ಕಾವು: ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ-ಧಾರ್ಮಿಕ ಸಭೆ

0

ಕಾವು: ದಿನದಿಂದ ದಿನಕ್ಕೆ ಹಿಂದೂ ಸಮಾಜ ಅನೇಕ ಸವಾಲು, ಸಮಸ್ಯೆಗಳನ್ನು ಎದುರಿಸುವ ಜತೆಗೆ ದುರ್ಬಲತೆಯು ಎದ್ದು ಕಾಣುತ್ತಿದೆ, ಸಮಾಜದಲ್ಲಿ ಪ್ರೀತಿ, ವಿಶ್ವಾಸ, ಒಗ್ಗಟ್ಟು, ಬಾಂಧವ್ಯ, ಐಕ್ಯತೆ ಕಡಿಮೆಯಾಗುತ್ತಿದೆ, ಹಾಗಾಗಿ ಧಾರ್ಮಿಕತೆಯ ಧರ್ಮ ಕಾರ್ಯಗಳು ನಿರಂತರವಾಗಿ ನಡೆದಾಗ ಹಿಂದೂ ಸಮಾಜಕ್ಕೆ ನೈತಿಕ ಪ್ರೇರಣೆ ಸಿಗುತ್ತದೆ ಎಂದು ಶ್ರೀಕ್ಷೇತ್ರ ಮಾಣಿಲದ ಶ್ರೀಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಹೇಳಿದರು.


ಅವರು ದ.17ರಂದು ಕಾವು ನನ್ಯ ಜನಮಂಗಲ ಸಭಾಭವನದಲ್ಲಿ ಪುತ್ತಿಲ ಪರಿವಾರ ಕಾವು-ಮಾಡ್ನೂರು ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ವತಿಯಿಂದ ಲೋಕಕಲ್ಯಾಣಾರ್ಥವಾಗಿ ನಡೆದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಪುತ್ತಿಲ ಪರಿವಾರದಿಂದ ಅಲ್ಲಲ್ಲಿ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ಕೆ ಎಲ್ಲರೂ ಜತೆಯಾಗಿ ಕೆಲಸ ಮಾಡಿ ಹಿಂದೂ ಸಮಾಜಕ್ಕೆ ಶಕ್ತಿಯನ್ನು ತುಂಬಬೇಕು, ಧಾರ್ಮಿಕ ಕಾರ್ಯದಿಂದ ಯಾರಿಗೋ ಒಬ್ಬರಿಗೆ ಲಾಭ ಸಿಗಲಿದೆ ಎಂದು ಭಾವಿಸುವುದ ತಪ್ಪು, ಬದಲಾಗಿ ಲೋಕಕಲ್ಯಾಣಕ್ಕಾಗಿ ನಡೆಯುವ ಧಾರ್ಮಿಕ ಕಾರ್ಯದಲ್ಲಿ ಹಿಂದೂ ಸಮಾಜ ಒಂದೇ ಮನಸ್ಸಿನಿಂದ ಒಗ್ಗಟ್ಟಾಗಿ ಕೆಲಸ ಮಾಡಿದಾಗ ಎಲ್ಲರಿಗೂ ಒಳಿತಾಗುತ್ತದೆ, ನಾವೆಲ್ಲರೂ ಜಾತಿ ಪರಿಕಲ್ಪನೆಯನ್ನು ಬಿಟ್ಟು ನೀತಿ ಪರಿಕಲ್ಪನೆಯಡಿ ಕೆಲಸ ಮಾಡಬೇಕು, ಧಾರ್ಮಿಕ ಕಾರ್ಯಕ್ಕಾಗಿ ಮಕ್ಕಳಲ್ಲಿ ಮನೋಸ್ಥೈರ್ಯವನ್ನು ತುಂಬಬೇಕು ಎಂದು ಮಾಣಿಲ ಶ್ರೀಯವರು ಹೇಳಿದರು.

