ತಾ.ಅಮೆಚೂರು ಕಬಡ್ಡಿ ಅಸೋಸಿಯೇಶನ್‌ರವರ ಸಾರಥ್ಯದ ಅಹರ್ನಿಶಿ ಪ್ರೊ ಕಬಡ್ಡಿ ಹಬ್ಬಕ್ಕೆ ತೆರೆ –

0

*ಹೊಳ್ಳ ಕ್ರ್ಯಾಕರ‍್ಸ್ ಪುತ್ತೂರು ಚಾಂಪಿಯನ್, ವರುಣ್ ಬೆಳ್ತಂಗಡಿ ರನ್ನರ್ಸ್

*ಸುದ್ದಿ ಲೈವ್‌ಗೂ, ಕ್ರೀಡಾಂಗಣಕ್ಕೂ ನಿರೀಕ್ಷೆಗೂ ಮೀರಿ ಹರಿದು ಬಂದ ಜನಸಾಗರ

ಪುತ್ತೂರು: ಪುತ್ತೂರಿನ ಇತಿಹಾಸದಲ್ಲಿಯೇ ಗ್ರಾಮೀಣ ಕ್ರೀಡೆಯಾದ ಕಬಡ್ಡಿಗೂ ತಾಲೂಕಿನ ವಿವಿಧೆಡೆಗಳಿಂದ ಜನರು ಅಗಮಿಸಿ ನಿರೀಕ್ಷೆಗಿಂತಲೂ ಮೀರಿ ಪ್ರೋತ್ಸಾಹ ಕೊಡುತ್ತಿದ್ದಾರೆ. ಒಂದೆಡೆ ಧಾರಾಕಾರ ಮಳೆ ಸುರಿದರೂ ಒಂದರ್ಥದಲ್ಲಿ ಕಿಲ್ಲೆ ಮೈದಾನವು ಜನ ಮರುಳೋ, ಜಾತ್ರೆ ಮರುಳೋ ಎಂಬಂತೆ ಕಿಕ್ಕಿರಿದ ಜನಜಂಗುಳಿಯಿಂದ ಕೂಡಿದ ರಸದೌತಣ ನೀಡುವ ಜಾತ್ರೆಯಾಗಿ ಬದಲಾಗಿದೆ ಎಂದೇ ಹೇಳಬಹುದು.
ಹೌದು, ರಾಜ್ಯ ಅಮೆಚೂರು ಕಬಡ್ಡಿ ಅಸೋಸಿಯೇಶನ್, ದ.ಕ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಹಾಗೂ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ವತಿಯಿಂದ ಶ್ರೀ ಗಣೇಶೋತ್ಸವದ ಪ್ರಯುಕ್ತ ಅಂತರ್ರಾಷ್ಟ್ರೀಯ ಕಬಡ್ಡಿ ಆಟಗಾರ ದಿ.ಉದಯ ಚೌಟರವರ ಸ್ಮರಣಾರ್ಥ ಸೆ.೩೦ ರಂದು ಕಿಲ್ಲೆ ಮೈದಾನದಲ್ಲಿ ಮ್ಯಾಟ್ ಅಂಕಣದಲ್ಲಿ ನಡೆದ ಆಹ್ವಾನಿತ ಪುರುಷರ ವಿಭಾಗದ ಪ್ರೊ ಕಬಡ್ಡಿ ಮಾದರಿಯ ಅಹರ್ನಿಶಿ ಕಬಡ್ಡಿ ಪಂದ್ಯಾಟದಲ್ಲಿ ಕಂಡುಬಂದಂತಹ ಜನಜಂಗುಳಿಯ ಜಾತ್ರೆಯಾಗಿದೆ.

ಹೊಳ್ಳ ಕ್ರ್ಯಾಕರ‍್ಸ್ ಚಾಂಪಿಯನ್:
ಹೊಳ್ಳ ಕ್ರ್ಯಾಕರ‍್ಸ್ ಪುತ್ತೂರು ಹಾಗೂ ವರುಣ್ ಟ್ರಾವೆಲ್ಸ್ ಬೆಳ್ತಂಗಡಿ ಇವುಗಳ ನಡುವೆ ನಡೆದ ರೋಚಕ ಫೈನಲ್ ಹಣಾಹಣಿಯಲ್ಲಿ ಹೊಳ್ಳ ಕ್ರ್ಯಾಕರ‍್ಸ್ ತಂಡವು ವರುಣ್ ಬೆಳ್ತಂಗಡಿ ತಂಡವನ್ನು 32-29 ಅಂಕಗಳಿಂದ ಸೋಲಿಸಿ ಚಾಂಪಿಯನ್ ಆಗಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಇದೇ ಮೊದಲ ಬಾರಿಗೆ ಧರೇಶ್ ಹೊಳ್ಳ ಮಾಲಕತ್ವದ ಹೊಳ್ಳ ಕ್ರ್ಯಾಕರ‍್ಸ್ ಪುತ್ತೂರು ತಂಡವು ಅಮೆಚೂರು ಟೂರ್ನಿಗೆ ಕಣಕ್ಕಿಳಿದಿತ್ತು ಮಾತ್ರವಲ್ಲ ಭಾಗವಹಿಸಿದ ಪ್ರಥಮ ಟೂರ್ನಿಯಲ್ಲಿಯೇ ಪ್ರಶಸ್ತಿಯನ್ನು ಎತ್ತಿ ಹಿಡಿಯುವಲ್ಲಿ ಸಫಲರಾಗಿದ್ದಾರೆ. ತೀವೃ ಪ್ರತಿರೋಧ ತೋರಿದ ವರುಣ್ ಬೆಳ್ತಂಗಡಿ ತಂಡವು ಮೂರು ಅಂಕಗಳಿಂದ ಸೋಲೊಪ್ಪಿಕೊಂಡು ರನ್ನರ‍್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು. ಸೆಮಿಫೈನಲಿನಲ್ಲಿ ಚಾಂಪಿಯನ್ ಹೊಳ್ಳ ಕ್ರ್ಯಾಕರ‍್ಸ್ ಎದುರು ಸೋತ ಆಳ್ವಾಸ್ ಮೂಡಬಿದ್ರೆ ತಂಡವು ಮೂರನೇ ಸ್ಥಾನಿಯಾಗಿ ಹಾಗೂ ಸೆಮಿಫೈನಲಿನ ಮತ್ತೊಂದು ಪಂದ್ಯದಲ್ಲಿ ರನ್ನರ‍್ಸ್ ಪ್ರಶಸ್ತಿ ಪಡೆದ ವರುಣ್ ಬೆಳ್ತಂಗಡಿಯೆದುರು ಪರಾಭವಗೊಂಡ ಬ್ಯಾಂಕ್ ಆಫ್ ಬರೋಡ ತಂಡವು ಚತುರ್ಥ ಸ್ಥಾನವನ್ನು ಪಡೆಯಿತು.

