ಅಂಬೇಡ್ಕರ್ ದೇಶ ಕಂಡ ಓರ್ವ ಮಹಾನ್ ನಾಯಕ: ಮಹಮ್ಮದ್ ಬಡಗನ್ನೂರು
ಪುತ್ತೂರು: ಸಾಮಾಜಿಕ ಸಮಾನತೆ ಮತ್ತು ಅಸ್ಪೃಶ್ಯತಾ ನಿವಾರಣೆಗಾಗಿ ತನ್ನ ಬದುಕನ್ನೇ ಮುಡುಪಾಗಿಟ್ಟ ಓರ್ವ ಮಹಾನ್ ನಾಯಕ ಇದ್ದರೆ ಅವರು ಡಾ.ಬಿ.ಆರ್.ಅಂಬೇಡ್ಕರ್ ಆಗಿದ್ದಾರೆ. ಅಂಬೇಡ್ಕರ್ರವರು ಹಾಕಿಕೊಟ್ಟ ಸಂವಿಧಾನವೇ ನಮಗೆ ಇಂದು ಬದುಕಿನ ದಾರಿದೀಪವಾಗಿದೆ. ಇಂತಹ ಮಹಾನ್ ನಾಯಕನ ಬಗ್ಗೆ ಓದಿ ತಿಳಿದುಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅಂಬೇಡ್ಕರ್ ದೇಶ ಕಂಡ ಓರ್ವ ಮಹಾನ್ ನಾಯಕರಾಗಿದ್ದಾರೆ ಎಂದು ಪುತ್ತೂರು ತಾಪಂ ಮಾಜಿ ಅಧ್ಯಕ್ಷ, ರಾಜ್ಯಮಟ್ಟದ ತರಬೇತುದಾರ ಮಹಮ್ಮದ್ ಬಡಗನ್ನೂರು ಹೇಳಿದರು.
ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ವರ ಮಾಧುರ್ಯ ಸಂಗೀತ ಬಳಗ ಪುತ್ತೂರು ಮತ್ತು ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯ ವಸತಿ ನಿಲಯ ಹಾರಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಅಂಬೇಡ್ಕರ್ ಓದು ಕಾರ್ಯಕ್ರಮ ಪ್ರಯುಕ್ತ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಭಾಷಣ ಸ್ಪರ್ಧೆಯನ್ನು ಡಿ.9ರಂದು ಹಾರಾಡಿ ಬಾಲಕಿಯ ವಸತಿ ನಿಲಯದಲ್ಲಿ ಅಂಬೇಡ್ಕರ್ ಭಾವಚಿತ್ರದ ಎದುರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ ಮಾತನಾಡಿ,ಅಂಬೇಡ್ಕರ್ ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಟ ಮಾಡಿದ್ದು ಅಲ್ಲದೆ ಕಾನೂನು ಮತ್ತು ಅರ್ಥಶಾಸ್ತ್ರದ ವಿಷಯದಲ್ಲೂ ಬಹಳಷ್ಟು ಸಾಧನೆಗಳನ್ನು ಮಾಡಿದ್ದಾರೆ. ದೇಶ ಕಂಡ ಮಹಾನ್ ನಾಯಕನ ಬಗ್ಗೆ ನಾವೆಲ್ಲರೂ ತಿಳಿದುಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಜನಾರ್ದನ್ ಹಮ್ಮಿಕೊಂಡ ಕಾರ್ಯಕ್ರಮ ಒಂದು ಒಳ್ಳೆಯ ಕಾರ್ಯಕ್ರಮ ಆಗಿದೆ ಎಂದು ಹೇಳಿ ಶುಭ ಹಾರೈಸಿದರು.
ಸಭಾಧ್ಯಕ್ಷತೆ ವಹಿಸಿದ್ದ ನಿಲಯ ಮೇಲ್ವಿಚಾರಕಿ ಅಕ್ಷತಾ ಪೈ ಮಾತನಾಡಿ, ಅಂಬೇಡ್ಕರ್ರವರ ಓದುವ ಹವ್ಯಾಸವೇ ಅವರನ್ನು ಅತೀ ಎತ್ತರಕ್ಕೆ ಬೆಳೆಸಿದೆ ಎಂದರೆ ತಪ್ಪಾಗಲಾರದು ಆದ್ದರಿಂದ ವಿದ್ಯಾರ್ಥಿಗಳು ಕೂಡ ಓದುವ ಹವ್ಯಾಸವನ್ನು ಜೀವನದಲ್ಲಿ ಬೆಳೆಸಿಕೊಳ್ಳಬೇಕು ಎಂದರು. ಪತ್ರಕರ್ತ ಸಿಶೇ ಕಜೆಮಾರ್, ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಲಕ್ಷ್ಮೀ, ಜಯಶ್ರೀ ಶುಭ ಹಾರೈಸಿದರು. ಸ್ವರ ಮಾಧುರ್ಯ ಸಂಗೀತ ಬಳಗದ ಸಲಹೆಗಾರ ಜನಾರ್ದನ್ ಬಿ. ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ವಂದಿಸಿದರು. ವಿದ್ಯಾರ್ಥಿನಿಯರಾದ ಹರ್ಷಿತಾ ಮತ್ತು ಬಳಗದವರು ಪ್ರಾರ್ಥಿಸಿದರು. ವಿದ್ಯಾರ್ಥಿನಿ ರಶ್ಮೀ ಕಾರ್ಯಕ್ರಮ ನಿರೂಪಿಸಿದರು.
ಅಂಬೇಡ್ಕರ್ ಓದು ಭಾಷಣ ಸ್ಪರ್ಧೆ
ಅಂಬೇಡ್ಕರ್ ಓದು ಕಾರ್ಯಕ್ರಮದ ಅಂಗವಾಗಿ ಅಂಬೇಡ್ಕರ್ ಅವರ ತತ್ವ ಮತ್ತು ಸಿದ್ಧಾಂತಗಳ ಮಹತ್ವ ಎಂಬ ವಿಷಯದಲ್ಲಿ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಏರ್ಪಡಿಸಲಾಯಿತು. ಸ್ಪರ್ಧೆಯಲ್ಲಿ ಹೈಸ್ಕೂಲ್ ವಿಭಾಗದಲ್ಲಿ ಪ್ರಥಮ ಲಕ್ಷ್ಮೀ, ದ್ವಿತೀಯ ಮಧುಶ್ರೀ, ಕಾಲೇಜು ವಿಭಾಗದಲ್ಲಿ ಪ್ರಥಮ ಯಕ್ಷಿತ, ದ್ವಿತೀಯ ರೂಪರವರು ಬಹುಮಾನ ಪಡೆದುಕೊಂಡರು. ತೀರ್ಪುಗಾರರಾಗಿ ಪೂರ್ಣೀಮಾ ಕೃಷ್ಣರಾಜ್ ಮತ್ತು ದ್ವಿತೀಯ ದರ್ಜೆ ಸಹಾಯಕಿ ಲಕ್ಷ್ಮೀ, ಅಕ್ಷತಾ ಪೈ ಸಹಕರಿಸಿದ್ದರು. ನಗರ ಠಾಣಾ ಪೊಲೀಸ್ ಉಪನಿರೀಕ್ಷಕ ಆಂಜನೇಯ ರೆಡ್ಡಿ ವಿಜೇತ ವಿದ್ಯಾರ್ಥಿಗಳಿಗೆ ವಿತರಿಸಿ ಶುಭ ಹಾರೈಸಿದರು.