ಅ.10 : ಬಾಲವನದಲ್ಲಿ ಶಿವರಾಮ ಕಾರಂತರ 122ನೇ ಜನ್ಮದಿನೋತ್ಸವ ಮತ್ತು ಬಾಲವನ ಪ್ರಶಸ್ತಿ ಪ್ರದಾನ ಸಮಾರಂಭ

0

ಪುತ್ತೂರು: ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಡಾ ಕೋಟ ಶಿವರಾಮ ಕಾರಂತರ ಬಾಲವನ, ಸಹಾಯಕ ಆಯುಕ್ತರ ಕಾರ್ಯಾಲಯ, ಇದರ ವತಿಯಿಂದ ಕಡಲ ತಡಿಯ ಭಾರ್ಗವ ಎಂದೇ ಪ್ರಸಿದ್ಧರಾಗಿದ್ದ ಡಾ.ಕೋಟ ಶಿವರಾಮ ಕಾರಂತರ ಜನ್ಮದಿನೋತ್ಸವ ಮತ್ತು ಬಾಲವನ ಪ್ರಶಸ್ತಿ ಪ್ರದಾನ ಸಮಾರಂಭ ಅ.10 ರಂದು ಬಾಲವನದಲ್ಲಿ ಪೂ. 9.30ರಿಂದ ಸಂಜೆ 5.00 ರ ತನಕ ನಡೆಯಲಿದೆ ಎಂದು ಪುತ್ತೂರು ಸಹಾಯಕ ಆಯುಕ್ತ ಮತ್ತು ಬಾಲವನ ಸಮಿತಿ ಅಧ್ಯಕ್ಷ ಗಿರೀಶ್ ನಂದನ್ ತಿಳಿಸಿದ್ದಾರೆ.

ಪೂರ್ವಾಹ್ನ 9:30 ರಿಂದ ಆರ್ಯಭಟ ಪ್ರಶಸ್ತಿ ಪುರಸ್ಕೃತ ವಿದ್ವಾನ್ ದೀಪಕ್ ಕುಮಾರ್ ಪುತ್ತೂರು ಮತ್ತು ಬಳಗದವರಿಂದ ವಿಶೇಷ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.
10.30 ಕ್ಕೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಅಧ್ಯಕ್ಷತೆಯಲ್ಲಿ ಕಾರಂತ ಜನ್ಮದಿನೋತ್ಸವ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಕರ್ನಾಟಕ ಘನ ಸರಕಾರದ ಮಾನ್ಯ ಸಭಾಪತಿ ಯು.ಟಿ ಖಾದರ್ ಘನಉಪಸ್ಥಿತಿಯಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಲಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್. ತಂಗಡಗಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ಮುಂಬೈ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ತಾಳ್ತಜೆ ವಸಂತಕುಮಾರ್ ಕಾರಂತ ಸ್ಮರಣೆ ಮಾಡಲಿದ್ದಾರೆ.
ಕರ್ನಾಟಕ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅಂತಾರಾಷ್ಟ್ರೀಯ ಮಟ್ಟದ ವರ್ಣ ಚಿತ್ರಕಲಾವಿದ ಕೆ. ಚಂದ್ರಕಾಂತ್ ಆಚಾರ್ಯ ಇವರಿಗೆ ದಿ| ಕುರುಂಜಿ ವೆಂಕಟರಮಣ ಗೌಡ ಇವರ ಶಾಶ್ವತ ಕೊಡುಗೆಯಲ್ಲಿ ಕೊಡ ಮಾಡುವ ಕೋಟ ಶಿವರಾಮ ಕಾರಂತರ ಬಾಲವನ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದು ಪ್ರಶಸ್ತಿ ಸಮಿತಿಯ ಸದಸ್ಯ ಬೆಟ್ಟಂಪಾಡಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ಅಭಿನಂದನಾ ಭಾಷಣ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಕಾರಂತರ ಒಡನಾಡಿ ಹಾಗೂ ಹಿರಿಯ ಸಾಹಿತಿ ಪಡಾರು ಮಹಾಬಲೇಶ್ವರ ಭಟ್ ಇವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.

ಅಪರಾಹ್ನ ವೀರಮಂಗಲದ ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ತಾರನಾಥ ನಿರ್ದೇಶನದಲ್ಲಿ ಕೃಷ್ಣಲೀಲೆ ಎಂಬ ಯಕ್ಷಗಾನ, ಪುತ್ತೂರು ಶ್ರೀರಾಮಕೃಷ್ಣ ಪ್ರೌಢಶಾಲೆ ಮಕ್ಕಳಿಂದ ಹಿರಿಯ ರಂಗ ಕಲಾವಿದ ಐಕೆ ಬೋಳುವಾರು ನಿರ್ದೇಶನದಲ್ಲಿ ಕಾರಂತಜ್ಜನಿಗೊಂದು ಪತ್ರ ಎಂಬ ಮಕ್ಕಳ ನಾಟಕ, ಸಂಜೆ ಬಾಲವನದ ಮಹಿಳಾ ಯಕ್ಷ ಬಳಗದಿಂದ ಶಾಲಿನಿ ಅರುಣ್ ಶೆಟ್ಟಿ ಸಂಯೋಜನೆಯಲ್ಲಿ ವೀರಮಣಿ ಕಾಳಗ ಎಂಬ ಮಹಿಳಾ ಯಕ್ಷಗಾನ ನಡೆಯಲಿದೆ. ಸಮಾರಂಭದಲ್ಲಿ ಬಾಲವನ ಪ್ರಶಸ್ತಿ ಪುರಸ್ಕೃತ ಕೆ. ಚಂದ್ರನಾಥ ಆಚಾರ್ಯ ಇವರ ಅಪೂರ್ವ ಕಲಾಕೃತಿಗಳ ಪ್ರದರ್ಶನ ಇರುತ್ತದೆ.

ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಡಾ.ವೀರೇಂದ್ರ ಹೆಗ್ಗಡೆ ಸೇರಿದಂತೆ ದ.ಕ.ಜಿಲ್ಲಾ ಲೋಕಸಭಾ ಸದಸ್ಯರು, ದ.ಕ ಜಿಲ್ಲೆಯ ಎಲ್ಲಾ ಶಾಸಕರುಗಳು, ವಿಧಾನ ಪರಿಷತ್‌ ಸದಸ್ಯರು, ನಗರ ಸಭಾ ಸದಸ್ಯರು, ಜಿಲ್ಲಾಧಿಕಾರಿಗಳು, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಕ್ಷಣೋದ್ಯಮಿಗಳು, ಕ.ಸಾ.ಪರಿಷತ್‌ ನ ಪುತ್ತೂರು ಘಟಕದ ಪಧಾದಿಕಾರಿಗಳು, ಜಿಲ್ಲಾ ಪೊಲೀಸ್ ಅಧೀಕ್ಷಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖಾಧಿಕಾರಿಗಳು ಮತ್ತಿತರರು ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here