ಬಹುಮಾನಗಳು:
ಚಾಂಪಿಯನ್ ಹೊಳ್ಳ ಕ್ರ್ಯಾಕರ‍್ಸ್ ಪುತ್ತೂರು ತಂಡವು ರೂ.50 ಸಾವಿರ ನಗದು ಹಾಗೂ ಶಾಶ್ವತ ಫಲಕ, ರನ್ನರ‍್ಸ್ ಪ್ರಶಸ್ತಿ ಪಡೆದ ವರುಣ್ ಟ್ರಾವೆಲ್ಸ್ ಬೆಳ್ತಂಗಡಿ ತಂಡವು ರೂ.30 ಸಾವಿರ ನಗದು ಹಾಗೂ ಶಾಶ್ವತ ಫಲಕ, ತೃತೀಯ ಸ್ಥಾನಿ ಆಳ್ವಾಸ್ ಮೂಡಬಿದ್ರೆ ಹಾಗೂ ಚತುರ್ಥ ಸ್ಥಾನಿ ಬ್ಯಾಂಕ್ ಆಫ್ ಬರೋಡ ತಂಡಗಳು ತಲಾ ರೂ.20 ಸಾವಿರ ನಗದು ಹಾಗೂ ಶಾಶ್ವತ ಫಲಕವನ್ನು ಗಳಿಸಿದವು. ಉತ್ತಮ ರೈಡರ್ ಆಗಿ ವರುಣ್ ಬೆಳ್ತಂಗಡಿ ತಂಡದ ನೀಳಕಾಯದ ಗೋಯು, ಉತ್ತಮ ಹಿಡಿತಗಾರನಾಗಿ ಹೊಳ್ಳ ಕ್ರ್ಯಾಕರ‍್ಸ್‌ನ ನವೀನ್ ದಲಾಲ್, ಉತ್ತಮ ಸವ್ಯಸಾಚಿಯಾಗಿ ಹೊಳ್ಳ ಕ್ರ್ಯಾಕರ‍್ಸ್ ತಂಡದ ಆದರ್ಶ್‌ರವರು ಪಡೆದುಕೊಂಡರು. ಸುಮಾರು ರೂ.40 ಸಾವಿರ ಮೌಲ್ಯದ ಶಾಶ್ವತ ಫಲಕ ಹಾಗೂ ಸರಕಾರಿ ಆಸ್ಪತ್ರೆಯ ‘ಡಿ’ ಗ್ರೂಪ್ ನೌಕರರಿಗೆ ನೀಡಲ್ಪಡುವ ಸಮವಸ್ತ್ರಗಳನ್ನು ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಪರಿಚಯಿಸಲ್ಪಡುವ ಪೊಪ್ಯುಲ್ ಐಸ್‌ಕ್ರೀಂ ಪ್ರಾಯೋಜಕತ್ವ ವಹಿಸಿತ್ತು.

