ಜಿಲ್ಲಾ ವ್ಯಾಪ್ತಿಯೊಳಗೆ ರಿಕ್ಷಾ ಚಾಲಕರಿಗೆ ರಿಕ್ಷಾ ಬಾಡಿಗೆ ಮಾಡಲು ಅವಕಾಶ ಸಿಗಲಿ
ಸವಣೂರು : ರಿಕ್ಷಾ ಚಾಲಕರಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಬಾಡಿಗೆ ಮಾಡಲು ಅವಕಾಶ ನೀಡುವಂತೆ ಸರಕಾರ ಕ್ರಮಕೈಗೊಳ್ಳಬೇಕೆಂದು ಸವಣೂರು ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸರಕಾರಕ್ಕೆ ಮನವಿ ಮಾಡಿಕೊಳ್ಳುವ ಕುರಿತು ನಿರ್ಣಯ ಕೈಗೊಳ್ಳಲಾಯಿತು.ಸಭೆಯು ಗ್ರಾ.ಪಂ.ನ ಕುಮಾರಧಾರ ಸಭಾಂಗಣದಲ್ಲಿ ಗ್ರಾ.ಪಂ.ನ ಅಧ್ಯಕ್ಷೆ ಸುಂದರಿ ಬಿ.ಎಸ್.ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ತಾರಾನಾಥ ಬೊಳಿಯಾಲ ಅವರು, ಒಂದು ತಾಲೂಕಿನ ರಿಕ್ಷಾ ಚಾಲಕರು ಇನ್ನೊಂದು ತಾಲೂಕಿಗೆ ಬಾಡಿಗೆ ಹೋದರೆ ಸಾರಿಗೆ ಇಲಾಖೆ ಹಾಗೂ ಪೊಲೀಸರು ದಂಡ ವಿಧಿಸುತ್ತಾರೆ.ಈ ನಿಟ್ಟಿನಲ್ಲಿ ನಿಯಾಮವಳಿಗಳನ್ನು ಬದಲಿಸಿ ರಿಕ್ಷಾ ಚಾಲಕರಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಬಾಡಿಗೆ ಮಾಡಲು ಹಾಗೂ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.ಈ ಕುರಿತು ಸರಕಾರಕ್ಕೆ ಬರೆದುಕೊಳ್ಳುವ ಕುರಿತು ನಿರ್ಣಯಿಸಲಾಯಿತು.
1ರಿಂದ 10 ತಾರೀಕಿನೊಳಗೆ ಸಾಮಾನ್ಯ ಸಭೆ ಮಾಡಿ
ಪ್ರತೀ ತಿಂಗಳ 1 ರಿಂದ 10 ತಾರೀಕಿನೊಳಗೆ ಗ್ರಾ.ಪಂ.ನ ಸಾಮಾನ್ಯ ಸಭೆ ನಡೆಸಬೇಕು.ತಿಂಗಳಾಂತ್ಯಕ್ಕೆ ನಡೆಸುವುದು ಬೇಡ ಎಂದು ಸದಸ್ಯ ಬಾಬು ಎನ್.ಹೇಳಿದರು. ಗ್ರಾ.ಪಂ.ಗೆ ಸಾರ್ವಜನಿಕರು ನೀಡುವ ಮನವಿಗಳಿಗೆ ಹಿಂಬರಹ ನೀಡುವಂತೆ ಹಾಗೂ ಕೆ.ಡಿ.ಪಿ. ಸಭೆ ನಡೆಯದ ಬಗ್ಗೆಯೂ ಮಾತನಾಡಿದರು.ಈ ಕುರಿತು ಕ್ರಮ ವಹಿಸುವುದಾಗಿ ಅಧ್ಯಕ್ಷರು ಹೇಳಿದರು.
