ಕೊಯಿಲ ಗ್ರಾ.ಪಂ.ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮಸಭೆ

0

ರಾಮಕುಂಜ: ಕೊಯಿಲ ಗ್ರಾ.ಪಂ.ನ 2023-24ನೇ ಸಾಲಿನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮತ್ತು ಕೇಂದ್ರ ಸರಕಾರದ 15ನೇ ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮಸಭೆ ನ.8ರಂದು ಕೊಯಿಲ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.
ಉದ್ಯೋಗ ಖಾತರಿ ಯೋಜನೆಯ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಸೌಮ್ಯ ಅವರು ಯೋಜನೆಯ ಕುರಿತು ಮಾಹಿತಿ ನೀಡಿ, ಕೂಲಿಗಾಗಿ ವಲಸೆ ಹೋಗುವ ಕಾರ್ಮಿಕರಿಗೆ ಕೂಲಿ ನೀಡಿ ಅವರಿಗೆ ಜೀವನ ಭದ್ರತೆ ಕಲ್ಪಿಸಲು ನರೇಗಾ ಯೋಜನೆ ಜಾರಿಗೊಂಡಿದೆ. ನ.3ರಿಂದ 7ರ ತನಕ ಕೊಯಿಲ ಗ್ರಾ.ಪಂ.ನಲ್ಲಿ ಉದ್ಯೋಗ ಖಾತರಿ ಹಾಗೂ 15ನೇ ಹಣಕಾಸು ಯೋಜನೆಯಡಿ ನಡೆದಿರುವ ಕಾಮಗಾರಿಯ ಲೆಕ್ಕಪತ್ರಗಳ ಪರಿಶೀಲನೆ ಹಾಗೂ ತಪಾಸಣೆಯನ್ನು ಗ್ರಾಮ ಸಂಪನ್ಮೂಲ ವ್ಯಕ್ತಿಗಳು ಮಾಡಿದ್ದಾರೆ. ಕಾಮಗಾರಿಯಲ್ಲಿ ಬಂದಿರುವ ಲೋಪದೋಷಗಳ ಕುರಿತು ಆಕ್ಷೇಪಣೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ತೋಟಗಾರಿಕೆ ಇಲಾಖೆ ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕಿ ರೇಖಾ ಅವರು ಮಾತನಾಡಿ, ಕಡತ ನಿರ್ವಹಣೆ, ಸಹಿ ಹಾಕದೇ ಇರುವುದು, ಹೆಚ್ಚುವರಿ ಪಾವತಿಯಂತಹ ತಪ್ಪುಗಳು ಮರುಕಳಿಸುತ್ತಿವೆ. ಯೋಜನೆಯ ದುರ್ಬಳಕೆ ಆಗಬಾರದೆಂಬ ಉದ್ದೇಶವಿಟ್ಟುಕೊಂಡೇ ಲೆಕ್ಕಪತ್ರ,ಕಾಮಗಾರಿಗಳ ಪರಿಶೀಲನೆ ನಡೆಸಲಾಗುತ್ತಿದೆ. ಯೋಜನೆ ಸಮರ್ಪಕವಾಗಿ ಬಳಕೆಯಾಗಬೇಕೆಂದು ಹೇಳಿದರು. ಗ್ರಾ.ಪಂ.ಅಧ್ಯಕ್ಷೆ ಪುಷ್ಪಾ ಸುಭಾಶ್‌ಕುಮಾರ್ ಮಾತನಾಡಿ, ಯೋಜನೆಯನ್ನು ಪ್ರತಿಯೊಬ್ಬರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಹೇಳಿದರು. ಉದ್ಯೋಗ ಖಾತ್ರಿ ಯೋಜನೆಯ ಐಇಸಿ ಸಂಯೋಜಕ ಭರತ್‌ರವರು ಯೋಜನೆಯ ಕುರಿತು ಮಾಹಿತಿ ನೀಡಿದರು.

ಜಿಎಸ್‌ಟಿ ಬಿಲ್ಲು ಸಿಗುತ್ತಿಲ್ಲ:
ಉದ್ಯೋಗ ಖಾತರಿ ಯೋಜನೆಯಡಿ ದನದ ಹಟ್ಟಿ ನಿರ್ಮಾಣಕ್ಕೆ ಬಳಕೆಯಾದ ಸಾಮಾಗ್ರಿಗಳಿಗೆ ಸಂಬಂಧಿಸಿ ಜಿಎಸ್‌ಟಿ ಬಿಲ್ಲು ಕೇಳಲಾಗುತ್ತದೆ. ಆದರೆ ಕೆಂಪು ಕಲ್ಲು, ಹೊಯಿಗೆ ಸ್ಥಳೀಯ ಸರಬರಾಜುದಾರರಿಂದ ಪಡೆಯುತ್ತಿರುವುದರಿಂದ ಜಿಎಸ್‌ಟಿ ಬಿಲ್ಲು ಸಿಗುತ್ತಿಲ್ಲ ಎಂದು ಗ್ರಾಮಸ್ಥ ಜಾನ್ ಎ.ಪಿ.ಅವರು ಗಮನ ಸೆಳೆದರು. ಈ ಬಗ್ಗೆ ಚರ್ಚೆ ನಡೆದು ಜಿಎಸ್‌ಟಿ ಬದಲು ಮೆಟಿರಿಯಲ್ ಸರಬರಾಜುದಾರರು ಸಹಿ, ಸೀಲು ಹಾಕಿ ನೀಡಿರುವ ಬಿಲ್ಲುಗಳನ್ನು ಆಧಾರವಾಗಿಟ್ಟುಕೊಂಡೇ ಹಣ ಪಾವತಿಗೆ ಕ್ರಮ ಕೈಗೊಳ್ಳಬೇಕೆಂದು ಫಲಾನುಭವಿಗಳು ಆಗ್ರಹಿಸಿದರು. ಈ ಬಗ್ಗೆ ಸರಕಾರಕ್ಕೆ ಬರೆಯಲು ನಿರ್ಣಯಿಸಲಾಯಿತು.

