ಶಾಲಿನಿಗೆ ನೃತ್ಯವನ್ನು ಎತ್ತಿ ಹಿಡಿಯುವ, ಉಳಿಸುವ ಶಕ್ತಿಯಿದೆ – ವಿದ್ವಾನ್ ಮೋಹನ್ ಕುಮಾರ್
ನೃತ್ಯೋಪಾಸನಾ ಕಲಾಕೇಂದ್ರಕ್ಕೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಲಿ – ಅರುಣ್ ಕುಮಾರ್ ಪುತ್ತಿಲ
ಮಕ್ಕಳಲ್ಲಿ ಶ್ರದ್ಧೆಯಿಂದ ಕಲಿಯುವ ಸಾಮರ್ಥ್ಯ ಬೆಳೆಸಬೇಕು- ಕೃಷ್ಣವೇಣಿಪ್ರಸಾದ್ ಮುಳಿಯ
ಕಷ್ಟಪಟ್ಟು ಕಲಿತ ವಿದ್ಯೆಯನ್ನು ಯಾವ ಕಾರಣಕ್ಕೂ ಬಿಡಬೇಡಿ – ವಿದ್ವಾನ್ ಗೋಪಾಲಕೃಷ್ಣ
ನೃತ್ಯೋಪಾಸನಾ ದಿಗ್ವಿಜಯವನ್ನು ಆಚರಿಸಿದೆ – ವಿದುಷಿ ಶಾಲಿನಿ ಆತ್ಮಭೂಷಣ್
ಪುತ್ತೂರು: ನೃತ್ಯ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಮಾಡುತ್ತಿರುವವರಿಗೆ ಗೌರವ ಪ್ರದಾನ, ಗುರುಗಳ ಪಾದಪೂಜೆಯೊಂದಿಗೆ ಗುರುವಂದನೆ, ನೃತ್ಯ ಪೋಷಣೆ ಕಾರ್ಯಕ್ರಮದಡಿ ಉಚಿತ ನೃತ್ಯ ಶಿಕ್ಷಣಕ್ಕೆ ಬಡ ವಿದ್ಯಾರ್ಥಿಗಳ ದತ್ತು ಸ್ವೀಕಾರ, ಭರತನಾಟ್ಯ ಜೂನಿಯರ್, ಸೀನಿಯರ್, ವಿದ್ವತ್ ಅಂತಿಮ ಪದವಿಯಲ್ಲಿ ತೇರ್ಗಡೆಯಾದವರಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಬಪ್ಪಳಿಗೆ ಜೈನ ಭವನದಲ್ಲಿ ನ.5ರಂದು ಸಂಜೆ ನಡೆದ ನೃತ್ಯೋಪಾಸನಾ ಕಲಾಕೇಂದ್ರದ ವರ್ಷ ಸಂಭ್ರಮ-19 ಮಾದರಿ ಕಾರ್ಯಕ್ರಮವಾಗಿ ಮೂಡಿ ಬಂದಿದೆ. ಆರಂಭದಲ್ಲಿ ಮಂಗಳೂರು ಕೊಲ್ಯದ ನಾಟ್ಯನಿಕೇತನದ ನೃತ್ಯಗುರು, ಶಾಂತಲಾ ಪ್ರಶಸ್ತಿ ಪುರಸ್ಕೃತ ವಿದ್ವಾನ್ ಉಳ್ಳಾಲ ಮೋಹನ್ ಕುಮಾರ್ ಅವರು ದೀಪ ಬೆಳಗಿಸಿ ವರ್ಷ ಸಂಭ್ರಮಕ್ಕೆ ಚಾಲನೆ ನೀಡಿದರು. ನೃತ್ಯ ಕಾರ್ಯಕ್ರಮದ ನಡುವೆ ಸಭಾ ಕಾರ್ಯಕ್ರಮ ನಡೆದು ಮತ್ತೆ ನೃತ್ಯ ಕಾರ್ಯಕ್ರಮ ಮುಂದುವರಿಯಿತು.
