ಪಡ್ನೂರು ಶ್ರೀರಾಮ ಫ್ರೆಂಡ್ಸ್‌ನ 11ನೇ ವರ್ಷದ ವಾರ್ಷಿಕೋತ್ಸವ – ರಕ್ತದಾನ ಶಿಬಿರ, ಉಚಿತ ಕಣ್ಣಿನ ತಪಾಸಣಾ ಶಿಬಿರ

0

ಪುತ್ತೂರು: ಪಡ್ನೂರು ಶ್ರೀರಾಮ್ ಫ್ರೆಂಡ್ಸ್ ಇದರ 11ನೇ ವಾರ್ಷಿಕೋತ್ಸವದ ಅಂಗವಾಗಿ ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಮತ್ತು ಕಾಮತ್ ಒಪ್ಟಿಕಲ್ಸ್ ಪುತ್ತೂರು ಇದರ ಸಹಕಾರದೊಂದಿಗೆ ರಕ್ತದಾನ ಶಿಬಿರ ಹಾಗೂ ಕಣ್ಣಿನ ಉಚಿತ ತಪಾಸಣಾ ಶಿಬಿರವು ಡಿ.23ರಂದು ಪಡ್ನೂರು ಹಿ.ಪ್ರಾ ಶಾಲಾ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್‌ನ ವೈದ್ಯಾಧಿಕಾರಿ ಡಾ.ಭಾಸ್ಕರ್ ಎಸ್ ಮಾತನಾಡಿ, ಹಲವು ದಾನಗಳಲ್ಲಿ ರಕ್ತದಾನ ಅತೀ ಸುಲಭದಲ್ಲಿ ಮಾಡಬಹುದಾದ ದಾನವಾಗಿದೆ. ನಾವು ನೀಡುವ ಒಂದು ಯೂನಿಟ್ ರಕ್ತವು ಇನ್ನೊಬ್ಬರ ಜೀವ ಉಳಿಸುವಲ್ಲಿ ಪ್ರಮುಖವಾಗಿದೆ. ರಕ್ತಕ್ಕೆ ಬದಲಿ ವ್ಯವಸ್ಥೆಯಿಲ್ಲಿದೇ ಇದ್ದು ರಕ್ತವೇ ಆಗಬೇಕು. ರಕ್ತ ಸಂಗ್ರಹಣೆಗೆ ಶಿಬಿರಗಳ ಆವಶ್ಯಕತೆಯಿದ್ದು ಯುವಕ ಸಮೂಹ ಶ್ರೀರಾಮ್ ಫ್ರೆಂಡ್ಸ್‌ನ ವಾರ್ಷಿಕೋತ್ಸವದ ಅಂಗವಾಗಿ ರಕ್ತದಾನ ಹಾಗೂ ಕಣ್ಣಿನ ತಪಾಸಣಾ ಶಿಬಿರ ಆಯೋಜಿಸಿರುವುದನ್ನು ಶ್ಲಾಘಿಸಿದ ಅವರು ರಕ್ತದಾನದ ಮಹತ್ವ, ವಿಧಾನ, ಮುನ್ನೆಚ್ಚರಿಕಾ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಮುಖ್ಯ ಅತಿಥಿಯಾಗಿದ್ದ ರೋಟರಿ ಕ್ಲಬ್ ಪುತ್ತೂರು ಇದರ ಅಧ್ಯಕ್ಷ ಜೈರಾಜ್ ಭಂಡಾರಿ ಮಾತನಾಡಿ, ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ರೋಟರಿ ಕ್ಲಬ್ ಮೂಲಕ ಡಯಾಲಿಸಿಸ್ ಕೇಂದ್ರ ಪ್ರಾರಂಭಿಸಿ ಆರ್ಥಿಕವಾಗಿ ಹಿಂದುಳಿದವರಿಗೆ ರಿಯಾಯಿತಿ ದರದಲ್ಲಿ ಸೇವೆ, ಕಣ್ಣಿನ ಆಸ್ಪತ್ರೆ ಪ್ರಾರಂಭಿಸಿ ಅಲ್ಲಿ ತಿಂಗಳ ಎರಡನೇ ಹಾಗೂ ಮೂರನೇ ಮಂಗಳವಾರ ಶಿಬರದ ಮೂಲಕ ಜನರಿಗೆ ಸೇವೆ ನೀಡಲಾಗುತ್ತಿದೆ.
ಜನ ಸಾಮಾನ್ಯರ ಆವಶ್ಯಕತೆ ಪೂರೈಸುವುದು ನಮ್ಮ ಉದ್ದೇಶವಾಗಿದ್ದು ಈ ವರ್ಷ 7 ರೋಟರಿ ಕ್ಲಬ್‌ಗಳ ಮೂಲಕ ಅಂಗನವಾಡಿ ಪುನಶ್ಚೇತನ ಕಾರ್ಯವನ್ನು ನಡೆಸಲಾಗುತ್ತಿದೆ ಎಂದರು.
ಬನ್ನೂರು ಗ್ರಾ.ಪಂ ಸದಸ್ಯೆ ರಮಣಿ ಡಿ ಗಾಣಿಗ ಮಾತನಾಡಿ, ಹಲವು ಸಾಮಾಜಿಕ ಚಟುವಟಿಕೆಗಳಮೂಲಕ ಗ್ರಾಮದ ಅಭಿವೃದ್ಧಿಗೆ ಸಹಕಾರಿಯಾಗಿರುವ ಶ್ರೀರಾಮ್ ಫ್ರೆಂಡ್ಸ್ ಇನ್ನಷ್ಟು ಉತ್ತಮ ಕಾರ್ಯಕ್ರಮ ಆಯೋಜಿಸುವಂತಾಗಲಿ ಎಂದರು.
