ಸುದ್ದಿ ಪತ್ರಿಕೆ ಪ್ರಾರಂಭಿಸಿ 38 ವರ್ಷ ಕಳೆಯಿತು. ವೆಬ್‌ಸೈಟ್, ಚಾನೆಲ್‌ಗಳನ್ನು ಸುಳ್ಯ, ಪುತ್ತೂರು, ಬೆಳ್ತಂಗಡಿಗಳಲ್ಲೂ ಪ್ರಾರಂಭಿಸಿದೆವು. ಯಾವುದೇ ಜಾತಿಯ, ಧರ್ಮದ, ಪಕ್ಷದ, ವ್ಯಕ್ತಿಯ ಪರ ಅಥವಾ ವಿರೋಧವಾಗಿರದೆ ನಿಷ್ಪಕ್ಷಪಾತವಾಗಿ ಜನಪರ ಪತ್ರಿಕೆ ನಡೆಸಿದ್ದೇವೆ. ಜನರ ಪ್ರೀತಿ ಗಳಿಸಿದ್ದೇವೆ ಎಂಬ ಹೆಮ್ಮೆ ನಮಗಿದೆ. ಜನಪರ ಆಂದೋಲನಗಳಾದ ಬಲತ್ಕಾರದ ಬಂದ್ ವಿರುದ್ಧ, ಸಾಮಾಜಿಕ ಜಾಲತಾಣ ದುರುಪಯೋಗದ ವಿರುದ್ಧ, ಭ್ರಷ್ಟಾಚಾರದ ವಿರುದ್ಧ ಹೋರಾಟಗಳು, ಕೃಷಿ ಮತ್ತಿತರ ಮಾಹಿತಿ ಮತ್ತು ತರಬೇತಿಗಳು, ಕೃಷಿ, ಉದ್ಯೋಗ, ಶಿಕ್ಷಣ ಮೇಳಗಳು ಸಂತೋಷ ಕೊಟ್ಟಿವೆ.
ಇಂದು ಪತ್ರಿಕೆ ಮತ್ತು ಮಾಧ್ಯಮಗಳ ದಂಡು-ದಂಡೇ ಬರುತ್ತಿದೆ:
ನಾವು 1985ರಲ್ಲಿ ಪತ್ರಿಕೆ ಪ್ರಾರಂಭಿಸಿದಾಗ ಸ್ಥಳೀಯ ಸುದ್ದಿಗಳು ದೊಡ್ಡ ಪತ್ರಿಕೆಗಳಲ್ಲಿ ಬರುತ್ತಿರಲಿಲ್ಲ. ಆದರೆ ಇಂದು ರಾಜ್ಯಮಟ್ಟದ ಪತ್ರಿಕೆಗಳು, ಮಾಧ್ಯಮಗಳು, ಸ್ಥಳೀಯ ಸುದ್ದಿಗಳನ್ನು ಹುಡುಕುತ್ತಿವೆ, ಪ್ರಸಾರ ಮಾಡುತ್ತಿವೆ. ಅದಕ್ಕೆ ನಮ್ಮಸುದ್ದಿ ಪತ್ರಿಕೆ’ ಹಾಕಿದ ದಾರಿಯೇ ಕಾರಣವೆಂಬುದು ಎಲ್ಲರಿಗೂ ತಿಳಿದಿದೆ. ಇಂದು ಹಲವಾರು ಪತ್ರಿಕೆಗಳು, ಚಾನೆಲ್‌ಗಳು ಬಂದಿದ್ದರೂ ಅದರಿಂದ ನಮಗೇನೂ ತೊಂದರೆಯಾಗಿಲ್ಲ. ಆದರೆ ಸುದ್ದಿ ಪತ್ರಿಕೆಯ ಮೇಲೆ ನಿಯಂತ್ರಣ ಸಾಧಿಸಲು, ವಿರೋಧ ಮಾಡಲು (ಉದಾ: ಬೆಳ್ತಂಗಡಿಯಲ್ಲಿ ಶಾಸಕ ಹರೀಶ್ ಪೂಂಜರ ಸುದ್ದಿ ಉದಯ ಪತ್ರಿಕೆ) ಮತ್ತು ಕೆಲವರು ಸುದ್ದಿಯ ಜನಪ್ರಿಯತೆ ಕಂಡು ಆಕರ್ಷಿತರಾಗಿ, ಸಾಧನೆ ಮಾಡಲಿಕ್ಕಾಗಿ, ಪ್ರಯೋಜನಕ್ಕಾಗಿ ಮಾಧ್ಯಮರಂಗಕ್ಕೆ (ಉದಾ: ಮಾಜಿ ಶಾಸಕ ಸಂಜೀವ ಮಠಂದೂರರ ನ್ಯೂಸ್ ಪುತ್ತೂರು, ಕೋಡಿಂಬಾಡಿ ಗ್ರಾ.