ಪುತ್ತೂರು: ಹಲ್ಲೆ ಪ್ರಕರಣದ ಆರೋಪಿಗಳೆನ್ನಲಾಗಿದ್ದ ಶರಣು ಕುಮಾರ್ ಶೆಟ್ಟಿ ಮತ್ತು ಸತೀಶ್ ಕುಮಾರ್ ಶೆಟ್ಟಿರವರಿಗೆ ಪುತ್ತೂರಿನ ಜಿಲ್ಲಾ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
21/10/2023ರಂದು ಪುತ್ತೂರು ತಾಲೂಕಿನ ನೆಟ್ಟಣಿಗೆ ಮೂಡ್ನೂರು ನಿವಾಸಿ ರಾಮಪ್ರಸಾದ್ ಅವರ ಪತ್ನಿಯ ಬಾಬ್ತು ಜಾಗಕ್ಕೆ ಹಿಟಾಚಿಯನ್ನು ಶರಣು ಕುಮಾರ್ ಶೆಟ್ಟಿ, ಸತೀಶ್ ಕುಮಾರ್ ಶೆಟ್ಟಿ ಮತ್ತು ಇನ್ನೊಬ್ಬ ವ್ಯಕ್ತಿ ತೆಗೆದುಕೊಂಡು ಹೋಗಿ ಅಕ್ರಮ ಪ್ರವೇಶ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ, ರಾಮ್ ಪ್ರಸಾದ್‌ರವರ ಪರ್ಸ್ ಮತ್ತು ಮೊಬೈಲ್‌ನ್ನು ಕಿತ್ತುಕೊಂಡು, ನಂತರ ಜೀವ ಬೆದರಿಕೆ ವೊಡ್ಡಿರುವುದಾಗಿದೆ ಎಂದು ರಾಮಪ್ರಸಾದ್ ಆಳ್ವ ಅವರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರನ್ನು ಸಲ್ಲಿಸಿದ್ದರು. ಈ ದೂರಿನಂತೆ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 447, 324,323,392,342,505 ಜೊತೆಗೆ 34 ಕಾಯ್ದೆಯ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಈ ಮಧ್ಯೆ ಶರಣು ಕುಮಾರ್ ಶೆಟ್ಟಿ ಮತ್ತು ಸತೀಶ್ ಶೆಟ್ಟಿರವರು ತಮ್ಮ ಪರ ವಕೀಲರಾದ ಕಜೆ ಲಾ ಚೇಂಬರ್ಸ್‌ನ ಮುಖ್ಯಸ್ಥರಾದ ಮಹೇಶ್ ಕಜೆರವರ ಮುಖಾಂತರ ಪುತ್ತೂರಿನ ಐದನೇ ಹೆಚ್ಚುವರಿ ಮತ್ತು ಜಿಲ್ಲಾ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಇದರ ವಾದ ಪ್ರತಿವಾದವನ್ನು ಆಲಿಸಿದ ಪುತ್ತೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಭಾರ ನ್ಯಾಯಾಧೀಶರಾದ ಮಂಗಳೂರಿನ ಆರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಾಂತರಾಜು ಎಸ್.ವಿ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದಾರೆ.