ಪುತ್ತೂರು: ವೈದ್ಯಕೀಯ ತಜ್ಞ ಡಾ|ನಝೀರ್ ಅಹಮ್ಮದ್ ಡಯಾಬೆಟ್ಸ್ ಸೆಂಟರ್, ರೋಟರಿ ಕ್ಲಬ್ ಪುತ್ತೂರು, ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಇವುಗಳ ಸಹಯೋಗದಲ್ಲಿ ಮಾಸಿಕ ಥೈರಾಯಿಡ್ ಗ್ರಂಥಿಯ ತಪಾಸಣಾ ಶಿಬಿರ, ಉಚಿತ ಮಧುಮೇಹ(GRBS), HBA1C ಮತ್ತು ನ್ಯೂರೋಪತಿ ತಪಾಸಣೆಯು ನ.8 ರಂದು ಕಲ್ಲಾರೆ ಕೃಷ್ಣಾ ಆರ್ಕೆಡ್‌ನಲ್ಲಿರುವ ಡಾ.ನಝೀರ್ ಅಹಮ್ಮದ್‌ರವರ ಕ್ಲಿನಿಕ್‌ನಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಯಿತು.
ಅತಿಯಾದ ದಣಿವು, ಸುಸ್ತು, ನಿತ್ರಾಣ, ಮಲಬದ್ಧತೆ ಅಥವಾ ಅತಿಸಾರ, ಶೀತಕ್ಕೆ ಅಥವಾ ತಾಪಕ್ಕೆ ಅಸಹಿಷ್ಣುತೆ, ಕೂದಲು ಉದುರುವಿಕೆ, ನೆನಪಿನ ಶಕ್ತಿ ಕುಂದುವುದು, ಏಕಾಗ್ರತೆ ಕಷ್ಟವಾಗುವುದು, ತೂಕ ಹೆಚ್ಚಾಗುವುದು ಅಥವಾ ಕಡಿಮೆ ಆಗುವುದು, ಹೆಂಗಸರಿಗೆ ಅತಿಯಾದ ಮಾಸಿಕ ಸ್ರಾವ ಅಥವಾ ನಿಯಮ ತಪ್ಪಿದ ಮಾಸಿಕ ಸ್ರಾವ, ಮೃದುವಾದ ಕರ್ಕಶ ಸ್ವರ, ಗಂಟಲಿನಲ್ಲಿ ಊದುಕೊಳ್ಳುವಿಕೆ, ಅಧಿಕ ಎದೆ ಬಡಿತ ಅಥವಾ ರಕ್ತದೊತ್ತಡವುಳ್ಳವರು ಶಿಬಿರದಲ್ಲಿ ಪಾಲ್ಗೊಂಡು ಡಾ.ನಝೀರ್ ಅಹಮದ್ ರವರಲ್ಲಿ ಸಲಹೆ ಪಡೆದುಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ವೈದ್ಯಕೀಯ ತಜ್ಞ ಡಾ.ನಝೀರ್ ಅಹಮ್ಮದ್ ಅವರು, ಪ್ರತಿ ವರ್ಷ ನವೆಂಬರ್ ತಿಂಗಳನ್ನು ಮಧುಮೇಹ ಜಾಗೃತಿ ತಿಂಗಳನ್ನಾಗಿ ಆಚರಿಸಲಾಗುತ್ತದೆ. ವ್ಯಕ್ತಿಯಲ್ಲಿ ಮಧುಮೇಹ ಹೇಗೆ ಬರುತ್ತದೆ, ಮಧುಮೇಹ ಬರದಂತೆ ಏನು ಜಾಗೃತಿ ಕೈಗೊಳ್ಳಬೇಕು ಹಾಗೂ ಮಧುಮೇಹ ಬಂದ ಬಳಿಕ ಇದರ ನಿಯಂತ್ರಣ ಹೇಗೆ ಮಾಡಬೇಕೆಂದು ಅವರು ತಿಳಿಸಿದರು. ತರಕಾರಿ ಆಹಾರ ಸೇವನೆಯ ಹೆಚ್ಚಳ, ಪಿಷ್ಟದ ಆಹಾರ ಕಡಿಮೆ ಮಾಡುವುದು, ಸಕ್ಕರೆ ಸೇವನೆ ಅಂಶ ಕಡಿಮೆ ಮಾಡುವುದು, ದಿನನಿತ್ಯ ಅರ್ಧ ಗಂಟೆ ವ್ಯಾಯಾಮ, ಮಾನಸಿಕ ಒತ್ತಡ ರಹಿತ ಜೀವನಕ್ರಮವು ಉತ್ತಮ ಆರೋಗ್ಯಕ್ಕೆ ಸಹಕಾರಿ ಎಂದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಜೈರಾಜ್ ಭಂಡಾರಿ, ಕೋಶಾಧಿಕಾರಿ ಸಂಕಪ್ಪ ರೈ, ಸದಸ್ಯ ಬಾಲಕೃಷ್ಣ ಆಚಾರ್ ಉಪಸ್ಥಿತರಿದ್ದರು. ಮೆಕ್ಲಿಯೋಡ್ ಕಂಪೆನಿಯ ವೀರೇಂದ್ರ, ಟೊರಂಟ್ ಕಂಪೆನಿಯ ಚೇತನ್ ಮತ್ತು ಕೃಷ್ಣ , ಸನ್ ಫಾರ್ಮಾ ಕಂಪೆನಿಯ ನಿಶಾಂತ್, ಎಸ್.ಆರ್.ಎಲ್ ಲ್ಯಾಬ್, ಡಾ.ನಝೀರ್ ಅಹಮದ್ ಡಯಾಬೆಟ್ಸ್ ಸೆಂಟರ್ ನ ಸಿಬ್ಬಂದಿ ಸಹಕರಿಸಿದರು.