ಧಾರ್ಮಿಕ ಕಾರ್ಯದಿಂದ ಧರ್ಮಜಾಗೃತಿ-ಪುತ್ತಿಲ
ಧಾರ್ಮಿಕ ಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಪುತ್ತಿಲ ಪರಿವಾರದ ಸ್ಥಾಪಕ ಅರುಣ್ ಕುಮಾರ್ ಪುತ್ತಿಲರವರು ಮಾತನಾಡಿ ಪುತ್ತಿಲ ಪರಿವಾರದ ಮೂಲಕ ಗ್ರಾಮ ಗ್ರಾಮಗಳಲ್ಲಿ ಧಾರ್ಮಿಕ ಕಾರ್ಯದ ಮೂಲಕ ಧರ್ಮಜಾಗೃತಿಯ ಕೆಲಸ ನಡೆಯುತ್ತಿದೆ, ಧಾರ್ಮಿಕ ಕರ್ಯಗಳು ನಿರಂತರವಾಗಿ ನಡೆದರೆ ಮಾತ್ರ ಧರ್ಮ ಉಳಿಯಲು ಸಾಧ್ಯ, ಧಾರ್ಮಿಕ ಕೆಲಸದಿಂದ ಹಿಂದೂ ಧರ್ಮಕ್ಕೆ ಹೊಸ ಚೈತನ್ಯ ಬಂದಿದೆ, ನಮ್ಮ ಕಾರ್ಯಕರ್ತರು ಯಾವುದೇ ಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥದಿಂದ ಧರ್ಮ ಕಾರ್ಯದಲ್ಲಿ ಒಂದಾಗಿದ್ದಾರೆ, ಹಿಂದೂ ಕಾರ್ಯಕರ್ತರಿಗೆ ಯಾವುದೇ ಸಣ್ಣ ಸಮಸ್ಯೆಯಾದರೂ ನಾನು ನಿಮ್ಮೊಂದಿಗೆ ಇದ್ದೇನೆ, ನಮ್ಮ ಮುಂದಿರುವ ಯಾವುದೇ ಸವಾಲನ್ನು ಮೆಟ್ಟಿ ನಿಲ್ಲಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುವ ಎಂದು ಹೇಳಿದರು.

ಕಲಿಯುಗದಲ್ಲಿ ಸಂಘಟನೆಗೆ ಶಕ್ತಿ-ಮಹಾಲಿಂಗೇಶ್ವರ ಭಟ್
ಸಭಾಧ್ಯಕ್ಷತೆ ವಹಿಸಿದ್ದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷ ಮಹಾಲಿಂಗೇಶ್ವರ ಭಟ್ ಪಳನೀರುವವರು ಮಾತನಾಡಿ ಕಲಿಯುಗದಲ್ಲಿ ಸಂಘಟನಾ ಕಾರ್ಯಕ್ಕೆ ಹೆಚ್ಚು ಶಕ್ತಿ ಇದ್ದು, ರಾಷ್ಟ್ರ ಕಾರ್ಯಕ್ಕಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ, ಧಾರ್ಮಿಕ ಕಾರ್ಯಗಳು ಸಂಘಟನೆಗೆ ಹೆಚ್ಚು ಶಕ್ತಿ ನೀಡಲಿದೆ ಎಂದು ಹೇಳಿದರು.

