ಇತಿಹಾಸ ನಿರ್ಮಿಸಲಿರುವ ಬೆಂಗಳೂರು ಕಂಬಳ- ತುಳುಭವನಕ್ಕೆ ಎರಡು ಎಕ್ರೆ ಜಾಗ ಸಿಗಬೇಕು: ಅಶೋಕ್ ರೈ

0

ಬೆಂಗಳೂರು ಕಂಬಳ ಹೇಗಿರುತ್ತದೆ ?ಶಾಸಕ ಅಶೋಕ್‌ ರೈ ವಿವರಣೆ

ಪುತ್ತೂರು: ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯದ ರಾಜಧಾನಿಯಲ್ಲಿ ಕಂಬಳ ನಡೆಯಲಿದೆ. ಕರಾವಳಿಯ ಜನಪದ ಕ್ರೀಡೆ ವಿಶ್ವಕ್ಕೆ ಪರಿಚಯವಾಗಲಿದೆ, ಕಂಬಳದ ಬಳಿಕ ತುಳುವರಿಗೊಂದು ಭವನ ಬೆಂಗಳೂರಿನಲ್ಲಿ ನಿರ್ಮಾಣವಾಗಬೇಕು ಇದಕ್ಕಾಗಿ ಎರಡು ಎಕ್ರೆ ಜಾಗವನ್ನೂ ಬೆಂಗಳೂರಿನಲ್ಲಿ ನೀಡಬೇಕು. ತುಳುನಾಡಿನ ಜನತೆಯ ಶಕ್ತಿಪ್ರದರ್ಶನದ ಜೊತೆ ನಮ್ಮ ಕಲೆ ಸಂಸ್ಕೃತಿ ವಿಶ್ವಕ್ಕೆ ಪರಿಚಯವಾಗಲಿದೆ ಇದುವೇ ಕಂಬಳದ ಮುಖ್ಯ ಉದ್ದೇಶವಾಗಿದೆ ಎಂದು ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.ಪುತ್ತೂರಿನಲ್ಲಿ ನಡೆದ ಬೆಂಗಳೂರು ಕಂಬಳ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಕಂಬಳದ ಬಗ್ಗೆ ಮಾಹಿತಿ ನೀಡಿದ್ದು ಹೀಗೆ
ಅಧಿವೇಶನದಲ್ಲಿ ತುಳುವಿನಲ್ಲಿ ಮಾತನಾಡಿದಾಗಲೇ ಬೆಂಗಳೂರಿನಲ್ಲಿರುವ ತುಳು ಸಂಘಟನೆಗಳು ಸಂತೋಷಗೊಂಡಿದ್ದರು. ಆ ಬಳಿಕ ಸಂಘಟನೆಯ ಪ್ರಮುಖರು ಬಂದು ನನ್ನನ್ನು ಅಭಿನಂದಿಸಿ ತುಳುವಿನಲ್ಲಿ ಮಾತನಾಡಿದಕ್ಕೆ ಶಹಬ್ಬಾಸ್ ಎಂದು ಹೇಳಿ ಬೆಂಗಳೂರಿನಲ್ಲಿ ಕಂಬಳವನ್ನು ಆಯೋಜನೆ ಮಾಡಬೇಕು ಎಂಬ ಆಗ್ರಹವನ್ನು ನನ್ನ ಮುಂದಿಟ್ಟಿದ್ದರು. ಆ ಬಳಿಕ ನಾವು ಚರ್ಚೆ ಮಾಡುವಾಗಲೇ ಮಾಧ್ಯಮದಲ್ಲಿ ಬೆಂಗಳೂರು ಕಂಬಳದ ಬಗ್ಗೆ ವರದಿ ಪ್ರಕಟವಾಗಿತ್ತು.

ರಾಣಿ ಆರಂಭದಲ್ಲಿ ಒಪ್ಪಲಿಲ್ಲ
ಕಂಬಳ ನಡೆಸಬೇಕಾದರೆ ಅರಮನೆ ಮೈದಾನವೇ ಬೇಕಾಗಿತ್ತು. ಈ ಬಗ್ಗೆ ನಮ್ಮ ಒಂದು ತಂಡ ರಾಣಿಯ ಬಳಿ ಮಾತನಾಡಲು ತೆರಳಿದಾಗ ಅವರು ಒಪ್ಪಲಿಲ್ಲ. ನಮ್ಮ ರಾಜಮನೆತನದ ಪುರೋಹಿತರು ಇದ್ದಾರೆ ಅವರು ಹೇಳಿದರೆ ಮಾತ್ರ ಪರಿಶೀಲಿಸುವ ಎಂದು ಹೇಳಿದರು. ರಾಜಪುರೋಹಿತರು ಪ್ರಶ್ನೆ ಕೇಳಬೇಕು, ಮೈದಾನದಲ್ಲಿ ಯಾವುದೇ ಕಾರ್ಯಕ್ರಮ ಮಾಡುವುದದರೆ ಪ್ರಶ್ನೆ ಕೇಳಬೇಕಾಗುತ್ತದೆ. ಪುರೋಹಿತರ ಪ್ರಕಾರ ನಡೆಯಬೇಕಿದೆ ಎಂದು ರಾಣಿ ಹೇಳಿದ್ದರು. ಆ ಬಳಿಕ ನಮ್ಮನ್ನು ಪುರೋಹಿತರೇ ಕರೆದು ನೀವು ಮೈದಾನದಲ್ಲಿ ಕಂಬಳ ಮಾಡಬೇಕು, ಕಂಬಳ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ಪ್ರಶ್ನೆಯಲ್ಲಿ ಕಂಡು ಬಂದಿದೆ ಎಂದು ಹೇಳಿದರು. ಆಗ ನಮಗೆ ಇನ್ನಷ್ಟು ಧೈರ್ಯ ಬಂತು ಎಂದರು.

90 ಲಕ್ಷ ಬಾಡಿಗೆ ಹೇಳಿದವರು ಉಚಿತವಾಗಿ ಕೊಟ್ಟರು
ಅರಮನೆ ಮೈದಾನದ ಒಂದು ಭಾಗ ರಾಜಮನೆತನದ ಬೇರೊಬ್ಬರಿಗೆ ವ್ಯಕ್ತಿಗೆ ಸೇರಿದ್ದು. ನಾವು ಅಲ್ಲಿ ಶಾಮಿಯಾನ ಹಾಕಿದಾಗ ಜಾಗದ ಮಾಲಕರು ಬಂದು 90 ಲಕ್ಷ ಬಾಡಿಗೆ ಕೊಟ್ರೆ ಮಾತ್ರ ಅಲ್ಲಿ ಅವಕಾಶ ಕೊಡುವುದಾಗಿ ಹೇಳಿದರು. ಆ ಬಳಿಕ ಆ ವ್ಯಕ್ತಿಯಲ್ಲಿ ಕಂಬಳದ ಬಗ್ಗೆ ಮಾಹಿತಿ ನೀಡಲಾಯಿತು. ಅವರಿಗೆ ಮನವರಿಕೆ ಮಾಡಿದ ಬಳಿಕ ಅವರು ಬಾಡಿಗೆಯೇ ಬೇಡ ಉಚಿತವಾಗಿ ಮಾಡಿ ಎಂದು ಹೇಳಿದ್ದಾರೆ .ಆದರೂ ನವು ಅವರಿಗೆ ಗೌರವಧನವನ್ನು ನೀಡುತ್ತೇವೆ ಎಂದು ಹೇಳಿದ್ದೇವೆ ಹೀಗೆ ಮೈದಾನದಲ್ಲಿ ಇದ್ದ ಅಡೆತಡೆಗಳು ಎಲ್ಲವೂ ದೇವರ ದಯೆಯಿಂದ ನಿವಾರಣೆಯಾಯಿತು ಎಂದರು.