ಬನ್ನೂರು ಗ್ರಾ.ಪಂ ಸದಸ್ಯ ಗಿರಿಧರ ಪಂಜಿಗುಡ್ಡೆ ಮಾತನಾಡಿ, ರಕ್ತದಾನದ ಶಿಬಿರದ ಮೂಲಕ ಶ್ರೀರಾಮ್ ಫ್ರೆಂಡ್ಸ್ ಮಾಡುತ್ತಿದೆ. ಈ ಶಿಬಿರವು ಮಕ್ಕಳಿಗೂ ಪ್ರೇರಣೆಯಾಗಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬನ್ನೂರು ಗ್ರಾ.ಪಂ ಅಧ್ಯಕ್ಷೆ ಸ್ಮಿತಾ ಮಾತನಾಡಿ, ಸಮಾಜ ಸೇವ ನೀಡುವ ಉದ್ದೇಶ ಹೊಂದಿರುವ ಶ್ರೀರಾಮ್ ಫ್ರೆಂಡ್ಸ್‌ನ ಸೇವಾ ಕಾರ್ಯಗಳು ಶ್ಲಾಘನೀಯ ಕಾರ್ಯ. ಸೇವಾ ಕಾರ್ಯಗಳು ಗ್ರಾಮ ಅಭಿವೃದ್ಧಿ ಸಹಕಾರಿಯಾಗಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಲಿ ಎಂದರು.
ಪಡ್ನೂರು ಶಾಲಾ ಮುಖ್ಯ ಶಿಕ್ಷಕಿ ಜೀವನ ರಶ್ಮೀ, ಬನ್ನೂರು ಗ್ರಾ.ಪಂ ಸದಸ್ಯೆ ವಿಮಲ ಸಂದರ್ಭೋಚಿತವಾಗಿ ಮಾತನಾಡಿದರು. ಬನ್ನೂರು ಗ್ರಾ.ಪಂ ಸದಸ್ಯ ಗಣೇಶ್ ಪಳ್ಳ, ಯರ್ಮುಂಜ ಪಳ್ಳ ಗೆಳೆಯರ ಬಳಗದ ಅಧ್ಯಕ್ಷ ಕುಶಲ ಗೌಡ ಪಂಜಿಗುಡ್ಡೆ, ಪಡ್ನೂರು ಜನಾರ್ದನ ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಆಟಿಕ್ಕು, ಪಡ್ನೂರು ನವೋದಯ ಒಕ್ಕೂಟದ ಅಧ್ಯಕ್ಷೆ ಚಂದ್ರಾವತಿ, ಪಡ್ನೂರು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಸೀತಾರಾಮ ಬೇರಿಕೆ, ಪಡ್ನೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಾಮಣ್ಣ ಗೌಡ ಪುಳು, ಪಡ್ನೂರು ಸರಸ್ವತಿ ಯುವತಿ ಮಂಡಲದ ಅಧ್ಯಕ್ಷೆ ರೇವತಿ, ಶ್ರೀರಾಮ್ ಫ್ರೆಂಡ್ಸ್‌ನ ಅಧ್ಯಕ್ಷ ಶಿಶಿರ್ ಪೆರ್ವೋಡಿ, ಕಾರ್ಯದರ್ಶಿ ಕೀರ್ತಿ ಕುಂಜಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಭಾರತ ಮಾತೆ ಭಾವಚಿತ್ರಕ್ಕೆ ಪುಷ್ಪಾರ್ಚನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕೀರ್ತನ್ ಮತ್ತು ತಂಡ ಪ್ರಾರ್ಥಿಸಿದರು. ಕಾರ್ಯದರ್ಶಿ ಅಭಿಷೇಕ್ ಬೇರಿಕೆ ಸ್ವಾಗತಿಸಿದರು. ವಿಶ್ವರಾಜ್, ಅಶೋಕ್ ಕುಂಜಾರು, ರತನ್, ಸವಿನ್, ಪೃಥ್ವಿರಾಜ್, ನಿತಿನ್ ಮುಂಡಾಜೆ, ಪ್ರಕಾಶ್ ಮುಂಡಾಜೆ, ವಿಶ್ವನಾಥ ಪಂಜಿಗುಡ್ಡೆ, ನಿತಿನ್, ಅಕ್ಷಯ್, ವಸಂತ ಮುಂಡಾಜೆ, ಅನೂಪ್ ಬೇರಿಕೆ, ರಂಜನ್ ಪೊಟ್ಟಗುಳಿ, ಯತೀಶ್ ಪಂಜಿಗುಡ್ಡೆ ಅತಿಥಿಗಳನ್ನು ಶಾಲು, ಸ್ಮರಣಿಕೆ ನೀಡಿ ಗೌರವಿಸಿದರು. ನವೀನ್ ಪಡ್ನೂರು ಕಾರ್ಯಕ್ರಮ ನಿರೂಪಿಸಿದರು.
ವಾರ್ಷಿಕೋತ್ಸವದ ಅಂಗವಾಗಿ ಸಂಜೆ ಸ್ಥಳೀಯ ಪ್ರತಿಭೆಗಳು, ಅಂಗನವಾಡಿ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಸಭಾ ಕಾರ್ಯಕ್ರಮ, ಅನ್ನಸಂತರ್ಪಣೆ, ಶ್ರೀಲಲಿತೆ ಕಲಾವಿದೆರ್ ಮಂಗಳೂರು ಇವರಿಂದ ‘ಗರುಡ ಪಂಚೆಮಿ’ ಎಂಬ ಪೌರಾಣಿಕ ತುಳು ನಾಟಕ ಪ್ರದರ್ಶನ ನಡೆದ ಬಳಿಕ ಕರುಣೋದಯ ಮ್ಯಾಟ್ ಅಂಕಣದಲ್ಲಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here