





ಪುತ್ತೂರು: ನಮ್ಮ ಮಕ್ಕಳು ರಾಷ್ಟ್ರಮಟ್ಟದಲ್ಲಿ ಮುಂದೆ ಬರಬೇಕು. ಈ ನಿಟ್ಟಿನಲ್ಲಿ ಮಕ್ಕಳ ಉತ್ತಮ ಚಟುವಟಿಕೆಗಳಿಗೆ ದೇವಸ್ಥಾನದಿಂದ ಪೂರ್ಣ ಸಹಕಾರ ನೀಡುತ್ತೇವೆ ಎಂದು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಹೇಳಿದರು.


ಪುತ್ತೂರು ತಾಲೂಕು ಚೆಸ್ ಅಕಾಡೆಮೆಯಿಂದ ಮಹಾಲಿಂಗೇಶ್ವರ ದೇವಳದ ಸಭಾಭವನದಲ್ಲಿ ನ.9 ರಂದು ನಡೆದ ಪಿಟಿಸಿಎ ಟ್ರೋಪಿಯಲ್ಲಿ ಅವರು ಮಾತನಾಡಿದರು. ನಮ್ಮ ದೇಶ ಜನಸಂಖ್ಯೆಯಲ್ಲಿ 2 ನೇ ಸ್ಥಾನ, ಆದರೆ ಕ್ರಿಡೆಯಲ್ಲಿ 52 ನೇ ಸ್ಥಾನದಲ್ಲಿದೆ. ಈ ನಿಟ್ಟಿನಲ್ಲಿ ಕ್ರೀಡೆಯಲ್ಲೂ ಮುಂದೆ ಬರಬೇಕು. ಇದಕ್ಕಾಗಿ ಯುವ ಜನತೆಗೆ ಪ್ರೋತ್ಸಾಹ ಕೊಡಬೇಕು. ನಮ್ಮ ಮಕ್ಕಳಿ ರಾಷ್ಟ್ರಮಟ್ಟದಲ್ಲಿ ಮುಂದೆ ಬರಬೇಕೆಂದು ದೇವಸ್ಥಾನದಿಂದ ಪ್ರೋತ್ಸಾಹ ಕೊಡುತ್ತಿದ್ದೇವೆ ಎಂದ ಅವರು ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ. ಗುರಿಯನ್ನು ತಲುಪುವ ಪ್ರಯತ್ನ ಇರಲಿ. ಸೋಲು ಗೆಲುವು ಇದ್ದದ್ದೆ. ಆದರೆ ಹೆತ್ತವರು ಒತ್ತಡ ಹಾಕಬೇಡಿ ಎಂದರು.






ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ರವಿಕೃಷ್ಣ ಕಲ್ಲಾಜೆ ಅವರು ಮಾತನಾಡಿ, ಮಕ್ಕಳ ಕಲಿಯುವಿಕೆಗೆ ಚೆಸ್ ಪೂರಕ ಎಂದರು. ಡಾ ಗೋಪಿನಾಥ ಪೈ ಅವರು ಮಾತನಾಡಿ ಯಾವ ಕ್ಷೇತ್ರಕ್ಕೂ ಹೋದರೂ ಚೆಸ್ ಬಹಳ ಅಗತ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕರ್ನಾಟಕ ಚೆಸ್ ಅಸೋಷಿಯೇಶನ್ ನ ಉಪಾಧ್ಯಕ್ಷ ರಮೇಶ್ ಕೋಟೆ ಅವರು ಮಾತನಾಡಿ, ಪ್ರಸ್ತುತ ದಿನದಲ್ಲಿ ಚೆಸ್ ನ ಅಧಿಪತಿಯನ್ನು ಭಾರತ ಹಿಡಿದುಕೊಂಡಿದೆ. ದ.ಕ ಜಿಲ್ಲೆಯಲ್ಲಿ ಪುತ್ತೂರು ಚೆಸ್ ಗೆ ಪ್ರಮುಖ ಕೇಂದ್ರ. ಇವತ್ತು ಅದು ತನ್ನ ಕಾರ್ಯಕ್ಷೇತ್ರವನ್ನು ಮುಂದುವರಿಸಿದೆ. ದ ಕ ಜಿಲ್ಲೆಗೂ ಬೆಸ್ಟ್ ಅವಾರ್ಡ್ ಸಿಕ್ಕಿದೆ. ದ ಕ ಜಿಲ್ಲೆಯಲ್ಲೇ ಡಿ.26 ರಿಂದ ನ್ಯಾಷನಲ್ ಲೆವೆಲ್ ಟೂರ್ನಮೆಂಟ್ ನಡೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಚೆಸ್ ನಲ್ಲಿ ಸಾಧನೆಗೈದ ಪಿಟಿಸಿಎ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಸಂಘಟಕರಾದ ಡಾ.ಎಸ್ ಎಮ್ ಪ್ರಸಾದ್, ಉಮಾಪ್ರಸನ್ನ, ದಿನೇಶ್ ಪ್ರಸನ್ನ , ಚೀಫ್ ಆರ್ಬಿಟರ್ ಸಾಕ್ಷತ್ ಯು ಕೆ , ದಾಮೋದರ್, ಪ್ರಕಾಶ್ ರೈ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.









