*ಸಿಂಹವನ ಕ್ಯಾಂಪಸ್ ಗೆ ರವೀಂದ್ರ ಶೆಟ್ಟಿಯವರು ಕಿರೀಟವೆನಿಸಿದ್ದಾರೆ-ಯದುಕುಮಾರ್
*ರವೀಂದ್ರ ಶೆಟ್ಟಿಯವರ ಸೇವಾಗುಣವನ್ನು ಸದಾ ಸ್ಮರಿಸುತ್ತೇವೆ-ಶಶಿಕಲಾ ಸಿ.ಎಸ್
*ರವೀಂದ್ರ ಶೆಟ್ಟಿಯವರಿಗೆ ರಾಜ್ಯ ಪ್ರಶಸ್ತಿ ಒಲಿಯಲಿ-ದಾಮೋದರ್ ಪಾಟಾಳಿ
*ರವೀಂದ್ರ ಶೆಟ್ಟಿಯವರಿಗೆ ಪ್ರಶಸ್ತಿ ಸಿಕ್ಕಿರುವುದು ಹೆಮ್ಮೆಯ ವಿಚಾರವಾಗಿದೆ-ಪವಿತ್ರ ರೈ
*ಏನು ಸಹಾಯ ಬೇಕು ಹೇಳಿ, ನಾನು ಒದಗಿಸಿ ಕೊಡುತ್ತೇನೆ-ಪುಟ್ಟಣ್ಣ ನಾಯ್ಕ
ಪುತ್ತೂರು:ಆರ್ಯಾಪು ಗ್ರಾಮ ಹಾಗೂ ಮುಕ್ರಂಪಾಡಿ ಸಿಂಹವನ ಗ್ರಾಮಸ್ಥರಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎನ್. ರವೀಂದ್ರ ಶೆಟ್ಟಿ ನುಳಿಯಾಲುರವರಿಗೆ ಸನ್ಮಾನ ಕಾರ್ಯಕ್ರಮ ಡಿ.3 ರಂದು ರವೀಂದ್ರ ಶೆಟ್ಟಿಯವರ ಮುಕ್ರಂಪಾಡಿ ನುಳಿಯಾಲು ನಿವಾಸದಲ್ಲಿ ನೆರವೇರಿತು.
ಸಿಂಹವನ ಕ್ಯಾಂಪಸ್ ಗೆ ರವೀಂದ್ರ ಶೆಟ್ಟಿಯವರು ಕಿರೀಟವೆನಿಸಿದ್ದಾರೆ-ಯದುಕುಮಾರ್:
ಡಿಸಿಆರ್ ನಿವೃತ್ತ ವಿಜ್ಞಾನಿ, ಹಿರಿಯರಾದ ಯದುಕುಮಾರ್ ಮಾತನಾಡಿ, ತಾನು ಜವಾಬ್ದಾರಿ ವಹಿಸಿಕೊಂಡ ಕಾರ್ಯವನ್ನು ಅತ್ಯಂತ ಜವಾಬ್ದಾರಿಯಿಂದ ಏಕಾಗ್ರತೆಯಿಂದ ಮಾಡಿ ಮುಗಿಸುವ ತನಕ ವಿರಮಿಸದಿರುವ ಸಿದ್ಧಾಂತ ರವೀಂದ್ರ ಶೆಟ್ಟಿಯವರದು. ಅದಕ್ಕೆ ತಕ್ಕ ಉದಾಹರಣೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆದ ಶ್ರೀ ಗಣೇಶೋತ್ಸವ ಕಾರ್ಯಕ್ರಮ. ನುಳಿಯಾಲು ಕುಟುಂಬದಲ್ಲಿ ಸಾಮಾಜಿಕ ಕಳಕಳಿ ಎನ್ನುವುದು ಮೇಳೈಸಿದೆ. ರವೀಂದ್ರ ಶೆಟ್ಟಿಯವರು ಸಿಂಹವನ ಕ್ಯಾಂಪಸ್ ಗೆ ಬಂದ ನಂತರ ನಿಜಕ್ಕೂ ಈ ಕ್ಯಾಂಪಸ್ಸಿಗೆ ಕಿರೀಟವೆನಿಸಿದೆ ಎಂದರು.