ಭತ್ತದ ಬೆಳೆಗೆ ಅವಕಾಶ ನೀಡಿ:
ಉದ್ಯೋಗ ಖಾತರಿ ಯೋಜನೆಯಡಿ ಭತ್ತದ ಬೆಳೆಗೂ ಅವಕಾಶ ನೀಡಬೇಕೆಂದು ಗ್ರಾಮಸ್ಥ ಪ್ರಕಾಶ್ ಕೆಮ್ಮಾರ ಆಗ್ರಹಿಸಿದರು. ಕಾರ್ಮಿಕರ ಕೊರತೆ ಸೇರಿದಂತೆ ನಾನಾ ಕಾರಣಗಳಿಂದ ಭತ್ತದ ಬೆಳೆಯೂ ಕಡಿಮೆಯಾಗುತ್ತಿದೆ. ನರೇಗಾ ಯೋಜನೆಯಡಿ ಭತ್ತದ ಬೆಳೆಗೂ ಅವಕಾಶ ನೀಡಿದಲ್ಲಿ ಹೆಚ್ಚಿನ ಅನುಕೂಲವಾಗಲಿದೆ ಎಂದರು. ಈ ಬಗ್ಗೆ ಚರ್ಚೆ ನಡೆದು ಸರಕಾರಕ್ಕೆ ಬರೆಯಲು ನಿರ್ಣಯಿಸಲಾಯಿತು.
ಗ್ರಾ.ಪಂ.ಉಪಾಧ್ಯಕ್ಷ ಯತೀಶ್‌ಕುಮಾರ್, ತಾಂತ್ರಿಕ ಅಭಿಯಂತರ ಮೋಹಿತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾ.ಪಂ.ಸದಸ್ಯರಾದ ಕಮಲಾಕ್ಷಿ, ಭಾರತಿ, ಜೊಹರಾಬಿ, ಸಫಿಯಾ, ಯೋಜನೆಯ ಫಲಾನುಭವಿಗಳು, ಗ್ರಾಮಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ಸಂದೇಶ್ ಕೆ.ಎನ್.ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀಮತಿ ಪಮ್ಮು ವಂದಿಸಿದರು. ಯೋಜನೆಯ ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ಸುಪ್ರಿಯಾ, ಶ್ವೇತಾಕ್ಷಿ ಎಸ್., ಪ್ರಣಮ್ಯ, ಸವಿತಾಕುಮಾರಿ, ಯಶ್ಮಿತಾ ಪಿ., ಬಾಲಚಂದ್ರ ಕೆ., ಕೊಯಿಲ ಗ್ರಾ.ಪಂ.ಸಿಬ್ಬಂದಿಗಳಾದ ರುಕ್ಮಯ, ಗಂಗಾಧರ, ರಾಜೇಂದ್ರ, ಮೀನಾಕ್ಷಿ ಸಹಕರಿಸಿದರು.

ನರೇಗಾದಲ್ಲಿ 40.77 ಲಕ್ಷ ರೂ.ಖರ್ಚು:
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೊಯಿಲ ಗ್ರಾ.ಪಂ.ನಲ್ಲಿ 1-4-2022ರಿಂದ 31-3-2023ರ ವರೆಗೆ 36,17,163 ರೂ.ಕೂಲಿ ಮೊತ್ತ ಹಾಗೂ 4,60,736 ರೂ.ಸಾಮಾಗ್ರಿ ಮೊತ್ತ ಸೇರಿ ಒಟ್ಟು 40,77,899 ರೂ.ಖರ್ಚು ಆಗಿದೆ. ಒಟ್ಟು 133 ಕಾಮಗಾರಿಗಳು ನಡೆದಿದ್ದು 11,707 ಮಾನವ ದಿನ ಸೃಜನೆಯಾಗಿದೆ ಎಂದು ತಿಳಿಸಲಾಯಿತು.


15ನೇ ಹಣಕಾಸು ಯೋಜನೆಯಡಿ 18.27 ಲಕ್ಷ ರೂ.ಖರ್ಚು: 15ನೇ ಹಣಕಾಸು ಯೋಜನೆಯಡಿ 22 ಕಾಮಗಾರಿಗಳು ನಡೆದಿದ್ದು 18,27,512 ರೂ.ಖರ್ಚು ಆಗಿದೆ ಎಂದು ಮಾಹಿತಿ ನೀಡಲಾಯಿತು.

LEAVE A REPLY

Please enter your comment!
Please enter your name here