ಉಪ್ಪಿನಂಗಡಿ: ಅತೀ ವೇಗದಿಂದ ಅಡ್ಡಾದಿಡ್ಡಿಯಾಗಿ ಚಲಿಸಿದ ಪಿಕಾಪ್ ವಾಹನದಿಂದಾಗಿ ಅದೃಷ್ಟವಶಾತ್ ಹಲವರು ಅಪಾಯದಿಂದ ಪಾರಾದ ಘಟನೆ ಉಪ್ಪಿನಂಗಡಿ ಬಸ್ ನಿಲ್ದಾಣದ ಬಳಿ ನ.24ರಂದು ರಾತ್ರಿ ನಡೆದಿದೆ.
ಬಸ್ ನಿಲ್ದಾಣದ ಬಳಿಯಿರುವ ಬಾರ್‌ವೊಂದರ ಕಡೆಯಿಂದ ಅತೀ ವೇಗದಿಂದ ಬಂದ ಪಿಕಾಪ್‌ವೊಂದು ಏಕಾಏಕಿ ಉಪ್ಪಿನಂಗಡಿ- ಗುರುವಾಯನಕೆರೆ ರಾಜ್ಯ ಹೆದ್ದಾರಿಗೆ ನುಗ್ಗಿದ್ದು, ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ದ್ವಾರದ ಬಳಿಗೆ ನುಗ್ಗಿದ ಪಿಕಾಪ್ ಅಲ್ಲಿಂದ ತಿರುವು ಪಡೆದು ರಸ್ತೆ ಬದಿಯಲ್ಲಿ ಇಂಡಿಯ ಎಟಿಎಂ ಕಡೆಗೆ ಬಂದಿದ್ದು, ಆಗ ಅಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಸ್ಕೂಟಿ ಹಾಗೂ ಬಸ್ ಕಾಯುತ್ತಿದ್ದ ವ್ಯಕ್ತಿಯೋರ್ವರಿಗೆ ತಾಗಿದೆ. ಸ್ಕೂಟಿಯ ಬಳಿಯೇ ಜನರು ನಿಂತುಕೊಂಡಿದ್ದು, ಅವರು ಓಡಿ ತಪ್ಪಿಸಿಕೊಂಡಿದ್ದಾರೆ. ಅಪಘಾತ ನಡೆದ ಬಳಿಕವೂ ಪಿಕಾಪನ್ನು ಅದರ ಚಾಲಕ ನಿಲ್ಲಿಸದೇ ಮತ್ತೆ ಹೆದ್ದಾರಿಯ ಮತ್ತೊಂದು ಕಡೆಗೆ ಹೋಗಿ ಅದೇ ವೇಗದಲ್ಲಿ ಬಸ್ ನಿಲ್ದಾಣದೊಳಗೆ ಚಲಾಯಿಸಿ, ಮುಂದಕ್ಕಿರುವ ಬಸ್ ನಿಲ್ದಾಣದ ಇನ್ನೊಂದು ದಾರಿಯಿಂದಾಗಿ ಪಿಕಾಪನ್ನು ಚಲಾಯಿಸಿ ಪರಾರಿಯಾಗಲು ನೋಡಿದ್ದಾನೆ. ಅಷ್ಟರಲ್ಲಿ ವಿಷಯ ತಿಳಿದು ಸಾರ್ವಜನಿಕರು ಆತನ ಪಿಕಾಪನ್ನು ತಡೆದು ನಿಲ್ಲಿಸಿ, ಪೊಲೀಸ್ ವಶಕ್ಕೆ ನೀಡಿದ್ದಾರೆ.
ಅಪಘಾತ ನಡೆದ ಸ್ಥಳದಲ್ಲೇ ಅಟೋ ರಿಕ್ಷಾ ನಿಲ್ದಾಣವಿದ್ದು, ಹಲವು ರಿಕ್ಷಾ ಚಾಲಕರು ರಸ್ತೆ ಬದಿ ನಿಂತುಕೊಂಡಿದ್ದರು. ಘಟನೆಯ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ರಿಕ್ಷಾ ಚಾಲಕರು, ಪಿಕಾಪ್ ನಮ್ಮ ಮೇಲೆಯೇ ನುಗ್ಗಿ ಬರುವಂತೆ ಕಂಡಿತು. ಸ್ವಲ್ಪದರಲ್ಲೇ ನಾವು ಬಚಾವಾಗಿದ್ದೇವೆ. ದೇವರೇ ನಮ್ಮನ್ನು ಕಾಪಾಡಿದ ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ಅಲ್ಲದೇ ಬಸ್ ನಿಲ್ದಾಣದೊಳಗೂ ಈ ಸಂದರ್ಭ ಜನರಿದ್ದು, ಸಿಕ್ಕ ಸಿಕ್ಕಲ್ಲಿ ನುಗ್ಗಿಸಿಕೊಂಡು ಪಿಕಾಪ್ ಸಂಚರಿಸಿದ್ದರಿಂದ ಅದೃಷ್ಟವಶಾತ್ ಹಲವರು ಅಪಾಯದಿಂದ ಪಾರಾಗಿದ್ದಾರೆ.
ಘಟನೆಯಿಂದ ಹಿರೇಬಂಡಾಡಿಯ ಕೇಶವ ಎಂಬವರ ಕಾಲಿನ ಉಗುರೊಂದು ಕಿತ್ತು ಹೋಗಿದೆ. ಇವರಿಗೆ ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. 34 ನೆಕ್ಕಿಲಾಡಿ ನಿವಾಸಿ ನವೀನ್ ಎಂಬಾತ ಪಿಕಾಪ್ ಚಲಾಯಿಸಿಕೊಂಡು ಬಂದಿದ್ದು, ಈತ ಮದ್ಯಪಾನ ಮಾಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.