ಪ್ರಿಯದರ್ಶಿನಿಯು ವಿದ್ಯಾಸರಸ್ವತಿ ನಲಿಯುತ್ತಿರುವ ಸ್ಥಳ – ಕುಂಬ್ಳೆ ಶ್ರೀಧರ ರಾವ್
ಬೆಟ್ಟಂಪಾಡಿ: ಇಲ್ಲಿನ ಪ್ರಿಯದರ್ಶಿನಿ ಆಂಗ್ಲಮಾಧ್ಯಮ ಶಾಲೆಯ ಸಹಪಠ್ಯ ಚಟುವಟಿಕೆಗಳ ರಂಗಪ್ರದರ್ಶನ ‘ಕಲಾದರ್ಶಿನಿ’ ಕಾರ್ಯಕ್ರಮ ದ. 11 ರಂದು ನಡೆಯಿತು.ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿದ್ದ ಹಿರಿಯ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ ರಾವ್ ರವರು ಮಾತನಾಡಿ ‘ಇದು ಕುಗ್ರಾಮವಲ್ಲ ಸಗ್ರಾಮ ಇದು ಸ್ವಗ್ರಾಮ. ದೇವರ ಉತ್ಸವದಂತೆ ಶಾಲೆಯ ಉತ್ಸವದಲ್ಲಿ ಪಾಲ್ಗೊಳ್ಳಲು ಸಂತೋಷವಾಗಿದೆ. ವಿದ್ಯಾ ಸರಸ್ವತಿ ಕುಣಿಯುತ್ತಿರುವ ಸ್ಥಳ ಪ್ರಿಯದರ್ಶಿನಿಯಾಗಿದೆ. ಈ ಶಾಲೆ ದೊಡ್ಡ ವಿದ್ಯಾಸಂಸ್ಥೆಯಾಗಿ ಬೆಳೆಯಲಿ’ ಎಂದು ಆಶಿಸಿದ ಅವರು ಬೆಟ್ಟಂಪಾಡಿ ಯಲ್ಲಿ ಯಕ್ಷಗಾನದ ಮೇಳದಲ್ಲಿ ಬಂದಿರುವಾಗಿನ ಕಾಲದ ಬಗ್ಗೆ ನೆನಪಿಸಿಕೊಂಡರು.
ಮುಖ್ಯ ಅತಿಥಿ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ. ವೆಂಕಟ್ರಮಣ ಭಟ್ ಕಾನುಮೂಲೆಯವರು ಮಾತನಾಡಿ ‘ಬೆಟ್ಟಂಪಾಡಿ ಗ್ರಾಮದಲ್ಲಿ ಪ್ರಿಯದರ್ಶಿನಿ ಹೆಸರು ಮಾಡುತ್ತಿದೆ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪಠ್ಯೇತರ ಚಟುವಟಿಕೆಗಳು ಪೂರಕವಾಗಿದೆ. ಪ್ರತೀ ಗುರುವಾರ ಇಲ್ಲಿ ಭಗವದ್ಗೀತೆ ಪಾಠವೂ ನಡೆಯುತ್ತಿದೆ ಎಂದು ಹೇಳಲು ಹೆಮ್ಮೆಯಿದೆ’ ಎಂದರು.ಮುಖ್ಯ ಅತಿಥಿಯಾಗಿ ಕುಳ ತರವಾಡು ಮನೆಯ ಮುಖ್ಯಸ್ಥ ದಾಮೋದರ ಮಣಿಯಾಣಿ ಉಪಸ್ಥಿತರಿದ್ದರು.