ಲೀಗ್ ಮಾದರಿ ಪಂದ್ಯ:
12 ಬಲಿಷ್ಟ ತಂಡಗಳು ಈ ಪಂದ್ಯಾಕೂಟದಲ್ಲಿ ಭಾಗವಹಿಸಬೇಕಾಗಿದ್ದು ಅಂತಿಮವಾಗಿ 8 ಬಲಿಷ್ಟ ತಂಡಗಳು ಟೂರ್ನಿಯಲ್ಲಿ ಕಣಕ್ಕಿಳಿದಿತ್ತು. ಈ 8 ತಂಡಗಳನ್ನು ‘ಎ’ ಹಾಗೂ ‘ಬಿ’ ವಿಭಾಗಗಳನ್ನಾಗಿ ವಿಂಗಡಿಸಿದ್ದು, ‘ಎ’ ವಿಭಾಗದಲ್ಲಿ ಬನಾರಿ ಸ್ಪೋರ್ಟ್ಸ್, ವಿಘ್ನೇಶ್ವರ, ಬ್ಯಾಂಕ್ ಆಫ್ ಬರೋಡ, ಹೊಳ್ಳ ಕ್ರ್ಯಾಕರ‍್ಸ್ ಹಾಗೂ ‘ಬಿ’ ವಿಭಾಗದಲ್ಲಿ ವರುಣ್ ಟ್ರಾವೆಲ್ಸ್ ಬೆಳ್ತಂಗಡಿ, ಉಮಾಮಹೇಶ್ವರಿ, ಆಳ್ವಾಸ್ ಮೂಡಬಿದ್ರೆ, ಕಲ್ಲೇಗ ಟೈಗರ‍್ಸ್ ಪುತ್ತೂರು ತಂಡಗಳು ಸ್ಥಾನ ಪಡೆದಿತ್ತು. ಎರಡೂ ವಿಭಾಗಗಳಲ್ಲಿನ ಪಂದ್ಯಗಳನ್ನು ಲೀಗ್ ಮಾದರಿಯಲ್ಲಿ ಆಡಿಸಿದ್ದು ಪ್ರತಿ ತಂಡಕ್ಕೆ ಲೀಗ್ ಹಂತದಲ್ಲಿ ಮೂರು ಪಂದ್ಯಗಳನ್ನು ಆಡುವ ಅವಕಾಶವನ್ನು ಪಡೆದಿತ್ತು. ಎರಡೂ ವಿಭಾಗದಲ್ಲಿನ ಅಗ್ರ ಎರಡು ತಂಡಗಳು ಸೆಮಿಫೈನಲಿಗೆ ಅರ್ಹತೆ ಪಡೆಯುವ ಅವಕಾಶ ಹೊಂದಲಾಗಿದ್ದು, ಈ ನಿಟ್ಟಿನಲ್ಲಿ ‘ಎ’ ವಿಭಾಗದಲ್ಲಿ ಪ್ರಥಮ ಸ್ಥಾನಿಯಾಗಿ ಬ್ಯಾಂಕ್ ಆಫ್ ಬರೋಡ, ದ್ವಿತೀಯ ಸ್ಥಾನಿಯಾಗಿ ಹೊಳ್ಳ ಕ್ರ್ಯಾಕರ‍್ಸ್ ಹಾಗೂ ‘ಬಿ’ ವಿಭಾಗದಲ್ಲಿ ಪ್ರಥಮ ಸ್ಥಾನಿಯಾಗಿ ಆಳ್ವಾಸ್ ಮೂಡಬಿದ್ರೆ, ದ್ವಿತೀಯ ಸ್ಥಾನಿಯಾಗಿ ವರುಣ್ ಬೆಳ್ತಂಗಡಿ ತಂಡಗಳು ಸ್ಥಾನ ಪಡೆದಿದ್ದವು. ಈ ಮೊದಲು ನಡೆದ ಫಿಲೋಮಿನಾ ಕಾಲೇಜು, ಫಿಲೋಮಿನಾ ಪದವಿ ಪೂರ್ವ ಕಾಲೇಜು, ವಿವೇಕಾನಂದ ಕಾಲೇಜು, ಪೊಲೀಸ್ ತಂಡಗಳ ನಡುವಣ ಪ್ರದರ್ಶನ ಪಂದ್ಯ ಕೂಡ ಲೀಗ್ ಮಾದರಿಯಲ್ಲಿಯೇ ನಡೆದಿತ್ತು.

ಪ್ರೊ ಕಬಡ್ಡಿ ಆಟಗಾರರ ದಂಡು:
ಈ ಬಾರಿಯ ಪ್ರೊ ಕಬಡ್ಡಿ ಮಾದರಿಯ ಟೂರ್ನಿಯಲ್ಲಿ ಅಂತರ್ರಾಷ್ಟ್ರೀಯ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಭಾಗವಹಿಸಿದ ಘಟಾನುಘಟಿ ಆಟಗಾರರ ದಂಡು ಕಣಕ್ಕಿಳಿದಿದ್ದರು. ಪುತ್ತೂರಿನ ಪ್ರಶಾಂತ್ ರೈ ಕೈಕಾರ, ಸುಕೇಶ್, ಮಾರ್ಲ, ಆದರ್ಶ್, ಸಚಿನ್, ಪ್ರೊ ಕಬಡ್ಡಿಯ ತಮಿಳ್ ತಲೈವಾಸ್ ತಂಡದ ಆಟಗಾರರು, ಹಿಮಾಚಲ ಪ್ರದೇಶ, ಹರಿಯಾಣದ ಆಟಗಾರರು ಸೇರಿದಂತೆ ಹಲವಾರು ಮಂದಿ ಐಕಾನ್ ಆಟಗಾರರು ವಿವಿಧ ತಂಡಗಳನ್ನು ಪ್ರತಿನಿಧಿಸಿ ಪಂದ್ಯಾಟದ ಕಳೆಯನ್ನು ನಿಜಕ್ಕೂ ಹೆಚ್ಚಿಸಿದ್ದರು. ಲೀಗ್ ಸೇರಿದಂತೆ ಪ್ರತೀ ಪಂದ್ಯಗಳು ರೋಚಕತೆಯಿಂದ ಕೂಡಿದ್ದು ಬೆರಳೆಣಿಕೆಯ ಅಂಕಗಳೊಂದಿಗೆ ಪಂದ್ಯಗಳನ್ನು ಸೋಲುವಷ್ಟರ ಮಟ್ಟಿಗೆ ಪಂದ್ಯಗಳು ಸಾಗಿತ್ತು.

