ಪುತ್ತೂರು: ಎನ್.ಸಿ.ಸಿ ನಿರ್ದೇಶನಾಲಯ, ನವ ದೆಹಲಿ ಪ್ರತಿ ವರ್ಷ ನಡೆಸುವ ಅಖಿಲ ಭಾರತ ತಲ್ ಸೈನಿಕ್ ಕ್ಯಾಂಪ್ ನ ವಿವಿಧ ಸ್ಪರ್ಧೆಗಳಲ್ಲಿ ಸಂತ ಫಿಲೋಮಿನಾ ಕಾಲೇಜಿನ ಇಬ್ಬರು ಎನ್.ಸಿ.ಸಿ. ಕೆಡೆಟ್ ಗಳು ಯಶಸ್ವಿಯಾಗಿ ಭಾಗವಹಿಸಿ ಕರ್ನಾಟಕ ಮತ್ತು ಗೋವಾ ಡೈರೆಕ್ಟರ್ ರೇಟ್ ಚಾಂಪಿಯನ್ಶಿಪ್ ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
60 ದಿನಗಳ ಕಠಿಣ ಪರಿಶ್ರಮ ಮತ್ತು ನಿಷ್ಠೆಯಿಂದ ವಿಶೇಷ ಸ್ಪರ್ಧೆಗಳಲ್ಲಿ ಭಾಗವಹಿಸಿ ಇತಿಹಾಸ ನಿರ್ಮಿಸಿದ ಎರಡು ಕೆಡೆಟ್ಗಳ ಸಾಧನೆ ಅವಿಸ್ಮರಣೀಯ. ಪ್ರತಿ ವರ್ಷ ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್ ನಿಂದ 40 ಹುಡುಗರು ಮತ್ತು 36 ಹುಡುಗಿಯರು ಭಾಗವಹಿಸುತ್ತಾರೆ. ಇದರಲ್ಲಿ ಕಾಲೇಜಿನ ಇಬ್ಬರು ಕೆಡೆಟ್ಗಳು ಭಾಗವಹಿಸಿರುವುದು ವಿಶೇಷ ದಾಖಲೆಯಾಗಿದೆ. ಸಕಲೇಶಪುರ ಮೂಲದ, ಬಿ.ಎಸ್. ಸಿ. ವಿದ್ಯಾರ್ಥಿನಿ ಜೂನಿಯರ್ ಅಂಡರ್ ಆಫೀಸರ್ ರಿಯಾ ಸುಶ್ಮಿತಾ ಡಿಸೋಜಾ ಮತ್ತು ಶಿವಮೊಗ್ಗ ಮೂಲದ ಬಿ.ಕಾಂ ವಿದ್ಯಾರ್ಥಿ, ಸೀನಿಯರ್ ಅಂಡರ್ ಆಫೀಸರ್ ಸುಜಿತ್ ಎಸ್ ಪಿ ಈ ವಿಶೇಷ ಗೌರವಕ್ಕೆ ಪಾತ್ರರಾದ ವಿದ್ಯಾರ್ಥಿಗಳಾಗಿದ್ದಾರೆ.
ಕಾಲೇಜಿನ ಎನ್ಸಿಸಿ ಅಧಿಕಾರಿ ಲೆಫ್ಟಿನೆಂಟ್ ಜಾನ್ಸನ್ ಡೇವಿಡ್ ಸಿಕ್ವೇರಾ ಈ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಮತ್ತು ಮಾರ್ಗದರ್ಶನ ನೀಡಿದ್ದು, ಕಾಲೇಜಿನ ಸಂಚಾಲಕರಾದ ಅತಿವಂದನೀಯ ಲಾರೆನ್ಸ್ ಮಸ್ಕರೇನಸ್, ಪ್ರಾಂಶುಪಾಲ ವಂದನೀಯ ಡಾ. ಆಂಟನಿ ಪ್ರಕಾಶ್ ಮೊಂತೆರೋ, ಕ್ಯಾಂಪಸ್ ನಿರ್ದೇಶಕ ವಂ| ಸ್ಟ್ಯಾನಿ ಪಿಂಟೋ ಅವರ ನಿರಂತರ ಪ್ರೋತ್ಸಾಹದಿಂದ ಸಾಧನೆಗೈಯ್ದ ಈ ವಿದ್ಯಾರ್ಥಿಗಳನ್ನು ಕಾಲೇಜಿನ ವತಿಯಿಂದ ಫಲಪುಷ್ಪ ಹಾಗೂ ಸ್ಮರಣಿಕೆ ನೀಡಿ, ಗೌರವಿಸಿ ಸನ್ಮಾನಿಸಲಾಯಿತು.