ರೈ ಎಸ್ಟೇಟ್ ಎಜ್ಯುಕೇಶನಲ್&ಚಾರಿಟೇಬಲ್ ಟ್ರಸ್ಟ್‌ನಿಂದ ಉಚಿತ ವೈದ್ಯಕೀಯ ಶಿಬಿರ

0

6 ತಿಂಗಳಿಗೊಮ್ಮೆ ಉಚಿತ ವೈದ್ಯಕೀಯ ಸೇವೆ-ಅಶೋಕ್ ಕುಮಾರ್ ರೈ

ಪುತ್ತೂರು: ಕಳೆದ ಚುನಾವಣೆಯಲ್ಲಿ ನನಗೆ ಆಶೀರ್ವಾದ ಮಾಡಿದ್ದೀರಿ. ನಿಮ್ಮ ಋಣ ನನ್ನ ಮೇಲಿದೆ. ಸರಕಾರದ ವಿವಿಧ ಯೋಜನೆಗಳ ಜೊತೆಗೆ ಗ್ಯಾರಂಟಿ ಯೋಜನೆಗಳನ್ನು ಎಲ್ಲರ ಮನೆ ಬಾಗಿಲಿಗೆ ತಲುಪಿಸಲಾಗುವುದು. ಟ್ರಸ್ಟ್ ಮೂಲಕ ಸಮಾಜ ಮುಖಿ ಸೇವೆಗಳನ್ನು ಮಾಡಲಾಗುತ್ತಿದ್ದು ಜನರ ಆರೋಗ್ಯ ರಕ್ಷಣೆಗಾಗಿ 6 ತಿಂಗಳಿಗೊಮ್ಮೆ ವಿವಿಧ ಆಸ್ಪತ್ರೆಗಳ ಮೂಲಕ ಉಚಿತ ವೈದ್ಯಕೀಯ ಶಿಬಿರಗಳನ್ನು ನಡೆಸಲಾಗವುದು. ಎಲ್ಲಾ 220 ಬೂತ್‌ಗಳಲ್ಲಿಯೂ ಟ್ರಸ್ಟ್‌ನ ಸ್ವಯಂ ಸೇವಕರಿದ್ದು ನಿಮ್ಮ ಸೇವೆಗೆ ದೊರೆಯಲಿದ್ದಾರೆ. ಟ್ರಸ್ಟ್‌ನ ಮೂಲಕ ಬಡವರ ಕಣ್ಣೀರು ಒರೆಸುವ ಕೆಲಸ ಮಾಡಲಾಗುತ್ತಿದೆ ಎಂದು ಅಶೋಕ್ ಕುಮಾರ್ ರೈಯವರು ಹೇಳಿದರು.


