ಪುತ್ತೂರು: ಪುತ್ತೂರಿನ ಕ್ಯಾಥೊಲಿಕ್ ಶಿಕ್ಷಣ ಸಂಸ್ಥೆಗಳ ವತಿಯಿಂದ ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಅ.30ರಂದು ಬೃಹತ್ ನಡಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು ಆವರಣದಿಂದ ಪ್ರಾರಂಭಗೊಂಡು ಮುಖ್ಯ ರಸ್ತೆಯಲ್ಲಿ ಸಾಗಿ ಮಹಮ್ಮಾಯಿ ದೇವಸ್ಥಾನ ರಸ್ತೆಯ ಮೂಲಕ ಸಂಚರಿಸಿ ಪುತ್ತೂರು ಪೋಲೀಸ್ ಠಾಣೆಯ ಬಳಿ ಪುನಃ ಮುಖ್ಯರಸ್ತೆಯನ್ನು ಸೇರಿ ಮಾಯ್ ದೆ ದೇವುಸ್ ಚರ್ಚ್ ವಠಾರದಲ್ಲಿ ಸಂಪನ್ನಗೊಳ್ಳಲಿದೆ.
ಪುತ್ತೂರಿನ ಕ್ಯಾಥೊಲಿಕ್ ಶಿಕ್ಷಣ ಸಂಸ್ಥೆಗಳಾದ ಸಂತ ಫಿಲೋಮಿನಾ ಕಾಲೇಜು, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು, ಸಂತ ಫಿಲೋಮಿನಾ ಪ್ರೌಢಶಾಲೆ, ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಶಾಲೆ, ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ, ಬೆಥನಿ ಪ್ರೌಢಶಾಲೆ, ಬೆಥನಿ ಆಂಗ್ಲ ಮಾಧ್ಯಮ ಶಾಲೆ, ಸಂತ ವಿಕ್ಟರನ ಬಾಲಿಕಾ ಪ್ರೌಢಶಾಲೆ, ಸಂತ ವಿಕ್ಟರನ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಮತ್ತು ಮಾಯ್ ದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆಗಳ ಸುಮಾರು 6000ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಿಬ್ಬಂದಿ ವರ್ಗ ನಡಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮಂಗಳೂರು ಕ್ಯಾಥೊಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಕ್ಯಾಥೊಲಿಕ್ ವಿದ್ಯಾ ಮಂಡಳಿಯ ಅಧ್ಯಕ್ಷ ಪೀಟರ್ ಪಾವ್ಲ್ ಸಲ್ದಾನಾರವರು ತಮ್ಮ ಅಧೀನಕ್ಕೊಳಪಟ್ಟ ಸಂಸ್ಥೆಗಳ ಮೂಲಕ ಮಾದಕ ದ್ರವ್ಯಸೇವನೆಯ ದುಷ್ಪರಿಣಾಮಗಳ ಬಗ್ಗೆ ಸುತ್ತುಮುತ್ತಲಿನ ಜನರಿಗೆ ಅರಿವು ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ದೇಶನ ನೀಡಿರುತ್ತಾರೆ. ಆ ಪ್ರಯುಕ್ತ ಪುತ್ತೂರಿನ ಕ್ಯಾಥೊಲಿಕ್ ಶಿಕ್ಷಣಸಂಸ್ಥೆಗಳ ವತಿಯಿಂದ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಡಿಗೆಯುದ್ದಕ್ಕೂ ವಿದ್ಯಾರ್ಥಿಗಳು ಮಾದಕ ದ್ರವ್ಯಗಳ ಸೇವನೆಯ ದುಷ್ಪರಿಣಾಮಗಳ ಕುರಿತು ಘೋಷವಾಕ್ಯಗಳು, ಘೋಷಣಾ ಫಲಕಗಳು ಹಾಗೂ ಬೀದಿ ನಾಟಕದ ಮೂಲಕ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ನಡೆಸಲಿದ್ದಾರೆ. ಮಾಯ್ ದೆ ದೇವುಸ್ ಚರ್ಚ್ ಆವರಣದಲ್ಲಿ ಜನಜಾಗೃತಿ ನಡಿಗೆಯು ಸಂಪನ್ನಗೊಳ್ಳುವ ಸಂದರ್ಭದಲ್ಲಿ ಪುತ್ತೂರಿನ ಡಿವೈಎಸ್‌ಪಿ ಡಾ| ಗಾನಾ ಪಿ ಕುಮಾರ್‌ರವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಮಾಯ್ ದೆ ದೇವುಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕರೂ ಮಾಯ್ ದೆ ದೇವುಸ್ ಚರ್ಚ್‌ನ ಮುಖ್ಯ ಧರ್ಮಗುರು ಅತಿ ವಂ| ಲಾರೆನ್ಸ್ ಮಸ್ಕರೇಞಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.