ಕುಂಬ್ರದಲ್ಲಿ ಪಡ್ಡಂಬೈಲುಗುತ್ತು ದಿ.ನಾರಾಯಣ ರೈ ಸ್ಮರಣಾರ್ಥ ಮಂದಾರ ಪ್ರಶಸ್ತಿ ಪ್ರದಾನ

0

ಹೆತ್ತವರ ಹೆಸರನ್ನು ಚಿರಾಯುವಾಗಿಸುವ ಕೆಲಸ ಮಕ್ಕಳಿಂದಾಗಬೇಕು : ಕಡಮಜಲು ಸುಭಾಷ್ ರೈ

ಪುತ್ತೂರು: ಸಮಾಜ ಒಂದು ಸಮುದ್ರವಿದ್ದಂತೆ, ಈ ಸಮುದ್ರದೊಳಗೆ ಮುತ್ತು, ರತ್ನ ಎಲ್ಲವೂ ಇದೆ. ಆದರೆ ಇದನ್ನು ಸಮುದ್ರದಿಂದ ತೆಗೆದು ಸಮಾಜಕ್ಕೆ ತೋರಿಸುವ ಕೆಲಸ ಆಗಬೇಕು ಅದು ಮಂದಾರ ಬಳಗದಿಂದ ಆಗಿದೆ. ಸಮಾಜದಲ್ಲಿರುವ ಸಾಧಕರನ್ನು ಗುರುತಿಸಿ ಅವರಿಗೆ ಮಂದಾರ ಪ್ರಶಸ್ತಿ ನೀಡುವ ಮೂಲಕ ಅವರನ್ನು ಸಮಾಜಕ್ಕೆ ಪರಿಚಯಿಸಿದ ಕೀರ್ತಿ ಮಂದಾರ ಬಳಗಕ್ಕೆ ಸಲ್ಲುತ್ತದೆ ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಗತಿಪರ ಕೃಷಿಕ, ದೇಶಭಕ್ತ ಎನ್‌ಎಸ್‌ಕಿಲ್ಲೆ ಪ್ರತಿಷ್ಠಾನದ ಅಧ್ಯಕ್ಷ ಕಡಮಜಲು ಸುಭಾಷ್ ರೈ ಹೇಳಿದರು.


ಅವರು ನ.30 ರಂದು ಕುಂಬ್ರ ಶ್ರೀ ರಾಮ ಭಜನಾ ಮಂದಿರದ ಸಭಾ ಭವನದಲ್ಲಿ ಮಂದಾರ ಬಳಗದ ವತಿಯಿಂದ ನಡೆದ ಪಡ್ಡಂಬೈಲುಗುತ್ತು ದಿ.ನಾರಾಯಣ ರೈ ಸ್ಮರಣಾರ್ಥ ಮೂರು ಮಂದಿ ಸಾಧಕರಿಗೆ ‘ಮಂದಾರ’ ಪ್ರಶಸ್ತಿ -2023 ಪ್ರದಾನ ಮಾಡಿ ಮಾತನಾಡಿದರು. ನಮ್ಮ ಜೀವನದಲ್ಲಿ ತಂದೆ ಮತ್ತು ತಾಯಿಗೆ ಮಹತ್ತರ ಸ್ಥಾನವನ್ನು ನೀಡಲಾಗಿದೆ. ಅವರ ಹೆಸರನ್ನು ಜೀವನದುದ್ದಕ್ಕೂ ಶಾಶ್ವತವಾಗಿಸುವ ಕೆಲಸ ಮಕ್ಕಳಿಂದ ಆಗಬೇಕು, ಆ ಕೆಲಸವನ್ನು ಮಂದಾರ ಬಳಗ ಮಾಡುತ್ತಿದೆ. ಇದು ಸಮಾಜಕ್ಕೆ ಮಾದರಿ ಕಾರ್ಯಕ್ರಮವಾಗಿದೆ ಎಂದು ಹೇಳಿ ಶುಭ ಹಾರೈಸಿದರು.


ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕುಂಬ್ರ ಪಂಚಮಿ ಗ್ರೂಪ್ಸ್ ಮಾಲಕ, ಉದ್ಯಮಿ ಮಿತ್ರಂಪಾಡಿ ಪುರಂದರ ರೈಯವರು ಮಾತನಾಡಿ, ಪಡ್ಡಂಬೈಲುಗುತ್ತು ದಿ.ನಾರಾಯಣ ರೈಯವರು ಓರ್ವ ಹೊಟೇಲ್ ಉದ್ಯಮಿಯಾಗಿ ತನ್ನ ಮಕ್ಕಳನ್ನು ಕಷ್ಟದಿಂದಲೇ ಬೆಳೆಸಿದವರು. ಇಂದು ಮಕ್ಕಳು ತನ್ನ ತಂದೆಯ ಹೆಸರನ್ನು ಶಾಶ್ವತವಾಗಿಸುವ ಕೆಲಸವನ್ನು ಅವರ ಹೆಸರಿನಲ್ಲಿ ಪ್ರಶಸ್ತಿ ಕೊಡುವ ಮೂಲಕ ಮಾಡುತ್ತಿದ್ದಾರೆ ಇದು ಸಮಾಜಕ್ಕೆ ಮಾದರಿಯಾದ ಕೆಲಸವಾಗಿದೆ ಎಂದು ಹೇಳಿ ಶುಭ ಹಾರೈಸಿದರು. ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ್ದ ಬೂಡಿಯಾರ್ ಇಂಡೇಸ್ ಗ್ಯಾಸ್ ಮಾಲಕ, ಉದ್ಯಮಿ ಬೂಡಿಯಾರ್ ರಾಧಾಕೃಷ್ಣ ರೈ ಮಾತನಾಡಿ, ಕುಂಬ್ರದ ಒಬ್ಬ ಕಲಾವಿದನಾಗಿ ದೇಶ ವಿದೇಶದಲ್ಲಿ ಹೆಸರು ಮಾಡುವ ಮೂಲಕ ಕುಂಬ್ರಕ್ಕೆ ಕೀರ್ತಿ ತಂದ ಸುಂದರ ರೈ ಮಂದಾರರವರು ತನ್ನ ಮಂದಾರ ಬಳಗದ ಮೂಲಕ ಸಮಾಜದ ಸಾಧಕರನ್ನು ಗುರುತಿಸಿ ಅವರಿಗೆ ತನ್ನ ತಂದೆಯ ಹೆಸರಿನಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸುತ್ತಿರುವುದು ದೇವರು ಮೆಚ್ಚುವ ಕೆಲಸ ಆಗಿದೆ ಎಂದು ಹೇಳಿದರು.

ಅತಿಥಿಗಳಾಗಿ ಒಳಮೊಗ್ರು ಗ್ರಾಪಂ ಅಧ್ಯಕ್ಷ ತ್ರಿವೇಣಿ ಪಲ್ಲತ್ತಾರು ಮಾತನಾಡಿ, ಕುಂಬ್ರದ ಹೆಸರಿನೊಂದಿಗೆ ಮಂದಾರ ಹೆಸರನ್ನು ಕೂಡ ಜಗದಗಲಕ್ಕೆ ಪಸರಿಸಿದ ಸುಂದರ ರೈ ಮಂದಾರರವರು ತನ್ನ ತಂದೆಯ ಹೆಸರಿನಲ್ಲಿ ಸಮಾಜದ ಸಾಧಕರಿಗೆ ಪ್ರಶಸ್ತಿ ನೀಡುತ್ತಿರುವುದು ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ರವಾನೆ ಮಾಡುತ್ತಿದೆ ಎಂದರು. ಪುತ್ತೂರು ಅಕ್ಷಯ ಗ್ರೂಪ್ಸ್ ಮಾಲಕ, ಉದ್ಯಮಿ ಜಯಂತ ನಡುಬೈಲ್ ಮಾತನಾಡಿ, ನಾನೂ ಕೂಡ ಸುಂದರ ರೈ ಮಂದಾರರ ಒಬ್ಬ ಅಭಿಮಾನಿ, ಕಲಾವಿದನಾಗಿ ತನ್ನ ತಂದೆಯ ಹೆಸರಿನಲ್ಲಿ ಸಮಾಜದ ಸಾಧಕರಿಗೆ ಪ್ರಶಸ್ತಿ ನೀಡುತ್ತಿರುವ ಕೆಲಸ ಶ್ಲಾಘನೀಯ ಎಂದರು.