೬೦೦ ಮನೆಯಿಂದ ಪೂಜಾ ರಶೀದಿ ಆಗಿದೆ-ಸುನೀಲ್ ಬೋರ್ಕರ್
ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದ ಸತ್ಯನಾರಾಯಣ ಪೂಜಾ ಸಮಿತಿ ಕಾರ್ಯಾಧ್ಯಕ್ಷ ಸುನೀಲ್ ಬೋರ್ಕರ್‌ರವರು ಮಾತನಾಡಿ ಕಳೆದ 2 ತಿಂಗಳಿನಿಂದ ಜಿಲ್ಲೆಯಾದ್ಯಾಂತ ಪುತ್ತಿಲ ಪರಿವಾರದಿಂದ ಧಾರ್ಮಿಕ ಕಾರ್ಯಗಳು ನಿರಂತರವಾಗಿ ನಡೆಯುತ್ತಿದೆ, ಅದೇ ಮಾದರಿಯಲ್ಲಿ ಮಾಡ್ನೂರು ಗ್ರಾಮದಲ್ಲೂ ಸಾರ್ವಜನಿಕ ಸತ್ಯನಾರಾಯಣ ಪೂಜೆಯನ್ನು ಆಯೋಜನೆ ಮಾಡಿದ್ದು, ಗ್ರಾಮದಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿ 600 ಪೂಜಾ ರಶೀದಿ ಆಗಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಕಾವು ನನ್ಯ ತುಡರ್ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುಬ್ರಾಯ ಬಲ್ಯಾಯ, ಕೆರೆಮಾರು ಶ್ರೀ ಅಯ್ಯಪ್ಪ ಭಜನಾ ಮಂದಿರದ ಸ್ಥಾಪಕ ಸುಂದರ ಪೂಜಾರಿ ಕೆರೆಮಾರು, ಪುತ್ತಿಲ ಪರಿವಾರದ ಮಾರ್ಗದರ್ಶಕ ರಾಜಾರಾಮ ಭಟ್‌ರವರು ಉಪಸ್ಥಿತರಿದ್ದರು. ಅನಿಕಾ ಕುಂಜತ್ತಾಯ ಪ್ರಾರ್ಥಿಸಿದರು. ಸತ್ಯನಾರಾಯಣ ಪೂಜಾ ಸಮಿತಿ ಪ್ರಧಾನ ಕಾರ್ಯದರ್ಶಿ ಚಿದಾನಂದ ಆಚಾರ್ಯ ಸಸ್ಪೆಟ್ಟಿ ವಂದಿಸಿದರು. ಸಮಿತಿ ಉಪಾಧ್ಯಕ್ಷ ಚಂದ್ರಕಿರಣ ಕಾವು ಮತ್ತು ಚೈತನ್ಯಲಕ್ಷ್ಮೀ ಕಾವುರವರು ಕಾರ್ಯಕ್ರಮ ನಿರ್ವಹಿಸಿದರು. ಸಮಿತಿ ಉಪಾಧ್ಯಕ್ಷ ರವಿ ಕುಲಾಲ್ ಮಾಣಿಯಡ್ಕ ದಂಪತಿಗಳು ಸ್ವಾಮೀಜಿಯವರಿಗೆ ಗೌರವಾರ್ಪಣೆ ಮಾಡಿದರು. ಸಮಿತಿ ಪದಾಧಿಕಾರಿಗಳಾದ ರವಿಕಿರಣ ಪಾಟಾಳಿ ಕಾವು, ಕಮಲಾಕ್ಷ ಕಾವು, ಜಯಂತ ಪೂಜಾರಿ ಕೆರೆಮಾರು, ಅಮೃತಲಿಂಗಂ ಕಾವು, ಉದಯ ಮಾಣಿಯಡ್ಕರವರು ಅತಿಥಿಗಳಿಗೆ ಶಾಲು ಹಾಕಿ ಗೌರವಿಸಿದರು. ಮಾಡ್ನೂರು ಪುತ್ತಿಲ ಪರಿವಾರದ ಅಧ್ಯಕ್ಷ ಹರೀಶ್ ಕುಂಜತ್ತಾಯ, ಕಾರ್ಯದರ್ಶಿ ಯೋಗೀಶ್ ಕಾವು, ಸದಸ್ಯರಾದ ಪುರುಷೋತ್ತಮ ಆಚಾರ್ಯ ನನ್ಯ, ನಿರಂಜನ ಕಮಲಡ್ಕರವರು ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಸಮಿತಿಯ ಸದಸ್ಯರುಗಳು ವಿವಿಧ ಜವಾಬ್ದಾರಿ ನಿರ್ವಹಿಸಿದರು.


ಶ್ರೀನಿವಾಸ ಕಲ್ಯಾಣೋತ್ಸವದ ಆಮಂತ್ರಣ ಬಿಡುಗಡೆ:
ಪುತ್ತಿಲ ಪರಿವಾರದಿಂದ ದ.24,25ರಂದು ಪುತ್ತೂರಿನಲ್ಲಿ ನಡೆಯಲಿರುವ ಶ್ರೀನಿವಾಸ ಕಲ್ಯಾಣೋತ್ಸವದ ಮಾಡ್ನೂರು ಗ್ರಾಮಕ್ಕೆ ಆಮಂತ್ರಣವನ್ನು ಸಭಾವೇದಿಕೆಯಲ್ಲಿ ಬಿಡುಗಡೆ ಮಾಡಲಾಯಿತು.


ಸಾಧಕರಿಗೆ ಗೌರವಾರ್ಪಣೆ:
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಾಡ್ನೂರು ಗ್ರಾಮದ 4 ಸಾಧಕರನ್ನು ಸಭಾ ವೇದಿಕೆಯಲ್ಲಿ ಗೌರವಿಸಿ ಸನ್ಮಾನಿಸಲಾಯಿತು. ನಾಟಿವೈದ್ಯ ಶ್ಯಾಮ್ ಭಟ್ ಬಟ್ಯಡ್ಕ, ಕರಾಟೆ ಶಿಕ್ಷಕ ನಾರಾಯಣ ಆಚಾರ್ಯ ಮಳಿ, ನಾಗಸ್ವರ ವಾದಕ ಶ್ರೀಧರ ಪೂವಂದೂರು, ಹಿರಿಯ ಕ್ಷೌರಿಕ ಬಾಬು ಭಂಡಾರಿರವರಿಗೆ ಶಾಲು ಹೊದಿಸಿ, ಹಾರ ಹಾಕಿ, ಪೇಟ ತೊಡಿಸಿ, ಫಲಪುಷ್ಫ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಮಿತಿಯ ಪ್ರಧಾನ ಕಾರ್ಯದರ್ಶಿ ಚಿದಾನಂದ ಆಚಾರ್ಯ ಸಸ್ಪೆಟ್ಟಿ, ಸದಸ್ಯರಾದ ಅಮೃತಲಿಂಗಂ ಕಾವು, ಸುಧೀಂದ್ರ ಕಾವುರವರು ಸನ್ಮಾನಿತರ ಪರಿಚಯ ಓದಿದರು.


