ಕಲ್ಲೇಗ ಟೈಗರ‍್ಸ್ ಮುಖ್ಯಸ್ಥ ಅಕ್ಷಯ್ ಕೊಲೆ ಪ್ರಕರಣ – ರಿವೇಂಜ್ ಮರ್ಡರ್ ಭೀತಿ – ಗ್ಯಾಂಗ್‌ವಾರ್‌ನಿಂದ ಜರ್ಜರಿತವಾಗಿದ್ದ ಪುತ್ತೂರಿಗೆ ಬೇಕಿದೆ ನೆಮ್ಮದಿ

0

ಸಂತೋಷ್ ಕುಮಾರ್ ಶಾಂತಿನಗರ


ಪುತ್ತೂರು: ಜನಪ್ರಿಯ ಹುಲಿವೇಷ ಕುಣಿತ ತಂಡವಾಗಿ ಗುರುತಿಸಿಕೊಂಡಿರುವ ‘ಕಲ್ಲೇಗ ಟೈಗರ‍್ಸ್’ ತಂಡದ ಮುಖ್ಯಸ್ಥ ಅಕ್ಷಯ್ ಕಲ್ಲೇಗ(26ವ.)ರವರ ಬರ್ಬರ ಕೊಲೆಗೆ ಪ್ರತೀಕಾರವಾಗಿ ಇನ್ನೊಂದು ಕೊಲೆಯಾಗಲಿದೆ ಎಂದು ವ್ಯಾಪಕ ಸುದ್ದಿಯಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಹೈ ಅಲರ್ಟ್ ಆಗಿದೆ. ಈ ಹಿಂದೆ ರಾಜಕೀಯ ಪ್ರೇರಿತ ಗ್ಯಾಂಗ್‌ವಾರ್ ಮೂಲಕ ಕುಖ್ಯಾತಿ ಪಡೆದಿದ್ದ ಪುತ್ತೂರು ತಾಲೂಕು ಇದೀಗ ಅಕ್ಷಯ್ ಕಲ್ಲೇಗರವರ ಮರ್ಡರ್ ನಡೆಯುವುದರೊಂದಿಗೆ ಮತ್ತೆ ಸದ್ದು ಮಾಡುತ್ತಿದೆ. ಆಪ್ತ ಸ್ನೇಹಿತರಿಂದಲೇ ಅಕ್ಷಯ್ ಕಲ್ಲೇಗ ಭೀಕರವಾಗಿ ಕೊಲೆಯಾಗಿರುವುದರಿಂದ ಜನರು ಬೆಚ್ಚಿ ಬಿದ್ದಿದ್ದಾರೆ. ಮತೀಯ ಕಾರಣಕ್ಕಾಗಿ ಅತೀ ಸೂಕ್ಷ್ಮ ಪ್ರದೇಶ ಎಂದೇ ಕರೆಸಿಕೊಳ್ಳುತ್ತಿರುವ ಪುತ್ತೂರಿನಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಪುತ್ತೂರಿನ ಆಯಕಟ್ಟಿನ ಜಾಗಗಳಲ್ಲಿ ಗಾಂಜಾ, ಚರಸ್, ಹೆರಾಯಿನ್ ಮುಂತಾದ ಮಾದಕ ವಸ್ತುಗಳು ಮಾರಾಟವಾಗುತ್ತಿರುವ ಕುರಿತು ಇಲಾಖೆ ವಿಶೇಷ ನಿಗಾ ಇಟ್ಟಿದೆ. ರಿವೇಂಜ್ ಮರ್ಡರ್‌ನ ಸಾಧ್ಯಾಸಾಧ್ಯತೆಗಳ ಕುರಿತು ಕಣ್ಗಾವಲು ಇಟ್ಟಿರುವ ಪೊಲೀಸ್ ಇಲಾಖೆ ತನ್ನ ಸಿಬ್ಬಂದಿಗಳ ಗಸ್ತು ಕಾರ್ಯವನ್ನು ಬಿರುಸುಗೊಳಿಸಿದೆ. ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿಗಳನ್ನು ದುರಸ್ತಿ ಪಡಿಸಲು ಮತ್ತು ಹೆಚ್ಚುವರಿ ಸಿಸಿಟಿವಿ ಅಳವಡಿಸಲು ಸಿದ್ಧವಾಗಿರುವ ಪೊಲೀಸ್ ಇಲಾಖೆ ರೌಡಿಶೀಟರ್‌ಗಳ ಮೇಲೆ ನಿಗಾ ಇಟ್ಟಿದೆ. ಅಲ್ಲದೆ ಮಾದಕ ವ್ಯಸನಿಗಳಿಗೆ ಕಡಿವಾಣ ಹಾಕಲು ಮುಂದಾಗಿದೆ. ಈ ಮಧ್ಯೆ, ಈ ಹಿಂದೆ ಪೊಲೀಸ್ ಇಲಾಖೆಯಲ್ಲಿದ್ದ ಅಪರಾಧ ಪತ್ತೆದಳವನ್ನು ಪುನರ್‌ರಚಿಸಬೇಕು ಎಂದು ಸಾರ್ವಜನಿಕರಿಂದ ಪ್ರಬಲವಾಗಿ ಒತ್ತಾಯ ಕೇಳಿ ಬಂದಿದೆ.

