ಅಂಚೆ ಆವರಣದಿಂದ ಮೆಟ್ಟಿಲ ಮೇಲಕ್ಕೇರಿದ ಮುಷ್ಕರ
ಪುತ್ತೂರು: ನ್ಯಾಯಯುತ ಬೇಡಿಕೆ ಈಡೇರಿಕೆಗಾಗಿ ಗ್ರಾಮೀಣ ಅಂಚೆ ಸೇವಕರ ಜಂಟಿ ಕ್ರಿಯಾ ಸಮಿತಿಯಿಂದ ಪುತ್ತೂರು ಪ್ರಧಾನ ಅಂಚೆ ಕಚೇರಿ ಎದುರು ನಡೆಯುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರ 4ನೇ ದಿನಕ್ಕೆ ಕಾಲಿಟ್ಟಿದ್ದು, ಇಲ್ಲಿನ ತನನ ಅಂಚೆ ಕಚೇರಿಯ ಮುಂದೆ ಆವರಣದಲ್ಲಿ ಮುಷ್ಕರ ನಡೆಸಿದ ಗ್ರಾಮೀಣ ಅಂಚೆ ಸೇವಕರು ಡಿ.15ರಂದು ಪುತ್ತೂರು ಪ್ರಧಾನ ಅಂಚೆ ಕಚೇರಿಯ ಮೆಟ್ಟಿಲುಗಳ ಮೇಲೆ ಕುಳಿತು ಮುಷ್ಕರ ಮುಂದುವರಿಸಿದ್ದಾರೆ.
ಸುಳ್ಯ, ಪುತ್ತೂರು, ಕಾರ್ಕಳ, ಬಂಟ್ವಾಳ ತಾಲೂಕು ಒಳಗೊಂಡ ಪುತ್ತೂರು ವಿಭಾಗೀಯ ಮಟ್ಟದ ಗ್ರಾಮೀಣ ಅಂಚೆ ಸೇವಕರು ಪ್ರತಿಭಟನೆಯಲ್ಲಿ ಪಾಲೊಂಡಿದ್ದು, ಆಲ್ ಇಂಡಿಯ ಗ್ರಾಮೀಣ ಡಾಕ್ ಸೇವಕ್ ಯೂನಿಯನ್ ಪುತ್ತೂರು ಇದರ ಕಾರ್ಯದರ್ಶಿ ಸುನಿಲ್ ದೇವಾಡಿಗ, ಯೂನಿಯನ್‌ನ ಅಧ್ಯಕ್ಷ ವಿಠಲ ಎಸ್. ಪೂಜಾರಿ, ಕೋಶಾಧಿಕಾರಿ ಕಮಲಾಕ್ಷ ಹಾಗೂ ಪದಾಧಿಕಾರಿಗಳು, ಸದಸ್ಯರು, ನೌಕರರು ಭಾಗವಹಿಸಿದ್ದು ಬೇಡಿಕೆ ಈಡೇರಿಕೆ ತನಕ ನಮ್ಮ ಮುಷ್ಕರ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ. ಬೇಡಿಕೆ ಈಡೇರುವ ತನಕ ಪ್ರತಿ ದಿನ ಮಧ್ಯಾಹ್ನ ತನಕ ಮುಷ್ಕರ ನಡೆಯಲಿದೆ. ಡಿ.15ರಂದು ಅಂಚೆ ಇಲಾಖೆಯ ಆವರಣದಲ್ಲಿ ಅಧಿಕಾರಿಗಳು ತಮ್ಮ ವಾಹನ ಪಾರ್ಕ್ ಮಾಡಿದ್ದರಿಂದ ಮುಷ್ಕರಕ್ಕೆ ಸ್ಥಳವಕಾಶವಿಲ್ಲ ಎಂದು ಅಂಚೆ ಕಚೇರಿಯ ಮೆಟ್ಟಿಲ ಮೇಲೆ ಕುಳಿತು ಮುಷ್ಕರ ಮುಂದುವರಿಸಿದ್ದೇವೆ ಎಂದು ಮುಷ್ಕರ ನಿರತ ಪ್ರಮುಖರು ತಿಳಿಸಿದ್ದಾರೆ.