಳಿದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಬಿ ವಿಶ್ವನಾಥ ರೈ ಮತ್ತು ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ಡಾ. ರಾಜಾರಾಂ ಅವರು ಮಾತನಾಡಿ ಯುವ ಕಾಂಗ್ರೆಸ್ ಕಾರ್ಯಕರ್ತರು ಚುನಾವಣೆ ವೇಳೆ ಹುಮ್ಮಸ್ಸಿನಿಂದ ಕೆಲಸ ಮಾಡಿದ ಕಾರಣ ಪಕ್ಷಕ್ಕೆ ಗೆಲುವಾಗಿದೆ. ಯುವ ಕಾಂಗ್ರೆಸ್ ಪಡೆಯನ್ನು ಇನ್ನಷ್ಟು ಗಟ್ಟಿಯಾಗಿ ಕಟ್ಟುವಲ್ಲಿ ಎಲ್ಲರೂ ಸಹಕಾರ ನೀಡಬೇಕು. ಬ್ಲಾಕ್ ಕಾಂಗ್ರೆಸ್ ಸದಾ ನಿಮ್ಮ ಜೊತೆ ಇದ್ದು ಸಕಲ ನೆರವನ್ನು ನೀಡಲಿದೆ ಎಂದು ಹೇಳಿದರು.
ವೇದಿಕೆಯಲ್ಲಿ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಫಾರೂಕ್ ಪೆರ್ನೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here