ಪ್ರೇಕ್ಷಕರಿಂದ ಶಿಳ್ಳೆ, ಚಪ್ಪಾಳೆ:
ಮತ್ತಷ್ಟು ಮತ್ತಷ್ಟು ಕ್ರೀಡಾಭಿಮಾನಿಗಳು ಆಗಮಿಸುವ ನಿರೀಕ್ಷೆಯಿಂದ ಪ್ರೇಕ್ಷಕರಿಗೆ ಅನುಕೂಲವಾಗಿಸುವ ನಿಟ್ಟಿನಲ್ಲಿ ಕ್ರೀಡಾಂಗಣದಲ್ಲಿ ಗ್ಯಾಲರಿಯನ್ನು ನಿರ್ಮಿಸಲಾಗಿದ್ದರೂ ಹಿಂಡು ಹಿಂಡಾಗಿ ಆಗಮಿಸಿದ ಕ್ರೀಡಾಭಿಮಾನಿಗಳ ದಂಡು ಗ್ಯಾಲರಿಯಲ್ಲಿ ಕುಳಿತು ಕಬಡ್ಡಿಯನ್ನು ವೀಕ್ಷಿಸುವ ದೃಶ್ಯ ನಿಜಕ್ಕೂ ರೋಮಾಂಚನವಾಗಿತ್ತು. ಕಬಡ್ಡಿ ಆಟಗಾರರನ್ನು ಶಿಳ್ಳೆಗಳಿಂದ, ಚಪ್ಪಾಳೆ ಮೂಲಕ ಹುರಿದುಂಬಿಸುತ್ತಿರುವುದು ನೋಡಿದಾಗ ಗ್ರಾಮೀಣ ಕಬಡ್ಡಿಗೆ ಎಷ್ಟರಮಟ್ಟಿಗೆ ಕ್ರೇಝ್ ಇದೆ ಎಂದು ಗೊತ್ತಾಗುತ್ತದೆ. ರೋಚಕ ಕ್ಷಣಗಳಿಂದ ಕೂಡಿದ ಈ ಪಂದ್ಯಾಟವು ಮರುದಿನ ಬೆಳಗ್ಗಿನ ಜಾವ ಐದು ಗಂಟೆ ತನಕ ಮುಂದುವರೆದು ಯಶಸ್ವಿಯಾಗಿ ಸಮಾಪನಗೊಂಡಿದ್ದು ಆಯೋಜಿಸಿದ ಸಂಘಟಕರ ಶ್ರಮ ಅಕ್ಷರಶಃ ಸಾರ್ಥಕ್ಯ ಪಡೆದಿದೆ ಎಂದರೆ ತಪ್ಪಾಗಲಾರದು.

ಸನ್ಮಾನ/ಸಮವಸ್ತ್ರ ವಿತರಣೆ:
ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ.ದೀಪಕ್ ರೈ, ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲುಬು ತಜ್ಞ ಡಾ.ಅಜಯ್ ಹಾಗೂ ವೈದ್ಯಕೀಯ ತಜ್ಞ ಡಾ.ಯದುರಾಜ್‌ರವರನ್ನು ಅಮೆಚೂರು ಕಬಡ್ಡಿ ಅಸೋಸಿಯೇಶನ್ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು. ಅಲ್ಲದೆ ಸರಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ‘ಡಿ’ ಗ್ರೂಪ್ ನೌಕರರಾದ ಪುರಂದರ ಟಿ, ಸುಧಾಕರ, ಹರೀಶ್, ಅವಿನ್, ಲೋಲಾಕ್ಷ, ಶರತ್, ಸುನಿಲ್, ವಿಖ್ಯಾತ್, ತಿಮ್ಮಪ್ಪ, ನೆಲ್ಸನ್, ರವಿ, ಚಂದ್ರಶೇಖರ, ಹುಕ್ರಪ್ಪರವರುಗಳನ್ನು ಸನ್ಮಾನಿಸಿ ಸಮವಸ್ತ್ರ ವಿತರಣೆಯನ್ನು ಮಾಡಲಾಯಿತು.

ತೀರ್ಪುಗಾರರು/ವೀಕ್ಷಕ ವಿವರಣೆ:
ಪಂದ್ಯಾಕೂಟದಲ್ಲಿ ರೆಫ್ರೀ ಬೋರ್ಡ್ ಅಧ್ಯಕ್ಷ ಆಸಿಫ್ ತಂಬುತ್ತಡ್ಕರವರ ನೇತೃತ್ವದಲ್ಲಿ ತೀರ್ಪುಗಾರರಾಗಿ ರೆಫ್ರಿ ಬೋರ್ಡ್‌ನ ಅಧ್ಯಕ್ಷ ಆಸಿಫ್ ತಂಬುತ್ತಡ್ಕ ಸೇರಿದಂತೆ ಪುರುಷೋತ್ತಮ ಕೋಲ್ಫೆ, ರಾಜೇಶ್ ರ‍್ಯ ಸಂಪ್ಯ, ಸತ್ಯನಾರಾಯಣ ರೈ, ರಾಧಾಕೃಷ್ಣ ಬೆಟ್ಟಂಪಾಡಿ, ಸುಧೀರ್ ರೈ, ಸುಧಾಕರ್ ರೈ, ಅಶೋಕ್ ಪಟ್ಟೆ, ಝಿಯಾದ್ ರೆಂಜ, ವಿಜಿತ್ ನಿಡ್ಪಳ್ಳಿ, ಸಿದ್ಧೀಕ್ ತಂಬುತ್ತಡ್ಕ, ಹೊನ್ನಪ್ಪ ಕೊಡಿಪಾಡಿ, ಕಾರ್ತಿಕ್ ಪುತ್ತೂರು, ರವಿಕುಮಾರ್ ಮೈಸೂರ್, ಕೃಷ್ಣಾನಂದ ಬೆಳ್ತಂಗಡಿ, ನವೀನ್ ಜೈನ್ ಮೂಡಬಿದ್ರೆ, ರಫೀಕ್ ತೊಕ್ಕೊಟ್ಟುರವರು ಸಹಕರಿಸಿದರು. ಪಂದ್ಯಾಟದ ಕ್ಷಣಕ್ಷಣದ ಮಾಹಿತಿಯನ್ನೊಳಗೊಂಡ ವೀಕ್ಷಕ ವಿವರಣೆಯನ್ನು ನಝೀರ್ ಬೆಳ್ತಂಗಡಿ, ಸಂದೇಶ್ ಉಪ್ಪಿನಂಗಡಿ, ಬಾಲಕೃಷ್ಣ ಪೊರ್ದಾಲ್‌ರವರು ನೀಡಿದರು.