ಪುತ್ತೂರು ಪದ್ಮಶ್ರೀ ಸೋಲಾರ್ ಮಾಲಕ, ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು ಮಾತನಾಡಿ, ತಂದೆ ತಾಯಿಯ ಸೇವೆ ಎಂದರೆ ಅದು ದೇಶ ಸೇವೆಗೆ ಸಮಾನವಾಗಿದೆ. ಇಂದು ಮಂದಾರ ಬಳಗ ತನ್ನ ಹೆತ್ತವರನ್ನು ಜನ್ಮಾಂತರ ನೆನೆಯುವ ಕೆಲಸ ಮಾಡುತ್ತಿದೆ. ಇದು ಎಲ್ಲರಿಗೂ ಮಾದರಿ ಕಾರ್ಯಕ್ರಮವಾಗಿದೆ ಎಂದು ಹೇಳಿ ಶುಭ ಹಾರೈಸಿದರು.
ಕುಂಬ್ರ ವರ್ತಕರ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್‌ಸುಂದರ ರೈ ಕೊಪ್ಪಳ ಮಾತನಾಡಿ,ತಂದೆ ತಾಯಿಯನ್ನು ಕಡೆಗಣಿಸುವ ಈ ಕಾಲದಲ್ಲಿ ತನ್ನ ತಂದೆಯ ಹೆಸರನ್ನು ಶಾಶ್ವತ ಮಾಡುತ್ತಿರುವ ಮಂದಾರ ಬಳಗಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಮಂಗಳೂರು ಎಮ್‌ಆರ್‌ಪಿಎಲ್ ಅಧಿಕಾರಿ ಸೀತಾರಾಮ ರೈ ಕೈಕಾರ ಮಾತನಾಡಿ, ಇದೊಂದು ಸಮಾಜಕ್ಕೆ ಮಾದರಿ ಕಾರ್ಯಕ್ರಮವಾಗಿದೆ.ನಿಷ್ಮಲ್ಮಶದಿಂದ ಮಾಡುವ ಕೆಲಸಕ್ಕೆ ಭಗವಂತನ ಅನುಗ್ರಹ ಇದ್ದೇ ಇರುತ್ತದೆ. ಮಂದಾರ ಬಳಗದಿಂದ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳು ಮೂಡಿಬರಲಿ ಎಂದು ಹೇಳಿ ಶುಭ ಹಾರೈಸಿದರು.

ಕುಂಬ್ರ ಮಾತೃಶ್ರೀ ಅರ್ಥ್ ಮೂವರ‍್ಸ್ ಮಾಲಕ, ಉದ್ಯಮಿ ಮೋಹನದಾಸ ರೈ ಕುಂಬ್ರ ಮಾತನಾಡಿ, ದಿ.ನಾರಾಯಣ ರೈಯವರು ಉದಾರ ಮನಸ್ಸಿನ ವ್ಯಕ್ತಿಯಾಗಿದ್ದರು. ಅಂತಹ ವ್ಯಕ್ತಿಯ ಹೆಸರನ್ನು ಇಂದು ಅವರ ಮಕ್ಕಳು ಸಮಾಜದಲ್ಲಿ ಶಾಶ್ವತಗೊಳಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ವೇದಿಕೆಯಲ್ಲಿ ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅಲ್‌ರಾಯ, ಕುಂಬ್ರ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಪದ್ಮನಾಭ ರೈ ಅರೆಪ್ಪಾಡಿ, ಕುಂಬ್ರ ವಿಶ್ವ ಯುವಕ ಮಂಡಲದ ಅಧ್ಯಕ್ಷ ಅಶೋಕ್ ಪೂಜಾರಿ ಬಡಕ್ಕೋಡಿ ಉಪಸ್ಥಿತರಿದ್ದರು. ರಂಗಭೂಮಿ ಕಲಾವಿದ, ಮಂದಾರ ಬಳಗದ ಸುಂದರ ರೈ ಮಂದಾರ ಸ್ವಾಗತಿಸಿ, ವಂದಿಸಿದರು. ರಾಜೇಶ್ ರೈ ಪರ್ಪುಂಜ, ರಾಜ್‌ಮೋಹನ್ ರೈ ನಿರಾಳ, ಮಲ್ಲಿಕಾ ರೈ ಮಂದಾರ, ಅಶ್ರಫ್ ಸನ್‌ಶೈನ್, ನವೀನ್ ರೈ, ಅಶೋಕ್ ರೈ ದೇರ್ಲ, ನೇಮಿರಾಜ್ ರೈ, ನವೀನ್ ಶೆಟ್ಟಿ ನೆಲ್ಯಾಡಿ, ಚಂದ್ರಶೇಖರ ರೈ, ಉದಯ ರೈ ಮಂದಾರ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ರಂಗಭೂಮಿ ಕಲಾವಿದ ಎಚ್.ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.


