ಪುತ್ತೂರು: ಭಾರತೀಯರು ಎಂದರೆ ಜ್ಞಾನದ ಬೆಳಕನ್ನು ಹೆಚ್ಚು ಆನಂದಿಸುವವರು. ನಮ್ಮ ರಾಷ್ಟ್ರದ ಸುದೀರ್ಘ ಇತಿಹಾಸ ಗಮನಿಸಿದರೆ ನಮಗೆ ಬೇಕಾದ ಬೆಳಕು ನಮ್ಮಲ್ಲಿದೆ. ನಾವು ಇಡೀ ಜಗತ್ತಿಗೆ ಬೆಳಕು ಕೊಡುವಷ್ಟು ಅರಿತವರು ಆದರೆ ಇದನ್ನು ಈಗ ಪ್ರತಿಯೊಬ್ಬರು ಮರೆತಿದ್ದಾರೆ. ಸಾಹಿತ್ಯ ಬೇರೆ ಬೇರೆ ಭಾಷೆಗಳಲ್ಲಿ ಹಂಚಿ ಹೋಗಿರಬಹುದು ಆದರೆ ಅದರ ಮೂಲ ಭಾರತವೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಪುತ್ತೂರು ಸಮಿತಿಯ ಅಧ್ಯಕ್ಷ ಗಣರಾಜ ಕುಂಬ್ಳೆ ತಿಳಿಸಿದರು. ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿನ ಕನ್ನಡ ಸಂಘ, ಸಂಸ್ಕೃತ ಸಂಘ , ಲಲಿತ ಕಲಾ ಸಂಘ ಮತ್ತು ಐಕ್ಯೂಎಸಿ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಪುತ್ತೂರು ಇದರ ಸಹಯೋಗದಲ್ಲಿ ನಡೆದ ಕನಕದಾಸ ಜಯಂತಿ ದಾಸ ಸಾಹಿತ್ಯ- ಒಳ ನೋಟಗಳು ಎನ್ನುವ ವಿಚಾರ ಸಂಕಿರಣದಲ್ಲಿ ಅಧ್ಯಕ್ಷರಾಗಿ ಮಾತನಾಡಿದರು.
ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ ಕೆ. ಎನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ದಾಸ ಪರಂಪರೆ ಎಂಬುದು ಒಂದು ದೊಡ್ಡ ಶಕ್ತಿ. ಸಮಾಜವನ್ನು ತಿದ್ದುವ ಕೆಲಸವನ್ನು ದಾಸ ಪರಂಪರೆ ಮಾಡುತ್ತದೆ. ವಿದ್ಯಾರ್ಥಿಗಳು ನಿರಂತರ ಅಧ್ಯಯನ ಶೀಲರಾದರೆ ಸಮಾಜ ಸೇವೆ ಮಾಡುವ ಸ್ಪೂರ್ತಿ ಬೆಳೆಯುತ್ತದೆ ಎಂದು ಹೇಳಿದರು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಬೆಳ್ತಂಗಡಿ ಇಲ್ಲಿನ ಅಧ್ಯಕ್ಷ ಪ್ರೊ. ಗಣಪತಿ ಭಟ್ ಕುಳಮರ್ವ ಕಾರ್ಯಕ್ರಮದಲ್ಲಿ ದಿಕ್ಸೂಚಿ ಮಾತುಗಳನ್ನಾಡುತ್ತ, ದಾಸರ ಚಿಂತನೆಗಳು ವಿದ್ಯಾರ್ಥಿಗಳಿಗೆ ಮಾರ್ಗಸೂಚಿಯಾಗಿದೆ. ಈ ಚಿಂತನೆಗಳು ಒಳ್ಳೆಯ ಬದುಕನ್ನು ಹೇಗೆ ಬದುಕಬೇಕು ಎಂಬುದನ್ನು ತಿಳಿಸುತ್ತದೆ ಎಂದು ತಿಳಿಸಿದರು.
ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀಪತಿ ಕಲ್ಲೂರಾಯ ಅಧ್ಯಕ್ಷೀಯ ಮಾತನ್ನಾಡಿ, ದಾಸ ಸಾಹಿತ್ಯದ ತಿರುಳುಗಳು ಯುವ ಜನಾಂಗಕ್ಕೆ ತಲುಪಿಸುವ ಕೆಲಸ ಆಗಬೇಕು ಹಾಗೂ ಯುವ ಜನಾಂಗವನ್ನು ಭಾರತ ನಿರ್ಮಾಣಕ್ಕೆ ತಯಾರು ಮಾಡುವ ಜವಾಬ್ದಾರಿ ನಮ್ಮಲ್ಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗಾಯಕ ರಾಮಕೃಷ್ಣ ಕಾಟುಕುಕ್ಕೆ ಮಾತನಾಡುತ್ತಾ, ನಮ್ಮ ಬದುಕನ್ನು ಯಾವ ರೀತಿ ಅರ್ಥೈಸಿಕೊಂಡು ಬಾಳಬೇಕು ಎಂಬುದನ್ನು ತಿಳಿಸಲು ಕನಕದಾಸರ ಸಾಹಿತ್ಯಗಳು ಉತ್ತಮ. ಬದುಕನ್ನು ಬದಲಾವಣೆ ಮಾಡುವಂತಹ ವಿಚಾರಗಳನ್ನು ಕನಕದಾಸರು ತಮ್ಮ ಸಾಹಿತ್ಯದಲ್ಲಿ ಹಂಚಿಕೊಂಡಿದ್ದಾರೆ. ದಾಸರು ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರವಾದದ್ದು. ಜಾತಿ ಪದ್ಧತಿಯನ್ನು ದೂರ ಮಾಡಿದಂತವರು ಇವರು. ಶಾಂತಿ ನೆಮ್ಮದಿಗಳಿಲ್ಲದ ಕಾಲಘಟ್ಟದಲ್ಲಿ ನಾವಿದ್ದೇವೆ. ಅಮೂಲ್ಯವಾದ ಸಮಯ ನಮ್ಮಲ್ಲಿದೆ. ಭಗವಂತನ ಸ್ಮರಣೆಯೊಂದಿಗೆ ಮತ್ತು ಉತ್ತಮ ವಿಚಾರದೊಂದಿಗೆ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ ದಕ್ಷಿಣ ಕನ್ನಡ ಸಮಿತಿಯ ಜಿಲ್ಲಾಧ್ಯಕ್ಷರು,ಪತ್ರಕರ್ತ ಪಿ.ಬಿ ಹರೀಶ ರೈ ಮಾತನಾಡಿ, ಭಾರತದಲ್ಲಿ ಹೆಚ್ಚಾಗಿ ಅಸ್ಪೃಶ್ಯತೆಯನ್ನು ಕಾಣುತ್ತೇವೆ. ಆದರೆ ನಮ್ಮೆಲ್ಲರ ದೃಷ್ಟಿಕೋನ ಒಂದಾಗಬೇಕಾದರೆ ದಾಸರ ಸಾಹಿತಿಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಎಂದು ಅಭಿಪ್ರಾಯಪಟ್ಟರು.
ಈ ಕಾರ್ಯಕ್ರಮದಲ್ಲಿ ವಿದ್ವತ್ ಗೋಷ್ಠಿಯನ್ನು ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಶ್ರೀಶಕುಮಾರ ಎಂ. ಕೆ ಸಂಪನ್ಮೂಲ ವ್ಯಕ್ತಿಯಾಗಿ ಹಾಗೂ ಇದರ ಅಧ್ಯಕ್ಷತೆಯನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಪುತ್ತೂರು ಸಮಿತಿಯ ಗೌರವಾಧ್ಯಕ್ಷರು ಪ್ರೊ. ವಿ. ಬಿ ಅರ್ಥಿಕಜೆ ವಹಿಸಿದ್ದರು ಹಾಗೂ ವಿದ್ಯಾರ್ಥಿ ಗೋಷ್ಠಿಯಲ್ಲಿ ದೀಪ್ತಿ. ಎ ತೃತೀಯ ಬಿ.ಎ, ನವೀನ್ ಕೃಷ್ಣ ಎಸ್ ತೃತೀಯ ಬಿ.ಕಾಂ, ಸಂಶೀನಾ ದ್ವಿತೀಯ ಬಿ.ಎ ವಿಷಯ ಮಂಡನೆ ಮಾಡಿ ಹಾಗೂ ಇದರ ಅಧ್ಯಕ್ಷತೆಯನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಪುತ್ತೂರು ಸಮಿತಿಯ ಕಾರ್ಯದರ್ಶಿ ಸತೀಶ್ ಇರ್ದೆ ವಹಿಸಿದ್ದರು.
ವೇದಿಕೆಯಲ್ಲಿ ಕಾರ್ಯಕ್ರಮದ ಸಂಯೋಜಕ ಡಾ. ಮನಮೋಹನ. ಎಂ, ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್, ಲಲಿತ ಕಲಾ ಸಂಘದ ಸಂಯೋಜಕಿ ವಿದ್ಯಾ.ಎಸ್ ಉಪಸ್ಥಿತರಿದ್ದರು.