ಗ್ಯಾಸ್ ಸಂಪರ್ಕಕ್ಕೆ ಇ-ಕೆವೈಸಿ – ಗೊಂದಲದಲ್ಲಿ ಗ್ರಾಹಕರು…!

0

ಉಜ್ವಲ ಗ್ಯಾಸ್ ಸಂಪರ್ಕಕ್ಕೆ ಮಾತ್ರ ಇ-ಕೆವೈಸಿ, ಆಹಾರ ಇಲಾಖೆ ಸ್ಪಷ್ಟನೆ

ಪುತ್ತೂರು: ಅಡುಗೆ ಅನಿಲ ಸಂಪರ್ಕ ಹೊಂದಿದವರು ದ.31 ರೊಳಗೆ ಇ-ಕೆವೈಸಿ ಮಾಡಿಸಬೇಕು, ಆಧಾರ್ ಲಿಂಕ್ ಮಾಡಿಸಿ ಇ-ಕೆವೈಸಿ ಮಾಡದೇ ಇದ್ದರೆ ಸಬ್ಸಿಡಿ ಬರುವುದಿಲ್ಲ, ಗೃಹ ಬಳಕೆಯ ಅನಿಲ ಸಂಪರ್ಕ ವಾಣಿಜ್ಯ ಗ್ಯಾಸ್ ಸಂಪರ್ಕವಾಗಿ ಬದಲಾಗಲಿದೆ ಇಲ್ಲವೇ ಗ್ಯಾಸ್ ಸಂಪರ್ಕ ರದ್ದಾಗಲಿದೆ. ಇ-ಕೆವೈಸಿ ಮಾಡದೇ ಇದ್ದರೆ ಮುಂದಿನ ದಿನಗಳಲ್ಲಿ ಗ್ಯಾಸ್‌ಗೆ ರೂ.1400 ಬೆಲೆ ಕೊಡಬೇಕಾಗುತ್ತದೆ. ಇತ್ಯಾದಿ ಮೆಸೇಜ್ ಕಳೆದು ಕೆಲವು ದಿನಗಳಲ್ಲಿ ಸಾಮಾಜಿಕ ಜಾಲತಾಣ, ವಾಟ್ಸಫ್‌ಗಳಲ್ಲಿ ಹರಿದಾಡುತ್ತಿದ್ದು ಅಡುಗೆ ಅನಿಲ ಸಂಪರ್ಕ ಹೊಂದಿದವರು ಗೊಂದಲಕ್ಕೆ ಈಡಾಗಿದ್ದಾರೆ. ಗ್ಯಾಸ್ ಸಂಪರ್ಕ ಹೊಂದಿದವರು ಗ್ಯಾಸ್ ಏಜೆನ್ಸಿಗೆ ತೆರಳಿ ಇ-ಕೆವೈಸಿ ಮಾಡಿಸಿಕೊಳ್ಳುತ್ತಿದ್ದಾರೆ. ಇಷ್ಟಕ್ಕೂ ಗ್ರಾಹಕರು ಗೊಂದಲಕ್ಕೆ ಈಡಾಗಲು ಕಾರಣವೇನು?