ಬೆಚ್ಚಿ ಬಿದ್ದಿತ್ತು ಪುತ್ತೂರು!: ಪುತ್ತೂರಿನಲ್ಲಿ ಈ ಹಿಂದೆ ರಾಜಕೀಯ ಪ್ರೇರಿತ ಗ್ಯಾಂಗ್‌ವಾರ್ ನಡೆಯುತ್ತಿತ್ತು. ಹಲ್ಲೆ, ಕೊಲೆಯತ್ನದಂತಹ ಕೃತ್ಯಗಳು ನಡೆಯುತ್ತಿತ್ತು. ಪುತ್ತೂರಿನ ಪ್ರಮುಖ ಪ್ರದೇಶಗಳಾದ ಬೊಳುವಾರು ಮತ್ತು ನೆಲ್ಲಿಕಟ್ಟೆಯ ಗ್ಯಾಂಗ್ ನಡುವಿನ ಹೊಡೆದಾಟ, ಬಡಿದಾಟ ಪುತ್ತೂರಿನ ಕ್ರೈಂ ಇತಿಹಾಸದ ಪುಟದಲ್ಲಿ ದಾಖಲಾಗಿದೆ. ಅಂದು ನಡೆಯುತ್ತಿದ್ದ ರಕ್ತಪಾತವನ್ನು ಪುತ್ತೂರಿಗರು ಇಂದಿಗೂ ಮರೆತಿಲ್ಲ. ಅಂದು ರೌಡಿಗಳಾಗಿ ಮೆರೆದಿದ್ದ ಹಲವರು ಇಂದು ತೆರೆಮರೆಗೆ ಸರಿದಿದ್ದಾರೆ. ಕೆಲವರು ಜನಪ್ರತಿನಿಧಿಗಳಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಖಡಕ್ ಪೊಲೀಸ್ ಅಧಿಕಾರಿಗಳನ್ನು ಕಂಡಿದ್ದ ಪುತ್ತೂರಿನ ಜನತೆಗೆ ಇಲಾಖೆ ಮನಸ್ಸು ಮಾಡಿದರೆ ರೌಡಿಗಳನ್ನು ಯಾವ ರೀತಿ ಮಟ್ಟ ಹಾಕಬಹುದು ಎಂಬುದು ಚೆನ್ನಾಗಿ ನೆನಪಿದಿದೆ. ಸದಾ ರಾಜಕೀಯ ಕಾರಣಕ್ಕಾಗಿ ಕೋಮುಗಲಭೆ ನಡೆಯುವ ಮೂಲಕ ಪದೇ ಪದೇ ಬಲಾತ್ಕಾರದ ಬಂದ್ ನಡೆಯುತ್ತಿದ್ದ ಪುತ್ತೂರು ಇದೀಗ ಬಹುತೇಕ ಶಾಂತವಾಗಿದೆ. ಜಿಲ್ಲಾ ಯುವಕ ಕಾಂಗ್ರೆಸ್ ಉಪಾಧ್ಯಕ್ಷರಾಗಿದ್ದ ಜಯಂತ ರೈಯವರನ್ನು ಪುತ್ತೂರಿನ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ್ದ ಮರೀಲ್‌ನ ಸುನೀಲ್ ಡಿ ಸೋಜಾನನ್ನು ಪ್ರತೀಕಾರವಾಗಿ ಕೊಲೆ ಮಾಡಲಾಗಿತ್ತು. 2 ದಶಕಗಳ ಹಿಂದೆ ನಡೆದ ಈ ಘಟನೆ ರಿವೇಂಜ್ ಮರ್ಡರ್‌ಗೆ ಸಾಕ್ಷಿಯಾಗಿತ್ತು. ಆ ಬಳಿಕ ಇತ್ತೀಚೆಗೆ ಹಿಂದು ಜಾಗರಣ ವೇದಿಕೆಯ ಕಾರ್ಯದರ್ಶಿಯಾಗಿದ್ದ ಕಾರ್ತಿಕ್ ಸುವರ್ಣ ಮೇರ್ಲರವರನ್ನು ಸಂಪ್ಯದ ಗಣೇಶೋತ್ಸವದ ಪೆಂಡಾಲ್‌ನಲ್ಲಿಯೇ ಬರ್ಬರವಾಗಿ ಇರಿದು ಕೊಂದ ಮೂವರು