ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವುದು ಪೋಷಕರ ಜವಾಬ್ದಾರಿ: ಪೇಜಾವರ ಶ್ರೀ
ರಾಮಕುಂಜ: ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮತ್ತು ಶ್ರೀ ರಾಮಕುಂಜೇಶ್ವರ ವಸತಿ ನಿಲಯದ ವಾರ್ಷಿಕೋತ್ಸವ, ಶಾಲಾ ಕೊಠಡಿ, ನೂತನ ಗ್ರಂಥಾಲಯ ಉದ್ಘಾಟನೆ ಹಾಗೂ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರ ಷಷ್ಠ್ಯಬ್ಧಿ ಪ್ರಯುಕ್ತ ಗೋ ಸಂರಕ್ಷಣಾ ನಿಧಿ ಸಮರ್ಪಣೆ ಕಾರ್ಯಕ್ರಮ ಡಿ.17ರಂದು ಬೆಳಿಗ್ಗೆ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲಾ ಸಭಾಂಗಣದಲ್ಲಿ ನಡೆಯಿತು.
ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು, ತಂದೆ, ತಾಯಿಯ ಬಗ್ಗೆ ಗೌರವ ಭಕ್ತಿ ಮಕ್ಕಳಲ್ಲಿ ಮೂಡಿಸಬೇಕು. ಓದು ಓದು ಎಂದು ಒತ್ತಡ ಹೇರಿ ಮುಂದೆ ಅವರು ನಮ್ಮನ್ನು ಬಿಟ್ಟು ಪರವೂರಿಗೆ ಹಾರಿ ಹೋಗುವ ಬದಲು ಮಕ್ಕಳಿಗೆ ಸಂಸ್ಕಾರ ಕೊಟ್ಟು ಕರ್ತವ್ಯ ಪ್ರಜ್ಞೆ ಮೂಡಿಸಬೇಕು. ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವ ಜವಾಬ್ದಾರಿ ಪೋಷಕರದ್ದು ಎಂದು ನುಡಿದರು. ಗೋವು ತಂದೆ, ತಾಯಿಗೆ ಸಮಾನ. ಇದರ ಸೇವೆ ನಮ್ಮ ಬದುಕಿನ ದೈನಂದಿನ ಸೇವೆಯಾಗಬೇಕು. ಈ ಬಗ್ಗೆ ಮಕ್ಕಳಲ್ಲೂ ಜಾಗೃತಿ ಮೂಡಿಸಬೇಕು. ಇದರಿಂದ ಪುಣ್ಯ ಪ್ರಾಪ್ತಿಯಾಗಲಿದೆ ಎಂದು ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಅತಿಥಿಯಾಗಿದ್ದ ಪುತ್ತೂರು ವಿವೇಕಾನಂದ ಪದವಿ ಕಾಲೇಜು ಸ್ವಾಯತ್ತ ಇದರ ಪರೀಕ್ಷಾಂಗ ಕುಲಸಚಿವರಾದ ಡಾ| ಹೆಚ್.ಜಿ.ಶ್ರೀಧರ್ ಅವರು ಮಾತನಾಡಿ, ವಿದ್ಯಾರ್ಥಿಯಿದ್ದಾಗ ಕಷ್ಟ,ಶ್ರಮ ಪಡಬೇಕು. ಶ್ರದ್ಧೆ,ನಿಷ್ಠೆಯಿಂದ ಓದಬೇಕು. ಪೋಷಕರು ಇದಕ್ಕೆ ಸಹಕರಿಸಬೇಕು. ಈ ರೀತಿಯಾದಲ್ಲಿ ಮುಂದಿನ ಬದುಕು ಬಂಗಾರವಾಗಲಿದೆ. ವಿದ್ಯಾರ್ಥಿಗಳು ಏಕಾಗೃತೆ, ಮನಸ್ಸನ್ನು ತನ್ಮಯಗೊಳಿಸುವಂತಹ ಶಕ್ತಿ ಬೆಳೆಸಿಕೊಳ್ಳಬೇಕು. ಓದುವುದು ಮಕ್ಕಳ ಜವಾಬ್ದಾರಿ. ಮಕ್ಕಳಿಗೆ ಬದುಕು ಕಟ್ಟಿಕೊಳ್ಳಲು ವ್ಯವಸ್ಥೆ ಕಲ್ಪಿಸುವುದು ಪೋಷಕರ ಜವಾಬ್ದಾರಿ ಎಂದರು.