ಸಭಾಧ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕ ಡಾ. ಸತೀಶ್ ರಾವ್ ರವರು ಮಾತನಾಡಿ ‘ನಮ್ಮ ವಿದ್ಯಾಲಯದಲ್ಲಿ ಮಾತನಾಡುವ ಶಿಕ್ಷಕ ದೇವರಿದ್ದಾರೆ. ವಿದ್ಯೆ ಜೊತೆಗೆ ಪಠ್ಯೇತರ ಚಟುವಟಿಕೆಗಳ ಮೂಲಕ ಆರೋಗ್ಯ, ಮನಸ್ಸಿಗೆ ಶಾಂತಿ ದೊರಕುತ್ತದೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ’ ಎಂದು ಹೇಳಿ ಶಾಲೆಯ ಶೈಕ್ಷಣಿಕ ಸಾಧನೆಗಳ ಬಗ್ಗೆ ಹೇಳಿ ಶ್ಲಾಘಿಸಿದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಂಗನಾಥ ರೈ ಗುತ್ತು, ಕೋಶಾಧಿಕಾರಿ ಕರುಣಾಕರ ಶೆಟ್ಟಿ ಕೊಮ್ಮಂಡ, ಪಿಟಿಎ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಶರಾವು, ಮುಖ್ಯಗುರು ರಾಜೇಶ್ ಎನ್., ಶಾಲಾ ನಾಯಕ ಹೇಮಂತ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗೌರವಾರ್ಪಣೆ:
ಹಿರಿಯ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ ರಾವ್, ವೆಂಕಟ್ರಮಣ ಭಟ್ ಕಾನುಮೂಲೆ ಯವರಿಗೆ ಗೌರವಾರ್ಪಣೆ ನಡೆಸಲಾಯಿತು.
ಸನ್ಮಾನ : ಸಂಗೀತ ಶಿಕ್ಷಕರಾದ ವಸಂತ ಗೋಸಾಡ, ಭರತನಾಟ್ಯ ಗುರು ವಿದ್ವಾನ್ ದೀಪಕ್ ಕುಮಾರ್, ಯಕ್ಷಗಾನ ನಾಟ್ಯಗುರು ಬಾಲಕೃಷ್ಣ ಪೂಜಾರಿ ಉಡ್ಡಂಗಳ, ಕರಾಟೆ ಗುರು ಸುರೇಶ್, ಸೆಮಿ ಕ್ಲಾಸಿಕಲ್ ನೃತ್ಯ ನಿರ್ದೇಶಕಿ ವಿದ್ಯಾ ಸನತ್ ಶೆಟ್ಟಿ ಪೆರ್ನೆಯವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ದೈಹಿಕ ಶಿಕ್ಷಣ ಶಿಕ್ಷಕಿ ಮಮತಾ, ಶಿಕ್ಷಕಿ ಗೌತಮಿ, ಶಿಕ್ಷಕ ಪ್ರಶಾಂತ್, ಶರ್ಮಿಳಾ ಸನ್ಮಾನಿತರ ಕಿರು ಪರಿಚಯ ಮಾಡಿದರು. ಸನ್ಮಾನಿತರ ಪರವಾಗಿ ಭರತನಾಟ್ಯ ಗುರು ವಿದ್ವಾನ್ ಗಿರೀಶ್ ಕುಮಾರ್ ಮಾತನಾಡಿ ಕೃತಜ್ಞತೆ ಸಲ್ಲಿಸಿದರು.
ಬಹುಮಾನ ವಿತರಣೆ:
ಸಾಧಕ ವಿದ್ಯಾರ್ಥಿಗಳಿಗೆ ಇದೇ ವೇಳೆ ಬಹುಮಾನ ವಿತರಿಸಲಾಯಿತು.
ಶಾಲೆಯ ಸ್ವಚ್ಛತೆಗಾರರಾದ ನಳಿನಿ ಮತ್ತು ಅನುರಾಧರವರನ್ನು ಗೌರವಿಸಲಾಯಿತು.ವಿದ್ಯಾರ್ಥಿಗಳಾದ ಧನ್ವಿ ರೈ ಕೆ., ಶರಣ್ಯ ಎಸ್., ಶ್ರಾವ್ಯ ಯು. ರೈ, ನಿತ್ಯಪಂಚಾಂಗ, ಸುಭಾಷಿತ, ವಚನ ಹೇಳಿದರು.ಸತೀಶ್ ರೈ ಕಟ್ಟಾವು, ಸದಾಶಿವ ರೈ ಗುಮ್ಮಟೆಗದ್ದೆ, ಪ್ರಕಾಶ್ ರೈ ಬೈಲಾಡಿ ಯವರು ಅತಿಥಿಗಳನ್ನು ಗೌರವಿಸಿದರು.ಸಹಶಿಕ್ಷಕಿ ಸಂಧ್ಯಾ ಸ್ವಾಗತಿಸಿ, ಶಿಕ್ಷಕಿ ಪವಿತ್ರ ವಂದಿಸಿದರು. ಶಿಕ್ಷಕಿ ಭವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.