ನಗರಸಭೆಯಿಂದ ತೆರಿಗೆ ವಸೂಲಾತಿಗೆ ತಮಟೆ ಸದ್ದಿನ ಪ್ರಯೋಗ -ಮನೆ ಮನೆಗೆ ತೆರಳಿ ಬಾಕಿದಾರರಿಗೆ ಜಾಗೃತಿ, ನೋಟಿಸ್ ನೀಡಿ ಎಚ್ಚರಿಕೆ

0

ಜನವರಿಯೊಳಗೆ ಶೇ.100 ತೆರಿಗೆ ವಸೂಲಾತಿ ಗುರಿ – ಮಧು ಎಸ್ ಮನೋಹರ್

ಪುತ್ತೂರು: ಪುತ್ತೂರು ನಗರಸಭೆ ವ್ಯಾಪ್ತಿಯೊಳಗಡೆ ಕಟ್ಟಡ ತೆರಿಗೆ, ಉದ್ಯಮ ಪರವಾನಿಗೆ ಶುಲ್ಕ ಹಾಗು ನೀರಿನ ಶುಲ್ಕ ಇತ್ಯಾದಿ ತೆರಿಗೆಗಳು ಬಾಕಿ ಇರುವ ಹಿನ್ನೆಲೆಯಲ್ಲಿ ನಗರಸಭೆಯಿಂದ 31 ವಾರ್ಡ್‌ಗಳಲ್ಲಿ 15 ದಿನಗಳ ತೆರಿಗೆ ವಸೂಲಾತಿ ಆಂದೋಲನಕ್ಕೆ ತಮಟೆ ಸದ್ದಿನ ಪ್ರಯೋಗ ಮಾಡಿದೆ. ನಗರಸಭೆಯ ಪ್ರತಿ ವಾರ್ಡ್‌ಗಳಿಗೂ ನಗರಸಭೆ ಸಿಬ್ಬಂದಿಗಳು ಮನೆ ಮನೆಗೆ ತೆರಳಿ ಬಾಕಿದಾರರಿಗೆ ನೋಟೀಸ್ ನೀಡಿ ಎಚ್ಚರಿಕೆ ನೀಡಲಿದ್ದಾರೆ.


ಅ.5ರಂದು ನಗರಸಭೆ ಕಚೇರಿ ವಠಾರದಲ್ಲಿ ಆಂದೋಲನವನ್ನು ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ಅವರು ತಮಟೆ ಬಡಿಯುವ ಮೂಲಕ ಚಾಲನೆ ನೀಡಿದರು. ಬಳಿಕ ಅವರು ಮಾತನಾಡಿ ನಗರಸಭೆ ಪ್ರತಿ ವಾರ್ಡ್‌ಗಳಿಗೆ ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅವರು ಪ್ರತಿ ವಾರ್ಡ್‌ಗಳಲ್ಲಿ ಪರಿಶೀಲನೆ ನಡೆಸಿ ಬಾಕಿದಾರರನ್ನು ಜಾಗೃತಿಗೊಳಿಸಲಿದ್ದಾರೆ. ಮತ್ತು ಬಾಕಿ ಮಾಡಿದವರಿಗೆ ನೋಟಿಸ್ ನೋಡುವ ಕಾರ್ಯ ಮಾಡಲಿದ್ದಾರೆ. ಈ ನಡುವೆ ಪ್ರತಿ ವಾರ್ಡ್‌ಗಳ ಗಲ್ಲಿಗಲ್ಲಿಯಲ್ಲೂ ವಾಹನದ ಮೂಲಕ ತಮಟೆ ಬಡಿದು, ಅನೌನ್ಸ್ ಮಾಡಿಕೊಂಡು ಜಾಗೃತಿ ಮೂಡಿಸುವ ಕಾರ್ಯ ನಡೆಯಲಿದೆ. ನಗರಸಭೆಯ ಎಲ್ಲಾ ಕಾಮಗಾರಿಗಳು, ಕೆಲಸ ಕಾರ್ಯಗಳಿಗೆ ತೆರಿಗೆ ಹಣದಿಂದಲೇ ಪಾವತಿಸಬೇಕಾಗುತ್ತದೆ. ಈಗಾಗಲೇ ರಾಜ್ಯ ಸರಕಾರದ ವತಿಯಿಂದ ಅದೇಶ ಮಾಡಿರುವಂತೆ ಶೇ.100 ರಷ್ಟು ತೆರಿಗೆ ವಸೂಲಾತಿ ಜನವರಿ ತಿಂಗಳ ಒಳಗೆ ಮಾಡಬೇಕಾಗಿದೆ. ಅದಕ್ಕಾಗಿ ಆಂದೋಲನ ಹಮ್ಮಿಕೊಂಡಿದ್ದೇವೆ. ಮುಂದಿನ ದಿನ ರಾಜ್ಯ ಮತ್ತು ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಯವುದೇ ಅನುದಾನ ಬಿಡುಗಡೆ ಆಗಬೇಕಾದರು ಕೂಡಾ ಶೇ.100 ರಷ್ಟು ನಮ್ಮ ತೆರಿಗೆ ವಸೂಲಾತಿ ಆದರೆ ಮಾತ್ರ ನಮಗೆ ಅನುದಾನ ಬಿಡುಗಡೆಯಾಗಬಹುದು. ಈ ನಿಟ್ಟಿನಲ್ಲಿ 15 ದಿನಗಳ ಆಂದೋಲನದಲ್ಲಿ ನಾಗರಿಕರು ಅತಿ ಹೆಚ್ಚಾಗಿ ಬಂದು ಬಾಕಿ ತೆರಿಗೆಯನ್ನು ಪಾವತಿಸಿ, ಇಲ್ಲವಾದಲ್ಲಿ ಮುಂದಿನ ದಿನ ತೆರಿಗೆ ವಸೂಲಾತಿಗೆ ಕಾನೂನು ಕ್ರಮ ಕೈಗೊಳ್ಳಲಿದ್ದೇವೆ ಎಂದರು.