ಇನ್ನೋರ್ವ ಅತಿಥಿ ಕಾಣಿಯೂರು ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಲಕ್ಷ್ಮಣ ಕರಂದ್ಲಾಜೆಯವರು ಮಾತನಾಡಿ, ಧರ್ಮ, ಸಂಸ್ಕಾರ ಶಿಕ್ಷಣ ಪಠ್ಯಗಳಲ್ಲಿ ಸಿಗುತ್ತಿಲ್ಲ. ಆದ್ದರಿಂದ ಶಾಲೆಗಳಲ್ಲಿ ತಿಂಗಳಲ್ಲಿ ಕನಿಷ್ಠ 2 ದಿನವಾದರೂ ಧರ್ಮ, ಸಂಸ್ಕಾರ ಶಿಕ್ಷಣ ನೀಡಲು ಶಿಕ್ಷಣ ಸಂಸ್ಥೆಗಳು ಮುಂದೆ ಬರಬೇಕೆಂದು ಹೇಳಿದರು.
ಮೈಸೂರು ಮತ್ತು ಮಂಗಳೂರಿನ ಎಸ್ಎಲ್ವಿ ಸಂಸ್ಥೆಯ ದಿವಾಕರ ದಾಸ್ರವರು ಮಾತನಾಡಿ, ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಶ್ರಮ ಪಟ್ಟು ಓದಬೇಕು. ಹಿರಿಯರಿಗೆ, ಪೋಷಕರಿಗೆ ಗೌರವ ಕೊಟ್ಟಲ್ಲಿ ಮುಂದೆ ಉತ್ತಮ ಮಟ್ಟಕ್ಕೆ ಹೋಗಬಹುದು. ವಿದ್ಯಾರ್ಥಿಗಳು ಸಮಾಜದ ಆಸ್ತಿಯಾಗಬೇಕೆಂದು ಹೇಳಿದರು.
ಸಾಧಕ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ:
5000 ಮೀ.ವೇಗದ ನಡಿಗೆ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ 9ನೇ ತರಗತಿಯ ವಿಲಾಸ್ ಗೌಡ ಪಿ., ವಾಲಿಬಾಲ್ನಲ್ಲಿ ರಾಷ್ಟ್ರಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡ ೮ನೇ ತರಗತಿಯ ಕಿರಣ್, ಕರಾಟೆಯಲ್ಲಿ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡ 8ನೇ ತರಗತಿಯ ಅನ್ವೇಷ್, ಕೋಲುಜಿಗಿತದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡ 9ನೇ ತರಗತಿಯ ನಿತಿನ್ ಗೌಡ ಎನ್.ವೈ., 10ನೇ ತರಗತಿಯ ಮನೀಷ್ ಎನ್., ಪ್ರತಿಭಾ ಕಾರಂಜಿಯಲ್ಲಿ ಜಿಲ್ಲಾಮಟ್ಟದ ತುಳು ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡ 9ನೇ ತರಗತಿಯ ಪ್ರಜ್ಞಾ ಹಾಗೂ ಹಿಂದಿ ಭಾಷಣ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದುಕೊಂಡ 8ನೇ ತರಗತಿಯ ಶರಣ್ಯ ಶೆಟ್ಟಿ ಅವರಿಗೆ ಶಾಲು, ಹಾರಾರ್ಪಣೆ, ಪೇಟ, ಫಲತಾಂಬೂಲ ನೀಡಿ ಸ್ವಾಮೀಜಿ ಗೌರವಿಸಿದರು. ಅಂತರಾಷ್ಟ್ರೀಯ ಕ್ರೀಡಾಪಟು, ಸಂಸ್ಥೆಯ ಹಳೆವಿದ್ಯಾರ್ಥಿ ತೀರ್ಥೇಶ್ ಶೆಟ್ಟಿಯವರನ್ನು ಸ್ವಾಮೀಜಿಯವರು ಸನ್ಮಾನಿಸಿ ಗೌರವಿಸಿದರು.
ಸನ್ಮಾನ:
ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ ದಂಪತಿಯನ್ನು ಸಂಸ್ಥೆಯ ಸಿಬ್ಬಂದಿಗಳ ಪರವಾಗಿ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ ಸನ್ಮಾನಿಸಿ ಗೌರವಿಸಿದರು. ಸಂಸ್ಥೆಯ ಸ್ಥಾಪಕ ಮುಖ್ಯಶಿಕ್ಷಕಿ ಆರತಿದಾಸಪ್ಪ, ದೈಹಿಕ ಶಿಕ್ಷಣ ಶಿಕ್ಷಕಿ ಪ್ರೇಮಾ ರಾಮಕುಂಜ, ವ್ಯವಸ್ಥಾಪಕ ರಮೇಶ್ ರೈ, ಆಡಳಿತಾಧಿಕಾರಿ ಆನಂದ ಎಸ್.ಟಿ., ಪ್ರೌಢಶಾಲೆ ಮುಖ್ಯಶಿಕ್ಷಕಿ ಗಾಯತ್ರಿ ಯು.ಎನ್., ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಲೋಹಿತ, ಎಕೌಂಟ್ ವಿಭಾಗದ ರಮ್ಯ, ಸುಮಲತಾ, ಮುಖ್ಯ ಅಡುಗೆಯವರಾದ ಬಾಲಕೃಷ್ಣ, ರಾಧಾಕೃಷ್ಣ ಅವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಶಿಕ್ಷಕಿ ಸರಿತಾ ಸನ್ಮಾನಿತರ ಹೆಸರು ವಾಚಿಸಿದರು.
