ಕೊಡಿಯಾಲ:ತಂದೆ,ತಾಯಿಗೆ ಕತ್ತಿಯಿಂದ ಹಲ್ಲೆ – ಮಗನ ವಿರುದ್ಧ ಕೊಲೆಯತ್ನ ಪ್ರಕರಣ

0

ಪುತ್ತೂರು: ತಂದೆ,ತಾಯಿಗೆ ಕತ್ತಿಯಿಂದ ಕಡಿದು ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿ ಆರೋಪಿ ಮಗನ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗಿದೆ.
ಬೆಳ್ಳಾರೆ ಸಮೀಪದ ಕೊಡಿಯಾಲ ಕಲ್ಲಗದ್ದೆ ಎಂಬಲ್ಲಿ ಮಂಜುನಾಥ ಆಚಾರ್ಯ ಮತ್ತವರ ಪತ್ನಿ ಶ್ರೀಮತಿ ಧರ್ಮಾವತಿ ಅವರಿಗೆ ಕತ್ತಿಯಿಂದ ಕಡಿದು ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದ ಆರೋಪದಲ್ಲಿ ಮಗ ದೇವಿಪ್ರಸಾದ್ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಘಟನೆ ಕುರಿತು ಧರ್ಮಾವತಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ನ.20ರಂದು ಸಂಜೆ 5.15 ಗಂಟೆ ವೇಳೆಗೆ ಮಗ ದೇವಿ ಪ್ರಸಾದನು ಆತನು ಖರೀದಿಸಿದ ವಿದ್ಯುತ್ ಪಂಪ್‌ನ್ನು ಬಳಸುವುದಕ್ಕೆ ತಂದೆ ಮಂಜುನಾಥ ಆಚಾರ್ಯರಲ್ಲಿ ಆಕ್ಷೇಪಿಸಿ ಬೈದು ಅದೇ ಧ್ವೇಷದಿಂದ ಮನೆಯಲ್ಲಿದ್ದ ಕತ್ತಿಯೊಂದನ್ನು ತೆಗೆದುಕೊಂಡು ತಂದೆಯನ್ನುದ್ದೇಶಿಸಿ, ನೀವು ಇನ್ನು ಬದುಕಿರಬಾರದು, ನೀವು ನನಗೆ ಎದುರು ಮಾತನಾಡುತ್ತೀರಲ್ಲ, ನಿಮ್ಮನ್ನು ಈಗಲೇ ಕೊಂದು ಬಿಡುತ್ತೇನೆ ಎಂಬುದಾಗಿ ಹೇಳಿ ಕುತ್ತಿಗೆಯ ಕಡೆಗೆ ಕತ್ತಿಯನ್ನು ಬೀಸಿದಾಗ ಪತಿ ಮಂಜುನಾಥ ಆಚಾರ್ಯ ಅವರು ತಪ್ಪಿಸಿಕೊಂಡಿದ್ದು, ಆ ವೇಳೆ ಕತ್ತಿಯ ಏಟು ಅವರ ಬಲ ಕೈಯ ಭುಜದ ಬಳಿಗೆ ತಾಗಿ ರಕ್ತಗಾಯವಾಗಿರುತ್ತದೆ.

ಬಳಿಕ ಪುನಃ ದೇವಿಪ್ರಸಾದನು ಮತ್ತೊಮ್ಮೆ ಗಂಡನಿಗೆ ಕಡಿಯಲು ಕತ್ತಿಯನ್ನು ಬೀಸಿದಾಗ ಸದ್ರಿ ಕತ್ತಿಯು ಅವರ ಬಲ ಕೈಯ ಮಣಿಗಂಟಿನ ಬಳಿಗೆ ತಾಗಿ ರಕ್ತಗಾಯವಾಗಿರುತ್ತದೆ. ಪುನಃ ದೇವಿಪ್ರಸಾದನು ಕತ್ತಿಯಿಂದ ಕಡಿಯಲು ಬೀಸಿದಾಗ ನಾನು ತಡೆಯಲು ಮಧ್ಯೆ ಹೋಗಿದ್ದೆ.ಆ ವೇಳೆ ದೇವಿಪ್ರಸಾದನು ಕತ್ತಿಯನ್ನು ಯದ್ವಾ-ತದ್ವಾ ಬೀಸಿದ ಪರಿಣಾಮ ಕತ್ತಿಯು ನನ್ನ ಬಲ ಅಂಗೈ, ಎದೆ ಮತ್ತು ತಲೆಗೆ ರಕ್ತಗಾಯಗಳಾಗಿದ್ದು, ಆಗ ಪರಿಚಯದ ಹೊನ್ನಪ್ಪ ಗೌಡರು ಮನೆ ಬಳಿ ಬಂದು ಮುಂದಕ್ಕೆ ಕಡಿಯದಂತೆ ತಡೆದಿದ್ದು, ಆ ವೇಳೆ ದೇವಿಪ್ರಸಾದನು ತಂದೆ ಮಂಜುನಾಥ ಆಚಾರ್ಯರನ್ನು ಉದ್ದೇಶಿಸಿ ಇವತ್ತು ನೀನು ಬದುಕಿದೆ, ಮುಂದಕ್ಕಾದರೂ ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ ಎಂಬುದಾಗಿ ಬೆದರಿಕೆ ಹಾಕಿ ಅಲ್ಲಿಂದ ಹೋಗಿದ್ದ.

ಗಾಯಗೊಂಡ ನಮ್ಮನ್ನು ಹೊನ್ನಪ್ಪ ಗೌಡ ಹಾಗೂ ಹರೀಶರವರು ಚಿಕಿತ್ಸೆಯ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.ಅಲ್ಲಿನ ವೈದ್ಯರು ಮೇಲ್ದರ್ಜೆಯ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದ ಮೇರೆಗೆ ಪುತ್ತೂರು ಆಸ್ಪತ್ರೆಗೆ ಬಂದ ಮಗಳು ಪವಿತ್ರಾಳು ನಮ್ಮನ್ನು ಮಂಗಳೂರು ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುವುದಾಗಿ ಧರ್ಮಾವತಿ ಅವರು ದೂರಿನಲ್ಲಿ ತಿಳಿಸಿದ್ದಾರೆ.ಘಟನೆ ಕುರಿತು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಕಲಂ 506, 324, 307 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

LEAVE A REPLY

Please enter your comment!
Please enter your name here