ವೈದೇಹಿ, ವೈಷ್ಣವಿ ಮಹಿಳಾ ಭಜನಾ ಮಂಡಳಿ ವಾರ್ಷಿಕೋತ್ಸವ, ಕನಕಜಯಂತಿ ಆಚರಣೆ

0

ಕನಕದಾಸರ ಜೀವನಸಾಹಿತ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಬೇಕು-ರಾಮಕೃಷ್ಣ ಕಾಟುಕುಕ್ಕೆ

ಪುತ್ತೂರು: ಕಲಿಯುಗದಲ್ಲಿ ಭಜನೆಗೆ ಪ್ರಾಶಸ್ತ್ಯವಿದೆ. ಭಜನೆಯಿಂದ ವಿಭಜನೆಯಿಲ್ಲ. ನಮ್ಮೆಲ್ಲರಲ್ಲಿ ಭಜನೆಯಿಂದ ಜಾಗೃತಿ ಮೂಡಬೇಕು. ಭಜನೆಯ ಮೂಲಕ ಭಗವಂತನ ಅನುಗ್ರಹ ಪಡೆಯಲು ಸಾಧ್ಯ ಎಂದು ದಾಸಸಂಕೀರ್ತನೆಕಾರ ರಾಮಕೃಷ್ಣ ಕಾಟುಕುಕ್ಕೆ ಹೇಳಿದರು. ಬೊಳುವಾರು ವೈದೇಹಿ ಮತ್ತು ವೈಷ್ಣವಿ ಮಹಿಳಾ ಭಜನಾ ಮಂಡಳಿ, ಕಾಟುಕುಕ್ಕೆ ಭಜನಾ ಚಾರಿಟೇಬಲ್ ಟ್ರಸ್ಟ್ ಪುತ್ತೂರು, ಶ್ರೀಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇದರ ಸಹಯೋಗದೊಂದಿಗೆ ನಟರಾಜ ವೇದಿಕೆಯಲ್ಲಿ ನಡೆದ ಕನಕ ಜಯಂತಿ ಆಚರಣೆ ಮತ್ತು ಭಜನಾ ಮಂಡಳಿ ವಾರ್ಷಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕನಕದಾಸರ ಜೀವನಸಾಹಿತ್ಯಗಳನ್ನು ತಿಳಿದುಕೊಂಡು ಜೀವನದಲ್ಲಿ ಅಳವಡಿಸಬೇಕು. ಕನಕದಾಸರದ್ದು ಉತ್ತಮ ಸಾಹಿತ್ಯ. ಅದ್ಭುತವಾದ ಕೃತಿಗಳನ್ನು ಕನಕದಾಸರು ಕೊಟ್ಟಿದ್ದಾರೆ. ಪುರಂದರದಾಸರು ಮತ್ತು ಕನಕದಾಸರು ಸಮಕಾಲೀನ ದಾಸವರೇಣ್ಯರು ಎಂದು ಹೇಳಿದರು.


ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮದಾಸ ಗೌಡ ಮಾತನಾಡಿ 15ನೇ ಶತಮಾನದ ಸಂಕೀರ್ತನೆಕಾರ ಕನಕದಾಸರು. ಅವರ ಸಂಕೀರ್ತನೆಗಳು, ಭಕ್ತಿಸಾರಗಳು ಮನುಕುಲಕ್ಕೆ ಸಂಜೀವಿನಿಯಾಗಿದೆ. ಅವರ ಜೀವನದರ್ಶನ ನಮ್ಮ ಬದುಕಿಗೆ ದಾರಿದೀಪವಾಗಿದೆ ಎಂದು ಹೇಳಿ ಕನಕದಾಸರ ಜೀವನ, ಸಾಹಿತ್ಯಗಳ ಬಗ್ಗೆ ತಿಳಿಸಿದರು. ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯಗುರು ಆಶಾ ಬೆಳ್ಳಾರೆ ಮಾತನಾಡಿ ಭಾರತದ ಸಾಂಸ್ಕೃತಿಕ ಪಾರಂಪರಿಕ ಅನುಭವಗಳು ದಾಸಸಾಹಿತ್ಯ. ದಾಸರ ಕೀರ್ತನೆಗಳು, ಸಾರಗಳು, ಸಂಕೀರ್ತನೆಗಳು ನಮ್ಮ ಭಾವನೆಗಳನ್ನು, ಆಲೋಚನೆಗಳನ್ನು ತಟ್ಟಬೇಕು. ಅದು ನಮ್ಮ ಬದುಕನ್ನು ಬೇರೆ ಕಡೆಗೆ ಕೊಂಡೊಯ್ಯಬಾರದು ಎಂದು ಹೇಳಿ ಕನಕದಾಸರಿಗೆ ಅಭಾರಮನ್ನಣೆ ಸಲ್ಲಿಸಿದರು. ನಿವೃತ್ತ ಪದವೀಧರ ಶಿಕ್ಷಕ, ಸುದ್ದಿ ಬಿಡುಗಡೆ ಅಂಕಣಕಾರ ನಾರಾಯಣ ರೈ ಕುಕ್ಕುವಳ್ಳಿ ಮಾತನಾಡಿ ಭಜನೆ ಎಲ್ಲರನ್ನೂ ಒಟ್ಟುಸೇರಿಸುತ್ತದೆ. ಭಜನೆಯಿಂದ ಸತ್ಯದ ಸಾಕ್ಷಾತ್ಕಾರ ತಿಳಿದುಕೊಳ್ಳಲು ಸಾಧ್ಯ. ಇಂದಿನ ದಿನಗಳಲ್ಲಿ ಮಕ್ಕಳನ್ನೂ ಭಜನೆಯ ಕಡೆಗೆ ತೋರಿಸಬೇಕು. ಕೀರ್ತನೆಯ ಬೆಳಕು ಹರಿದಾಗ ನಮ್ಮ ಮನದ ಒಳಗೂ ಹೊರಗೂ ಬೆಳಕು ಕಾಣುತ್ತದೆ ಎಂದು ಹೇಳಿದರು.

ವೈಷ್ಣವಿ ಮಹಿಳಾ ಭಜನಾ ಮಂಡಳಿಯ ಕಾರ್ಯದರ್ಶಿ ಉಷಾ ಜಯರಾಮ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೈದೇಹಿ ಮಹಿಳಾ ಭಜನಾ ಮಂಡಳಿಯ ಕಾರ್ಯದರ್ಶಿ ವತ್ಸಲಾ ರಾಜ್ಞೆ ವಾರ್ಷಿಕ ವರದಿ ವಾಚಿಸಿದರು. ಉಷಾ, ಗಾಯತ್ರಿ, ಉಷಾ ನಾಯಕ್, ವತ್ಸಲಾ ರಾಜ್ಞೆ ಅತಿಥಿಗಳನ್ನು ಗೌರವಿಸಿದರು. ರೇಣುಕಾ, ಅನ್ನಪೂರ್ಣ, ಮಂಜುಳಾ, ವನಿತಾ ಭಟ್ ಪ್ರಾರ್ಥಿಸಿದರು. ವೈಷ್ಣವಿ ಮಹಿಳಾ ಭಜನಾ ಮಂಡಳಿಯ ಅಧ್ಯಕ್ಷೆ ಜ್ಯೋತಿ ನಾಯಕ್ ಸ್ವಾಗತಿಸಿದರು. ವೈದೇಹಿ ಮಹಿಳಾ ಭಜನಾ ಮಂಡಳಿಯ ಅಧ್ಯಕ್ಷೆ ಪ್ರೇಮಲತಾ ರಾವ್ ವಂದಿಸಿದರು. ವಿವಿಧ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮ ಬಳಿಕ ರಾಮಕೃಷ್ಣ ಕಾಟುಕುಕ್ಕೆ ತಂಡದಿಂದ ಸಂಕೀರ್ತನೆ ನಡೆಯಿತು.

ಗುರುವಂದನೆ
ಮಧ್ವಾಧೀಶ ವಿಠಲದಾಸ, ದಾಸಸಂಕೀರ್ತನೆಕಾರ ರಾಮಕೃಷ್ಣ ಕಾಟುಕುಕ್ಕೆಯವರಿಗೆ ವೈದೇಹಿ ಮತ್ತು ವೈಷ್ಣವಿ ಮಹಿಳಾ ಭಜನಾ ಮಂಡಳಿಯ ವತಿಯಿಂದ ಗುರುವಂದನೆ ಸಲ್ಲಿಸಲಾಯಿತು. ಭಜನಾ ಮಂಡಳಿ ಪದಾಧಿಕಾರಿಗಳು, ಸದಸ್ಯರು ಗುರುವಂದನೆ ಸಲ್ಲಿಸಿದರು.

LEAVE A REPLY

Please enter your comment!
Please enter your name here