ಪುತ್ತೂರು: ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ತಿಂಗಳಾಡಿ ಇದರ ಆಡಳಿತ ಮಂಡಳಿಯ ಮುಂದಿನ 5 ವರ್ಷಗಳ ಅವಧಿಗೆ ದ.17 ರಂದು ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ. ಆಡಳಿತ ಮಂಡಳಿಯ 12 ಸ್ಥಾನಗಳಿಗೆ ಒಟ್ಟು 24 ಅಭ್ಯರ್ಥಿಗಳು ಕಣದಲ್ಲಿದ್ದರು ಇದರಲ್ಲಿ ಸಹಕಾರ ಭಾರತಿ ಬೆಂಬಲಿತ 12 ಮಂದಿ ಅಭ್ಯರ್ಥಿಗಳು ಜಯ ಗಳಿಸುವ ಮೂಲಕ ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತದ ಚುಕ್ಕಾಗಿ ಮತ್ತೊಮ್ಮೆ ಸಹಕಾರ ಭಾರತಿ ಪಾಲಾಗಿದೆ.
ಆಡಳಿತ ಮಂಡಳಿಯ 12 ಸ್ಥಾನಗಳಲ್ಲಿ ಸಾಮಾನ್ಯ, ಮಹಿಳಾ ಕ್ಷೇತ್ರ, ಹಿಂದುಳಿದ ವರ್ಗ ಎ ಮತ್ತು ಹಿಂದುಳಿದ ವರ್ಗ ಬಿ ಸ್ಥಾನ, ಪರಿಶಿಷ್ಠ ಪಂಗಡ ಮತ್ತು ಪರಿಶಿಷ್ಠ ಜಾತಿ ಕ್ಷೇತ್ರಗಳಲ್ಲಿ ಜಯ ಗಳಿಸಿದ ಅಭ್ಯರ್ಥಿಗಳ ವಿವರ ಈ ಕೆಳಗಿನಂತಿದೆ.
ಸಾಮಾನ್ಯ ಸ್ಥಾನಗಳಲ್ಲಿ ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತು, ಜನಾರ್ದನ ರೈ ಕೊಡಂಕೀರಿ, ಜಯರಾಮ ರೈ ಎಸ್.ಬಿ, ಶಶಿಧರ್ ರಾವ್ ಬೊಳಿಕ್ಕಳ, ರಿತೇಶ್ ಎಂ, ಮಹಿಳಾ ಕ್ಷೇತ್ರದಿಂದ ಪುಷ್ಪಲತಾ ಜೆ.ರೈ ಮತ್ತು ಜಯಂತಿ, ಹಿಂದುಳಿದ ವರ್ಗ ಪ್ರವರ್ಗ ಎ ಸ್ಥಾನದಿಂದ ತಾರಾನಾಥ ಕಂಪ, ಹಿಂದುಳಿದ ವರ್ಗ ಪ್ರವರ್ಗ ಬಿ.ಸ್ಥಾನದಿಂದ ಸೀತಾರಾಮ ಗೌಡ ಇದ್ಯಪೆ, ಪರಿಶಿಷ್ಠ ಪಂಗಡ ಸ್ಥಾನದಿಂದ ಲೋಕೇಶ ಬಿ, ಪರಿಶಿಷ್ಠ ಜಾತಿ ಸ್ಥಾನದಿಂದ ಪ್ರವೀಣ, ಸಾಲಗಾರರಲ್ಲದ ಕ್ಷೇತ್ರದಿಂದ ಸಂತೋಷ್ ಕುಮಾರ್ ರೈ ಕೋರಂಗ ಭರ್ಜರಿ ಜಯಗಳಿಸಿದ್ದಾರೆ ಎಂದು ಚುನಾವಣಾ ರಿಟರ್ನಿಂಗ್ ಅಧಿಕಾರಿ ಶೋಭಾ ಎನ್.ಎಸ್‌ರವರು ಘೋಷಣೆ ಮಾಡಿದ್ದಾರೆ.
ಸಹಕಾರ ಭಾರತಿಯಡಿ ಸ್ಪರ್ಧೆ ನಡೆಸಿದ್ದ ಪುತ್ತಿಲ ಪರಿವಾರ
ಸಹಕಾರಿ ಸಂಘದ ಆಡಳಿತ ಮಂಡಳಿಯ ಚುನಾವಣೆಗೆ ಪುತ್ತಿಲ ಪರಿವಾರ ಬೆಂಬಲಿತರೂ ಕೂಡ ಸಹಕಾರ ಭಾರತಿಯಡಿ ಸ್ಪರ್ಧೆ ನಡೆಸಿ ಗೆಲುವು ಸಾಧಿಸಿದ್ದಾರೆ. ಪುತ್ತಿಲ ಪರಿವಾರ ಪ್ರತ್ಯೇಕವಾಗಿ ಸ್ಪರ್ಧೆ ನಡೆಸದೇ ಸಹಕಾರ ಭಾರತಿಯಡಿ ಸ್ಪರ್ಧೆ ನಡೆಸಿತ್ತು. ಬಿಜೆಪಿ ಬೆಂಬಲಿತರು ಕೂಡ ಸಹಕಾರ ಭಾರತಿಯಡಿಯೇ ಸ್ಪರ್ಧೆ ನಡೆಸಿದ್ದು ಅದರಂತೆ ಬಿಜೆಪಿ ಮತ್ತು ಪುತ್ತಿಲ ಪರಿವಾರ ಮಾತುಕತೆ ನಡೆಸಿ ಇಬ್ಬರೂ ಕೂಡ ಸಹಕಾರ ಭಾರತಿಯಡಿ ಸ್ಪರ್ಧೆ ನಡೆಸುವ ಮೂಲಕ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಪುತ್ತಿಲ ಪರಿವಾರದ ಸದಸ್ಯರು ಕೂಡ ಸಹಕಾರ ಭಾರತಿ ಅಡಿಯಲ್ಲಿ ಆಡಳಿತ ಮಂಡಳಿಗೆ ಎಂಟ್ರಿ ಕೊಟ್ಟಿದ್ದಾರೆ.
ಸಹಕಾರಿ ಸಂಘಕ್ಕೆ ಎಂಟ್ರಿ ಪಡೆದ ಮೂವರು ಪುತ್ತಿಲ ಪರಿವಾರ ಬೆಂಬಲಿತರು
ಬಿಜೆಪಿ ಹಾಗೂ ಪುತ್ತಿಲ ಪರಿವಾರದ ನಡುವೆ ಮಾತುಕತೆ ನಡೆದು ಪುತ್ತಿಲ ಪರಿವಾರ ಬೆಂಬಲಿತ ಮೂವರು ಸದಸ್ಯರಾದ ಸಾಮಾನ್ಯ ಕ್ಷೇತ್ರದಿಂದ ರಿತೇಶ್, ಮಹಿಳಾ ಕ್ಷೇತ್ರದಿಂದ ಜಯಂತಿ ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ ಸಂತೋಷ್ ಕುಮಾರ್ ರೈ ಕೋರಂಗ ಸ್ಪರ್ಧೆ ನಡೆಸಿದ್ದರು. ಇದರಲ್ಲಿ ಮೂವರು ಕೂಡ ಜಯಗಳಿಸಿದ್ದು ಆ ಮೂಲಕ ಪುತ್ತಿಲ ಪರಿವಾರದಿಂದಲೂ ಮೂರು ಮಂದಿ ಸದಸ್ಯರು ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಎಂಟ್ರಿ ಕೊಟ್ಟಿದ್ದಾರೆ.
ಪ್ರಮುಖರಿಗೆ ಸೋಲು
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಹಲವು ಮಂದಿ ಪ್ರಮುಖರು ಸೋಲು ಕಂಡಿದ್ದಾರೆ. ಅವರಲ್ಲಿ ಸಾಮಾನ್ಯ ಕ್ಷೇತ್ರದಿಂದ ಕೆಯ್ಯೂರು ಗ್ರಾಪಂ ಸದಸ್ಯ ಅಬ್ದುಲ್ ಖಾದರ್ ಮೇರ್ಲ, ಕೆಯ್ಯೂರು ಗ್ರಾಪಂನ ಮಾಜಿ ಅಧ್ಯಕ್ಷ ಜಯರಾಮ ರೈ ಎ.ಕೆ, ಸಹಕಾರಿ ಸಂಘದ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಮಯ್ಯ ರೈ ಎನ್, ಮಹಿಳಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೆದಂಬಾಡಿ ಗ್ರಾಪಂ ಮಾಜಿ ಸದಸ್ಯೆ ಚಂದ್ರಾವತಿ, ಹಿಂದುಳಿದ ವರ್ಗ ಪ್ರವರ್ಗ ಎ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೆಯ್ಯೂರು ಗ್ರಾಪಂ ಸದಸ್ಯ ಜಯಂತ ಪೂಜಾರಿ ಕೆಂಗುಡೇಲು ಸೋಲು ಕಂಡಿದ್ದಾರೆ.