ಆರೋಪಿಗಳ ಪೈಕಿ ಸಂಪ್ಯದ ಚರಣ್‌ರಾಜ್ ರೈಯನ್ನು ಕೊಳ್ತಿಗೆಯ ಪೆರ್ಲಂಪಾಡಿಯಲ್ಲಿ ಕಿಶೋರ್ ಪೂಜಾರಿ ಕಲ್ಲಡ್ಕ ಮತ್ತು ಆತನ ತಂಡದವರು ಕೊಲೆ ಮಾಡಿ ರಿವೇಂಜ್ ತೀರಿಸಿಕೊಂಡಿದ್ದರು. ಇದೀಗ ಅಕ್ಷಯ್ ಕಲ್ಲೇಗರವರ ಕೊಲೆಯಾಗಿದೆ. ಈ ವೇಳೆ ರಿವೇಂಜ್ ಮರ್ಡರ್‌ನ ಮಾತು ಮತ್ತೆ ಕೇಳಿ ಬರುತ್ತಿದೆ.
ಪೊಲೀಸ್ ಗಸ್ತು ಬಿರುಸು-ಸಿ.ಸಿ.ಟಿ.ವಿ. ದುರಸ್ತಿ-ರೌಡಿ ಶೀಟರ್‌ಗಳ ಮೇಲೆ ನಿಗಾ: ಪುತ್ತೂರಿನಲ್ಲಿ ಕೋಮು ಕಾರಣಕ್ಕಾಗಿ ಸಂಘರ್ಷ ನಡೆಯುತ್ತದೆ. ರಾಜಕೀಯ ಪ್ರೇರಿತ ಹೊಡೆದಾಟಗಳು ಉಂಟಾಗುತ್ತದೆ. ಇತ್ತೀಚೆಗೆ ಮಾದಕ ವ್ಯಸನಿಗಳಿಂದ ಹೊಡೆದಾಟ ನಡೆಯುತ್ತಿದೆ. ಇದೇ ಹಿನ್ನೆಲೆಯಲ್ಲಿ ಅಕ್ಷಯ್ ಕಲ್ಲೇಗ ಕೊಲೆ ಆಯಿತಾ ಎಂಬ ಸಂಶಯ ಉಂಟಾಗಿದೆ. ಈ ಹಿಂದೆ ಪುತ್ತೂರಿನ ಸಿಪಿಸಿ ಪೆಟ್ರೋಲ್ ಪಂಪ್‌ನಲ್ಲಿ ಸಿಬ್ಬಂದಿಯಾಗಿದ್ದ ಕಬಕ ಗ್ರಾಮದ ಕಲ್ಲೇಗ ಶೇವಿರೆ ನಿವಾಸಿ, ಪ್ರಸ್ತುತ ಕಲ್ಲೇಗ ದೈವಸ್ಥಾನದ ಚಾಕ್ರಿಯವರಾಗಿರುವ ಚಂದ್ರಶೇಖರ್ ಗೌಡ ಅವರ ಪುತ್ರ, ಪ್ರತಿಷ್ಠಿತ ಕಲ್ಲೇಗ ಟೈಗರ‍್ಸ್ ತಂಡದ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಅವರನ್ನು ನ.6ರ ರಾತ್ರಿ 11.35ರ ಸುಮಾರಿಗೆ ನೆಹರುನಗರ ಜಂಕ್ಷನ್‌ನಲ್ಲಿ ಮಾರಕಾಸ್ತ್ರಗಳಿಂದ ಕಡಿದು ಹತ್ಯೆ ಮಾಡಿರುವ ಘಟನೆಯ ಹಿಂದೆ ಗಾಂಜಾದ ಅಮಲು ಕೆಲಸ ಮಾಡಿತ್ತು ಎಂದು ವ್ಯಾಪಕವಾಗಿ ಕೇಳಿ ಬರುತ್ತಿದೆ. ಆದರೆ, ಪೊಲೀಸ್ ಇಲಾಖೆ ಇದನ್ನು ನಿರಾಕರಿಸಿದೆ. ಮನೀಶ್ ಮತ್ತು ತಂಡದವರು ಮದ್ಯಪಾನ ಮಾಡಿದ್ದರು ಹೊರತು ಗಾಂಜಾದಂತಹ ಮಾದಕ ವಸ್ತು ಸೇವನೆ ಮಾಡಿರಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿದೆ. ಬನ್ನೂರು ದಾರಂದಕುಕ್ಕು