ಪಂ. ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರರ ಅಕ್ಕರೆ ನ್ಯೂಸ್) ಇಳಿದಿದ್ದಾರೆ. ಇನ್ನೂ ಕೆಲವರು ಪ್ರಾರಂಭಿಸಬಹುದು. ಇಲ್ಲಿಗೆ ಮಾಧ್ಯಮದ ದಂಡೇ ಬರಬಹುದು. ಅದನ್ನು ನಾವು ಅಂದಿನಿಂದ ಇಂದಿನವರೆಗೂ ಮಾಡುತ್ತಿರುವ ಮಾಧ್ಯಮದ ನಮ್ಮ ಕೆಲಸಕ್ಕೆ ಜನತೆ ನೀಡುತ್ತಿರುವ ಮಾನ್ಯತೆ ಎಂದೇ ಪರಿಗಣಿಸಿದ್ದೇವೆ.
ಮಾಧ್ಯಮಗಳು ರಾಜಕೀಯ ಭಾಷಣಗಳಿಗೆ, ಆರೋಪಗಳಿಗೆ, ಕ್ರಿಮಿನಲ್ ಸುದ್ದಿಗಳಿಗೆ ಮೈಕ್ ಆಗುತ್ತಿವೆಯೇ?:
ಆದರೆ ಇಷ್ಟು ವರ್ಷಗಳ ಕೆಲಸದ ನಂತರ ನಮಗೆ ಪತ್ರಿಕೆ, ಮಾಧ್ಯಮ ರಾಜಕೀಯದ ಭಾಷಣಗಳಿಗೆ, ಪತ್ರಿಕಾಗೋಷ್ಠಿಗಳಿಗೆ, ಆರೋಪಗಳಿಗೆ, ಪರ ವಿರೋಧ ಅಭಿಪ್ರಾಯಗಳಿಗೆ, ಕ್ರಿಮಿನಲ್ ಸುದ್ದಿಗಳಿಗೆ ಮೈಕ್ ಆಗುತ್ತಿದೆಯೇ, ಆ ವೀಡಿಯೋಗಳ ಪ್ರಸಾರದ ಮಾಧ್ಯಮ ಆಗುತ್ತಿದ್ದೇವೆಯೇ ಎಂಬ ಭಾವನೆ ಬರಲಾರಂಭಿಸಿದೆ. ಈಗ ಅಂತಹ ಕೆಲಸಗಳಿಗೆ ಮತ್ತು ಪ್ರಚಾರಕ್ಕೆ ಸಾಕಷ್ಟು ಪತ್ರಿಕೆ, ವೆಬ್‌ಸೈಟ್, ಚಾನೆಲ್‌ಗಳು ಇರುವುದರಿಂದ ಮತ್ತು ದಂಡು ದಂಡಾಗಿ ಬರುತ್ತಿರುವುದರಿಂದ ನಾವು ಅಂತಹ ಸುದ್ದಿಗಳನ್ನು ಆದಷ್ಟು ಕಡಿಮೆ ಮಾಡಿ, ಜನಗಳಿಗೆ ಅಗತ್ಯವಿರುವಷ್ಟು ಮಟ್ಟಿಗೆ ಆ ಸುದ್ದಿಗಳಿಗೆ ಪ್ರಾಶಸ್ತ್ಯ ನೀಡಲಿದ್ದೇವೆ. ಜನಪರವಾದ ಸುದ್ದಿಗಳಿಗೆ, ಮಾಹಿತಿಗಳಿಗೆ, ಯೋಜನೆಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಲು ಉದ್ದೇಶಿಸಿದ್ದೇವೆ.