ಸ್ಥಾಯಿ ಸಮಿತಿ ಸಭೆ ನಡೆಯಬೇಕು
ಗ್ರಾ.ಪಂ.ನಲ್ಲಿ ವಿವಿಧ ಉಪಸಮಿತಿಗಳನ್ನು ಪಂಚಾಯತ್ ಕಾಯ್ದೆಯಂತೆ ರಚಿಸಲಾಗುತ್ತದೆ.ಆದರೆ ಸ್ಥಾಯಿ ಸಮಿತಿ, ಹಣಕಾಸು ಸಮಿತಿ ಸೇರಿದಂತೆ ಯಾವುದೇ ಸಮಿತಿಯ ಸಭೆ ನಡೆಯುತ್ತಿಲ್ಲ.ಮುಂದಿನ ದಿನಗಳಲ್ಲಿ ಸಭೆ ನಡೆಸಬೇಕು ಎಂದು ಸದಸ್ಯ ರಫೀಕ್‌ಎಂ.ಎ. ಹೇಳಿದರು.
ಕುಮಾರಮಂಗಲ ನಿವೇಶನ ಪಡೆದವರಿಗೆ ದೃಢೀಕೃತ ಹಕ್ಕು ಪತ್ರ ನೀಡಬೇಕು
ಗ್ರಾ.ಪಂ.ವ್ಯಾಪ್ತಿಯ ಪುಣ್ಚಪ್ಪಾಡಿ ಗ್ರಾಮದ ಕುಮಾರಮಂಗಲದಲ್ಲಿ ನಿವೇಶನ ಪಡೆದವರಿಗೆ ದೃಢೀಕೃತ ಹಕ್ಕು ಪತ್ರ ನೀಡಬೇಕು.ಈಗ ಅವರಿಗೆ ನೀಡಿರುವ ಹಕ್ಕುಪತ್ರದಲ್ಲಿ ಸರಕಾರದ ಯೋಜನೆ ಪಡೆಯಲಾಗುತ್ತಿಲ್ಲ.ಈ ಕುರಿತು ಕ್ರಮ ವಹಿಸಬೇಕು ಎಂದು ಸದಸ್ಯ ಗಿರಿಶಂಕರ ಸುಲಾಯ ಅವರು ಸಭೆಯ ಗಮನಕ್ಕೆ ತಂದರು.
ಸಮಾನ ನಾಗರಿಕ ಕಾನೂನು ಜಾರಿಯಾಗಬೇಕು
ಸದಸ್ಯ ಸತೀಶ್‌ಅಂಗಡಿಮೂಲೆ ಮಾತನಾಡಿ , ದೇಶದಲ್ಲಿ ಸಮಾನ ನಾಗರಿಕ ಕಾನೂನು ಜಾರಿಯಾಗಬೇಕು, ಬಡವ ,ಶ್ರೀಮಂತ ಎಂಬ ಬೇಧಭಾವವಿಲ್ಲದೆ ಎಲ್ಲರಿಗೂ ಸಮಾನ ಕಾನೂನು ಜಾರಿಯಾಗಬೇಕು ಎಂದರು.ಸದಸ್ಯ ಬಾಬು ಎನ್. ಮಾತನಾಡಿ ,ಸಂವಿಧಾನ ಬದ್ದವಾದ ಕಾನೂನು ಈಗ ಜಾರಿಯಲ್ಲಿದೆ ಎಂದರು.
ಬೆಳೆ ಸಮೀಕ್ಷೆ ಮಾಡಲು ಇಲಾಖಾಧಿಕಾರಿಗಳು ಬರಲಿ
ರೈತರ ಜಮೀನಿನಲ್ಲಿರುವ ಬೆಳೆ ಸಮೀಕ್ಷೆ ಮಾಡಲು ಇಲಾಖಾಧಿಕಾರಿಗಳು ಬರಬೇಕು.ಕೆಲವೊಂದು ರೈತರಿಗೆ ಸ್ವಯಂ ಆಗಿ ಬೆಳೆ ಸಮೀಕ್ಷೆ ಮಾಡಲು ಆಗುತ್ತಿಲ್ಲ.ಇದರಿಂದಾಗಿ ಅವರು ಕೆಲವೊಂದು ಸವಲತ್ತುಗಳಿಂದ ವಂಚಿತರಾಗುತ್ತಾರೆ ಎಂದು ಸದಸ್ಯ ಶೀನಪ್ಪ ಶೆಟ್ಟಿ ನೆಕ್ರಾಜೆ ಹೇಳಿದರು.ಗ್ರಾ.ಪಂ.ವ್ಯಾಪ್ತಿಯ ಬೀದಿ ದೀಪಗಳ ನಿರ್ವಹಣೆ ಮಾಡಬೇಕು.ಅಲ್ಲಲ್ಲಿ ಹಾಕಿರುವ ಬೀದಿದೀಪಗಳು ಸರಿಯಾಗಿ ಉರಿಯುತ್ತಿಲ್ಲ ಎಂದು ಶೀನಪ್ಪ ಶೆಟ್ಟಿ ನೆಕ್ರಾಜೆ ಹೇಳಿದರು.
