ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ‘ಸಂವಿಧಾನ ದಿನಾಚರಣೆ ಕಾರ್ಯಕ್ರಮ’

0

ಸಂವಿಧಾನದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ: ಪೃಥ್ವಿರಾಜ್

ಪುತ್ತೂರು: ಸಂವಿಧಾನ ಎನ್ನುವುದು ದೇಶದ ನಾಗರಿಕರ ದಿನನಿತ್ಯ ಜೀವನದ ಒಂದು ಅಮೂಲ್ಯ ಭಾಗವಾಗಿದೆ. ಇದರಲ್ಲಿರುವ ಸಾಮಾಜಿಕ ಮೌಲ್ಯಗಳನ್ನು ಅರ್ಥ ಮಾಡಿಕೊಂಡು ಅದಕ್ಕೆಲ್ಲಾ ಪೂರಕವಾಗಿ ಬದುಕಿದಾಗ ಮಾನವನ ಜೀವನಕ್ಕೆ ಅರ್ಥಪೂರ್ಣ ಭವಿಷ್ಯವನ್ನು ಕಲ್ಪಿಸುತ್ತದೆ. ಅದನ್ನು ಸರಿಯಾಗಿ ಅಳವಡಿಸಿಕೊಂಡಲ್ಲಿ ಪ್ರತಿಯೊಬ್ಬ ನಾಗರಿಕನ ಹಾಗೂ ದೇಶದ ಶ್ರೇಯೋಭಿವೃದ್ಧಿ ಸಾಧ್ಯ ಎಂದು ಹಿರಿಯ ನ್ಯಾಯವಾದಿ ಹಾಗೂ ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಪೃಥ್ವಿರಾಜ್ ರೈ ತಿಳಿಸಿದರು. ಅವರು ಪುತ್ತೂರಿನ ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಹಿರಿಯ ವಿದ್ಯಾರ್ಥಿ ಸಂಘ, ಪುತ್ತೂರು ವಕೀಲರ ಸಂಘ ಹಾಗೂ ಅಧಿವಕ್ತ ಪರಿಷತ್ ಪುತ್ತೂರು ಘಟಕದ ಸಹಯೋಗದಲ್ಲಿ ನಡೆದ ಸಂವಿಧಾನ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಸಂವಿಧಾನ ದಿನಾಚರಣೆಯ ಕುರಿತು ಭಾರತೀಯ ಸಂವಿಧಾನದ ಮೌಲ್ಯಗಳು ಎನ್ನುವ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಸಂವಿಧಾನದಲ್ಲಿ ಜೀವನದ ಮೌಲ್ಯಗಳು ಅಡಕವಾಗಿವೆ. ಸಂವಿಧಾನವು ಪ್ರತಿಯೊಬ್ಬ ನಾಗರಿಕರ ಮೌಲ್ಯಗಳು, ಸಾಮಾಜಿಕ, ಆರ್ಥಿಕ, ನಂಬಿಕೆ ಮತ್ತು ಶ್ರದ್ಧೆ ಪೂಜಿಸುವ ಹಕ್ಕು ಮತ್ತು ಮೂಲಭೂತ ಹಕ್ಕುಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಆದರೆ, ಮೌಲ್ಯಗಳು ಮರೆತು ದೇಶದಲ್ಲಿ ಭ್ರಷ್ಟಾಚಾರ ಹಾಗೂ ಪರಂಪರೆಯ ರಾಜಕೀಯ ದತ್ತ ಹೋಗುತ್ತಿರುವುದು ಶೋಚನೀಯ ಸಂಗತಿಯಾಗಿದೆ. ನಮ್ಮ ಭಾರತೀಯ ಸಂವಿಧಾನದಲ್ಲಿನ ಮೌಲ್ಯಗಳು ನಾಗರಿಕರ ಜೀವನದ ಮೌಲ್ಯಗಳಾಗಿ ಅಂತರ್ಗತವಾದಾಗ ಮಾತ್ರ ಉತ್ತಮ ಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ. ಸಂವಿಧಾನಿಕ ತತ್ವಗಳನ್ನು ಜೀವನದಲ್ಲಿ ಮೌಲ್ಯಗಳಾಗಿ ರೂಢಿಸಿಕೊಂಡಲ್ಲಿ ಬಲಿಷ್ಠ ಪ್ರಜಾಪ್ರಭುತ್ವದ ಕಲ್ಪನೆ ಸಾಕಾರಗೊಳ್ಳಲು ಸಾಧ್ಯವಾಗುತ್ತದೆ ಎಂದರು. ಜೊತೆಗೆ ಸಂವಿಧಾನದ ಇತ್ತೀಚಿನ ಬೆಳವಣಿಗೆಯ ಕುರಿತು ಹಲವಾರು ನಿದರ್ಶನಗಳನ್ನು ನೀಡಿ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ಅಧ್ಯಯನ ವಿಭಾಗದ ನಿರ್ದೇಶಕ ಡಾ. ಬಿ.ಕೆ. ರವೀಂದ್ರ ಮಾತನಾಡಿ, ಭಾರತದ ಪ್ರಜಾಪ್ರಭುತ್ವ, ಸಂವಿಧಾನ ಇಡೀ ರಾಷ್ಟ್ರಕ್ಕೆ ಮಾದರಿ. ಮುಂದಿನ ಪೀಳಿಗೆಗೆ ಸಂವಿಧಾನದ ಬಗ್ಗೆ ತಿಳಿಸಲು, ಬಲಿಷ್ಠ ರಾಷ್ಟ್ರ ಕಟ್ಟಲು ಸಂವಿಧಾನ ದಿನವನ್ನು ಆಚರಿಸಲಾಗುತ್ತಿದೆ. ಸಂವಿಧಾನ ಹಾಗೂ ಕಾನೂನಿನ ಬಗ್ಗೆ ಬರಿ ವಕೀಲರು, ನ್ಯಾಯಾಧೀಶರು, ಪೋಲಿಸರು ಅರಿತರೆ ಸಾಲದು, ಈ ದೇಶದ ಪ್ರತಿಯೊಬ್ಬ ಪ್ರಜೆ ಅದನ್ನು ಮನನ ಮಾಡಿಕೊಂಡರೆ ರಾಷ್ಟ್ರದ ಸಂಪೂರ್ಣ ವಿಕಾಸ ಸಾಧ್ಯ ಎಂದ ಅವರು, ನಮ್ಮ ಭಾರತೀಯ ಸಂವಿಧಾನವು ಹಲವು ಅವಕಾಶಗಳನ್ನು ಕಲ್ಪಿಸಿದ್ದು, ಎಲ್ಲರೂ ಅವುಗಳ ಸದುಪಯೋಗ ಪಡೆದುಕೊಂಡು ಉತ್ತಮ ನಾಗರಿಕರಾಗಿ ಬದುಕು ಕಟ್ಟಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ವೇದಿಕೆಯಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲೆ ಅಕ್ಷತಾ ಎ. ಪಿ., ಪುತ್ತೂರು ವಕೀಲರ ಸಂಘದ ಉಪಾಧ್ಯಕ್ಷ ಕೆ. ಕೃಷ್ಣಪ್ಪ ಗೌಡ, ಅಧಿವಕ್ತ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಜಯಪ್ರಕಾಶ್ ಎನ್, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಶಿಧರ್ ಬಿ. ಎನ್. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ಗಣೇಶ್ ಬಾಳಿಗ ನಿರ್ವಹಿಸಿ, ವಿದ್ಯಾರ್ಥಿನಿ ಅರ್ಪಿತಾ ಪ್ರಶಾಂತ್ ಸ್ವಾಗತಿಸಿ, ವಿದ್ಯಾರ್ಥಿನಿ ವಿಶೀಕಾ ವಂದಿಸಿದರು.