ರೈ ಎಸ್ಟೇಟ್ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಪುತ್ತೂರು, ಶಾಸಕ ಅಶೋಕ್ ಕುಮಾರ್ ರೈ ಸಾರಥ್ಯದಲ್ಲಿ, ಕೆಎಂಸಿ ಆಸ್ಪತ್ರೆ ಅತ್ತಾವರ ಹಾಗೂ ಕೆಎಂಸಿ ಆಸ್ಪತ್ರೆ ಡಾ.ಅಂಬೇಡ್ಕರ್ ವೃತ್ತ ಮಂಗಳೂರು ಇವರ ಜಂಟಿ ಸಹಯೋಗದೊಂದಿಗೆ ಅ.7ರಂದು ದರ್ಬೆ ಬೈಪಾಸ್ ರಸ್ತೆಯ ಆರ್.ಇ.ಬಿ ಎಂಕ್ಲೇವ್ ಕಟ್ಟಡದಲ್ಲಿರುವ ಟ್ರಸ್ಟ್ ನ ಸಭಾಂಗಣದಲ್ಲಿ ನಡೆದ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಟ್ರಸ್ಟ್ ಮೂಲಕ ಕಳೆದ ಹತ್ತು ವರ್ಷಗಳಿಂದ ಸೇವೆ ನೀಡುತ್ತಾ ಬರುತ್ತಿದ್ದು ಇತ್ತೀಚೆಗೆ ಚಾಲಕರಿಗೆ ತರಬೇತಿ ನೀಡಿ 60 ಮಂದಿಗೆ ಕೆಎಸ್‌ಆರ್‌ಟಿಸಿಯಲ್ಲಿ ಕೆಲಸ ದೊರಕಿಸಿಕೊಡಲಾಗಿದೆ. ಮೂಡಬಿದರೆ ಆಳ್ವಾಸ್‌ನಲ್ಲಿ ನಡೆದ ಉದ್ಯೋಗ ಮೇಳಕ್ಕೆ 350 ಮಂದಿಯನ್ನು ಉಚಿತ ಬಸ್ ಮೂಲಕ ಕಳುಹಿಸಿಕೊಡಲಾಗಿದೆ. ಅನಾರೋಗ್ಯದಲ್ಲಿರುವವರಿಗೆ ಹಾಗೂ ಇಲ್ಲದವರಿಗೂ ತಮ್ಮ ಆರೋಗ್ಯವನ್ನು ತಪಾಸಣೆ ನಡೆಸಲು ಅನುಕೂಲವಾಗುವ ನಿಟ್ಟಿನಲ್ಲಿ ಶಿಬಿರವನ್ನು ಏರ್ಪಡಿಸಲಾಗಿದ್ದು ವರ್ಷಕ್ಕೆ ಎರಡು ಬಾರಿ ನಡೆಯಲಿದೆ. ಇಲ್ಲಿ ಎಲ್ಲವನ್ನು ಉಚಿತವಾಗಿ ನೀಡಲಾಗುವುದು ಎಂದ ಅವರು ಸರಕಾರದ ಯಾವುದೇ ಸೌಲಭ್ಯಗಳಿಲ್ಲದ ಬಿಪಿಎಸ್ ಫಲಾನುಭವಿಗಳ ಶಸ್ತ್ರ ಚಿಕಿತ್ಸೆ, ಮಕ್ಕಳ ಹೃದಯ ಸಂಬಂಧಿ ಚಿಕಿತ್ಸೆಗೆ ಒಳಗಾಗಿ ಆಸ್ಪತ್ರೆ ವೆಚ್ಚ 2 ಲಕ್ಷ ರೂಪಾಯಿಗಳಾದರೆ ಅಂತಹವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹಣಕಾಸಿನ ನೆರವು ನೀಡಲಾಗುವುದು ಎಂದು ಹೇಳಿದರು.


ನ.13ರಂದು ವಸ್ತ್ರ ವಿತರಣೆ
ಟ್ರಸ್ಟ್ ಮೂಲಕ ಕಳೆದ ಹಲವಾರು ವರ್ಷಗಳಿಂದ ದೀಪಾವಳಿಗೆ ವಸ್ತ್ರ ವಿತರಿಸಲಾಗುತ್ತಿದ್ದು ಈ ವರ್ಷವೂ ನ.13ರಂದು ವಸ್ತ್ರ ವಿತರಣೆ ನಡೆಯಲಿದೆ. ಈ ಭಾರಿ ಸುಮಾರು 5೦,೦೦೦ಮಂದಿಗೆ ವಸ್ತ್ರ ವಿತರಿಸಲಾಗುತ್ತಿದ್ದು ಮಹಿಳೆಯರಿಗೆ ಸೀರೆ ಹಾಗೂ ಪುರುಷರಿಗೆ ಬೆಡ್‌ಶೀಟ್ ವಿತರಿಸಲಾಗುವುದು. ಕಾರ್ಯಕ್ರಮದಲ್ಲಿ ಅನ್ನಸಂತರ್ಪಣೆಯು ನಡೆಯಲಿದೆ. ಇದರ ಬಗ್ಗೆ ನಿಮ್ಮ ಪರಿಸರದಲ್ಲಿ ಎಲ್ಲರಿಗೂ ಮಾಹಿತಿ ನೀಡಿ. ಕಾರ್ಯಕ್ರಮ ನಡೆಯುವ ಸ್ಥಳವನ್ನು ತಿಳಿಸಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.


ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ನುಡಿದಂತೆ ನಡೆಯುತ್ತಿದ್ದೇವೆ ಎನ್ನುವ ರಾಜ್ಯ ಸರಕಾರದ ಆಶಯದಂತೆ ಕ್ಷೇತ್ರದ ಶಾಸಕರಾಗಿ ಅಶೋಕ್ ಕುಮಾರ್ ರೈಯವರು ಅದೇ ರೀತಿ ಮುನ್ನಡೆಯುತ್ತಿದ್ದಾರೆ. ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುತ್ತಿದ್ದಾರೆ. ಸರಕಾರದ ಯೋಜನೆಗಳನ್ನು ನಿರೀಕ್ಷೆಗೂ ಮೀರಿ ಜಾರಿಗೊಳಿಸುತ್ತಿದ್ದಾರೆ. ಬಡವರ ಕಾಳಜಿಯಿರುವ ಶಾಸಕರಾಗಿದ್ದಾರೆ. ರಾಜ್ಯ 224 ಶಾಸಕರಲ್ಲಿ ಬಹುದೊಡ್ಡ ಚಿಂತನೆಯಿರುವ ಶಾಸಕರಾಗಿದ್ದಾರೆ. ಇವರ ಆಡಳಿತ ವೈಖರಿಯನ್ನು ವಿರೋಧಪಕ್ಷದವರು ಒಪ್ಪಿಕೊಂಡು ಅವರ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.


ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ಮೂಡಬಿದರೆಯಲ್ಲಿ ನಡೆದ ಉದ್ಯೋಗ ಮೇಳಕ್ಕೆ ಯುವ ಜನತೆಯನ್ನು ಕಳುಹಿಸಿಕೊಡುವ ಮೂಲಕ ಉತ್ತಮ ಪ್ರಶಂಸೆಗೆ ಪಾತ್ರವಾಗಿದೆ. ಅನಾರೋಗ್ಯದಲ್ಲಿರುವ ತನ್ನ ಕಾರಿನಲ್ಲಿಯೇ ಕರೆದುಕೊಂಡುವ ಹೋಗುವ ಮೂಲಕ ಹೃದಯ ವೈಶಾಲ್ಯತೆ ಮೆರೆದಿರುವ ಶಾಸಕ ಅಶೋಕ್ ರೈಯವರಲ್ಲಿ ಮೃದು ಹೃದಯ ಗುಣಗಳಿವೆ. ಟ್ರಸ್ಟ್ ಮೂಲಕ ಇನ್ನಷ್ಟು ಜನೋಪಯೋಗಿ ಕೆಲಸವಾಗಲಿ. ಜನರಿಗೆ ಪ್ರಯೋಜನ ದೊರೆಯಲಿ ಎಂದರು.


ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ. ಮಾತನಾಡಿ, ಆರೋಗ್ಯವೇ ಭಾಗ್ಯ. ಆರೋಗ್ಯ ಸರಿಯಾಗಿದ್ದರೆ ಎಲ್ಲವೂ ಇದೆ. ಸುಂದರ ದೇಹವೇ ಸಂಪತ್ತು. ಆರೋಗ್ಯ ಕಳೆದುಕೊಂಡರೆ ಎಲ್ಲವನ್ನು ಕಳೆದುಕೊಂಡಂತೆ. ಹೀಗಾಗಿ ರೋಗ ಬರುವ ಮೊದಲೇ ತಪಾಸಣೆ ನಡೆಸಿ ಚಿಕಿತ್ಸೆ ಪಡೆದುಕೊಳ್ಳಬೇಕು. ಟ್ರಸ್ಟ್ ಮೂಲಕ ನಡೆಯುವ ಶಿಬಿರವು ಇದಕ್ಕೆ ಸಹಕಾರಿಯಾಗಲಿದೆ. ಶಾಸಕ ಅಶೋಕ್ ಕುಮಾರ್ ರೈಯವರ ನೇತೃತ್ವದಲ್ಲಿ ನಡೆಯುವ ಟ್ರಸ್ಟ್‌ನಲ್ಲಿ ಎಲ್ಲಾ ಆಯಾಮಗಳನ್ನು ಸೇವೆ ನೀಡುತ್ತಿದೆ. ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಕಾರ್ಯ ಟ್ರಸ್ಟ್ ಮೂಲಕ ನಡೆಯುತ್ತಿದೆ.
ಕೆಎಂಸಿ ಆಸ್ಪತ್ರೆಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಮನಮೋಹನ್ ಮಾತನಾಡಿ, ಮೆಡಿಸಿನ್ ಶಿಬಿರದ ಬಗ್ಗೆ ಮಾಹಿತಿ ನೀಡಿದರು. ಆಸ್ಪತ್ರೆಯಿಂದ ದೊರೆಯುವ ಸೌಲಭ್ಯಗಳು, ಚಿಕಿತ್ಸೆ ವಿಧಾನಗಳು ಹಾಗೂ ಶಿಬಿರದಲ್ಲಿ ನಡೆಯಲಿರುವ ತಪಾಸಣಾ ಶಿಬಿರಗಳ ಕುರಿತು ಮಾಹಿತಿ ನೀಡಿದರು.
ತಾಲೂಕು ಆರೋಗ್ಯ ಅಧಿಕಾರಿ ಡಾ.ದೀಪಕ್ ರೈ, ಟ್ರಸ್ಟ್‌ನ ಸಂಯೋಜಕ ನಿಹಾಲ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಟ್ರಸ್ಟ್‌ನ ಕಾರ್ಯಾದ್ಯಕ್ಷ ಸುದೇಶ್ ಶೆಟ್ಟಿ ಸ್ವಾಗತಿಸಿದರು. ಟ್ರಸ್ಟ್ ನ ಗೌರವ ಸಲಹೆಗಾರ ಮಹಮ್ಮದ್ ಬಡಗನ್ನೂರು ಕಾರ್ಯಕ್ರಮ ನಿರೂಪಿಸಿದರು. ಯೋಗೀಶ್ ಸಾಮಾನಿ ವಂದಿಸಿದರು. ನಿರಂಜನ ರೈ ಮಠಂತಬೆಟ್ಟು, ಶಿವಪ್ರಸಾದ್ ಶೆಟ್ಟಿ, ಶಮೀರ್ ಪೆರುವಾಯಿ, ಗೀತಾ ದಾಸರಮೂಲೆ, ವಿಜಯ ಕುಮಾರ್, ಮೋಹನ್ ಗುರ್ಜಿನಡ್ಕ ಅತಿಥಿಗಳನ್ನು ಹೂ ನೀಡಿ ಸ್ವಾಗತಿಸಿದರು.


ಶಿಬಿರದಲ್ಲಿ ಎಲುಬು ಮತ್ತು ಕೀಲು, ಗ್ಯಾಸ್ಟೋಎಂಟರಾಲಜಿ, ಮೂತ್ರಶಾಸ್ತ್ರ, ಕಣ್ಣಿನ, ಇಸಿಜಿ, ಹೃದಯ ರೋಗ, ಸಾಮಾನ್ಯ ರೋಗಗಳಿಗೆ ಪ್ರತ್ಯೇಕ ಚಿಕಿತ್ಸಾ ಕೊಠಡಿಗಳು ಮೂಲಕ ಚಿಕಿತ್ಸೆ ಸೌಲಭ್ಯ ಕಲ್ಪಿಸಲಾಗಿತ್ತು. ಕೆಎಂಸಿ ಆಸ್ಪತೆಯ ತಜ್ಞ ವೈದ್ಯರುಗಳು ತಪಾಸಣೆ ನಡೆಸಿಕೊಟ್ಟರು. ಬಿ.ಪಿ, ಮಧುಮೇಹ ತಪಾಸಣೆ, ಇಸಿಜಿ, ಔಷಧ ಹಾಗೂ ಓದುವ ಕನ್ನಡಕಗಳನ್ನು ಉಚಿತವಾಗಿ ವಿತರಿಸಲಾಯಿತು. ಜೊತೆಗೆ ನಗರ ಪ್ರಾಥಮಿಕ ವಿಭಾಗದಿಂದ ಆಭಾ ಕಾರ್ಡ್ ನೋಂದಣಿಯ ಸೌಲಭ್ಯವನ್ನು ಕಲ್ಪಿಸಲಾಗಿತ್ತು.

LEAVE A REPLY

Please enter your comment!
Please enter your name here