ಚೆನ್ನಾವರ ಶಾಲಾ ಕೊಳವೆ ಬಾವಿ ಕುಡಿಯಲು ಯೋಗ್ಯವಾಗಿಲ್ಲ
ಚೆನ್ನಾವರ ಶಾಲೆಯ ಕೊಳವೆ ಬಾವಿಯ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದು ನೀರಿನ ಪರೀಕ್ಷೆಯಲ್ಲಿ ಕಂಡು ಬಂದಿದೆ.ಪರ್ಯಾಯ ವ್ಯವಸ್ಥೆ ಮಾಡುವಂತೆ ಸದಸ್ಯೆ ವಿನೋದಾ ರೈ ಹೇಳಿದರು.ಈ ಕುರಿತು ಕೂಡಲೇ ಗಮನಹರಿಸಿ ಕ್ರಮ ಕೈಗೊಳ್ಳುವುದಾಗಿ ಪಂಚಾಯತ್ ಅಭಿವೃದ್ದಿ ಅಧಿಕಾರಿ ಸಂದೇಶ್ ಹೇಳಿದರು.
ಸದಸ್ಯ ಭರತ್‌ರೈ ಮಾತನಾಡಿ ,ಪಾಲ್ತಾಡಿ ಗ್ರಾಮದಲ್ಲಿ ಪ.ಜಾ.ಗೆ ಸೇರಿದ ಕುಟುಂಬವೊಂದಕ್ಕೆ ವಸತಿ ವ್ಯವಸ್ಥೆಯಿಲ್ಲದೆ.ಬೇರೆಯವರ ಮನೆಯಲ್ಲಿ ವಾಸ ಮಾಡುತ್ತಿದ್ದು, ತುರ್ತಾಗಿ ಆ ಕುಟುಂಬಕ್ಕೆ ಯಾವುದಾದರೂ ವ್ಯವಸ್ಥೆ ಮಾಡಬೇಕು ಎಂದರು.ಸದಸ್ಯ ಅಬ್ದುಲ್ ರಝಾಕ್ ಮಾತನಾಡಿ, ಗ್ರಾಮೀಣ ಭಾಗದ ರಸ್ತೆಗಳನ್ನು ತುರ್ತಾಗಿ ದುರಸ್ತಿ ಮಾಡುವ ಕುರಿತು ಗಮನ ಹರಿಸಬೇಕು ಎಂದರು.ಪಿಡಿಓ ಅವರು ಪ್ರತಿಕ್ರಿಯೆ ನೀಡಿ ,ತುರ್ತಾಗಿ ರಸ್ತೆ ದುರಸ್ತಿ ಮಾಡಲು ಅವಕಾಶವಿದೆ.ಕೆಲಸ ಪ್ರಾರಂಭಿಸುವ ಮುನ್ನ ಗ್ರಾ.ಪಂ.ನ ಗಮನಕ್ಕೆ ತರಬೇಕು ಎಂದರು.