ನಿವಾಸಿಯಾಗಿದ್ದು ಪಡೀಲ್‌ನಲ್ಲಿ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟ, ಖರೀದಿ ವ್ಯವಹಾರ ನಡೆಸುತ್ತಿದ್ದ ಮನೀಶ್, ಸೇಫ್ ವೇ ಖಾಸಗಿ ಬಸ್ ಚಾಲಕನಾಗಿದ್ದ ಬನ್ನೂರು ಕೃಷ್ಣನಗರ ನಿವಾಸಿ ಚೇತನ್, ಬನ್ನೂರು ನಿವಾಸಿಯಾಗಿದ್ದು ಇಲೆಕ್ಟ್ರಿಶಿಯನ್ ಆಗಿದ್ದ ಮಂಜುನಾಥ್ ಯಾನೆ ಮಂಜ ಯಾನೆ ಹರಿ ಮತ್ತು ಬ್ಲಾಕ್ ಕಾಂಗ್ರೆಸ್ ಎಸ್.ಸಿ. ಘಟಕದ ಅಧ್ಯಕ್ಷರಾಗಿದ್ದ ಪಡೀಲು ನಿವಾಸಿ ಕೇಶವರವರು ಕ್ಲುಲ್ಲಕ ಕಾರಣಕ್ಕಾಗಿ ಅಕ್ಷಯ್‌ರವರನ್ನು ಬರ್ಬರವಾಗಿ ಕಡಿದು ಹತ್ಯೆ ಮಾಡಿರುವುದರ ಹಿಂದೆ ಇತರ ಕಾರಣಗಳು ಏನಾದರೂ ಇದೆಯೇ ಎಂಬ ಸಂಶಯ ವ್ಯಕ್ತವಾಗಿದೆ. ಖಾಸಗಿ ಬಸ್ ‘ಆನಂದ್’ನ ನಿರ್ವಾಹಕ ಶಿವಪ್ರಸಾದ್ ಎಂಬವರು ನ.6ರಂದು ಸಂಜೆ ಮಂಗಳೂರು ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದ ಬೈಕ್ ವಿವೇಕಾನಂದ ಕಾಲೇಜು ವಿದ್ಯಾರ್ಥಿ, ಕೇರಳ ಮೂಲದವರಾಗಿದ್ದು ಪಿ.ಜಿ.ಯಲ್ಲಿರುವ ವಿನ್ಯಾಸ್ ಎಂಬವರಿಗೆ ಡಿಕ್ಕಿಯಾದ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಅಕ್ಷಯ್ ಹತ್ಯೆ ನಡೆಯಿತು ಎಂದು ಹೇಳಲಾಗುತ್ತಿದೆಯಾದರೂ ಇದರ ಹಿಂದಿನ ನಿಗೂಢ ಕಾರಣಗಳು ಬಯಲಾಗಬೇಕಿದೆ ಎಂದು ಸಾರ್ವಜನಿಕರಿಂದ ಒತ್ತಾಯ ಕೇಳಿ ಬಂದಿದೆ. ಒಟ್ಟು ಘಟನೆಯಿಂದ ಇದೀಗ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ. ಪೊಲೀಸ್ ಗಸ್ತು ಬಿರುಸುಗೊಳಿಸಿರುವ ಪೊಲೀಸ್ ಇಲಾಖೆ ಅಲ್ಲಲ್ಲಿ ಸಿಸಿಟಿವಿಗಳನ್ನು ದುರಸ್ತಿ ಪಡಿಸಲು ಮತ್ತು ಹೊಸದಾಗಿ ಸಿಸಿಟಿವಿ ಅಳವಡಿಸಲು ಸಿದ್ಧವಾಗಿದೆ. ಅಲ್ಲದೆ ರೌಡಿಶೀಟರ್‌ಗಳ ಮೇಲೆ ನಿಗಾ ಇಡಲಾರಂಭಿಸಿದೆ. ಪಾತಕ ಕೃತ್ಯದಲ್ಲಿ ಈ ಹಿಂದೆ ಇಲ್ಲದಿದ್ದರೂ ಮಾದಕ ವ್ಯಸನಿಗಳಾಗಿರುವ ಸಣ್ಣ ಪ್ರಾಯದ ಯುವಕರೂ ಕ್ರೈಂ ಲೋಕದಲ್ಲಿ ಕೈಯಾಡಿಸಲು ಆರಂಭ ಮಾಡಿರುವುದರಿಂದ ಅಂತವರ ಮಾಹಿತಿ ಸಂಗ್ರಹಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ. ಅಕ್ಷಯ್ ಕಲ್ಲೇಗ ಅವರ ಕೊಲೆಗೆ ಸಂಬಂಧಿಸಿದಂತೆ ಚಿಕ್ಕಮೂಡ್ನೂರು ಗ್ರಾಮದ ವಿಖ್ಯಾತ್ ಬಿ. ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿರುವ ಪ್ರಕರಣದ ತನಿಖಾಧಿಕಾರಿಯಾಗಿರುವ ಪೊಲೀಸ್ ಇನ್ಸ್‌ಪೆಕ್ಟರ್ ಸುನೀಲ್ ಕುಮಾರ್ ಅವರ ತಂಡ ಹೆಚ್ಚಿನ ಮಾಹಿತಿ ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದೆ

ಪೊಲೀಸ್ ಹೈ ಅಲರ್ಟ್ !

*ಗಸ್ತು ಬಿರುಸು ಜ ಸಿ.ಸಿ.ಟಿ.ವಿ. ದುರಸ್ತಿ
*ರೌಡಿ ಶೀಟರ್‌ಗಳ ಮೇಲೆ ನಿಗಾ
*ಮಾದಕ ವ್ಯಸನಿಗಳಿಗೆ ಕಡಿವಾಣ

ಅಪರಾಧ ಪತ್ತೆದಳ ಮತ್ತೆ ಆರಂಭಿಸಲು ಒತ್ತಾಯ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಾಂಡವವಾಡುತ್ತಿದ್ದ ರೌಡಿಗಳ ಅಟ್ಟಹಾಸವನ್ನು ಮಟ್ಟಹಾಕಲು ಜಯಂತ್ ಶೆಟ್ಟಿ, ಕೆ.ಸಿ. ಅಶೋಕನ್‌ರಂತಹ ದಕ್ಷ ಅಧಿಕಾರಿಗಳ ನೇತೃತ್ವದಲ್ಲಿ ಈ ಹಿಂದೆ ರೌಡಿ ನಿಗ್ರಹ ದಳ ಕಾರ್ಯ ನಿರ್ವಹಿಸುತ್ತಿತ್ತು. ಬಳಿಕ ಅಪರಾಧ ಪತ್ತೆದಳ ಕಾರ್ಯ ನಿರ್ವಹಣೆ ಮಾಡುತ್ತಿತ್ತು. ಈ ತಂಡಗಳು ಕ್ರೈಂ ನಡೆಯುವವರೆಗೆ ಕಾಯುತ್ತಿರಲಿಲ್ಲ. ಮೊದಲೇ ಎಲ್ಲಿ, ಏನು ನಡೆಯುತ್ತಿದೆ, ಯಾರು ಅಪಾಯಕಾರಿ ವ್ಯಕ್ತಿಗಳು ಇದ್ದಾರೆ ಎಂದು ಗುರುತಿಸಿ ಅವರನ್ನು ಬೆಂಡೆತ್ತುತ್ತಿದ್ದರು. ಗೋಪಾಲ್ ಹೊಸೂರು ಅವರು ಐ.ಜಿ.