ಶಾಲಿನಿಗೆ ನೃತ್ಯವನ್ನು ಎತ್ತಿ ಹಿಡಿಯುವ, ಉಳಿಸುವ ಶಕ್ತಿಯಿದೆ:
ನೃತ್ಯೋಪಾಸನಾ ವರ್ಷದ ಸಂಭ್ರಮವನ್ನು ಉದ್ಘಾಟಿಸಿದ ಮಂಗಳೂರು ಕೊಲ್ಯದ ನಾಟ್ಯನಿಕೇತನದ ನೃತ್ಯಗುರು, ಶಾಂತಲಾ ಪ್ರಶಸ್ತಿ ಪುರಸ್ಕೃತ ವಿದ್ವಾನ್ ಉಳ್ಳಾಲ ಮೋಹನ್ ಕುಮಾರ್ ಅವರು ಮಾತನಾಡಿ, ಸಂಸ್ಕೃತಿ, ಪರಂಪರೆಯ ಉಳಿವಿಗೆ ಸನಾತನ ನೃತ್ಯ ಸಂಪ್ರದಾಯ ಉಳಿಯಬೇಕು. ಈ ನಿಟ್ಟಿನಲ್ಲಿ ನೃತ್ಯಗುರುಗಳನ್ನು ತಯಾರು ಮಾಡುವಲ್ಲಿ ನನಗೆ ಸಂತೃಪ್ತಿಯಿದೆ. ಶಾಲಿನಿಗೆ ಕೂಡಾ ಶಾಸ್ತ್ರೀಯ ನೃತ್ಯವನ್ನು ಎತ್ತಿ ಹಿಡಿಯುವ ಮತ್ತು ಅದನ್ನು ಉಳಿಸುವ ಶಕ್ತಿಯಿದೆ. ನೃತ್ಯಸಂಭ್ರಮದಲ್ಲಿ ಸಣ್ಣ ಮಕ್ಕಳ ನೃತ್ಯ ನೋಡಿದೆ. ಚೆನ್ನಾಗಿ ಮೂಡಿ ಬಂದಿದೆ. ಅದೇ ರೀತಿ ಶಾಲಿನಿಯ ಗುರು ಭಕ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನನ್ನ ಮಗಳಿಗೆ ಸಮಾನಾಗಿರುವ ಶಾಲಿನಿಯಿಂದ ಗೌರವ ಪಡೆದಿದ್ದೇನೆ. ನೃತ್ಯ ಸಂಸ್ಕೃತಿಯನ್ನು ಉಳಿಸುವ ದಿವ್ಯಶಕ್ತಿಯನ್ನು ನಟರಾಜ ಸಂಪ್ರಾಪ್ತಿಸಲಿ ಎಂದು ಅಶೀರ್ವದಿಸಿದರು.
ನೃತ್ಯೋಪಾಸನಾ ಕಲಾಕೇಂದ್ರಕ್ಕೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಲಿ :
ಹಿಂದೂ ಸಂಘಟನೆಗಳ ಮುಖಂಡ ಸಮಾಜ ಸೇವಕ ಅರುಣ್ ಕುಮಾರ್ ಪುತ್ತಿಲ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲೆಯನ್ನು ಉಳಿಸುವ ಕಾಲಘಟ್ಟದಲ್ಲಿ ನಾವಿದ್ದೇವೆ. ನಮ್ಮ ಸಂಸ್ಕೃತಿ ಕಲೆ ಉಳಿದರೆ ಪವಿತ್ರವಾದ ಧರ್ಮ ಉಳಿಯಲು ಸಾಧ್ಯ. ಕಲೆಯ ಮೂಲಕ ಸಂಸ್ಕೃತಿಯನ್ನು ಉಳಿಸುವ ಬೆಳೆಸುವ ಕಾರ್ಯವನ್ನು ನೃತ್ಯೋಪಾಸನಾ ಕಲಾಕೇಂದ್ರದ ಮೂಲಕ ಶಾಲಿನಿ ಆತ್ಮಭೂಷಣ್ ಅವರು ಮಾಡುತ್ತಿದ್ದಾರೆ ಎಂದರು. ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆ ಒಂದು ಕಡೆಯಾದರೆ, ನಮ್ಮ ಸಂಸ್ಕೃತಿ, ಕಲೆಯ ಉಳಿವಿಗಾಗಿ ತಮ್ಮನ್ನು ಅರ್ಪಿಸುವ ಮೂಲಕ ಗ್ರಾಮಾಂತರ ಪ್ರದೇಶದ ಅನೇಕ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಮಹತ್ತರ ಕೆಲಸವನ್ನು ಈ ಸಂಸ್ಥೆ ಮಾಡುತ್ತಿದೆ. ಕಲೆಗೆ ನೀಡುವ ಪ್ರೋತ್ಸಾಹವನ್ನು ಗುರುತಿಸಿ ಮುಂದಿನ ದಿನ ಸರಕಾರ ನೃತ್ಯೋಪಾಸನಾ ಕಲಾಕೇಂದ್ರಕ್ಕೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕೆಂಬ ಆಶಯವನ್ನು ವ್ಯಕ್ತಪಡಿಸುತ್ತೇನೆ ಎಂದರು.