ವಿವಿಧ ತಂಡಗಳಿಂದ ಭಜನೆ:
ಅಪರಹ್ನ ಗಂಟೆ 2.30ಕ್ಕೆ ಆರಂಭಗೊಂಡ ಭಜನಾ ಕಾರ್ಯಕ್ರಮವನ್ನು ಪಳನೀರು ಓಂ ಶ್ರೀ ಭಜನಾ ಸಂಘದ ಅಧ್ಯಕ್ಷ ಅಮ್ಮು ಪೂಂಜಾರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಓಂ ಶ್ರೀ ಭಜನಾ ಸಂಘ ಪಳನೀರು, ಶ್ರೀ ಪಂಚಲಿಂಗೇಶ್ವರ ಭಜನಾ ಸಂಘ ಅಮ್ಚಿನಡ್ಕ, ತುಡರ್ ಭಜನಾ ಸಂಘ ನನ್ಯ-ಕಾವು, ದುರ್ಗಾವಾಹಿನಿ ಮಹಿಳಾ ಭಜನಾ ಸಂಘ ಮಾಣಿಯಡ್ಕ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಭಜನಾ ಸೇವೆ ನೀಡಿದವರಿಗೆ ಸಭಾ ವೇದಿಕೆಯಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಅನ್ನದಾನಕ್ಕೆ ಪ್ರಾಯೋಜಕತ್ವ ನೀಡಿದ ಸ್ಪರ್ಶ, ಸರ್ವಿನ್ ಕುಂಬ್ರ ಮತ್ತು ಸುಬ್ರಾಯ ಬಲ್ಯಾಯ ಮದ್ಲರವರಿಗೆ ಸಭಾವೇದಿಕೆಯಲ್ಲಿ ಶಾಲು ಹಾಕಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ:
ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಶಿವಪ್ರಸಾದ್ ಕಡಮಣ್ಣಾಯರವರ ಪೌರೋಹಿತ್ಯದಲ್ಲಿ ಸಂಜೆ ಗಂಟೆ ೪.೩೦ರಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆದು ಬಳಿಕ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.ಧಾರ್ಮಿಕ ಸಭಾ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ನಡೆಯಿತು.

ಕಳೆದ 2 ತಿಂಗಳಿನಿಂದ ಪುತ್ತಿಲ ಪರಿವಾರದಿಂದ ಜಿಲ್ಲೆಯಾದ್ಯಾಂತ ಧಾರ್ಮಿಕ ಕಾರ್ಯಗಳು ನಡೆಯುತ್ತಿದೆ, ಆದರೆ ಕೆಲವು ಕಡೆಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ಸಹಕಾರ ನೀಡುವವರಿಗೆ, ಬೆಂಬಲ ನೀಡುವವರಿಗೆ ವಿರೋಧ ವ್ಯಕ್ತವಾಗುತ್ತಿದೆ, ಪೂಜೆ ರಶೀದಿ ಮಾಡಿಸಬೇಡಿ, ಪೂಜೆಗೆ ಹೋಗುವುದು ಬೇಡ, ಸಹಕಾರ ನೀಡುವುದು ಬೇಡ ಎಂಬ ಮಾತುಗಳು ನಮ್ಮವರಿಂದಲೇ ಕೇಳಿ ಬರುತ್ತಿದೆ, ಹಾಗಾಗಿ ಧಾರ್ಮಿಕ ಕಾರ್ಯಕ್ರಮಕ್ಕೆ ಅಡ್ಡಪಡಿಸುವವರಿಗೆ ಮತ್ತು ಮತಾಂಧರಿಗೆ ಯಾವುದೇ ವ್ಯತ್ಯಾಸ ಇಲ್ಲ.
-ಅರುಣ್ ಕುಮಾರ್ ಪುತ್ತಿಲ

LEAVE A REPLY

Please enter your comment!
Please enter your name here