ರವೀಂದ್ರ ಶೆಟ್ಟಿಯವರ ಸೇವಾಗುಣವನ್ನು ಸದಾ ಸ್ಮರಿಸುತ್ತೇವೆ-ಶಶಿಕಲಾ ಸಿ.ಎಸ್:
ನಗರಸಭಾ ಸದಸ್ಯೆ ಶ್ರೀಮತಿ ಶಶಿಕಲಾ ಸಿ.ಎಸ್ ಮಾತನಾಡಿ, ರವೀಂದ್ರ ಶೆಟ್ಟಿಯವರದ ಸಾಮಾಜಿಕ ಕಳಕಳಿ ಮೆಚ್ಚುವಂತಹುದು. ಹಲವಾರು ಮಂದಿ ಫಲಾನುಭವಿಗಳು ರವೀಂದ್ರ ಶೆಟ್ಟಿಯವರ ಕೈಯಿಂದ ನೆರವನ್ನು ಪಡೆದುಕೊಂಡಿದ್ದಾರೆ. ಇಂತಹ ಕೊಡುಗೈ ದಾನಿ ನಮ್ಮ ಮನೆಯ ಹತ್ತಿರ ಇರುವುದು ನಮಗೆ ಹೆಮ್ಮೆ ಎನಿಸಿದೆ. ಧಾರ್ಮಿಕ ಕ್ಷೇತ್ರ, ಸಾರ್ವಜನಿಕ ಬದುಕಿನಲ್ಲಿ ಅವರ ಸೇವಾ ಗುಣವನ್ನು ನಾವು ಸದಾ ಸ್ಮರಿಸುತ್ತೇವೆ ಎಂದರು.
ರವೀಂದ್ರ ಶೆಟ್ಟಿಯವರಿಗೆ ರಾಜ್ಯ ಪ್ರಶಸ್ತಿ ಒಲಿಯಲಿ-ದಾಮೋದರ್ ಪಾಟಾಳಿ:
ಜೇಸಿಐನ ದಾಮೋದರ್ ಪಾಟಾಳಿ ಮಾತನಾಡಿ, ಎಂ.ಎಲ್.ಎ ಹುದ್ದೆಗಿಂತ ಜಾಸ್ತಿ ಶಕ್ತಿಯಿರುವ ಮಂಡಲ ಪ್ರಧಾನ ಹುದ್ದೆಯಲ್ಲಿ ರವೀಂದ್ರ ಶೆಟ್ಟಿಯವರು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರು ಸಂಪ್ಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷರಾದ ಬಳಿಕ ಶ್ರೀ ಕ್ಷೇತ್ರಕ್ಕೆ ಧೈರ್ಯ ಬಂದಿದೆ. ದೇವಸ್ಥಾನದ ಆರ್ಥಿಕತೆಯ ಕ್ರೋಢೀಕರಣ, ಶಿಸ್ತುಬದ್ಧ ಕಾರ್ಯಕ್ರಮಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಊರಿನ ಸನ್ಮಾನ ಎನ್ನುವುದು ಅದು ಎಲ್ಲಕ್ಕಿಂತ ದೊಡ್ಡ ಸನ್ಮಾನವಾಗಿದೆ. ಮುಂದಿನ ದಿನಗಳಲ್ಲಿ ರವೀಂದ್ರ ಶೆಟ್ಟಿಯವರಿಗೆ ರಾಜ್ಯ ಪ್ರಶಸ್ತಿ ಒಲಿದು ಬರಲಿ ಎಂದರು.
ರವೀಂದ್ರ ಶೆಟ್ಟಿಯವರಿಗೆ ಪ್ರಶಸ್ತಿ ಸಿಕ್ಕಿರುವುದು ಹೆಮ್ಮೆಯ ವಿಚಾರವಾಗಿದೆ-ಪವಿತ್ರ ರೈ:
ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯ ಪವಿತ್ರ ರೈ ಬಾಳಿಲ ಮಾತನಾಡಿ, ಧಾರ್ಮಿಕ, ಸಾಮಾಜಿಕ, ಉದ್ಯಮ ಕ್ಷೇತ್ರದಲ್ಲಿ ರವೀಂದ್ರ ಶೆಟ್ಟಿಯವರು ಅದ್ವಿತೀಯ ಸಾಧನೆಗೈಯ್ದಿದ್ದಾರೆ. ಕೊರೋನಾ ಮಹಾಮಾರಿ ಸಂದರ್ಭದಲ್ಲಿ ಮನೆ ಮನೆಗೆ ದಿನಸಿ ಸಾಮಾಗ್ರಿಗಳನ್ನು ತಲುಪಿಸುವ ಮೂಲಕ ಜನಸಾಮಾನ್ಯರು ಆಹಾರಕ್ಕೆ ಪರದಾಡುವುದನ್ನು ಕಡಿಮೆ ಮಾಡಿದ್ದಾರೆ. ಸಿಂಹವನದಲ್ಲಿನ ಕೊರಗಜ್ಜ ದೈವಸ್ಥಾನದಲ್ಲಿ ಸುಸಜ್ಜಿತ ಸಭಾಭವನವನ್ನು ನಿರ್ಮಿಸಿ ಭಕ್ತರಿಗೆ ಶ್ರೇಯಸ್ಸನ್ನು ಒದಗಿಸಿಕೊಟ್ಟಿರುವ ರವೀಂದ್ರ ಶೆಟ್ಟಿಯವರಿಗೆ ಪ್ರಶಸ್ತಿ ಸಿಕ್ಕಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
ಏನು ಸಹಾಯ ಬೇಕು ಹೇಳಿ, ನಾನು ಒದಗಿಸಿ ಕೊಡುತ್ತೇನೆ-ಪುಟ್ಟಣ್ಣ ನಾಯ್ಕ
ಸ್ಥಳೀಯ ಹಿರಿಯರಾದ ಪುಟ್ಟಣ್ಣ ನಾಯ್ಕರವರು ಮಾತನಾಡಿ, ಸಮಾಜ ಸೇವೆಗೆ ರವೀಂದ್ರ ಶೆಟ್ಟಿಯವರಿಗೆ ಪ್ರಶಸ್ತಿ ಲಭಿಸಿರುವುದು ಈ ಭಾಗಕ್ಕೆ ಹೆಮ್ಮೆ ತಂದಿದೆ. ನಿಮಗೆ ಏನು ಸಹಾಯ ಬೇಕು ಹೇಳಿ, ನಾನು ಒದಗಿಸಿ ಕೊಡುತ್ತೇನೆ ಎನ್ನುವುದು ರವೀಂದ್ರ ಶೆಟ್ಟಿಯವರ ದೊಡ್ಡ ಗುಣ ಮಾತ್ರವಲ್ಲ ನಮಗೆ ಏನೇ ಕಷ್ಟ ಬಂದರೂ ಅವರು ಪರಿಹಾರ ಮಾಡುತ್ತಿದ್ದರು ಎಂದು ಅವರು ಭಾವುಕರಾಗಿ ನುಡಿದರು.