ಮಕ್ಕಳಲ್ಲಿ ಶ್ರದ್ಧೆಯಿಂದ ಕಲಿಯುವ ಸಾಮರ್ಥ್ಯ ಬೆಳೆಸಬೇಕು:
ವಿವೇಕಾನಂದ ವಿದ್ಯಾವರ್ಧಕ ಸಂಘ ಪ್ರವರ್ತಿತ ರೇಡಿಯೋ ಪಾಂಚಜನ್ಯದ ಅಧ್ಯಕ್ಷೆ ಕೃಷ್ಣವೇಣಿ ಪ್ರಸಾದ್ ಮುಳಿಯ ಅವರು ಮಾತನಾಡಿ, ಗುರು ಶಿಷ್ಯರ ಸಂಬಂಧ ಹಾಗೂ ದಂಪತಿಯ ಉತ್ತಮ ಸಂಬಂಧದಿಂದ ವೇದಿಕೆ ಸಾಕ್ಷಾತ್ಕಾರಗೊಂಡಿದೆ. ಇವತ್ತು ಮಕ್ಕಳು ಕೃತಿಯ ಮೂಲಕ ವಿದ್ಯೆ ಕಲಿಯಬೇಕು. ಮಕ್ಕಳಲ್ಲಿ ಶ್ರದ್ದೆಯಿಂದ ಕಲಿಯುವ ಸಾಮರ್ಥ್ಯ ಬೆಳೆಸಬೇಕೆಂದರು.
ಕಷ್ಟಪಟ್ಟು ಕಲಿತ ವಿದ್ಯೆಯನ್ನು ಯಾವ ಕಾರಣಕ್ಕೂ ಬಿಡಬೇಡಿ:
ನೃತ್ಯೋಪಾಸನಾ ಗೌರವ ಸ್ವೀಕರಿಸಿದ ವೀರಮಂಗಲ ಶ್ರೀಕೃಷ್ಣ ಕಲಾಕೇಂದ್ರದ ನೃತ್ಯಗುರು ವಿದ್ವಾನ್ ಗೋಪಾಲಕೃಷ್ಣ ಕೆ ಅವರು ಮಾತನಾಡಿ, ಭಗವಂತನು ನೀಡಿದ ಮಾನವ ಧರ್ಮ ಪೂರ್ವ ಜನ್ಮದ ಪುಣ್ಯ. ಈ ಜನ್ಮವನ್ನು ಸಾರ್ಥಕ್ಯಗೊಳಿಸಲು ಸಂಸ್ಕಾರಯುತವಾಗಿರಬೇಕು. ಭಗವಂತನ ಆರಾಧನೆ ನಮ್ಮ ಸಂಸ್ಕೃತಿ. ಕಲೆಯ ಉಪಾಸನ ಕೂಡಾ ಭಗವಂತನ ಆರಾಧನೆ ಮಾಡಿದಂತೆ. ಈ ನಿಟ್ಟಿನಲ್ಲಿ ಕಷ್ಟಪಟ್ಟು ಕಲಿತ ವಿದ್ಯೆಯನ್ನು ಯಾವುದೇ ಕಾರಣಕ್ಕೂ ಬಿಡಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತನ್ನಾಡಿದರು.
