ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷೆ ಸುಜಾತಾ ರೈಯವರು ಸುಳ್ಳು ಮಾಹಿತಿ ನೀಡಿ ದಾರಿತಪ್ಪಿಸುವುದು ಬೇಡ: ಜತೀಂದ್ರ ಶೆಟ್ಟಿ

0

ಪುತ್ತೂರು: ಸರಕಾರಿ ಯೋಜನೆಯ ಅನುದಾನ ದುರುಪಯೋಗಪಡಿಸಿಕೊಂಡು ಭ್ರಷ್ಟಾಚಾರ ಮಾಡಿರುವ ನೆಕ್ಕಿಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿರುವ ಸುಜಾತಾ ಆರ್.ರೈಯವರಿಗೆ ಪಂಚಾಯತ್ ಅಧ್ಯಕ್ಷತೆಯ ಸ್ಥಾನದಲ್ಲಿ ಮುಂದುವರೆಯಲು ಸಂವಿಧಾನದ ಪ್ರಕಾರ ಅವಕಾಶವೇ ಇಲ್ಲ. ಅವರು ಪತ್ರಿಕಾ ಸ್ಪಷ್ಟೀಕರಣದ ಮೂಲಕ ಸುಳ್ಳು ಮಾಹಿತಿ ನೀಡಿ ಜನರನ್ನು ತಪ್ಪು ದಾರಿಗೆ ಎಳೆಯಬಾರದು ಎಂದು ಸಾಮಾಜಿಕ ಹೋರಾಟಗಾರ ಜತೀಂದ್ರ ಶೆಟ್ಟಿಯವರು ಹೇಳಿದ್ದಾರೆ.


ನ.೦೯ರಂದು ಸುದ್ದಿ ಸ್ಟುಡಿಯೋದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನೆಕ್ಕಿಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿರುವ ಸುಜಾತಾ ಆರ್.ರೈ ಅವರು ಭ್ರಷ್ಟಾಚಾರ ಮಾಡಿದ್ದಾರೆನ್ನುವ ಬಗ್ಗೆ ನನ್ನಲ್ಲಿ ಸೂಕ್ತ ದಾಖಲೆಗಳಿವೆ. ಈ ಬಗ್ಗೆ ಚುನಾವಣಾಽಕಾರಿಗೆ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿ, ಸಹಕಾರ ಖಾತೆಯ ಸಚಿವರಿಗೆ, ಜಿಲ್ಲಾ ಪಂಚಾಯತ್ ಸಿಇಒ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರಿಗೆ, ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಹಾಗೂ ಪಿಡಿಒಗೆ ಪತ್ರ ಬರೆದಿದ್ದು, ಕೂಡಲೇ ಸುಜಾತಾ ಆರ್.ರೈಯವರನ್ನು ಪಂಚಾಯತ್ ಸದಸ್ಯತ್ವ ಮತ್ತು ಸಹಕಾರಿ ಸಂಘದ ಸದಸ್ಯತ್ವದಿಂದ ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದೇನೆ ಎಂದು ಹೇಳಿದರು.