ಸಭೆಯಲ್ಲಿ ಸನ್ಮಾನಿತ ರವೀಂದ್ರ ಶೆಟ್ಟಿಯವರ ಪತ್ನಿ ಅಮಿತಾ ಆರ್.ಶೆಟ್ಟಿ, ಪುತ್ರರಾದ ಸೂರಜ್ ಕುಮಾರ್ ಶೆಟ್ಟಿ, ಸುಜೀರ್ ಕುಮಾರ್ ಶೆಟ್ಟಿ, ಸುಜಿತ್ ಕುಮಾರ್ ಶೆಟ್ಟಿ ಹಾಗೂ ಸ್ಥಳೀಯರಾದ ದಿನೇಶ್ ಗೌಡ ಪಂಜಳ, ಮೋಹನ ಸಿಂಹವನ, ದೇವರಾಜ್ ಸಿಂಹವನ, ಯಶೋಧ ಟೀಚರ್, ಸುಲಕ್ಷಣಾ ಮಹಾಬಲೇಶ್ವರ ಭಟ್, ರವಿಕಲಾ ಸಿಂಹವನ, ಜಯಂತಿ ಕುಕ್ಕಾಡಿ, ರತ್ನಾಕರ್ ನಾಯಕ್, ಕೇಶವ ಸುವರ್ಣ ಮೇರ್ಲ, ಉಮಾವತಿ, ಮಣಿ ಕೆ.ಪಿ, ಲಲಿತ ವೈ ಅಪೂರ್ವ ಲೇಔಟ್ ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು. ಆನಂದ ಸಿಂಹವನ ಸ್ವಾಗತಿಸಿ, ಮೋಹನ ಸಿಂಹವನ ವಂದಿಸಿದರು.
ದೇವರ ಅನುಗ್ರಹ, ಜನರ ಆಶೀರ್ವಾದದಿಂದ ಪ್ರಶಸ್ತಿ ಲಭಿಸಿದೆ…
ಧಾರ್ಮಿಕ ಕ್ಷೇತ್ರವಾಗಲಿ, ಸಾಮಾಜಿಕ ಕ್ಷೇತ್ರವಾಗಲಿ ನನ್ನ ಸಮಾಜ ಸೇವೆಯನ್ನು ಗುರುತಿಸಿ ನನಗೆ ಈ ಪ್ರಶಸ್ತಿ ಲಭಿಸಿರುತ್ತದೆ. ನಾನೆಂದೂ ಪ್ರಶಸ್ತಿಗೆ ಅರ್ಜಿ ಹಾಕಿದವನಲ್ಲ. ಪ್ರಶಸ್ತಿ ಬರುತ್ತೆ ಎನ್ನುವ ನಿರೀಕ್ಷೆನೂ ಇರಲಿಲ್ಲ. ನಾನು ಆ ಪ್ರಶಸ್ತಿಗೆ ಅರ್ಹನೊ ಎಂಬುದು ಗೊತ್ತಿಲ್ಲ. ಜಿಲ್ಲಾ ಪ್ರಶಸ್ತಿ ಲಭಿಸುವುದು ಸುಲಭದ ಮಾತಲ್ಲ. ಯಾಕೆಂದ್ರೆ ಅದು ಸಮುದ್ರ. ಸಂಪ್ಯ ದೇವಸ್ಥಾನ, ಮೂರು ಕೊರಗಜ್ಜ ಕ್ಷೇತ್ರಗಳ ಅಭಿವೃದ್ಧಿಗೆ ದುಡಿದಿದ್ದೇನೆ. ಸೇವೆ ಎಂಬ ದೃಷ್ಟಿಯಿಂದ ನಾನು ಎಲ್ಲವನ್ನು ಮಾಡಿರುವುದಾಗಿದೆ. ಜನರು ನನ್ನ ಮೇಲಿಟ್ಟಿರುವ ಪ್ರೀತಿಗೆ ಕೃತಜ್ಞತೆಗಳು. ದೇವರ ಅನುಗ್ರಹದಿಂದ ಹಾಗೂ ಜನರ ಆಶೀರ್ವಾದದಿಂದ ನನಗೆ ಈ ಪ್ರಶಸ್ತಿ ಲಭಿಸಿದೆ ಎಂದು ನಾನು ಮನಗಂಡಿದ್ದೇನೆ.
-ಎನ್.ರವೀಂದ್ರ ಶೆಟ್ಟಿ ನುಳಿಯಾಲು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು