ವ್ಯಕ್ತಿತ್ವ ನಿರ್ಣಯದಲ್ಲೂ ಇಂಗ್ಲಿಷ್ ಭಾಷೆ ಪ್ರಮುಖ ಪಾತ್ರ ವಹಿಸುತ್ತದೆ : ಭಾರತಿ ರೈ
ಪುತ್ತೂರು: ಪ್ರಸ್ತುತ ಕಾಲಘಟ್ಟದಲ್ಲಿ ಇಂಗ್ಲಿಷ್ ಭಾಷೆಯು ಬಹು ಪ್ರಾಮುಖ್ಯತೆಯನ್ನು ಹೊಂದಿದೆ. ಕನ್ನಡ ರಾಜ್ಯ ಭಾಗಿಯಾಗಿ, ಹಿಂದಿ ರಾಷ್ಟ್ರಭಾಷೆಯಾಗಿದ್ದರೂ, ಇಂಗ್ಲಿಷ್ ವ್ಯವಹಾರ ಭಾಷೆಯಾಗಿ ಅತೀ ಅಗತ್ಯವಾಗಿದೆ. ವ್ಯಕ್ತಿಯು ಹೇಗೆ ಇಂಗ್ಲಿಷ್ ಭಾಷೆಯಲ್ಲಿ ಸಂವಹನ ನಡೆಸುತ್ತಾನೆ ಎಂಬುದರ ಮೇಲೆ ಆತನ ವ್ಯಕ್ತಿತ್ವವನ್ನು ಅಳೆಯಲಾಗುತ್ತದೆ ಎಂದು ಪುತ್ತೂರಿನ ಫಿಲೋಮಿನಾ ಕಾಲೇಜಿನ ಇಂಗ್ಲಿಷ್ ವಿಭಾಗ ಮುಖ್ಯಸ್ಥೆ ಭಾರತಿ ಎಸ್ ರೈ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ಇಂಗ್ಲಿಷ್ ವಿಭಾಗದ ಆಶ್ರಯದಲ್ಲಿ ಶುಕ್ರವಾರದಂದು ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ’ಜಾಗತಿಕ ಭಾಷೆಯಾಗಿ ಇಂಗ್ಲಿಷ್’ ಎಂಬ ವಿಷಯದ ಬಗೆಗೆ ಮಾತನಾಡಿದರು.
ಸಮಾಜದಲ್ಲಿ ಜನರೊಂದಿಗೆ ಬೆರೆಯಲು, ವಿಭಿನ್ನ ಸಂಸ್ಕೃತಿಯನ್ನು ತಿಳಿಯಲು, ಭಾವನೆಗಳನ್ನು ಪರಸ್ಪರ ಹಂಚಿಕೊಳ್ಳಲು ಭಾಷೆಯು ಅಗತ್ಯವಾಗಿದೆ. ಪ್ರಸ್ತುತ ಎಲ್ಲಾ ಕಡೆಗಳಲ್ಲಿಯೂ ಇಂಗ್ಲಿಷ್ ಭಾಷೆ ವ್ಯಾಪಿಸಿರುವುದರಿಂದ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುವುದನ್ನು ಕಲಿತರೆ ಜಗತ್ತಿನ ಯಾವ ಮೂಲೆಯಲ್ಲಿಯೂ ನಿರ್ಭೀತಿಯಿಂದ ಬದುಕಬಹುದು; ಜೀವನವನ್ನು ಸಮರ್ಥವಾಗಿ ನಿಭಾಯಿಸಬಹುದು. ಇಂಗ್ಲಿಷ್ ಭಾಷೆಯಲ್ಲಿನ ಹೊಸ ಹೊಸ ಪದಗಳನ್ನು ಕಲೆಹಾಕಬೇಕು. ಅವುಗಳ ಉಚ್ಚಾರ, ಬಳಕೆಯ ಕಡೆಗೆ ಗಮನವನ್ನು ಕೊಡಬೇಕು. ವ್ಯಾಕರಣದ ಬಗೆಗೆ ಹೆದರದೆ ಧೈರ್ಯದಿಂದ ಮಾತನಾಡುವುದನ್ನು ಕಲಿತರೆ, ವ್ಯಾಕರಣದ ಅಂಶಗಳು ಅಭ್ಯಾಸದಿಂದ ಸ್ಪಷ್ಟ ವಾಗುತ್ತಾ ಹೋಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ರಾಕೇಶ್ ಕುಮಾರ್ ಕಮ್ಮಜೆ ಮಾತನಾಡಿ, ಇಂಗ್ಲಿಷ್ ಕೇವಲ ಜಾಗತಿಕ ಭಾಷೆಯಲ್ಲ. ಅದು ಮಾರುಕಟ್ಟೆಯ ಭಾಷೆಯೂ ಹೌದು. ಆಧುನಿಕ ದಿನಮಾನಗಳಲ್ಲಿ ಉತ್ತಮ ಉದ್ಯೋಗಾವಕಾಶಗಳನ್ನು ನಮ್ಮದಾಗಿಸಲು ಇಂಗ್ಲಿಷ್ ಭಾಷೆ ಅತ್ಯಂತ ಅಗತ್ಯ. ಈಗ ಎಲ್ಲಾ ಕ್ಷೇತ್ರಗಳಲ್ಲೂ ಇಂಗ್ಲಿಷ್ ಅತೀ ಮುಖ್ಯ ಅನಿಸಿಬಿಟ್ಟಿದೆ ಮಾತ್ರವಲ್ಲದೆ ಮಾನವನ ಜೀವನದ ಸಹಜ ಅಂಶವಾಗಿ ಇಂಗ್ಲಿಷ್ ಭಾಷೆ ಬೆಳೆದಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಐಕ್ಯೂಎಸಿ ಘಟಕದ ಸಂಯೋಜನಾಧಿಕಾರಿ ಚಂದ್ರಕಾಂತ ಗೋರೆ ಹಾಗೂ ಕಾಲೇಜಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಗಣೇಶ್ ಪ್ರಸಾದ್ ಎ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪಂಚಮಿ ಪ್ರಾರ್ಥಿಸಿ, ವಿದ್ಯಾರ್ಥಿ ನವನೀತ್ ಸ್ವಾಗತಿಸಿದರು. ಇಂಗ್ಲೀಷ್ ವಿಭಾಗದ ವಿದ್ಯಾರ್ಥಿ ಪ್ರತಿನಿಧಿ ಅಂಕಿತಾ ಮುಖ್ಯ ಅತಿಥಿಗಳ ಪರಿಚಯವನ್ನು ಮಾಡಿದರು. ವಿದ್ಯಾರ್ಥಿ ಭರತ್ ವಂದಿಸಿ, ವಿದ್ಯಾರ್ಥಿನಿ ಸ್ಫೂರ್ತಿ ನಿರೂಪಿಸಿದರು.