ಸುಜಾತಾ ರೈಯವರು ಪತ್ರಿಕೆಯಲ್ಲಿ ಸ್ಪಷ್ಟೀಕರಣ ನೀಡಿ ಹೇಳಿರುವ ವಿಚಾರಗಳ ಬಗ್ಗೆ ಮಾತನಾಡಿದ ಜತೀಂದ್ರ ಶೆಟ್ಟಿಯವರು, ನನ್ನ ಮೇಲಿನ ವೈಯಕ್ತಿಕ ದ್ವೇಷದಿಂದ ದೂರು ನೀಡಿದ್ದಾರೆಂದು ಸುಜಾತಾ ಆರ್.ರೈಯವರು ಸ್ಪಷ್ಟೀಕರಣದಲ್ಲಿ ಹೇಳಿದ್ದಾರೆ. ನನಗೂ ಅವರಿಗೂ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ಅವರು ನನ್ನ ಪತ್ನಿಯ ಹತ್ತಿರದ ಸಂಬಂಧಿ. ಅವರ ವಿರುದ್ಧ ನಾನು ಭ್ರಷ್ಟಾಚಾರಕ್ಕೆ ಸಂಬಂಧಿಸಿ ಲೋಕಾಯುಕ್ತಕ್ಕೆ ದೂರು ನೀಡಿದ್ದೇನೆ. ಹೈಕೋರ್ಟ್‌ನಲ್ಲಿ ತಾಂತ್ರಿಕ ಕಾರಣದಿಂದ ಅದು ಸ್ಕ್ವ್ಯಾಷ್ ಆಗಿತ್ತು. ಈ ಪ್ರಕರಣದಲ್ಲಿ ಅವರು ಆರೋಪಿಯಾಗಿದ್ದಾರೆ. ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಅಫಿಡವಿಟ್ ಸಲ್ಲಿಕೆ ವೇಳೆ ’ಆಪಾದನೆ ಹೊರಿಸಲಾಗಿರುವ ಪ್ರಕರಣಗಳ ವಿವರ’ಗಳನ್ನು ನೀಡಬೇಕಿರುವ ಜಾಗದಲ್ಲಿ ಎಲ್ಲದಕ್ಕೂ ಇಲ್ಲ, ಇಲ್ಲ ಎಂದು ನೀಡಿದ್ದಾರೆ. ಸಾಲದ ವಿಚಾರದಲ್ಲಿ ನನ್ನ ಪತಿ ರಾಧಾಕೃಷ್ಣ ರೈಯವರ ಹೆಸರಿನಲ್ಲಿ ಸಾಲ ಇದೆ ಎಂದು ಹೇಳಿದ್ದಾರೆ. ಆದರೆ ಅವರ ಪತಿ ಪಡೆದ ಸಾಲಕ್ಕೆ ಅಡವಿಟ್ಟಿರುವುದು ಸುಜಾತಾ ಆರ್.ರೈಯವರ ಆರ್‌ಟಿಸಿ. ಇವರಿಗೆ ಸಹಕಾರಿ ಸಂಘದಲ್ಲಿ ಸಾಲ ನೀಡಿದ್ದು, ರಾಧಾಕೃಷ್ಣ ರೈಯವರ ಹೆಸರಿನಲ್ಲಿ ಆರ್‌ಟಿಸಿ ಇಲ್ಲದ ಕಾರಣ ಅವರಿಗೆ ಸಾಲ ನೀಡಲು ಸಾಧ್ಯವಿಲ್ಲ. ಹೀಗಾಗಿ ಜನರನ್ನು ತಪ್ಪುದಾರಿಗೆ ಎಳೆಯಬಾರದು ಎಂದು ಹೇಳಿದರು.


ನಾನು ಜನಪ್ರತಿನಿಧಿಯಾಗಿದ್ದುಕೊಂಡು ಇದುವರೆಗೆ ಯಾವುದೇ ಅಧಿಕಾರ ದುರುಪಯೋಗವಾಗಲೀ, ಇನ್ನೊಬ್ಬರ ಮೇಲೆ ದ್ವೇಷ ಸಾಧನೆಯಾಗಲೀ ಮಾಡಿಲ್ಲ ಎಂದು ಸುಜಾತಾ ಆರ್. ರೈಯವರು ಹೇಳಿದ್ದಾರೆ. ನೀವು ಜನಪ್ರತಿನಿಧಿಯಾದರೆ ನಾನು ಈ ದೇಶದ ಪ್ರಜೆ. ನಿಮ್ಮನ್ನು ಪ್ರಶ್ನೆ ಮಾಡುವ ಹಕ್ಕು ಪ್ರಜೆಯಾದ ನನಗೆ ಇದೆ ಎಂದು ಜತೀಂದ್ರ ಶೆಟ್ಟಿಯವರು ಹೇಳಿದರು. ಜತೀಂದ್ರ ಶೆಟ್ಟಿಯವರ ಸುದ್ದಿ ಗೋಷ್ಠಿಯ ಹೆಚ್ಚಿನ ಮಾಹಿತಿ ಸುದ್ದಿ ನ್ಯೂಸ್ ಪುತ್ತೂರು ಯೂಟ್ಯೂಬ್ ಚಾನೆಲ್‌ನಲ್ಲಿದೆ.

LEAVE A REPLY

Please enter your comment!
Please enter your name here