ಮಂಗಳೂರಿನಿಂದ ಬೆಂಗಳೂರು ತನಕ ಮೆರವಣಿಗೆ
ಕಂಬಳದ ಕೋಣಗಳನ್ನು ಲಾರಿಯಲ್ಲಿ ಹಾಗೇ ಕೊಂಡು ಹೋಗುವುದಿಲ್ಲ. ಬ್ಯಾಂಡ್ ವಾಧ್ಯಗಳ ಮೂಲಕ ತೆರಳುತ್ತೇವೆ. ಅಲ್ಲಲ್ಲಿ ಕಂಬಳದ ಕೋಣದ ಮಾಲಕರಿಗೆ ಸರ್ವ ವ್ಯವಸ್ಥೆಗಳನ್ನು ಮಾಡುತ್ತೇವೆ. ಕಂಬಳದ ಕೋಣದ ಮಾಲಕರಿಗೆ ಸಕಲ ಗೌರವಾಧರಗಳನ್ನು ಕೊಡಲಿದ್ದೇವೆ, ಅವರಿಗೆ ಎಲ್ಲೂ ಒಂದುಷ್ಟು ವ್ಯತ್ಯಾಸವಾಗದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಕೋಣಗಳಿಗೂ ತೊಂದರೆಯಾಗದಂತೆ ಸಿದ್ದತೆಗಳನ್ನು ಕೈಗೊಳ್ಳಲಾಗುತ್ತದೆ. ತಾಲೂಕು ಕೇಂದ್ರ ಬದಲಾದಂತೆ ನಾವು ಅಲ್ಲಲ್ಲಿ ಬ್ಯಾಂಡ್ , ವಾದ್ಯಗಳ ಘೋಷಗಳೊಂದಿಗೆ ಸಣ್ಣದೊಂದು ಕಾರ್ಯಕ್ರಮವನ್ನು ಮಾಡಲಿದ್ದೇವೆ. ಮೈಕ್ ಕಟ್ಟಿದ ವಾಹನವೊಂದು ಜೊತೆಗೆ ಇದ್ದು ಪ್ರಚಾರ ಕಾರ್ಯವನ್ನು ಮಾಡಲಿದೆ. ಲಾರಿಯ ಹಿಂದೆ, ಮುಂದೆ ಬೆಂಗಾವಲು ವಾಹನಗಳು ಇರಲಿದೆ ಎಂದರು.

ಹಾಸನದಿಂದ ನೆಲಮಂಗಲಕ್ಕೆ ಭವ್ಯ ಮೆರವಣಿಗೆ
ಹಾಸನದಿಂದ ನೆಲಮಂಗಲದ ತನಕ ಭವ್ಯ ಮೆರವಣಿಗೆಯಲ್ಲಿ ಕೋಣಗಳನ್ನು ಕರೆದೊಯ್ಯಲಾಗುತ್ತದೆ. ಬೆಂಗಳೂರಿನಿಂದ 75 ರಿಂದ 100 ವಾಹನಗಳು ಹಾಸನಕ್ಕೆ ಬರಲಿದೆ. ಹಾಸನದಿಂದ ನೆಲಮಂಗಲ ತನಕ ಮೆರವಣಿಗೆಯಲ್ಲಿ ಸಾಗುವುದು. ನ.24 ರಂದು ಅರಮನೆ ಮೈದಾನಕ್ಕೆ ಪ್ರವೇಶ ಅಲ್ಲಿ ಭವ್ಯ ಸ್ವಾಗತ ನೀಡಲಾಗುತ್ತದೆ. ಆ ದಿನ ವಿರಾಮದ ದಿನವಾಗಿದ್ದು ಅದೇ ದಿನ ಅರಮನೆ ಮೈದಾನದಲ್ಲಿ ತುಳು ಕಾರ್ಯಕ್ರಮಗಳು ನಡೆಯಲಿದೆ. ನ. 25 ರಂದು ಬೆಳಿಗ್ಗೆ ಕಂಬಳ ಆರಂಭವಾಗಲಿದೆ ಎಂದರು.

