ಆತ್ಮವಿಮರ್ಶೆಯೇ ಬಸವಣ್ಣ– ಕನಕದಾಸರ ಲೋಕದೃಷ್ಟಿ

0

ಬೆಟ್ಟಂಪಾಡಿ: ಬಸವಣ್ಣ ಮತ್ತು ಕನಕದಾಸರು ನಡೆನುಡಿಯ ಸಿದ್ಧಾಂತಕ್ಕೆ ಬದ್ದರಾಗಿದ್ದರು. ಅವರು ಇಹಪರ ಚಿಂತನೆಗಳಲ್ಲಿ ಸಹಜತೆಯನ್ನು ಪುರಸ್ಕರಿಸಿದ್ದರು. ಡಾಂಭಿಕತೆಯನ್ನು ಸದಾ ವಿರೋಧಿಸಿದವರು. ನಾನು ಎಂಬುದು ಹೋಗಿ ನಾವು ಎಂಬ ಸಮಷ್ಟಿ ಭಾವ ಬರಬೇಕಾದರೆ ಆತ್ಮವಿಮರ್ಶೆಯ ಗುಣ ನಮ್ಮಲ್ಲಿರಬೇಕು. ಇವರಿಬ್ಬರ ಲೋಕದೃಷ್ಟಿ ಸತ್ಯದ ಹುಡುಕಾಟವೇ ಆಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಅರ್ಧ್ಯಕ್ಷರಾದ ಡಾ.ಬಿ.ವಿ ವಸಂತಕುಮಾರ್ ಹೇಳಿದರು.

ಅವರು ಮಂಗಳೂರು ವಿಶ್ವವಿದ್ಯಾಲಯದ ಕನಕದಾಸ ಅಧ್ಯಯನ ಕೇಂದ್ರದ ವತಿಯಿಂದ ಬೆಟ್ಟಂಪಾಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಬಸವಣ್ಣ– ಕನಕದಾಸ ಇಹ ಪರ ಲೋಕದೃಷ್ಟಿ ಎಂಬ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ದಿಕ್ಸೂಚಿ ಭಾಷಣವನ್ನು ಮಾಡುತ್ತಿದ್ದರು. ಮನುಷ್ಯರಿಗೆ ಛಲ ಬೇಕು ಎಂಬ ಅಂಶವನ್ನು ಪ್ರತಿಪಾದಿಸಿದ ಶರಣ ಮತ್ತು ದಾಸ ಪರಂಪರೆಗಳ ನಾಮರೂಪಗಳು ಭಿನ್ನವಾಗಿದ್ದರೂ ದೃಷ್ಟಿ ಮಾತ್ರ ಒಂದೇ ಆಗಿತ್ತು. ಅದು ಜೀವಪರವೂ ಜೀವ ವಿಕಾಸ ಪರವೂ ಆಗಿತ್ತು ಎಂದರು. ಕಾಲೇಜು ಶಿಕ್ಷಣ  ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕರಾದ ಪ್ರೊ. ಮೊರಬದ ಮಲ್ಲಿಕಾರ್ಜುನ ಅವರು ಸಂಕಿರಣವನ್ನು ಉದ್ಘಾಟಿಸಿ ಲೋಕಕ್ಕೆ ಒಳಿತನ್ನು ಬಯಸಿದ ದಾರ್ಶನಿಕರನ್ನು ನಮ್ಮೊಳಗೂ ಮಾಡಿಕೊಳ್ಳಬೇಕು. ಯಾವುದೋ ದುಷ್ಟ ಚಿಂತನೆಗಳು ಒಳಬರದಂತೆ ತಡೆದು ಇಹ ಪರದಲ್ಲಿ ಸಮಾನತೆಯ ಮಾನವೀಯತೆಯ ವಿವೇಕವನ್ನು ಬಿತ್ತಿದ ಬಸವಣ್ಣ ಮತ್ತು ಕನಕದಾಸರನ್ನು ನಮ್ಮಅಂತ:ಶಕ್ತಿಯಾಗಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲ ಡಾ.ವರದರಾಜ ಚಂದ್ರಗಿರಿ ಅವರು  ಭಾರತೀಯ ದಾರ್ಶನಿಕ ಪರಂಪರೆಯನ್ನು ಹೊಸಕಾಲದ ಪರಿಕಲ್ಪನೆಗಳಲ್ಲಿ ಅರ್ಥಮಾಡಿಕೊಳ್ಳುವ ಪ್ರಯತ್ನಗಳು ನಡೆಯಬೇಕು ಎಂದರು. ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕ ಡಾ. ಧನಂಜಯ ಕುಂಬಳೆ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿನಿ ಸಮನ್ವಿ ರೈ ಕನಕಕೀರ್ತನೆಯನ್ನು ಹಾಡಿದರು. ಪ್ರಾಧ್ಯಾಪಕಿ ಮಂಜುಳಾದೇವಿ ಅವರು ನಿರೂಪಿಸಿದರು. ಕನಕ ಕೇಂದ್ರದ ಸಂಶೋಧನ ಸಹಾಯಕ ಆನಂದ ಕಿದೂರು ಅವರು ವಂದಿಸಿದರು. ಪುತ್ತೂರಿನ  ವಿದುಷಿ ವೀಣಾ ರಾಘವೇಂದ್ರ ಬಳಗದವರಿಂದ ಕನಕ ವಚನ ಕೀರ್ತನ ಕಾರ್ಯಕ್ರಮವು ನಡೆಯಿತು.

ಉದ್ಘಾಟನಾ ಕಾರ್ಯಕ್ರಮದ ಬಳಿಕ ವಿವಿಧ  ಚಿಂತನಗೋಷ್ಠಿಗಳು ನಡೆಯಿತು. ಜಿಲ್ಲೆಯ ವಿವಿಧ ಕಾಲೇಜುಗಳಿಂದ ಅಧ್ಯಾಪಕರೂ ವಿದ್ಯಾರ್ಥಿಗಳೂ ಸಾಹಿತ್ಯಾಸಕ್ತರೂ ಆಗಮಿಸಿದ್ದರು.

LEAVE A REPLY

Please enter your comment!
Please enter your name here