ನಗರಸಭೆ ಸದಸ್ಯ ಯುಸೂಪ್ ಡ್ರೀಮ್, ಕಂದಾಯ ನಿರೀಕ್ಷಕ ರಾಜೇಶ್ ನಾಕ್, ಬಿಲ್ ಕಲೆಕ್ಟರ್ ಪುರುಷೊತ್ತಮ, ರೇಣುಕಪ್ರಸಾದ್, ಸಹಾಯಕ ಕಾರ್ಯಪಾಲಕ ಅಭಿಯಂತರ ದುರ್ಗಾಪ್ರಸಾದ್, ಕರುಣಾಕರ್, ಸಿ.ಆರ್ ದೇವಾಡಿಗ, ರವಿಪ್ರಕಾಶ್, ಹಿರಿಯ ಆರೋಗ್ಯ ನಿರೀಕ್ಷರಾದ ಶ್ವೇತಾಕಿರಣ್, ವರಲಕ್ಷ್ಮೀ ಸಹಿತ ಸಿಬ್ಬಂದಿಗಳು ಉಪಸ್ಥಿತರಿದ್ದರು. ನಗರಸಭೆಯ ವಿವಿಧ ಕಡೆ ರಾಧಾಕೃಷ್ಣ ಅವರು ತಮಟೆ ಬಾರಿಸಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದರು.

ಶೇ.50 ಮಾತ್ರ ತೆರಿಗೆ ವಸೂಲಾತಿಯಾಗಿದೆ
ಎಪ್ರಿಲ್ ತಿಂಗಳಲ್ಲಿ ಶೇ.5 ರಿಯಾಯಿತಿ ನೀಡಿದ್ದೇವೆ. ಅಲ್ಲಿಂದ ಇಲ್ಲಿನ ತನಕ ಶೇ.50 ಮಾತ್ರ ತೆರಿಗೆ ವಸೂಲಾತಿ ಆಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಶೇ.50 ಬಾಕಿ ಉಳಿದಿರುವುದರಿಂದ 15 ದಿನಗಳ ಆಂದೋಲನದಲ್ಲಿ ಜಾಗೃತಿ ಮೂಡಿಸಿ ನೋಟೀಸ್ ನೀಡುವ ಕಾರ್ಯ ನಡೆಯಲಿದೆ. 31 ವಾರ್ಡ್‌ಗಳಲ್ಲಿ ನಗರಸಭೆ ಎಲ್ಲಾ ಸಿಬ್ಬಂದಿಗಳು ದಿನನಿತ್ಯ 2 ಗಂಟೆ ಕಾಲ ನೋಡೆಲ್ ಅಧಿಕಾರಿಗಳೊಂದಿಗೆ ಪ್ರತಿ ಮನೆಗಳಿಗೆ ತೆರಳಿ ಅಲ್ಲಿ ಪರಿಶೀಲನೆ ಮಾಡಿ ಮಾಹಿತಿ ನೀಡುವುದು ಮತ್ತು ಯಾರ‍್ಯಾರು ಪಾವತಿಗೆ ಬಾಕಿ ಇದೆಯೊ ಅವರಿಗೆ ನೋಟೀಸ್ ಜಾರಿ ಮಾಡುವ ಕಾರ್ಯ ನಡೆಯಲಿದೆ. ತೆರಿಗೆ ಪಾವತಿಸಲು ಪ್ರತ್ಯೇಕ ಕೌಂಟರ್ ಮಡಲಾಗಿದೆ. ಆನ್‌ಲೈನ್ ಮೂಲಕವೂ ಪಾವತಿಗೆ ಅವಕಾಶ ನೀಡಲಾಗಿದೆ. ನೋಟೀಸ್ ಜಾರಿ ಮಾಡುವ ಮೊದಲು ಸಹ ತೆರಿಗೆ ಪಾವತಿಸಬಹುದು.
ಮಧು ಎಸ್ ಮನೋಹರ್, ಪೌರಾಯುಕ್ತರು ನಗರಸಭೆ ಪುತ್ತೂರು

LEAVE A REPLY

Please enter your comment!
Please enter your name here