ಮನರಂಜಿಸಿದ ‘ಅಮ್ಮೆರ್’ ತುಳು ನಾಟಕ
ಸಭಾ ಕಾರ್ಯಕ್ರಮದ ಬಳಿಕ ಮಂದಾರ ಬಳಗ ಅರ್ಪಿಸುವ, ಅಮ್ಮ ಕಲಾವಿದೆರ್ ಕುಡ್ಲ ಅಭಿನಯಿಸುವ, ಕಲಾಬಿರ್ಸೆ ದೀಪಕ್ ರೈ ಪಾಣಾಜೆ ನಟನೆಯ, ರಂಗ್‌ದ ರಾಜೆ ಸುಂದರ ರೈ ಮಂದಾರ ನಿರ್ದೇಶಿಸಿ ಅಭಿನಯಿಸಿದ ‘ಅಮ್ಮೆರ್’ ಎಂಬ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು. ನೂರಾರು ಪ್ರೇಕ್ಷಕರು ನಾಟಕ ನೋಡಿ ಖುಷಿಪಟ್ಟರು.

ಮೂವರು ಸಾಧಕರಿಗೆ ಮಂದಾರ ಪ್ರಶಸ್ತಿ ಪ್ರದಾನ
ಸಮಾಜ ಸೇವೆಯಲ್ಲಿ ಹೆಸರು ಮಾಡಿರುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರವೀಂದ್ರ ಶೆಟ್ಟಿ ನುಳಿಯಾಲು, ಯುವಕರಿಗೆ ಉದ್ಯೋಗ ಆಸರೆ ನೀಡುತ್ತಿರುವ ವಿದ್ಯಾಮಾತ ಅಕಾಡೆಮಿಯ ಭಾಗ್ಯೇಶ್ ರೈ ಕೆಯ್ಯೂರು ಮತ್ತು ಪರಿಸರ ಸಂರಕ್ಷಣೆಯ ಮೂಲಕ ಗಿಡನೆಟ್ಟು ಕಾಡು ಬೆಳೆಸುತ್ತಿರುವ ಡಾ.ಆರ್.ಕೆ ನಾಯರ್ ಪರವಾಗಿ ಅವರ ತಮ್ಮ ಪಿತಾಂಬರ ನಾಯರ್‌ರವರುಗಳಿಗೆ ಪಡ್ಡಂಬೈಲುಗುತ್ತು ದಿ.ನಾರಾಯಣ ರೈ ಸ್ಮರಣಾರ್ಥ ಮಂದಾರ ಪ್ರಶಸ್ತಿ 2023 ನೀಡಿ ಪುರಸ್ಕೃರಿಸಲಾಯಿತು. ಶಾಲು,ಹಾರ,ಪೇಟಾ,ಫಲಪುಷ್ಪ,ಸ್ಮರಣಿಕೆ ಮೂಲಕ ಸನ್ಮಾನಿಸಿ ಗೌರವಿಸಲಾಯಿತು. ಪ್ರಶಸ್ತಿ ಪುರಸ್ಕೃತರ ಪೈಕಿ ರವೀಂದ್ರ ಶೆಟ್ಟಿ ನುಳಿಯಾಲು ಮಾತನಾಡಿ, ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡಿದ ಮಂದಾರ ಬಳಗದ ಕಾರ್ಯ ದೇವರು ಮೆಚ್ಚುವ ಕೆಲಸವಾಗಿದೆ.ಮಂದಾರ ಅದು ದೇವಲೋಕದ ಪುಷ್ಪವಾಗಿದೆ ಇದಕ್ಕೆ ಅಂತ್ಯ ಎಂಬುದೇ ಇಲ್ಲ ಅಂತಹ ಪ್ರಶಸ್ತಿ ಕೊಟ್ಟಿರುವುದು ಖುಷಿ ತಂದಿದೆ ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು. ಮಂದಾರ ಬಳಗದ ಮಾರ್ಗದರ್ಶಕರು, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ ಅಭಿನಂದನಾ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಲಲಿತಾ ನಾರಾಯಣ ರೈ, ಮಲ್ಲಿಕಾ ರೈ ಮಂದಾರ, ಸುಂದರ ರೈ ಮಂದಾರ, ಉದಯ ರೈ ಮಂದಾರ ಹಾಗೂ ಮಂದಾರ ಬಳಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here