ಯಾಗಿದ್ದಾಗ ಕೋಮು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಕಮ್ಯೂನಲ್ ಗೂಂಡಾಗಳನ್ನು ಬೇಟೆಯಾಡಲೆಂದೇ ಸರ್ಕಲ್ ಇನ್ಸ್‌ಪೆಕ್ಟರ್ ನಂಜುಂಡೇಗೌಡ ನೇತೃತ್ವದ ವಿಶೇಷ ತಂಡ ಇತ್ತು. ಪುತ್ತೂರಿನಲ್ಲಿ ಎಎಸ್‌ಪಿ ಸ್ಕ್ವ್ಯಾಡ್‌ನವರಿಗೇ ಒಂದು ಗತ್ತು, ಗೈರತ್ತು, ತಾಕತ್ತು ಇತ್ತು. ಇವರು ಕಾನೂನು ವಿರೋಧಿ ಕೃತ್ಯ ಮಾಡುವವರಿಗೆ ಸಿಂಹಸ್ವಪ್ನವಾಗಿದ್ದರು. ಆದರೆ, ಇದೀಗ ಇಂತಹ ಯಾವುದೇ ಪೊಲೀಸ್ ತಂಡಗಳು ಅಸ್ತಿತ್ವದಲ್ಲಿ ಇಲ್ಲ. ಇದರಿಂದಾಗಿಯೇ ಕ್ರೈಂ ರೇಟ್ ಹೆಚ್ಚಾಗುವಂತಾಗಿದೆ. ಆದ್ದರಿಂದ ಮತ್ತೆ ಅಪರಾಧ ಪತ್ತೆದಳದಂತಹ ಬಲಿಷ್ಠ ತಂಡ ರಚಿಸಬೇಕು ಎಂದು ಜನಾಗ್ರಹ ವ್ಯಕ್ತವಾಗಿದೆ.

ರಾತ್ರಿ ಅನಗತ್ಯ ತಿರುಗಾಡುವವರೇ ಎಚ್ಚರ.. – ನಿಮ್ಮ ಹಿಂದೆ ಪೊಲೀಸರಿದ್ದಾರೆ !
ಅಕ್ಷಯ್ ಕಲ್ಲೇಗ ಅವರ ಕೊಲೆಯಾದ ನಂತರ ಪೊಲೀಸ್ ಇಲಾಖೆ ಕೆಲವೊಂದು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಗುಪ್ತಚರ ಇಲಾಖೆಯನ್ನು ಇನ್ನಷ್ಟು ಸಕ್ರಿಯಗೊಳಿಸಲಾಗುತ್ತಿದೆ. ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮಪ್ಪ, ಪುತ್ತೂರು ಡಿವೈಎಸ್‌ಪಿ ಡಾ. ಗಾನಾ ಪಿ. ಕುಮಾರ್ ಮತ್ತು ನಗರ ಠಾಣಾ ಇನ್ಸ್‌ಪೆಕ್ಟರ್ ಸುನೀಲ್ ಕುಮಾರ್ ಅವರು ಶಾಂತಿ ಸುವ್ಯವಸ್ಥೆ ಕಾಪಾಡಲು ಹಲವು ಸೂತ್ರ ಸಿದ್ಧಪಡಿಸಿದ್ದಾರೆ. ರಾತ್ರಿ ವೇಳೆ ಅನಗತ್ಯವಾಗಿ ತಿರುಗಾಡುವವರಿಗೆ ಬಿಸಿ ಮುಟ್ಟಿಸಲು ಪೊಲೀಸರಿಗೆ ಇವರು ಸೂಚನೆ ನೀಡಿದ್ದಾರೆ. ಅವಧಿ ಮೀರಿ ಕಾರ್ಯಾಚರಿಸುವ ಬಾರ್‌ಗಳು, ಅನಗತ್ಯವಾಗಿ ತಿರುಗಾಡುವ ಕಾರುಗಳು, ಬೈಕ್‌ಗಳು ಇನ್ನು ಮುಂದೆ ಬೇಕಾಬಿಟ್ಟಿ ತಿರುಗಾಡದಂತೆ ಮಾಡಲು ಪೊಲೀಸ್ ಇಲಾಖೆ ಸನ್ನದ್ಧವಾಗಿದೆ. ಸಂಚಾರ ಠಾಣಾ ಪೊಲೀಸರೂ ಅಲರ್ಟ್ ಆಗಿರುವಂತೆ ಪೊಲೀಸ್ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ರಿವೇಂಜ್‌ಗೆ ಬಂದರೆ ಪರಿಣಾಮ ನೆಟ್ಟಗಿರುವುದಿಲ್ಲ