ಆಗಮಿಸಿದ ಗಣ್ಯರ ದಂಡು:
ಪ್ರೊ ಕಬಡ್ಡಿ ಪಂದ್ಯಾಟಕ್ಕೆ ಮಾಜಿ ಸಚಿವ ಬಿ.ರಮಾನಾಥ ರೈ, ರಾಜ್ಯ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ರಾಜ್ಯ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಚೇರ್‌ಮ್ಯಾನ್ ರಾಕೇಶ್ ಮಲ್ಲಿ, ಮಂಗಳೂರು ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸೀತಾರಾಮ ರೈ, ಚೌಟ ಇಂಡಿಯನ್ ಗ್ಯಾಸ್ ಏಜೆನ್ಸಿಯ ಜಗನ್ನಾಥ್ ಚೌಟ, ಪುತ್ತೂರು-ಪಾಣಾಜೆ ಲಯನ್ಸ್ ಕ್ಲಬ್ ಅಧ್ಯಕ್ಷ ಮಹಮ್ಮದ್ ಕುಕ್ಕುವಳ್ಳಿ, ಹಿಂದೂಸ್ಥಾನ್ ಪ್ರಮೋಟರ‍್ಸ್ ಮತ್ತು ಡೆವಲಪ್ಪರ‍್ಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಮಹಮ್ಮದ್ ಇಬ್ರಾಹಿಂ, ಅಕ್ಷಯ ಕಾಲೇಜ್ ಚೇರ್‌ಮ್ಯಾನ್ ಜಯಂತ್ ನಡುಬೈಲು, ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ವಿನೋದ್ ಶೆಟ್ಟಿ ಅರಿಯಡ್ಕ, ಮಂಗಳೂರು ದ.ಕ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ರತನ್ ಶೆಟ್ಟಿ, ಕಾರ್ಯಾಧ್ಯಕ್ಷ ಪುರುಷೋತ್ತಮ ಪೂಜಾರಿ, ಬೆಳಂದೂರು ಅಲಿಫ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅಶ್ರಫ್ ಶಾ ಮಾಂತೂರು, ಉದ್ಯಮಿ ಇಕ್ಬಾಲ್ ಕೋಲ್ಫೆ ನೆಲ್ಯಾಡಿ, ತಾಲೂಕು ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಉದ್ಯಮಿ ಅಜಿತ್ ಶೆಟ್ಟಿ ಬೆಂಗಳೂರು, ರುಚಿ ಕೆಟರರ‍್ಸ್‌ನ ಸುಜಿತ್ ಶೆಟ್ಟಿ ಸವಣೂರು, ಪುತ್ತೂರು ಸಂತೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಡಿ.ಕೆ ಹಮೀದ್, ಮೈಸೂರು ಎಸ್‌ಎಲ್‌ವಿ ಗ್ರೂಪ್‌ನ ದಿವಾಕರ್ ದಾಸ್, ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯ ಸಂಚಾಲಕ ಭಾಸ್ಕರ್ ಆಚಾರ್ ಹಿಂದಾರು, ಸೋಹಮ್ ರಿನೀವೆಬಲ್ ಎನರ್ಜಿ ಇಂಡಿಯಾ ಪ್ರೈ.ಲಿಮಿಟೆಡ್‌ನ ಡೆಪ್ಯುಟಿ ಮ್ಯಾನೇಜರ್ ಹರೀಶ್ ಶೆಟ್ಟಿ, ಉದ್ಯಮಿ ಅರಿಯಡ್ಕ ಸಂದೀಪ್ ಶೆಟ್ಟಿ ಬೆಂಗಳೂರು, ಉದ್ಯಮಿ ಪ್ರವೀಣ್ ಶೆಟ್ಟಿ ಅಳಕೆಮಜಲು ಬೆಂಗಳೂರು, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕರುಣಾಕರ ಸುವರ್ಣ, ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ ರಾಜರಾಮ ಶೆಟ್ಟಿ ಕೋಲ್ಫೆ, ಪುತ್ತೂರು ಶಂಕರ್ ಗ್ರೂಪ್ ಆಪ್ ಕಂಪೆನಿಯ ಎಂ.ಡಿ ಸತ್ಯಶಂಕರ್ ಭಟ್, ಕ್ಲಾಸ್-1 ಪಿಡಬ್ಲ್ಯೂಡಿ ಕಾಂಟ್ರಾಕ್ಟರ್ ರಾಧಾಕೃಷ್ಣ ನಾೖಕ್‌, ಬನ್ನೂರು ರೈತ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಭರತ್ ಕುಮಾರ್ ಆರಿಗ ಪಟ್ಟೆಗುತ್ತು, ಕುಂಬ್ರ ಪಂಚಮಿ ಎಕ್ಸ್‌ಪೋರ್ಟ್‌ನ ಮೇನೆಜಿಂಗ್ ಪಾರ್ಟ್ನರ್ ಪುರಂದರ ರೈ, ಉದ್ಯಮಿ ಗಂಗಾಧರ್ ರೈ ಮಾಣಿ, ಉದ್ಯಮಿ ಸಚಿನ್ ಟ್ರೇಡರ‍್ಸ್‌ನ ಮಂಜುನಾಥ ನಾಯಕ್, ಉದ್ಯಮಿಗಳಾದ ಸೂರಜ್ ನಾಯರ್, ರೋಶನ್ ರೈ ಬನ್ನೂರು, ಎಂ.ಆರ್ ಜಯಕುಮಾರ್, ಉಮೇಶ್ ನಾಡಾಜೆ ಮಂಗಳೂರು, ಸುಕುಮಾರ್ ಶೆಟ್ಟಿ ಉಜಿರೆ, ಶಮ್ಮೂನ್ ಪರ್ಲಡ್ಕ, ಚೆಲ್ಯಡ್ಕ ಯತೀಶ್ ರೈ ಪಟ್ಲ-ಮಂಗಳೂರು, ಮಹಮ್ಮದ್ ರಫೀಕ್ ಕೊಡಾಜೆ(ಸುಲ್ತಾನ್), ಸುಧೀರ್ ಶೆಟ್ಟಿ ನೇಸರ ಕಂಪ, ಗಂಗಾಧರ ಶೆಟ್ಟಿ ಕೈಕಾರ, ರಮೇಶ್ ಶಾಂತಿಗೋಡು, ಶಶಿಧರ್ ಮೈಸೂರು, ಅರುಣ್ ಕುಮಾರ್ ಆನಾಜೆ, ಅಬ್ದುಲ್ ಜಲೀಲ್ ಸಂಪ್ಯ, ಇಲ್ಯಾಸ್ ಮುಕ್ವೆ, ಮೋಹನ್‌ದಾಸ್ ಮೇಗಿನಗುತ್ತು, ಪಿಡಬ್ಲ್ಯೂಡಿ ಇಂಜಿನಿಯರ್ ಪ್ರಮೋದ್ ಕುಮಾರ್, ಕಬಕ ಕಾಮತ್ ಕ್ರಷರ‍್ಸ್‌ನ ಆದಿತ್ಯ ಕಾಮತ್, ಸಾಜ ಟಿಂಬರ್ ಮರ್ಚಂಟ್ ಯೂಸುಫ್ ಗೌಸಿಯಾ, ಪೆರ್ಲಂಪಾಡಿ ಶ್ರೀ ಷಣ್ಮುಖ ಪ್ರೌಢಶಾಲೆಯ ಸಂಚಾಲಕ ಶಿವರಾಮ ಭಟ್, ಯಂಗ್ ಬ್ರಿಗೇಡ್ ಜಿಲ್ಲಾಧ್ಯಕ್ಷ ರಂಜಿತ್ ಬಂಗೇರ, ನಗರಸಭಾ ಸದಸ್ಯ ಮಹಮದ್ ರಿಯಾಜ್, ಬೊಳುವಾರು ಪ್ರಣಾಮ್ ಎಂಟರ್‌ಪ್ರೈಸಸ್‌ನ ದಯಾನಂದ ರೈ, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ವೈದ್ಯರಾದ ಡಾ.ಸುರೇಶ್ ಪುತ್ತೂರಾಯ, ಪ್ರಶಸ್ತಿ ಪುರಸ್ಕೃತ ಪ್ರಗತಿಪರ ಕೃಷಿಕ ಸಂತೋಷ್ ರೈ ಇಳಂತಾಜೆ, ಕಲ್ಲಾರೆ ಜೆ.ಕೆ ಕನ್‌ಸ್ಟ್ರಕ್ಷನ್ ಆಂಡ್ ಡೆವಲಪರ‍್ಸ್‌ನ ಜಯಕುಮಾರ್ ನಾಯರ್, ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ, ಪಡ್ಡಾಯೂರು ಸ್ವಸ್ತಿಕ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಲೋಕೇಶ್ ಪಡ್ಡಾಯೂರು, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಂ, ಆರ್ಯಾಪು ಸಿಎ ಬ್ಯಾಂಕ್ ಅಧ್ಯಕ್ಷ ಎಚ್.ಮಹಮದ್ ಆಲಿ, ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ರೈ ನಳೀಲು, ಪಾಣೆ ಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾಣಿ, ಮಂಗಳೂರು ಎಂಆರ್‌ಪಿಎಲ್‌ನ ಸೀತಾರಾಮ ರೈ ಕೈಕಾರ, ಪೊಪ್ಯುಲರ್ ಸ್ವೀಟ್ಸ್ ಮಾಲಕ ನಾಗೇಂದ್ರ ಕಾಮತ್, ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಕಬಡ್ಡಿ ಆಟಗಾರ ಪ್ರವೀಣ್‌ಚಂದ್ರ ಆಳ್ವ, ಎಎಪಿ ಜಿಲ್ಲಾಧ್ಯಕ್ಷ ಡಾ.ವಿಷು ಕುಮಾರ್, ಮೆಸ್ಕಾಂ ಮಾಜಿ ನಿರ್ದೇಶಕ ಕಿಶೋರ್ ಕುಮಾರ್ ಬೊಟ್ಯಾಡಿ, ಪಟ್ಟೆ ಅರ್ಥ್‌ಮೂವರ‍್ಸ್‌ನ ರಾಧಾಕೃಷ್ಣ ರೈ, ನಿಡ್ಪಳ್ಳಿ ಗ್ರಾ.ಪಂ ಸದಸ್ಯ ಬಾಲಚಂದ್ರ ರೈ ಆನಾಜೆ, ಪುತ್ತೂರು ಹೆಗ್ಡೆ ಪ್ಲಾಸ್ಟಿಕ್‌ನ ದಾಮೋದರ ಹೆಗ್ಡೆ, ಕಿರಣ್ ಎಂಟರ್‌ಪ್ರೈಸಸ್‌ನ ಮಾಲಕ ಕೇಶವ ಎಂ, ಈಶ್ವರಮಂಗಲ ರತನ್ ನಾಯಕ್ ಕರ್ನೂರ್‌ಗುತ್ತು, ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳ ನಿರ್ದೇಶಕ ಮನೋಜ್ ಡಾಯಸ್, ಇಡ್ಕಿದು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸುಧಾಕರ್ ಶೆಟ್ಟಿ, ಬೈಲುಗುತ್ತು ಮಾರ್ಣಪ್ಪ ಶೆಟ್ಟಿ, ಎ.ಕೆ ಜಯರಾಂ ರೈ, ದರ್ಬೆ ಕಿರಣ್ ಎಂಟರ್‌ಪ್ರೈಸಸ್‌ನ ಕೇಶವ ಎಂ ಸಹಿತ ಹಲವರು ಗಣ್ಯರು ಉಪಸ್ಥಿತರಿದ್ದು ಶುಭ ಹಾರೈಸಿದರು.
ತಾಲೂಕು ಅಮೆಚೂರು ಕಬಡ್ಡಿ ಪಂದ್ಯಾಟದ ಗೌರವಾಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ, ಅಧ್ಯಕ್ಷ ಸುರೇಂದ್ರ ರೈ ಬಳ್ಳಮಜಲು ನೇಸರ, ಕಾರ್ಯದರ್ಶಿ ದಯಾನಂದ ರೈ ಕೋರ್ಮಂಡ, ಕೋಶಾಧಿಕಾರಿ ಅಬ್ದುಲ್ ರಝಾಕ್ ಬಿ.ಎಚ್, ಪಂದ್ಯಾಟ ಸಮಿತಿ ಗೌರವಾಧ್ಯಕ್ಷ ಶಿವರಾಂ ಆಳ್ವ, ಅಧ್ಯಕ್ಷ ಹಬೀಬ್ ಮಾಣಿ, ಕಾರ್ಯದರ್ಶಿ ನವನೀತ್ ಬಜಾಜ್, ನಿರ್ವಾಹಕ ಎಲ್ಯಾಸ್ ಪಿಂಟೋ, ರೆಫ್ರಿ ಬೋರ್ಡ್ ಅಧ್ಯಕ್ಷ ಆಸಿಫ್ ತಂಬುತ್ತಡ್ಕ ಹಾಗೂ ಪದಾಧಿಕಾರಿಗಳು, ಸರ್ವ ಸದಸ್ಯರು ಪಂದ್ಯಾಟದ ಯಶಸ್ವಿಗೆ ಸಹಕರಿಸಿದರು.