ಗಣ್ಯರ ಭೇಟಿ
ನ.25ರಂದು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಕಂಬಳಕ್ಕೆ ಆಗಮಿಸಲಿದ್ದಾರೆ. ರಾಜಮನೆನತದ ರಾಣಿ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸೇರಿದಂತೆ ಸಚಿವರುಗಳು ಕಂಬಳದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬಾಲಿವುಡ್ ನಟರಾದ ಅನುಷ್ಕಾ ಶೆಟ್ಟಿ, ದೀಪಿಕಾ ಪಡುಕೋಣೆ, ಕ್ರಿಕೆಟಿಗ ಕೆ ಎಲ್ ರಾಹುಲ್, ಐಶ್ವರ್ಯಾ ರೈ, ತಮಿಳು ಚಿತ್ರ ನಟ ರಜನೀಕಾಂತ್ ಹಾಗೂ ಕನ್ನಡದ ಪ್ರಖ್ಯಾತ ನಟ ನಟಿಯರು ಹಾಗೂ 224 ಶಾಸಕರೂ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

8 ಲಕ್ಷ ಮಂದಿ ನಿರೀಕ್ಷೆ
ಕಂಬಳಕ್ಕೆ ಸುಮಾರು 8 ರಿಂದ 10 ಲಕ್ಷ ಮಂದಿ ಸೇರುವ ನಿರೀಕ್ಷೆ ಇದೆ. ಮೈದಾನಕ್ಕೆ ಕೊರಿಯನ್ ಟೆಂಟ್ ಹಾಕಲಾಗಿದೆ.150 ಸ್ಟಾಲ್‌ಗಳು ಬರಲಿದ್ದು ಸ್ಟಾಲ್ ಒಳಗಡೆ ಕ್ಯಾಂಟೀನ್ ಸೇರಿದಂತೆ ಎಲ್ಲಾ ವ್ಯವಸ್ಥೆಗಳು ಇರುತ್ತದೆ. ಸ್ಟಾಲ್ ಸುತ್ತಲೂ ಸುಮಾರು 6000 ಜನರಿಗೆ ಒಟ್ಟಿಗೇ ಊಟ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸ್ಟಾಲ್‌ಗಳಲ್ಲಿ ತುಳುನಾಡಿನ ಅಹಾರಗಳು ದೊರೆಯಲಿದೆ.
ವಿಐಪಿ ಪಾಸ್ ಮತ್ತು ವಿವಿಐಪಿ ಪಾಸ್ ಇರುತ್ತದೆ. ಗ್ಯಾಲರಿ ವ್ಯವಸ್ಥೆ ಇದ್ದು ಜನ ಸಾಮಾನ್ಯರು ಕಂಬಳವನ್ನು ವೀಕ್ಷಿಸುವ ಸರ್ವ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ. ಮೈದಾನದಲ್ಲಿ ಜನರಿಗೆ ತೊಂದರೆಯಾಗದಂತೆ ತಾತ್ಕಾಲಿಕ ಫೈಓವರ್ ವ್ಯವಸ್ಥೆಯನ್ನು ಮಾಡಲಾಗಿದೆ. ಕಂಬಳ ಕೋಣದ ಪ್ರತೀ ಜೋಡಿಗೂ ಇಬ್ಬರು ಪರಿಚಾರಕರನ್ನು ನೇಮಿಸಲಾಗಿದೆ.

190 ಜೋಡಿ ಕೋಣಗಳು
ಕಂಬಳಕ್ಕೆ ಈಗಾಗಲೇ 175 ಜೋಡಿ ಕೋಣಗಳ ಬುಕ್ಕಿಂಗ್ ಆಗಿದೆ. ಇನ್ನೂ ಬೇಡಿಕೆ ಇದೆ. 190 ಜೋಡಿ ಕೋಣಗಳ ಮಾಲಕರು ನಮ್ಮನ್ನು ಭೇಟಿಯಾಗಿದ್ದಾರೆ.

ಇಂಟರ್‌ನ್ಯಾಷನಲ್ ಮೀಡಿಯಾ ಪ್ರಚಾರ
ಕಂಬಳವನ್ನು ಅಂತರ ರಾಷ್ಟ್ರೀಯ ಮಾಧ್ಯಮಗಳು ಪ್ರಸಾರ ಮಾಡಲಿದೆ. ಜೊತೆಗೆ ಕರ್ನಾಟಕದ ಮೀಡಿಯಾಗಳು, ಪತ್ರಿಕೆಗಳು, ಪತ್ರಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಚಾರ ಕಾರ್ಯವನ್ನು ನಡೆಸಲಿದ್ದಾರೆ.

LEAVE A REPLY

Please enter your comment!
Please enter your name here