ಮಳೆಕೊಯ್ಲು, ಸೋಲಾರ್ ಬಗ್ಗೆ ಜಿಲ್ಲೆಯಾದ್ಯಂತ ಮನೆ ಮನೆಗೆ ಮುಟ್ಟಿಸುವ ಯೋಜನೆ :
ಆ ನಿಟ್ಟಿನಲ್ಲಿ ಕೃಷಿಗೆ ಸಂಬಂಧಿಸಿದ ಮಾಹಿತಿ, ತರಬೇತಿ, ಉತ್ಪನ್ನ, ಖರೀದಿ-ಮಾರಾಟದ ಮಾರುಕಟ್ಟೆಗೆ ಹೆಚ್ಚು ಆದ್ಯತೆ ನೀಡಲು ಬಯಸಿದ್ದೇವೆ. ಆ ದಿಸೆಯಲ್ಲಿ ಈಗಾಗಲೇ ಕೆಲಸವನ್ನು ಮಾಡುತ್ತಿದ್ದೇವೆ. ಕಳೆದ ವರ್ಷದ ಸಸ್ಯ ಜಾತ್ರೆ ಯಶಸ್ವಿಯಾಗಿ ನಡೆದಿದೆ. ಜೇನು, ಅಣಬೆ, ಮೀನು ಸಾಕಣೆ ತರಬೇತಿ ಸಣ್ಣ ಮಟ್ಟಿಗೆ ಮಾಡುತ್ತಿದ್ದೇವೆ. ಅದನ್ನು ಮುಂದುವರಿಸುತ್ತಾ ಮಳೆಕೊಯ್ಲು ಮತ್ತು ನೀರಿನ ನಿರ್ವಹಣೆ, ಬಾವಿ, ಬೋರ್‌ವೆಲ್ ರೀಚಾರ್ಜ್, ಸೋಲಾರ್ ಪವರ್‌ನಿಂದ ವಿದ್ಯುತ್ ಉತ್ಪಾದನೆ ಬಗ್ಗೆ ಯೋಜನೆಯನ್ನು ಹಾಕಿಕೊಂಡಿದ್ದೇವೆ. ಆ ಪ್ರಯುಕ್ತ ಈಗಾಗಲೇ ತಜ್ಞರನ್ನು ಕರೆಸಿ ಮಾಹಿತಿ ನೀಡಿದ್ದೇವೆ. ನೀರು ಮತ್ತು ವಿದ್ಯುತ್ ಮನೆ ಮನೆಗೆ ದೊರಕಿದರೆ ಜೀವನ ನಿರ್ವಹಣೆಗೆ, ಕೃಷಿಗೆ, ಉದ್ಯಮಕ್ಕೆ ಸಹಕಾರಿಯಾಗಿ ಅಭಿವೃದ್ಧಿಯಾಗುವುದು ಖಂಡಿತ ಎಂಬ ನಂಬಿಕೆಯಿಂದ ಸುದ್ದಿ ಕೃಷಿಯ ಅರಿವು’ ಸಂಸ್ಥೆಯಡಿಯಲ್ಲಿ ಮಳೆಕೊಯ್ಲು ಮತ್ತು ಸೋಲಾರ್ ವಿದ್ಯುತ್ ಉತ್ಪಾದನೆಯನ್ನು ದ.ಕ. ಜಿಲ್ಲೆಯಾದ್ಯಂತ ಮನೆ ಮನೆಗೆ ಮುಟ್ಟಿಸುವ ಯೋಜನೆಯಾಗಿ ಹಾಕಿಕೊಂಡಿzವೆ.