ನೃತ್ಯೋಪಾಸನಾ ದಿಗ್ವಿಜಯವನ್ನು ಆಚರಿಸಿದೆ:
ನೃತ್ಯೋಪಾಸನಾ ಕಲಾಕೇಂದ್ರದ ನಿರ್ವಾಹಕ ವಿಶ್ವಸ್ಥೆಯಾಗಿರುವ ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕೇವಲ ಒಬ್ಬ ವಿದ್ಯಾರ್ಥಿಯಿಂದ ಆರಂಭಗೊಂಡ ನಮ್ಮ ಸಂಸ್ಥೆ ಇವತ್ತು ಸುಮಾರು 350ಕ್ಕೂ ಮಿಕ್ಕಿ ವಿದ್ಯಾರ್ಥಿಗಳನ್ನು ಹೊಂದಿದೆ. 19 ವರ್ಷಗಳ ಕಲಾಕೇಂದ್ರದ ಪಯಣ ಮುಂದೆ ವಿಂಶತಿ ಆಚರಣೆ ಮಾಡಲಿದೆ. ಕಳೆದ ವರ್ಷದಿಂದ ನಮ್ಮ ಪಯಣ ಒಂದು ರೀತಿಯ ದಿಗ್ವಿಜಯವನ್ನು ಆಚರಿಸಿದೆ ಎಂದ ಅವರು ಎಡನೀರು ಮಠದಿಂದ ಆರಂಭಿಸಿ, ಮೈಸೂರು, ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ, ಕದಂಬ ಉತ್ಸವ. ಶ್ರೀಲಂಕಾ ಸೇರಿದಂತೆ 1 ವರ್ಷದಲ್ಲಿ 40ಕ್ಕೂ ಅಧಿಕ ನೃತ್ಯ ಪ್ರದರ್ಶನ ನೀಡಿದೆ. ಈ ಸಂದರ್ಭ ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಯ ಪರೀಕ್ಷೆ ಇದ್ದರೂ ಭಾಗವಹಿಸಿದ್ದಾರೆ. ರಾತ್ರಿ ಬೆಳಿಗ್ಗೆ ನಿರಂತರ ತರಬೇತಿ ಪಡೆದಿದ್ದಾರೆ. ಈ ನಿಟ್ಟಿನಲ್ಲಿ ನನ್ನ ಅಚ್ಚುಮೆಚ್ಚಿನ ವಿದ್ಯಾರ್ಥಿಗಳು, ಗುರುಗಳು, ಪೋಷಕರು ನಮಗೆ ಶಕ್ತಿಯಾಗಿದ್ದಾರೆ. ನೃತ್ಯಕಲೆ ಗ್ರಾಮಾಂತರ ಬಡತನದಲ್ಲೂ ಸಿಗಬೇಕೆಂಬ ನಿಟ್ಟಿನಲ್ಲಿ ದತ್ತು ಸ್ವೀಕಾರ ಮಾಡಿ ಅವರಿಗೆ ನೃತ್ಯ ಕಾರ್ಯಕ್ರಮ, ಪರೀಕ್ಷೆಗೆ ಉಚಿತವಾಗಿ ಅವಕಾಶ ಮಾಡಿದ್ದೇವೆ. ಇಲ್ಲಿನ ತನಕ ಸಮಾರು 25ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಉಚಿತ ನೃತ್ಯ ಶಿಕ್ಷಣದ ಪ್ರಯೋಜನ ಪಡೆದಿದ್ದಾರೆ. ಒಟ್ಟಿನಲ್ಲಿ ಈ ಎಲ್ಲಾ ಕಾರ್ಯಕ್ರಮದ ಯಶಸ್ಸು ನನ್ನ ಯಜಮಾನರಿಗೆ ಸಲ್ಲುತ್ತದೆ ಎಂದರು.