ಅಕ್ಷಯ್ ಕೊಲೆ ನಡೆದ ನೆಹರೂನಗರದಲ್ಲಿ ಆರೋಪಿಗಳೊಂದಿಗೆ ಪೊಲೀಸರು ಸ್ಥಳ ಮಹಜರು ನಡೆಸುತ್ತಿದ್ದ ವೇಳೆ ಪೊಲೀಸರ ಎದುರೇ ಕೆಲವು ಯುವಕರು, ಅಕ್ಷಯ್‌ನನ್ನು ಕೊಂದವರನ್ನು ಬಿಡುವುದಿಲ್ಲ. ತೆಗೆದೇ ತೆಗೆಯುತ್ತೇವೆ ಎಂದು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಪೊಲೀಸ್ ಠಾಣೆಗೆ ಬಂದಿದ್ದ ಅಕ್ಷಯ್ ಕಲ್ಲೇಗರ ಸ್ನೇಹಿತನಿಗೆ ಅಕ್ಷಯ್ ಕಲ್ಲೇಗರ ಕೊಲೆ ಆರೋಪದಡಿ ಬಂಧಿತನಾಗಿದ್ದ ಮನೀಶ್ ಎಂಬಾತ, ರಿವೇಂಜ್‌ಗೆ ಬಂದರೆ ಪರಿಣಾಮ ನೆಟ್ಟಗೆ ಇರುವುದಿಲ್ಲ ಎಂದು ಅವಾಝ್ ಹಾಕಿದ್ದಾನೆ ಎಂದು ಸುದ್ದಿಯಾಗುತ್ತಿದೆ. ಈ ವಿಚಾರ ಸಂಚಲನ ಸೃಷ್ಠಿಸಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ಹೈ ಅಲರ್ಟ್ ಆಗಿದೆ.

ಅಕ್ಷಯ್ ಅವರನ್ನು ಬರ್ಬರವಾಗಿ ಕಡಿಯುವ ವೇಳೆಯೂ ಮನೀಷ್ ತನ್ನ ಆಪ್ತರಾದ ಇಬ್ರಾಹಿಂ ಎಂಬವರಿಗೆ ಕರೆ ಮಾಡಿ, ತಾನು ಅಕ್ಷಯ್‌ಗೆ ಕಡಿದು ಆತನನ್ನು ಕೊಲ್ಲುವುದಾಗಿ ಹೇಳಿದ್ದಾನೆ. ಈ ವೇಳೆ ಇಬ್ರಾಹಿಂರವರು ‘ಬೇಡ ಮಗುವಿನಂತಹ ಅಕ್ಷಯ್‌ಗೆ ಕಡಿಯಬೇಡ‘ ಎಂದು ಹೇಳಿದ್ದಾರೆ ಈಗಾಗಲೇ ಕಡಿಯಲಾಗಿದೆ. ಇಕೋ ಇದು ಕೊನೆಯ ಪೆಟ್ಟು ಎಂದು ಇಬ್ರಾಹಿಂ ಅವರೊಂದಿಗೆ ಫೋನ್‌ನಲ್ಲಿ ಹೇಳುತ್ತಲೇ ಮನೀಷ್ ಕಡಿದಿರುವುದಾಗಿ ವ್ಯಾಪಕ ಸುದ್ದಿಯಾಗಿದೆ. ಈ ವಿಚಾರವನ್ನೂ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.

LEAVE A REPLY

Please enter your comment!
Please enter your name here