ಅಂತರಾಷ್ಟ್ರೀಯ ಕ್ರೀಡಾಪಟು ತೀರ್ಥೇಶ್ ಶೆಟ್ಟಿ ಸಿದ್ದಕಟ್ಟೆ, ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ಕೆ.ಎಸ್.ರಾಧಾಕೃಷ್ಣ, ಸಂಚಾಲಕ ಟಿ.ನಾರಾಯಣ ಭಟ್, ಮಾಧವ ಆಚಾರ್ ಇಜ್ಜಾವು, ಹರಿನಾರಾಯಣ ಆಚಾರ್, ಲಿಂಗಪ್ಪ ಗೌಡ ಕಡೆಂಬ್ಯಾಲ್, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಉಮೇಶ್ ಶೆಟ್ಟಿ ಸಾಯಿರಾಂ, ಸಂಸ್ಥೆಯ ಆಡಳಿತಾಧಿಕಾರಿ ಆನಂದ ಎಸ್.ಟಿ., ಪ್ರೌಢಶಾಲೆ ಮುಖ್ಯಶಿಕ್ಷಕಿ ಗಾಯತ್ರಿ ಯು.ಎನ್., ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಲೋಹಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೌಢಶಾಲೆ ಮುಖ್ಯಶಿಕ್ಷಕಿ ಗಾಯತ್ರಿ ಯು.ಎನ್.ವಂದಿಸಿದರು. ಕಿಶೋರ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರು ಸಹಕರಿಸಿದರು.
ಸ್ವಾಮೀಜಿಗೆ 60ಬಗೆಯ ಹೂವುಗಳಿಂದ ಪುಷ್ಪಾರ್ಚನೆ:
ಷಷ್ಠ್ಯಬ್ಧಿ ಸಂಭ್ರಮದಲ್ಲಿರುವ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರಿಗೆ ಶಾಲೆಯ ಮಕ್ಕಳು 60 ವಿವಿಧ ಜಾತಿಯ ಹೂವುಗಳಿಂದ ಪುಷ್ಪಾರ್ಚನೆ ಮಾಡಿ ಆಶೀರ್ವಾದ ಪಡೆದುಕೊಂಡರು.
ಗೋ ಸಂರಕ್ಷಣಾ ನಿಧಿ ಸಮರ್ಪಣೆ:
ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರ ಷಷ್ಠ್ಯಬ್ಧಿ ಪ್ರಯುಕ್ತ ಸಂಸ್ಥೆಯ ವತಿಯಿಂದ 6,60,660 ರೂ., ಗೋ ಸಂರಕ್ಷಣಾ ನಿಧಿ ಸಮರ್ಪಣೆ ಮಾಡಲಾಯಿತು. ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮಕ್ಕೆ ಆಗಮಿಸಿದ ಸ್ವಾಮೀಜಿಯವರು ದ್ವಾರದ ಪಕ್ಕದಲ್ಲಿರುವ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಪುತ್ಥಳಿ ಇರುವ ಗುಡಿಗೆ ತೆರಳಿ ಪೂಜೆ ಸಲ್ಲಿಸಿದರು. ಅಲ್ಲಿಂದ ಚೆಂಡೆ ವಾದನ, ಮಹಿಳೆಯ ಪೂರ್ಣಕುಂಭದೊಂದಿಗೆ ಸ್ವಾಮೀಜಿಯವರನ್ನು ಬರಮಾಡಿಕೊಳ್ಳಲಾಯಿತು. ದಾರಿಯುದ್ದಕ್ಕೂ ವಿದ್ಯಾರ್ಥಿಗಳು ಸ್ವಾಮೀಜಿಗೆ ಪುಷ್ಪಾರ್ಚನೆ ಮಾಡಿದರು.
ಸಾಂಸ್ಕೃತಿಕ ಕಾರ್ಯಕ್ರಮ:ವಾರ್ಷಿಕೋತ್ಸವದ ಅಂಗವಾಗಿ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.