ಸುಳ್ಯ ಕೆವಿಜಿ ಸಂಸ್ಥೆ, ಪುತ್ತೂರು ವಿವೇಕಾನಂದ ಕಾಲೇಜುಗಳಲ್ಲಿ ಮಾದರಿ ಅನುಷ್ಠಾನ:
ನಮ್ಮ ಯೋಚನೆಗೆ ಉತ್ತಮ ಪ್ರೋತ್ಸಾಹ ಮತ್ತು ಬೆಂಬಲ ದೊರಕಿದೆ. ಕೆವಿಜಿ ಸುಳ್ಯ ಕ್ಯಾಂಪಸ್‌ನಲ್ಲಿ ಮಳೆಗಾಲದ 4ರಿಂದ 6, 7 ತಿಂಗಳು ಸಂಪೂರ್ಣ ಮಳೆ ನೀರನ್ನು ಸಂಗ್ರಹಿಸಿ ಶುದ್ಧವಾದ ನೀರನ್ನು ಕ್ಯಾಂಪಸ್‌ನಲ್ಲಿ ನೀಡುತ್ತಿದ್ದಾರೆ. ಅದನ್ನು ವಿಸ್ತರಿಸಿ ವರ್ಷವಿಡೀ ಪ್ರಯೋಜನ ಪಡೆಯುವ ಯೋಜನೆಯನ್ನು ಎಒಎಲ್‌ಇನ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕುರುಂಜಿಯವರು ಹಾಕಿಕೊಂಡಿದ್ದಾರೆ. ಅದನ್ನು ಸುದ್ದಿಯೊಂದಿಗೆ ಹಂಚಿಕೊಂಡಿದ್ದಾರೆ. ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಸೋಲಾರ್ ವಿದ್ಯುತ್ತನ್ನು ಉಪಯೋಗಿಸಿ ತಿಂಗಳಿಗೆ ೩ರಿಂದ 4 ಲಕ್ಷ ರೂಪಾಯಿಯಷ್ಟು ವಿದ್ಯುತ್ ಬಿಲ್‌ನ್ನು ಉಳಿತಾಯ ಗೊಳಿಸುತ್ತಿದ್ದಾರೆ. ಸೋಲಾರ್ ಪವರ್ ಉಪಯೋಗದಿಂದ ಆಗಿರುವ ಪ್ರಯೋಜನಗಳ ಬಗ್ಗೆ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಕೃಷ್ಣ ಭಟ್‌ರವರು ಸುದ್ದಿ ಮಾಹಿತಿ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ. ಈ ಮಾಹಿತಿಗಳಿಂದ ನಮ್ಮ ಯೋಜನೆ ಯಶಸ್ವಿಯಾಗುತ್ತದೆ ಎಂಬ ನಂಬಿಕೆ ಬಂದಿದೆ. ಈ ಮೇಲಿನ ಎಲ್ಲಾ ವಿಷಯಗಳು ಜನರಿಗೆ ತಲುಪುವ ಉದ್ದೇಶದಿಂದ ಆಸ್ಪತ್ರೆಗಳಿಗೆ ಬಂದಾಗ ವಿವಿಧ ತಜ್ಞ ವೈದ್ಯರು ಬೇರೆ ಬೇರೆ ದಿವಸಗಳಲ್ಲಿ ಸಲಹೆಗೆ ಮತ್ತು ಚಿಕಿತ್ಸೆಗೆ ದೊರಕುವಂತೆ ಕೃಷಿ ಕ್ಲಿನಿಕ್ ಎಂಬ ಕಚೇರಿಯನ್ನು ತೆರೆದು, ಕೃಷಿಕರಿಗೆ ಬೇಕಾದ ಎಲ್ಲಾ ಮಾಹಿತಿ, ತರಬೇತಿ, ಉತ್ಪನ್ನಗಳಿಗೆ ಬೇಡಿಕೆ ಮತ್ತು ಮಾರುಕಟ್ಟೆಯ ವ್ಯವಸ್ಥೆ ದೊರಕುವಂತೆ ಮಾಡಲಿದ್ದೇವೆ. ವಿವಿಧ ಕ್ಷೇತ್ರದ ತಜ್ಞರಿಂದ ಪ್ರತ್ಯೇಕ, ಪ್ರತ್ಯೇಕ ಕನ್ಸಲ್ಟೇಷನ್ ವ್ಯವಸ್ಥೆ ಮಾಡಬೇಕೆಂದಿದ್ದೇವೆ. ತಜ್ಞರನ್ನು ರಾಜ್ಯಮಟ್ಟದಿಂದಲೂ, ದೇಶ ಮಟ್ಟದಿಂದಲೂ ಪಡೆಯುವ ಯೋಜನೆ ನಮ್ಮಲ್ಲಿದೆ. ಆ ಮಾಹಿತಿ ಗ್ರಾಮ ಗ್ರಾಮಕ್ಕೂ ಸುದ್ದಿ ಮಾಧ್ಯಮದ ಮೂಲಕ ದೊರಕುವಂತೆ ಮಾಡಲಿದ್ದೇವೆ. ಈ ಯೋಜನೆಸುದ್ದಿ ಕೃಷಿ ಕೇಂದ್ರ’ದ ಅರಿವು’ ಸಂಸ್ಥೆಯಿಂದ ನಡೆಯಲಿದೆ. ಪುತ್ತೂರು ಸೇರಿದಂತೆ ದ.ಕ. ಜಿಲ್ಲೆಯಲ್ಲಿ ಈ ಯೋಜನೆ ಎಲ್ಲರಿಗೂ ತಲುಪುವಂತೆ ಮಾಡಲು ಅರಿವು ಕೃಷಿ ಕೇಂದ್ರದ ಅಡಿಯಲ್ಲಿ ಸುದ್ದಿ ಮಾಹಿತಿ ಟ್ರಸ್ಟ್‌ನ ಪ್ರಾಯೋಜಕತ್ವದಲ್ಲಿ ಪ್ರತೀ ಗ್ರಾಮದಿಂದ ಎಂಬಂತೆ ತಾಲೂಕಿನಾದ್ಯಂತ ಆಸಕ್ತರ, ತಜ್ಞರ ಸಂಘಟನೆಯನ್ನು ರಚಿಸಲಿದ್ದೇವೆ. ಸುದ್ದಿ ಮಾಧ್ಯಮ ಅದಕ್ಕೆ ಸಂಪೂರ್ಣ ಪ್ರೋತ್ಸಾಹ ಮತ್ತು ಪ್ರಚಾರ ನೀಡಲಿದೆ. ಸುದ್ದಿ ಪತ್ರಿಕೆಯ, ಮಾಧ್ಯಮದ ಈ ಹೊಸ ದಿಕ್ಕಿನ ಜನಪರ ಯೋಚನೆ, ಯೋಜನೆಗಳಿಗೆ ಎಲ್ಲಾ ಜನರ ಪ್ರೋತ್ಸಾಹ, ಬೆಂಬಲ, ಸಲಹೆ ಸೂಚನೆಯೊಂದಿಗೆ ಸುದ್ದಿ ಕೃಷಿ ಕೇಂದ್ರದಅರಿವು’ ಸಂಘಟನೆಯಲ್ಲಿ ಸೇರ್ಪಡೆಯನ್ನು ಆಶಿಸುತ್ತೇವೆ.
-ಸಂಪಾದಕೀಯ