ಸುದ್ದಿ ಯೂಟ್ಯೂಬ್ ನೇರಪ್ರಸಾರ..
ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್‌ರವರು ಏರ್ಪಡಿಸಿದ ಈ ಹಿಂದಿನ ನಾಲ್ಕು ಆವೃತ್ತಿಗಳಲ್ಲೂ ಕಬಡ್ಡಿ ಪಂದ್ಯಾಟವು ಭರ್ಜರಿ ಯಶಸ್ಸು ಗಳಿಸಿದ್ದು ಪ್ರೇಕ್ಷಕರಿಂದ ಭೇಷ್ ಎನಿಸಿಕೊಂಡಿತ್ತು. ಮಹಾಮಾರಿ ಕೊರೋನಾ ರೋಗದಿಂದಾಗಿ ಕಳೆದ ಕೆಲವು ವರ್ಷ ಪಂದ್ಯಾಟವನ್ನು ಏರ್ಪಡಿಸಲು ಹಿನ್ನೆಡೆಯಾಗಿತ್ತು. ಕಳೆದ ನಾಲ್ಕು ಆವೃತ್ತಿಗಳಲ್ಲೂ ಪಂದ್ಯಾಕೂಟವು ಕಿಕ್ಕಿರಿದ ಜನಸಂದಣಿಯಿಂದ ಕೂಡಿ ಪಂದ್ಯಕ್ಕೆ ಮತ್ತಷ್ಟು ಮೆರುಗು ಹೆಚ್ಚಿಸಿತ್ತು. ಈ ವರ್ಷ ಕ್ರೀಡಾಭಿಮಾನಿಗಳಿಗೆ ಬಹಳ ಹತ್ತಿರದಿಂದ ಕಣ್ತುಂಬಿಕೊಳ್ಳಲು ಆಯೋಜಕರು ಪ್ರತಿ ಪಂದ್ಯವನ್ನು ನೇರಪ್ರಸಾರ ಮಾಡಿತ್ತು. ಈ ಮೂಲಕ ಪಂದ್ಯದ ಕ್ಷಣಕ್ಷಣಗಳ ಅಂಕಗಳೊಂದಿಗೆ ಸುದ್ದಿ ಯೂಟ್ಯೂಬ್ ಚಾನೆಲ್ ನೇರಪ್ರಸಾರವನ್ನು ಮಾಡುವ ಮೂಲಕ ಸಾವಿರಾರು ಪ್ರೇಕ್ಷಕರು ನೇರಪ್ರಸಾರವನ್ನು ವೀಕ್ಷಿಸಿ ಖುಶಿಪಟ್ಟಿದ್ದಾರೆ ಮಾತ್ರವಲ್ಲ ಕಿಲ್ಲೆ ಮೈದಾನವು ಕೂಡ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿತ್ತು.