ನೃತ್ಯೋಪಾಸನಾ ಗೌರವ:
ಶ್ರೀಕೃಷ್ಣ ಕಲಾಕೇಂದ್ರ ವೀರಮಂಗಲ ಇದರ ನೃತ್ಯಗುರು ವಿದ್ವಾನ್ ಗೋಪಾಲಕೃಷ್ಣ ಕೆ. ಅವರಿಗೆ ಸಂಗೀತ, ನೃತ್ಯ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಗಣನೀಯ ಸೇವೆಗೆ ನೃತ್ಯೋಪಾಸನಾ ಗೌರವ ಪ್ರದಾನ ಮಾಡಲಾಯಿತು. ವಿದ್ವಾನ್ ಉಳ್ಳಾಲ ಮೋಹನ್ ಕುಮಾರ್ ಗೌರವ ಪ್ರದಾನ ನೆರವೇರಿಸಿದರು.
ಮೂವರಿಗೆ ನೃತ್ಯಪೋಷಣೆ ಸಮರ್ಪಣೆ- ಪ್ರತಿಭಾ ಪುರಸ್ಕಾರ:
ನೃತ್ಯ ಪೋಷಣೆ ಕಾರ್ಯಕ್ರಮದಡಿ ಉಚಿತ ನೃತ್ಯ ಶಿಕ್ಷಣಕ್ಕೆ ಬಡ ವಿದ್ಯಾರ್ಥಿಗಳ ದತ್ತು ಸ್ವೀಕಾರ ಕಾರ್ಯಕ್ರಮದಲ್ಲಿ ಮೂವರಿಗೆ ನೃತ್ಯಪೋಷಣೆ ಸಮರ್ಪಿಸಲಾಯಿತು. ಬೆಟ್ಟಂಪಾಡಿ ಕಾಲೇಜಿನ ವಿದ್ಯಾರ್ಥಿನಿ ನಯನಾ ಬಿ, ಉಪ್ಪಿನಂಗಡಿ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ಚೈತನ್ಯ ಎಸ್, ಸೈಂಟ್ ಮೆರಿಸ್ ಶಾಲೆಯ ವಿದ್ಯಾರ್ಥಿನಿ ಜಸ್ಮೀ ಎನ್ ಅವರಿಗೆ ನೃತ್ಯಪೋಷಣೆಯನ್ನು ನೀಡಲಾಯಿತು. ಭರತನಾಟ್ಯ ಜ್ಯೂನಿಯರ್, ಸೀನಿಯರ್ ಮತ್ತು ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವರಿಗೆ ಕಾರ್ಯಕ್ರಮದಲ್ಲಿ ಪ್ರತಿಭಾಪುರಸ್ಕಾರ ನೀಡಲಾಯಿತು.
ವಿದ್ಯಾರ್ಥಿಗಳಿಗೆ/ಗುರುಗಳಿಗೆ ಗೌರವ:
ಜೂನಿಯರ್ ವಿಭಾಗದಿಂದ ತೇರ್ಗಡೆಗೊಂಡ ಮತ್ತು ವಿದ್ವತ್ ಅಂತಿಮ ಪದವಿ ತೇರ್ಗಡೆಗೊಂಡ ಹಾಗೂ ಗುರುಗಳ ಜೊತೆ ಕಾರ್ಯಕ್ರಮಕ್ಕೆ ಹೋಗುತ್ತಿರುವ ವಿದ್ಯಾರ್ಥಿಗಳು ತಮ್ಮ ಪ್ರೀತಿಯ ಗುರು ವಿದುಷಿ ಶಾಲಿನಿ ಆತ್ಮಭೂಷಣ್ ದಂಪತಿಗೆ ಗೌರವ ಕಾರ್ಯಕ್ರಮ ನೆರವೇರಿಸಿದರು. ಸಂಸ್ಥೆಯ ನಿರ್ದೇಶಕರಾದ ಮಂಜುನಾಥ್, ಡಾ.ಕೃಷ್ಣಕುಮಾರ್, ಶೃತಿ ಎಸ್.ಆರ್, ಸಂಸ್ಥೆಯ ನಿರ್ದೇಶಕರಾಗಿರುವ ಕನ್ನಡಪ್ರಭ ಪತ್ರಿಕೆ ವರದಿಗಾರ ಆತ್ಮಭೂಷಣ್ ಅವರು ತಾಂಬೂಲ ನೀಡಿ ಗೌರವಿಸಿದರು. ಶ್ರೀಧರ್, ಮಲ್ಲಿಕಾ ಕಿರಣ್, ಅಕ್ಷತಾ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಶೃತಿ ಸ್ವಾಗತಿಸಿದರು. ಮಮತಾ ಕೆ ವಂದಿಸಿದರು. ವಿವೇಕಾನಂದ ಕಾಲೇಜಿನ ಡಾ.ವಿಜಯಸರಸ್ವತಿ ಕಾರ್ಯಕ್ರಮ ನಿರೂಪಿಸಿದರು.