ಗೊಂದಲಮಯ ಮೆಸೇಜ್…!
ವಾಟ್ಸಫ್‌ಗಳಲ್ಲಿ ಹರಿದಾಡುತ್ತಿರುವ ಮೆಸೇಜ್‌ನಲ್ಲಿ ಗ್ಯಾಸ್ ಸಂಪರ್ಕ ಇರುವವರು ಡಿ.32 ರೊಳಗೆ ತಮ್ಮ ಗ್ಯಾಸ್ ಸಂಪರ್ಕಕ್ಕೆ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಮತ್ತು ಗ್ಯಾಸ್ ಏಜೆನ್ಸಿ ನೀಡಿರುವ ಪುಸ್ತಕ ಅಥವಾ ಕಾರ್ಡ್‌ನೊಂದಿಗೆ ಏಜೆನ್ಸಿ ಕಛೇರಿಗೆ ಭೇಟಿ ನೀಡಿ ಇ-ಕೆವೈಸಿ ಮಾಡಿಸಬೇಕು, ಕೆವೈಸಿ ಮಾಡಿಸಿದರೆ ಜ.1 ರಿಂದ ಸಬ್ಸಿಡಿ ಬರುತ್ತದೆ. ಈಗ ಇರುವ ಸಿಲಿಂಡರ್‌ಗೆ 903 ರೂ ಇದ್ದು ಸಬ್ಸಿಡಿಯ ಅನಂತರ 500 ರೂ.ಗೆ ಸಿಲಿಂಡರ್ ಸಿಗಲಿದೆ. ಕೆವೈಸಿ ಮಾಡದಿದ್ದರೆ ಸಬ್ಸಿಡಿ ರಹಿತವಾಗಿ ಗ್ಯಾಸ್ ಸಂಪರ್ಕವು ಕಮರ್ಷಿಯಲ್ ಆಗಿ ಮಾರ್ಪಡುತ್ತದೆ ಹಾಗೂ ಸಿಲಿಂಡರ್‌ಗೆ ರೂ.1400 ನೀಡಬೇಕಾಗುತ್ತದೆ ಎಂಬ ಸಂದೇಶವೇ ಗ್ರಾಹಕರ ಗೊಂದಲಕ್ಕೆ ಕಾರಣವಾಗಿದೆ.


ಉಜ್ವಲ ಗ್ಯಾಸ್ ಸಂಪರ್ಕಕ್ಕೆ ಮಾತ್ರ ಇ-ಕೆವೈಸಿ
ಉಜ್ವಲ ಅಡುಗೆ ಅನಿಲ ಸಂಪರ್ಕ ಹೊಂದಿದದವರಿಗೆ ಮಾತ್ರ ಆಧಾರ್ ದೃಢೀಕರಣ ಇ-ಕೆವೈಸಿ ಕಡ್ಡಾಯವಾಗಿದೆ ಎಂದು ಆಹಾರ ಇಲಾಖೆ ಉಪನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ. ಉಜ್ವಲ ಗ್ಯಾಸ್ ಸಂಪರ್ಕ ಬಿಟ್ಟು ಉಳಿದಂತೆ ಇತರ ಗ್ಯಾಸ್ ಬಳಕೆದಾರರಿಗೆ ಗ್ಯಾಸ್ ಸಬ್ಸಿಡಿಯ ಬಗ್ಗೆ ಪ್ರಸ್ತುತ ಯಾವುದೇ ಘೋಷಣೆ ಆಗಿಲ್ಲ. ಗ್ಯಾಸ್ ಬಳಕೆದಾರರು ಯಾವುದೇ ಗೊಂದಲಕ್ಕೆ ಒಳಗಾಗಬಾರದು ಎಂದು ಅವರು ತಿಳಿಸಿದ್ದಾರೆ.

‘ ಉಜ್ವಲ ಗ್ಯಾಸ್ ಸಂಪರ್ಕ ಹೊಂದಿದವರಿಗೆ ಮಾತ್ರ ಇ-ಕೆವೈಸಿಗೆ ಆದೇಶ ಬಂದಿದೆ. ಉಳಿದಂತೆ ಯಾವುದೇ ಆದೇಶ ಬಂದಿಲ್ಲ. ಸಬ್ಸಿಡಿ ಬಗ್ಗೆಯೂ ಯಾವುದೇ ಮಾಹಿತಿ ಬಂದಿಲ್ಲ. ಗ್ರಾಹಕರು ಗೊಂದಲಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ.’
ಬೂಡಿಯಾರ್ ರಾಧಾಕೃಷ್ಣ ರೈ, ಮಾಲಕರು ಇಂಡೇನ್ ಗ್ಯಾಸ್ ಏಜೆನ್ಸಿ ಕುಂಬ್ರ

LEAVE A REPLY

Please enter your comment!
Please enter your name here