ಬೆಳಗ್ಗಿನ ಜಾವ ತನಕ ವೀಕ್ಷಿಸಿದ ಎಸ್‌ಐ ಆಂಜನೇಯ ರೆಡ್ಡಿ..
ಪುತ್ತೂರು ನಗರ ಪೊಲೀಸ್ ಠಾಣೆಯ ಎಸ್‌ಐ ಆಂಜನೇಯ ರೆಡ್ಡಿ ಇವರು ಪಂದ್ಯಾಕೂಟದ ಉದ್ಘಾಟನಾ ಸಮಾರಂಭಕ್ಕೂ, ರಾತ್ರಿಯಿಂದ ಬೆಳಗ್ಗಿನ ಜಾವದ ತನಕ ನಡೆದ ಎಲ್ಲಾ ಪಂದ್ಯಗಳಿಗೆ ಖುದ್ದು ವೇದಿಕೆಯಲ್ಲಿ ಹಾಜರಿದ್ದು ಕಬಡ್ಡಿ ಪಂದ್ಯಾಟವನ್ನು ಆಸ್ವಾದಿಸಿದ್ದಾರೆ, ವಿಜೇತರಿಗೆ ಬಹುಮಾನ ವಿತರಿಸಿದ್ದಾರೆ ಮಾತ್ರವಲ್ಲ ಪಂದ್ಯಾಕೂಟವನ್ನು ಸುಸೂತ್ರವಾಗಿ ನಡೆಯಲು ಕಾರಣೀಕರ್ತರಾಗಿದ್ದಾರೆ.

