ರಾಮಕುಂಜ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಕಡಬ ತಾಲೂಕು ಇದರ ಗೋಳಿತ್ತೊಟ್ಟು ವಲಯದ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ, ಜನಜಾಗೃತಿ ವೇದಿಕೆ ಹಾಗೂ ನವಜೀವನ ಸಮಿತಿ ಆಶ್ರಯದಲ್ಲಿ ಸಾಮೂಹಿಕ ಶ್ರೀ ಶನೈಶ್ಚರ ಪೂಜೆ ಹಾಗೂ ಧಾರ್ಮಿಕ ಸಭೆ ಡಿ.13ರಂದು ಶ್ರೀ ರಾಮಕುಂಜೇಶ್ವರ ದೇವಸ್ಥಾನದಲ್ಲಿ ನಡೆಯಿತು.
ಬೆಳಿಗ್ಗೆ 7.30ಕ್ಕೆ ಸಾಮೂಹಿಕ ಶ್ರೀ ಶನೈಶ್ಚರ ಪೂಜೆ ಆರಂಭಗೊಂಡಿತು. ಬೆಳಿಗ್ಗೆ 11ಕ್ಕೆ ನಡೆದ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿದ ಪುತ್ತೂರು ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕಿ ಆಶಾ ಬೆಳ್ಳಾರೆಯವರು, ಹಿಂದೂ ಧರ್ಮ ಎನ್ನುವುದು ಒಂದು ಜೀವನ ಕ್ರಮ, ಇದರ ಒಳತಿರುಳು ಇನ್ನೂ ನಮ್ಮವರಿಗೆ ತಿಳಿದಿಲ್ಲ, ಧಾರ್ಮಿಕ ಕಾರ್ಯಕ್ರಮಗಳ ಮುಖಾಂತರ ನಮ್ಮ ಧರ್ಮದ ಮರ್ಮವನ್ನು ತಿಳಿಸುವ ಕೆಲಸವಾಗಬೇಕು ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದ.ಕ ಜಿಲ್ಲಾ ನಿರ್ದೆಶಕ ಪ್ರವೀಣ್ ಕುಮಾರ್‌ರವರು ಉದ್ಘಾಟಿಸಿ ಮಾತನಾಡಿ, ಶ್ರೀ ಕ್ಷೇತ್ರ ಧಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜನರ ಬಡತನ ನಿರ್ಮೂಲನೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಾ 40 ವರ್ಷ ಕಳೆದಿದೆ. ಕೃಷಿ, ಉದ್ಯಮ, ಹೈನುಗಾರಿಕೆ, ಶಿಕ್ಷಣ, ಮನೆ ನಿರ್ಮಾಣದಂತಹ ಕೆಲಸಗಳಿಗೆ ಆರ್ಥಿಕ ಸೌಲಭ್ಯಗಳನ್ನು ನೀಡಲಾಗಿದೆ. ಗ್ರಾಮೀಣ ಭಾಗಗಳಲ್ಲಿ ಶ್ರಮಿಕರ ಬದುಕು ಹಸನುಗೊಳಿಸಿದ ಕೀರ್ತಿ ಯೋಜನಗೆ ಸಲ್ಲುತ್ತದೆ ಎಂದರು. ಜನಜಾಗೃತಿ ವೇದಿಕೆಯ ಕಡಬ ತಾಲೂಕು ಅಧ್ಯಕ್ಷ ಮಹೇಶ್ ಕೆ.ಸವಣೂರು, ರಾಮಕುಂಜ ಗ್ರಾ.ಪಂ.ಅಧ್ಯಕ್ಷೆ ಸುಚೇತ, ಗೋಳಿತ್ತೊಟ್ಟು ಗ್ರಾ.ಪಂ.ಅಧ್ಯಕ್ಷೆ ಸವಿತಾ, ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಗುರುಪ್ರಸಾದ್, ಜನಜಾಗೃತಿ ವೇದಿಕೆಯ ಗೋಳಿತ್ತೊಟ್ಟು ವಲಯಾಧ್ಯಕ್ಷ ನೋಣಯ್ಯ ಪೂಜಾರಿ ಅಂಬರ್ಜೆ, ಗೋಳಿತ್ತೊಟ್ಟು ವಲಯ ಭಜನಾ ಪರಿಷತ್ ಅಧ್ಯಕ್ಷ ಜಯಂತ ಅಂಬರ್ಜೆ, ವಿಪತ್ತು ನಿರ್ವಹಣಾ ಘಟಕದ ಪ್ರತಿನಿಧಿ ಮಹೇಶ್ ಪಿ., ಶುಭ ಹಾರೈಸಿದರು. ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ಗೋಳಿತೊಟ್ಟು ವಲಯಾಧ್ಯಕ್ಷ ಬಾಲಕೃಷ್ಣ ಅಲೆಕ್ಕಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಸಂಘದ ಸದಸ್ಯರಿಗೆ ನಡೆದ ಕ್ರೀಡಾಕೂಟದಲ್ಲಿನ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಯೋಜನೆಯ ಕಡಬ ತಾಲೂಕು ಯೋಜನಧಿಕಾರಿ ಮೇದಪ್ಪ ಗೌಡ ಎನ್ ಸ್ವಾಗತಿಸಿದರು. ಒಕ್ಕೂಟದ ಮಾಜಿ ಅಧ್ಯಕ್ಷ ವಿರೇಂದ್ರ ಪಿ. ವಂದಿಸಿದರು. ಗೋಳಿತ್ತೊಟ್ಟು ವಲಯ ಮೇಲ್ವಿಚಾರಕಿ ಸುಜಾತ ಬಿ ವರದಿ ಮಂಡಿಸಿದರು. ಶಿಕ್ಷಕ ಪ್ರೇಮನಾಥ್ ಹಾಗೂ ಕಡಬ ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ಕಾರ್ಯಕ್ರಮ ನಿರೂಪಿಸಿದರು.