ನಾಳೆಯಿಂದ ಶ್ರೀಮಹಾಲಿಂಗೇಶ್ವರ ದೇವಾಲಯದಲ್ಲಿ ವರ್ಷಾವಧಿ ಉತ್ಸವ
ನ.27:ಕಟ್ಟೆಪೂಜೆ, ಬಿಲ್ವಗಿರಿಪ್ರವೇಶ, ಕೆರೆ ಉತ್ಸವ, ಬೆಡಿ ಪ್ರದರ್ಶನ
ನ.28:ದರ್ಶನಬಲಿ, ಬಟ್ಟಲುಕಾಣಿಕೆ ಜಠಧಾರಿ ಮಹಿಮೆ
ನ.29: ಧೂಮಾವತಿ ದೈವ, ಹುಲಿಭೂತ ನೇಮೋತ್ಸವ
ಪುತ್ತೂರು: ವರ್ಷದ ಮೊದಲೇ ಜಾತ್ರೆ ಎಂದೇ ಪ್ರಸಿದ್ಧಿಯಾಗಿರುವ ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೋತ್ಸವ ನ.26ರಿಂದ 29ರವರೆಗೆ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ. ನ.26ರಂದು ಬೆಳಿಗ್ಗೆ 9ರಿಂದ ಬಲಿವಾಡು ಶೇಖರಣೆ, ರಾತ್ರಿ ಶ್ರೀಮಹಾಗಣಪತಿ ಪೂಜೆ, ನ.27ರಂದು ನವಕ ಕಲಶಾಭಿಷೇಕ, ತುಲಾಭಾರ ಸೇವೆ, ಮಹಾಪೂಜೆ, ದೇವರ ಬಲಿ, ಪ್ರಸಾದ ವಿತರಣೆ, ಬ್ರಹ್ಮಸಮಾರಾಧನೆ ನಡೆಯಲಿದೆ. ರಾತ್ರಿ ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ಭಜನಾ ಸಂಘದವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಕಟ್ಟೆಪೂಜೆ, ಬಿಲ್ವಗಿರಿ ಪ್ರವೇಶ, ಕೆರೆ ಉತ್ಸವ:
ನ.27ರಂದು ರಾತ್ರಿ 9ರಿಂದ ಮಹಾಪೂಜೆ, ಉತ್ಸವ, ದೇವರ ಭೂತಬಲಿ, ಶ್ರೀದೇವರ ಬಲಿ ಹೊರಟು ಕಟ್ಟೆಪೂಜೆ, ಬಿಲ್ವಗಿರಿ ಪ್ರವೇಶ, ಬೆಡಿ ಪ್ರದರ್ಶನ, ಕೆರೆ ಉತ್ಸವ, ದೇವರು ಒಳಗಾಗಿ ಮಂಗಳಾರತಿ ನಡೆಯಲಿದೆ.
ದರ್ಶನ ಬಲಿ, ಬಟ್ಟಲುಕಾಣಿಕೆ:
ನ.28ರಂದು ಬೆಳಿಗ್ಗೆ 10ರಿಂದ ಶ್ರೀದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣದಲ್ಲಿ ಮಹಾಪ್ರಸಾದ ವಿತರಣೆ, ಮಂತ್ರಾಕ್ಷತೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.
ಜಠಾಧಾರಿ ಮಹಿಮೆ, ನೇಮ:
ನ.28ರಂದು ರಾತ್ರಿ 9ರಿಂದ ದೇವರ ಮಹಾಪೂಜೆ, ಶ್ರೀಜಠಾಧಾರಿ ದೈವದ ಭಂಡಾರ ತೆಗೆದು ರಾತ್ರಿ ೧ರಿಂದ ಜಟಾಧಾರಿ ದೈವದ ಮಹಿಮೆ ನಡೆಯಲಿದೆ. ನ.29ರಂದು ಬೆಳಿಗ್ಗೆ ೮ರಿಂದ ಧೂಮಾವತಿ ದೈವದ ನೇಮ, ಅಪರಾಹ್ನ ಹುಲಿಭೂತ ನೇಮೋತ್ಸವ ನಡೆಯಲಿದೆ.
ಸಂಕಲ್ಪ ಸಹಿತ ಅನ್ನದಾನ ಸೇವೆ:
ಜಾತ್ರೋತ್ಸವದ ಪ್ರಯುಕ್ತ ಪ್ರತೀದಿನ ಅನ್ನದಾನ ಸೇವೆ ನಡೆಯಲಿದೆ. ಸಂಕಲ್ಪ ಸಹಿತ ’ಅನ್ನದಾನ ಸೇವೆ’ ಮಾಡಿಸುವ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ.
ನ.28ರಂದು ರಾತ್ರಿ 9ರಿಂದ ಶ್ರೀಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘದ ಸದಸ್ಯರು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ ಎಂದು ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್, ಮೊಕ್ತೇಸರ ವಿನೋದ್ ಕುಮಾರ್ ರೈ ಗುತ್ತು ತಿಳಿಸಿದ್ದಾರೆ.
ಬೆಟ್ಟಂಪಾಡಿ ಬೆಡಿ
ನ.27ರಂದು ರಾತ್ರಿ ದೇವರ ಕಟ್ಟೆಪೂಜೆ ನಡೆದು ಬಿಲ್ವಗಿರಿ ಪ್ರವೇಶ ಸಂದರ್ಭದಲ್ಲಿ ಶ್ರೀಮಹಾಲಿಂಗೇಶ್ವರ ಸೇವಾ ಸಮಿತಿ ನೇತೃತ್ವದಲ್ಲಿ ಬಿಲ್ವಗಿರಿಯಲ್ಲಿ ’ಬೆಟ್ಟಂಪಾಡಿ ಬೆಡಿ’ ಪ್ರದರ್ಶನ ನಡೆಯಲಿದೆ.
ಸುದ್ದಿ ಪುತ್ತೂರು ಯೂಟ್ಯೂಬ್ನಲ್ಲಿ ಲೈವ್
ಊರ ಹಾಗೂ ಪರವೂರಿನಲ್ಲಿರುವ ಭಕ್ತರು ಜಾತ್ರೋತ್ಸವವನ್ನು ಕಣ್ತುಂಬಿಕೊಳ್ಳಲು ’ಸುದ್ದಿ ಮೀಡಿಯಾ’ ಮೂಲಕ ನ.27ರಂದು ರಾತ್ರಿ ಹಾಗೂ ನ.28ರಂದು ಮಧ್ಯಾಹ್ನದವರೆಗೆ ನೇರ ಪ್ರಸಾರ ನಡೆಯಲಿದೆ. ಅಲ್ಲದೆ ದೇವಳದಲ್ಲಿ ಎಲ್ಇಡಿ ಪರದೆ ವ್ಯವಸ್ಥೆ ಕಲ್ಪಿಸಲಾಗಿದೆ.