....ಹೈಲೈಟ್ಸ್...  

-ಪಂದ್ಯಾಟ ವೀಕ್ಷಣೆಗೆ ಕಿಕ್ಕಿರಿದು ಪ್ರೇಕ್ಷಕರು
-ಬಲಿಷ್ಟ 8 ತಂಡಗಳು ಭಾಗಿ
-ಸರಕಾರಿ ಆಸ್ಪತ್ರೆಯ ವೈದ್ಯರುಗಳಿಗೆ ಸನ್ಮಾನ
-ಸರಕಾರಿ ಆಸ್ಪತ್ರೆಯ ‘ಡಿ’ ಗ್ರೂಪ್ ನೌಕರರಿಗೆ ಸಮವಸ್ತ್ರ ವಿತರಣೆ
-ಚಲನಚಿತ್ರ ನಟ ಸುಂದರ್ ರೈ ಮಂದಾರ, ದೀಕ್ಷಾ ರೈ ವಿಶೇಷ ಆಕರ್ಷಣೆ
-16 ಮಂದಿ ತೀರ್ಪುಗಾರರು
-ಕ್ಷಣಕ್ಷಣದ ವೀಕ್ಷಕ ವಿವರಣೆ
-ಡಿಜಿಟಲ್ ಕ್ಲಾಕ್ ಸಿಸ್ಟಂ ಅಳವಡಿಕೆ
-ಅಂಕಣದ ಗ್ಯಾಲರಿಯಲ್ಲಿ ಕಿಕ್ಕಿರಿದ ಪ್ರೇಕ್ಷಕರು
-ರೆಂಜ ರಾಮನಗರ ಮಣಿಕಂಠ ಸಿಂಗಾರ ಮೇಳದವರಿಂದ ಆಟಗಾರರಿಗೆ, ಅತಿಥಿಗಳಿಗೆ
ಬ್ಯಾಂಡ್ ವಾದ್ಯದ ಮೂಲಕ ಸ್ವಾಗತ
-ಆಟಗಾರರಿಗೆ ಆಗಮಿಸಲು ಪ್ರತ್ಯೇಕ ದಾರಿ ವ್ಯವಸ್ಥೆ
-ಕಬಡ್ಡಿ ವೀಕ್ಷಿಸಲು ಬೃಹತ್ ಪರದೆ, ಲೈವ್ ವ್ಯವಸ್ಥೆ
-ಸರಕಾರಿ ಆಸ್ಪತ್ರೆಯ ಆರೋಗ್ಯ ಸಿಬ್ಬಂದಿ, ಆಂಬ್ಯುಲೆನ್ಸ್ ವ್ಯವಸ್ಥೆ
-ನಗರ ಪೊಲೀಸರಿಂದ ಬಿಗು ಬಂದೋಬಸ್ತ್

LEAVE A REPLY

Please enter your comment!
Please enter your name here