ವೇದಿಕೆಯ ಮುಂಭಾಗದಲ್ಲಿ ಪುತ್ತೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ಯಾಮ್ ಪ್ರಸಾದ್ ಕೈಲಾರ್, ಪುತ್ತೂರು ವಕೀಲರ ಸಂಘದ ಸದಸ್ಯರು, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು, ಉಪನ್ಯಾಸಕ ವೃಂದ ಹಾಗೂ ಕಾನೂನು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ರಾಜ್ಯಶಾಸ್ತ್ರ ವಿದ್ಯಾರ್ಥಿಗಳಿಂದ ‘ಜ್ಞಾನಬಿಂಬ’ ವಿಶೇಷ ಭಿತ್ತಿಪತ್ರ:
ಭಾರತದ ಸಂವಿಧಾನ ದಿನಾಚರಣೆಯ ಹಿನ್ನಲೆಯಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿದ್ಯಾರ್ಥಿಗಳು ಹೊರತಂದ ಭಾರತದ ಸಂವಿಧಾನದ ಕುರಿತು ವಿಶೇಷ ಮಾಹಿತಿಯನ್ನು ಒಳಗೊಂಡ ‘ಜ್ಞಾನಬಿಂಬ’ ಭಿತ್ತಿಪತ್ರಿಕೆಯ ವಿಶೇಷ ಸಂಚಿಕೆಯನ್ನು ಇದೇ ವೇಳೆ ಮುಖ್ಯ ಅತಿಥಿಗಳು ಅನಾವರಣಗೊಳಿಸಿದರು.

ಸಾಧಕ ವಿದ್ಯಾರ್ಥಿಗಳಿಗೆ ‘ಪ್ರಶಸ್ತಿ ಪ್ರಧಾನ’:
ಇದೇ ವೇಳೆ ಸಂವಿಧಾನ ದಿನಾಚರಣೆಯ ಹಿನ್ನಲೆಯಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಭಾಷಣ ಹಾಗೂ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಅದರ ಪ್ರಶಸ್ತಿಗಳನ್ನು ಸಾಧಕ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದ ಮುಖ್ಯ ಅತಿಥಿಗಳು ನೀಡಿದರು. ಜೊತೆಗೆ ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಲಾಯಿತು.

LEAVE A REPLY

Please enter your comment!
Please enter your name here