ಪಾಲ್ಗೊಂಡ ಫಲಾನುಭವಿಗಳು..
ಥೈರಾಯಿಡ್ ಪರೀಕ್ಷೆ-54 ಮಂದಿ
HBA1C-25 ಮಂದಿ
ಮಧುಮೇಹ-60 ಮಂದಿ
ನ್ಯೂರೋಪತಿ ಪರೀಕ್ಷೆ-10 ಮಂದಿ
12 ವರ್ಷದ ಬಾಲಕಿಗೆ ಟೈಪ್ 1 ಡಯಾಬಿಟಿಸ್…
ಶಿಬಿರದಲ್ಲಿ ಪಾಲ್ಗೊಂಡ 12 ವರ್ಷದ ಬಾಲಕಿಯೋರ್ವಳನ್ನು ಮಧುಮೇಹ ತಪಾಸಣೆಗೊಳಪಡಿಸಿದಾಗ ಆ ಬಾಲಕಿಗೆ ಟೈಪ್ 1 ಡಯಾಬಿಟಿಸ್ ಇರುವುದು ಬೆಳಕಿಗೆ ಬಂತು. ಕೂಡಲೇ ಆ ಬಾಲಕಿಯನ್ನು ರೋಟರಿ ಪುತ್ತೂರು ಹಾಗೂ ಬೆಂಗಳೂರಿನ ಇ.ಡಿ.ಆರ್.ಟಿ ಟ್ರಸ್ಟ್ ನಡೆಸುತ್ತಿರುವ ಪ್ರಾಜೆಕ್ಟ್ ಸ್ವೀಟ್ ಚೈಲ್ಡ್ ಸಂಸ್ಥೆಗೆ ಸೇರ್ಪಡೆಗೊಳಿಸಲಾಯಿತು. ಡಾ.ನಝೀರ್ ಅಹಮದ್ ಕ್ಲಿನಿಕ್ ಪ್ರಾಯೋಜಕತ್ವದಲ್ಲಿ ಆ ಬಾಲಕಿಗೆ ಉಚಿತ ರಕ್ತ ಪರೀಕ್ಷೆ ಜೊತೆಗೆ ಪೆನ್ ಇನ್ಸುಲಿನ್, ಗ್ಲುಕೋಮೀಟರ್, 60 ಸ್ಟ್ರಿಪ್ಸ್ ಹಾಗೂ ಶಾಲಾ ಬ್ಯಾಗ್ ಅನ್ನು ಹಸ್ತಾಂತರಿಸಲಾಯಿತು.
ಮಧುಮೇಹ ಬಗ್ಗೆ ಸ್ಕ್ರೀನಿಂಗ್ ಟೆಸ್ಟ್…
ಉಚಿತ ತಪಾಸಣಾ ಶಿಬಿರದಲ್ಲಿ ಮಧುಮೇಹ ಬರುವ ಸಾಧ್ಯತೆಯ ಬಗ್ಗೆ ತಿಳಿಯುವ ಸ್ಕ್ರೀನಿಂಗ್ ಟೆಸ್ಟ್ ಅನ್ನು ನಡೆಸಲಾಯಿತು. ಮಧುಮೇಹ ಇಲ್ಲದವರಿಗೆ ಮಧುಮೇಹ ಬರುವ ರಿಸ್ಕ್ ತಿಳಿಯಲು ಹಾಗೂ ಮಧುಮೇಹ ಬಂದ ಮೇಲೆ ಮಧುಮೇಹವನ್ನು ತಡೆಗಟ್ಟಲು ಬೇಕಾದ ಕ್ರಮಗಳನ್ನು ಈ ಸ್ಕ್ರೀನಿಂಗ್ ಟೆಸ್ಟ್ ಮೂಲಕ ತಿಳಿಯಲ್ಪಡುತ್ತಿದ್ದು, ಆದಷ್ಟು ಮಂದಿ ಇದರ ಪ್ರಯೋಜನ ಪಡೆದುಕೊಳ್ಳುವಂತೆ ಡಾ.ನಝೀರ್ಸ್ ಡಯಾಬೆಟ್ಸ್ ಸೆಂಟರ್ ಇದರ ಡಾ.ನಝೀರ್ ಅಹಮದ್ ರವರು ಹೇಳಿದರು.