ಉಳಿದಂತೆ ಸದಸ್ಯ ಗಿರಿಶಂಕರ ಸುಲಾಯ ಅವರು ,ಗೃಹಲಕ್ಷ್ಮೀ ಯೋಜನೆ ಹಲವರಿಗೆ ಬಂದಿಲ್ಲ.ಅಲ್ಲದೆ ಕಂದಾಯ ಇಲಾಖೆಯ ಹಲವು ಸಮಸ್ಯೆಗಳಿವೆ.ಇದಕ್ಕಾಗಿ ಕಂದಾಯ ಅಧಿಕಾರಿಗಳ ವಿಶೇಷ ಸಭಡ ನಡೆಸಬೇಕು,ಜರಿನಾರು ಎಂಬಲ್ಲಿ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ,ಗ್ರಾ.ಪಂ.ವ್ಯಾಪ್ತಿಯ ಗೂಡಂಗಡಿಗಳ ಕುರಿತು ಹಾಗೂ ಸಮಸ್ಯೆಗಳ ಬಗ್ಗೆ ಸಭೆ ನಡೆಸಬೇಕು ,ನೇರೋಳ್ತಡ್ಕದಲ್ಲಿ ಸೋಮವಾರ-ಶುಕ್ರವಾರ ಪಡಿತರ ವಿತರಣೆಗೆ ಕ್ರಮ ವಹಿಸಬೇಕು,ಪುಣ್ಚಪ್ಪಾಡಿ ಗ್ರಾಮದ ಸ್ಮಶಾನಕ್ಕೆ ಕಾದಿರಿಸಿದ ಸ್ಥಳಗಳ ಗಡಿಗುರುತು ,ಪುಣ್ಚಪ್ಪಾಡಿಗೆ ಪ್ರತ್ಯೇಕ ಗ್ರಾ.ಪಂ. ,ಕಾಣಿಯೂರು-ಸವಣೂರು ರೈತ ಉತ್ಪಾದಕ ಕಂಪನಿಗೆ ನಿವೇಶನ ,ನರೇಗಾ ಫಲಾನುಭವಿಗಳ ಸಮಾವೇಶ ನಡೆಸಬೇಕು ಎಂದರು.
ಸದಸ್ಯ ರಫೀಕ್‌ಎಂ.ಎ. ಅವರು ,ಸವಣೂರು ಜಂಕ್ಷನ್‌ನಲ್ಲಿ ಸರ್ಕಲ್ ನಿರ್ಮಾಣ ಮಾಡುವಂತೆ ,ಸರ್ವೆಯಲ್ಲಿ ಲೇಔಟ್ ನಿರ್ಮಾಣದಿಂದ ಆಗುತ್ತಿರುವ ಸಮಸ್ಯೆಯ ಬಗ್ಗೆ ,ಅಂಗನವಾಡಿಗಳಲ್ಲಿರುವ ಖಾಲಿ ಹುದ್ದೆಗಳಿಗೆ ನೇಮಕಾತಿ ಕುರಿತು ,ಬೇರಿಕೆ-ಅಗರಿ ರಸ್ತೆ ,ಅತ್ತಿಕೆರೆ-ಪಟ್ಟೆ-ಆರೇಲ್ತಡಿ ರಸ್ತೆಯನ್ನು ಉದ್ಯೋಗ ಖಾತರಿ ಯೋಜನೆಯಲ್ಲಿ ಅಭಿವೃದ್ದಿ ಪಡಿಸುವ ಬಗ್ಗೆ ,ಪಂಚಾಯತ್ ಆವರಣದಲ್ಲಿರುವ ಅಪಾಯಕಾರಿ ಮರವನ್ನು ತೆರವು ಮಾಡುವ ಕುರಿತು ಅರಣ್ಯ ಇಲಾಖೆಗೆ ಬರೆದುಕೊಳ್ಳುವ ಕುರಿತು ,ಸವಣೂರಿನಲ್ಲಿ ಆಧಾರ್ ಕೇಂದ್ರ ತೆರೆಯುವ ಕುರಿತು ,ಶಾಂತಿನಗರ ಜನತಾ ಕಾಲನಿಯ ಅಭಿವೃದ್ದಿಗೆ ಅಲ್ಪಸಂಖ್ಯಾತ ಇಲಾಖೆಯಿಂದ ಅನುದಾನ ನೀಡುವ ಕುರಿತು ,ಮುಂಡೋತಡ್ಕ ಮಾರಿಯಮ್ಮ ಗುಡಿಯ ಹಾಗೂ ರಸ್ತೆಯ ಅಭಿವೃದ್ದಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಅನುದಾನ ,ಶಾಲಾ ವಠಾರದಲ್ಲಿ ವೇಗ ನಿಯಂತ್ರಕ ಅಳವಡಿಸುವ ಕುರಿತು ,ಸವಣೂರು ಪೇಟೆಯಲ್ಲಿರುವ ಚರಂಡಿ ಅವ್ಯವಸ್ಥೆ ಸರಿಪಡಿಸುವ ಕುರಿತು ,ಮಾಂತೂರು ಅಂಬೇಡ್ಕರ್‌ಭವನಕ್ಕೆ ಟೈಲ್ಸ್,ಆವರಣ ಗೋಡೆ ನಿರ್ಮಾಣ ,ಕೆರೆಕ್ಕೋಡಿಯ ಸಮಸ್ಯೆ ಬಗೆಹರಿಯದ ಬಗ್ಗೆ ,ಯಾವುದೇ ಕೆಲಸ ಮಾಡಲು ಗುತ್ತಿಗೆದಾರರು ಹಿಂದೇಟು ಹಾಕುತ್ತಿದ್ದು ಗುತ್ತಿಗೆದಾರರ ಸಮಸ್ಯೆ ಕುರಿತು ಸಭೆ ನಡೆಸಬೇಕು ,ಸವಣೂರಿಗೆ ಪಶು ಆಸ್ಪತ್ರೆ ,ಶಾಲೆಗಳಲ್ಲಿ ಕೊರತೆ ಇರುವ ಶಿಕ್ಷಕರ ನೇಮಕಾತಿ ಬಗ್ಗೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಸಭೆಯ ಗಮನಕ್ಕೆ ತಂದರು.
ಸದಸ್ಯ ಸತೀಶ್ ಅಂಗಡಿಮೂಲೆ ಮಾತನಾಡಿ ,ನೂತನ ಅಧ್ಯಕ್ಷೆ ಸುಂದರಿ ಅವರ ನೇತೃತ್ವದಲ್ಲಿ ಗ್ರಾ.ಪಂ.ಗೆ ಸುಸಜ್ಜಿತ ವಾಣಿಜ್ಯ ಸಂಕೀರ್ಣವಾಗಬೇಕು ಎಂದರು.ಪಿಡಿಓ ಅವರು ವಿವಿಧ ಇಲಾಖೆಗಳಿಂದ ಕಟ್ಟಡ ನಿರ್ಮಾಣ ಕುರಿತಂತೆ ಸಿಗುವ ಅನುದಾನಗಳ ವಿವರಣೆ ನೀಡಿದರು.ರಸ್ತೆ ಬದಿ ತ್ಯಾಜ್ಯ ಸುರಿಯವ ಕುರಿತು ಸದಸ್ಯೆ ಹರಿಕಲಾ ರೈ ಅವರು ಸಭೆಯ ಗಮನಕ್ಕೆ ತಂದರು.ಬಾಬು ಎನ್.ಅವರು ಗ್ರಾಮ ಲೆಕ್ಕಾಧಿಕಾರಿ ಗ್ರಾಮಸ್ಥರಿಗೆ ಸೇವೆಗೆ ಸಿಗುತ್ತಿಲ್ಲ ಎಂದರು.
ಗ್ರಾ.ಪಂ.ಉಪಾಧ್ಯಕ್ಷೆ ಜಯಶ್ರೀ ವಿಜಯ ,ಸದಸ್ಯರಾದ ಗಿರಿಶಂಕರ ಸುಲಾಯ ,ಶೀನಪ್ಪ ಶೆಟ್ಟಿ ,ರಾಜೀವಿ ಶೆಟ್ಟಿ, ಅಬ್ದುಲ್‌ರಝಾಕ್,ಚೆನ್ನು ಮುಂಡೋತ್ತಡ್ಕ ,ತೀರ್ಥರಾಮ ಕೆಡೆಂಜಿ, ಸತೀಶ್‌ಅಂಗಡಿಮೂಲೆ ,ಭರತ್‌ರೈ ,ಬಾಬು ಎನ್.,ರಫೀಕ್‌ಎಂ.ಎ. ,ಚಂದ್ರಾವತಿ ಸುಣ್ಣಾಜೆ ,ಯಶೋಧಾ ,ಶಬೀನಾ,ಇಂದಿರಾ ಬೇರಿಕೆ ,ಹರಿಕಲಾ ರೈ ,ಹರೀಶ್,ವಿನೋದಾ ರೈ, ತಾರಾನಾಥ ಬೊಳಿಯಾಲ ಕಲಾಪದಲ್ಲಿ ಭಾಗವಹಿಸಿದರು.ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ಸಂದೇಶ್‌ಕೆ.ಎನ್, ಗ್ರಾ.ಪಂ.ಲೆಕ್ಕ ಸಹಾಯಕ ಎ.ಮನ್ಮಥ ಸರಕಾರಿ ಸುತ್ತೋಲೆ ಹಾಗೂ ಸಾರ್ವಜನಿಕ ಅರ್ಜಿಗಳ ಕುರಿತು ವಿವರಿಸಿದರು.ಸಿಬಂದಿಗಳಾದ ಪ್ರಮೋದ್‌ಕುಮಾರ್‌ರೈ ,ದಯಾನಂದ ಮಾಲೆತ್ತಾರು ,ಜಯಾ ಕೆ.ಜಯಶ್ರೀ ,ಗ್ರಂಥ ಪಾಲಕಿ ಶಾರದಾ, ಯತೀಶ್‌ಕುಮಾರ್,ದೀಪಿಕಾ ಸಹಕರಿಸಿದರು.
ಗಾಂಧಿ ಗ್ರಾಮ ಪುರಸ್ಕಾರಕ್ಕೆ ಅಭಿನಂದನೆ -ಸಹಕಾರಕ್ಕೆ ಕೃತಜ್ಞತೆ
ಸವಣೂರು ಗ್ರಾ.ಪಂ.ಗೆ ಗಾಂಧಿ ಗ್ರಾಮ ಪ್ರಶಸ್ತಿ ಸಿಕ್ಕಿದ ಕುರಿತು ಸದಸ್ಯರು ಗ್ರಾ.ಪಂ.ನ ಪೂರ್ವಾಧ್ಯಕ್ಷರು ,ಉಪಾಧ್ಯಕ್ಷರು ಹಾಗೂ ಅಧಿಕಾರಿಗಳಿಗೆ ,ಸಿಬಂದಿಗಳಿಗೆ ಅಭಿನಂದನೆ ಸಲ್ಲಿಸಿದರು.
ಕಳೆದ 2.5 ವರ್ಷಗಳಿಂದ ಪಂಚಾಯತ್‌ನ ಪ್ರಭಾರ ಅಭಿವೃದ್ದಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ,ಲೆಕ್ಕ ಸಹಾಯಕ ಎ.ಮನ್ಮಥ ಅವರು ಮಾತನಾಡಿ , ಕಳೆದ ಕಳೆದ 2.5 ವರ್ಷಗಳಿಂದ ಪ್ರಭಾರ ಪಿಡಿಓ ಆಗಿ ಕರ್ತವ್ಯ ನಿರ್ವಹಿಸಿದ್ದೇನೆ.ಗ್ರಾ.ಪಂ.ಗೆ ಗಾಂಧಿ ಗ್ರಾಮ ಪುರಸ್ಕಾರ ಸಿಕ್ಕಿರುವುದು ಸಂತಸದ ವಿಚಾರ ಹಾಗೂ ಇದಕ್ಕಾಗಿ ಶ್ರಮಿಸಿದ ಸಿಬಂದಿಗಳಿಗೆ ,ನಿಕಟಪೂರ್ವ ಅಧ್ಯಕ್ಷೆ ರಾಜೀವಿ ಶೆಟ್ಟಿ ,ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ಹಾಗೂ ಸಹಕರಿಸಿದ ತಾಲೂಕು ,ಜಿಲ್ಲೆಯ ಅಧಿಕಾರಿಗಳಿಗೆ ,ಗ್ರಾಮಸ್ಥರಿಗೆ ,ಮಾದ್ಯಮದವರಿಗೆ ಕೃತಜ್ಞತೆ ಸಲ್ಲಿಸಿದರು.