ನೃತ್ಯೋಪಾಸನಾ ಕಾರ್ಯಕ್ರಮದಲ್ಲಿ ಪುತ್ತೂರು ಹಾಗೂ ಉಪ್ಪಿನಂಗಡಿ ಶಾಖೆಯ ವಿದ್ಯಾರ್ಥಿಗಳು ಭರತನಾಟ್ಯ ಪ್ರದರ್ಶಿಸಿದರು. ಹಿಮ್ಮೇಳದಲ್ಲಿ ನಟುವಾಂಗ ವಿದುಷಿ ಶಾಲಿನಿ ಆತ್ಮಭೂಷಣ್, ಹಾಡುಗಾರಿಕೆಯಲ್ಲಿ ವಸಂತ ಕುಮಾರ್ ಗೋಸಾಡ ಹಾಗೂ ವಿದ್ವಾನ್ ಕೃಷ್ಣಾಚಾರ್ ಪಾಣೆಮಂಗಳೂರು, ಮೃದಂಗದಲ್ಲಿ ವಿದ್ವಾನ್ ಗೀತೇಶ್ ನೀಲೇಶ್ವರ, ಕೊಳಲಿನಲ್ಲಿ ವಿದ್ವಾನ್ ರಾಜ್ಗೋಪಾಲ್ ಕಾಞಂಗಾಡ್ ಸಾಥ್ ನೀಡಿದರು. ವಿದುಷಿ ಶಾಲಿನಿ ಆತ್ಮಭೂಷಣ್ ಅವರ ಪತಿ ಕನ್ನಡ ಪ್ರಭ ವರದಿಗಾರ ಆತ್ಮಭೂಷಣ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ಮುಂದುವರಿಯಿತು.
ಪಾದ ಪೂಜೆ, ಸ್ವರ್ಣ ಅರ್ಪಣೆಯಿಂದ ಗುರುವಂದನೆ ವಿಶೇಷ:
ಮಂಗಳೂರು ಕೊಲ್ಯದ ನಾಟ್ಯನಿಕೇತನದ ನೃತ್ಯಗುರು, ಶಾಂತಲಾ ಪ್ರಶಸ್ತಿ ಪುರಸ್ಕೃತ ವಿದ್ವಾನ್ ಉಳ್ಳಾಲ ಮೋಹನ್ ಕುಮಾರ್ ಮತ್ತು ಅವರ ಪುತ್ರಿ ವಿದುಷಿ ರಾಜಶ್ರೀ ಅವರಿಗೆ ಗುರುವಂದನೆ ಕಾರ್ಯಕ್ರಮ ವಿಶೇಷವಾಗಿ ನೆರವೇರಿಸಲಾಯಿತು. ವಿದುಷಿ ಶಾಲಿನಿ ಆತ್ಮಭೂಷಣ್ ಅವರು ಗುರುಗಳ ಪಾದವನ್ನು ತೊಳೆದು, ಪುಷ್ಪಾರ್ಚನೆ ಮಾಡಿ, ಆರತಿ ಬೆಳಗಿಸಿ, ಶಾಲು, ಪೇಟ, -ಲವಸ್ತುಗಳನ್ನು ಸಮರ್ಪಣೆ ಮಾಡಿ, ಚಿನ್ನದ ಉಂಗುರವನ್ನು ಗುರುಗಳ ಕೈಗೆ ತೊಡಿಸುವ ಮೂಲಕ ಗುರುವಂದನೆ ಸಲ್ಲಿಸಿದರು.