ಉಪ್ಪಿನಂಗಡಿ: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಗ್ರಾ.ಪಂ. 34 ನೆಕ್ಕಿಲಾಡಿ ಗ್ರಾ.ಪಂ.ನಲ್ಲಿ ನ.15ರಂದು ನಡೆಯಿತು. ಈ ಸಂದರ್ಭ 2024-25ನೇ ಸಾಲಿನ ಕಾರ್ಮಿಕ ಆಯವ್ಯಯಗಳನ್ನು ತಯಾರಿಸಲಾಯಿತು.
ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ತಾ.ಪಂ.ನ ಬಿಎಫ್‌ಟಿ ಯಶೋಧರ, ಬಾವಿ ನಿರ್ಮಾಣ, ಆಡು, ಕುರಿ, ಕೋಳಿ, ದನದ ಶೆಡ್‌ಗಳ ನಿರ್ಮಾಣ, ಎರೆಹುಳು ಸಾಕಾಣಿಕಾ ತೊಟ್ಟಿ, ತೋಟಗಾರಿಕೆ, ಅರಣ್ಯೀಕರಣಕ್ಕೆ ಸೇರಿದಂತೆ ಇನ್ನಿತರ ಕೆಲವು ಕೆಲಸಗಳಿಗೆ ಅನುದಾನ ಸಿಗಲಿದ್ದು, ಅದ್ದರಿಂದ ಉದ್ಯೋಗ ಕಾರ್ಡ್ ಮಾಡಿ, ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು. ನಮ್ಮ ಮನೆಯಲ್ಲಿ ನಾವೇ ಕೆಲಸ ಮಾಡಿ ಹಣ ಪಡೆಯುವ ಯೋಜನೆ ಇದಾಗಿದ್ದು, ಇದಕ್ಕಾಗಿ ಆರು ತಿಂಗಳ ಕೆಲಸವನ್ನು ಕ್ರಿಯಾಯೋಜನೆಯನ್ನು ಮಾಡಬೇಕು. ಉದ್ಯೋಗ ಖಾತ್ರಿಯಡಿ ಕೆಲಸ ಮಾಡಿಸುವವರು ಗ್ರಾ.ಪಂ.ಗೆ ಬೇಡಿಕೆ ಪಟ್ಟಿ ಸಲ್ಲಿಸಬೇಕು ಎಂದರು.
ಈ ಸಂದರ್ಭ ಗ್ರಾಮಸ್ಥರು ಮಾತನಾಡಿ, ಉದ್ಯೋಗ ಖಾತ್ರಿಯಡಿ ಕೆಲಸ ಮಾಡಿಸಿದ ಹಣ 15 ದಿನಗಳಲ್ಲಿ ಖಾತೆಗೆ ಬರಬೇಕು ಎಂದಿದ್ದರೂ, ಮೂರು ತಿಂಗಳು ಕಳೆದರೂ ಬರುತ್ತಿಲ್ಲ. ಕೂಲಿಯ ಹಣವೇ ಇಷ್ಟು ವಿಳಂಬವಾಗುವಾಗ ಮೆಟೀರಿಯಲ್‌ನ ಹಣ ಯಾವಾಗ ಬರಬಹುದು. ಇದರಿಂದ ಜನರು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಲು ಮುಂದಾಗುತ್ತಿಲ್ಲ. ಈ ಸಮಸ್ಯೆ ಮೊದಲು ಸರಕಾರದ ಮಟ್ಟದಲ್ಲಿ ಸರಿಯಾಗಬೇಕು ಎಂದರಲ್ಲದೆ, ಕೂಲಿ ಹಣವನ್ನು 400 ರೂಪಾಯಿಗೆ ಹೆಚ್ಚಳ ಮಾಡಬೇಕು ಎಂದರು. ಇದನ್ನು ನಿರ್ಣಯ ಮಾಡಿ ಕಳುಹಿಸಲು ಆಗ್ರಹಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ. ಅಧ್ಯಕ್ಷೆ ಸುಜಾತ ಎ. ರೈ ಮಾತನಾಡಿ, ಉದ್ಯೋಗ ಖಾತ್ರಿಯ ಅನುದಾನ ಕಳೆದ ಆಗಸ್ಟ್ ತಿಂಗಳಿಂದ ಬರುವುದು ವಿಳಂಬವಾಗಿದೆ. ಉದ್ಯೋಗ ಖಾತ್ರಿ ಯೋಜನೆ ಹೆಚ್ಚಿನ ಪ್ರಯೋಜನಕಾರಿಯಾಗಿದ್ದು, ಹೆಚ್ಚಿನ ಗ್ರಾಮಸ್ಥರು ಈ ಯೋಜನೆಯ ಫಲಾನುಭವಿಗಳಾಗಬೇಕು ಎಂದರು.
ಸಭೆಯಲ್ಲಿ ಗ್ರಾ.ಪಂ. ಸದಸ್ಯರಾದ ಸ್ವಪ್ನ, ವಿಜಯಕುಮಾರ್, ಪ್ರಶಾಂತ್ ಎನ್., ರಮೇಶ ನಾಯ್ಕ, ವೇದಾವತಿ, ತುಳಸಿ, ರತ್ನಾವತಿ, ಗೀತಾ, ಗ್ರಾಮಸ್ಥರಾದ ದಿವಾಕರ, ಅನಿ ಮಿನೇಜಸ್, ಜಮೀಲಾ, ವಸಂತಿ, ಅಮಿತಾ ಹರೀಶ್, ಪಾವನಾ, ಗಣೇಶ್ ನಾಯಕ್, ಸುಂದರ ನಾಯ್ಕ, ಕಲಂದರ್ ಶಾಫಿ, ನವಾಝ್ ಕರ್ವೇಲು ಮತ್ತಿತರರು ಉಪಸ್ಥಿತರಿದ್ದು, ಸಲಹೆ- ಸೂಚನೆ ನೀಡಿದರು. ಗ್ರಾ.ಪಂ. ಪಿಡಿಒ ಸತೀಶ್ ಬಂಗೇರ ಡಿ. ಸ್ವಾಗತಿಸಿ, ವಂದಿಸಿದರು.