ನಿಡ್ಪಳ್ಳಿ; ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮ

0

ಗಾಂಧಿಯವರ ಕನಸಿನ ಭಾರತ ಮೋದಿಯವರ ಸಂಕಲ್ಪ- ಪದ್ಮನಾಭ ಬೋರ್ಕರ್

 ನಿಡ್ಪಳ್ಳಿ; ಕೇಂದ್ರ ಸರಕಾರದ ಜನಪರ ಯೋಜನೆಗಳನ್ನು ಜನಸಾಮಾನ್ಯರ ಬಳಿಗೆ ತಲುಪಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ವಿಕಸಿತ ಭಾರತ ಸಂಕಲ್ಪ ರಥಯಾತ್ರೆಯು ಡಿ.24 ರಂದು ನಿಡ್ಪಳ್ಳಿ ಗ್ರಾಮಕ್ಕೆ ಆಗಮಿಸಿತು.

 ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಮೂಲಕ ಬೆಟ್ಟಂಪಾಡಿ ಬ್ಯಾಂಕ್ ಅಫ್ ಬರೋಡಾ ನಿಡ್ಪಳ್ಳಿ ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ಪ್ರಾಯೋಜಿಸಲ್ಪಟ್ಟ ಮಾಹಿತಿ ಕಾರ್ಯಾಗಾರವನ್ನು ನಿಡ್ಪಳ್ಳಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪದ್ಮನಾಭ ಬೋರ್ಕರ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಗ್ರಾಮದ ಅಭಿವೃದ್ಧಿಯೊಂದಿಗೆ ಬಡ ಜನರ ಆರ್ಥಿಕ ಸ್ಥಿತಿ ಬೆಳವಣಿಗೆ ಹೊಂದಬೇಕು.ಯುವಜನತೆ ಪೇಟೆ ಕಡೆ ಮುಖ ಮಾಡದೆ ಹೆಚ್ಚೆಚ್ಚು ಕೃಷಿಗೆ ಒತ್ತು ನೀಡಬೇಕು. ಮುಂದೆ ಭಾರತ ಎಲ್ಲಾ ರಂಗದಲ್ಲಿಯೂ ಬಲಿಷ್ಠ ರಾಷ್ಟ್ರವಾಗುವ ಮೂಲಕ ಹಿಂದೆ ಗಾಂಧಿ ಕಂಡ ಕನಸಿನ ರಾಮರಾಜ್ಯವಾಗಬೇಕು ಎಂದರು.

 ಪಂಚಾಯತ್ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರತಿಯೊಬ್ಬರೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂಬ ಸಂಕಲ್ಪ ಮೋದಿಯವರ ಉತ್ತಮ ಜನಪರ ಯೋಜನೆಯನ್ನು ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ನಿಟ್ಟಿನಲ್ಲಿ ಕೈಗೊಂಡ ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ತಿಳಿಸಿದ ಅವರು ಸಾಧಕರನ್ನು ಸನ್ಮಾನಿಸಿದ್ದು ಅದು ಇತರರಿಗೆ ಪ್ರೇರಣೆಯಾಗಲಿ ಎಂದು ಹೇಳಿದರು.

 ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರ ಪುತ್ತೂರು ಇದರ ಆಪ್ತ ಸಮಾಲೋಚಕಿ ಗೀತಾ ವಿಜಯ್ ಕೇಂದ್ರ ಸರಕಾರದ ವಿವಿಧ ಜನಪರ ಯೋಜನೆಯನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವಂತಾಗಲು ದೇಶದ ಪ್ರತಿಯೊಂದು ಬ್ಯಾಂಕುಗಳನ್ನು ಒಳಗೊಂಡ ಆರ್ಥಿಕ ಸಾಕ್ಷರತಾ ಕೇಂದ್ರವನ್ನು ತೆರೆಯಲಾಗಿದೆ.ಇದರ ಮೂಲಕ ಯೋಜನೆಗಳ ಬಗ್ಗೆ ಅರಿವು ಮೂಡಿಸುವ  ಮತ್ತು ಅದನ್ನು ಅನುಷ್ಠಾನಗೊಳಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದರು.

ಫಲಾನುಭಾವಿಗಳಿಂದ ಮೆಚ್ಚುಗೆ:
ಕೇಂದ್ರ ಸರಕಾರದ ಯೋಜನೆಯಲ್ಲಿ ಪ್ರಯೋಜನ ಪಡೆದುಕೊಂಡ  ಫಲಾನುಭವಿಗಳಾದ  ಸಂಜೀವ ಪೂಜಾರಿ ಕಾನ, ಪ್ರಭಾಕರ ರೈ ಬಾಜುವಳ್ಳಿ, ನಿತ್ಯಾನಂದ ಬೋರ್ಕರ್ ಬ್ರಹ್ಮರಗುಂಡ, ರಾಜೇಶ್ ನೆಲ್ಲಿತ್ತಡ್ಕ, ಸತ್ಯನಾರಾಯಣ ರೈ ನುಳಿಯಾಲು ತನ್ನ ಅನುಭವವನ್ನು ಹೇಳಿ ಬಹಳ ಮೆಚ್ಚುಗೆ ವ್ಯಕ್ತಪಡಿಸಿದರು.

 ಬೆಟ್ಟಂಪಾಡಿ ಬ್ಯಾಂಕ್ ಆಫ್ ಬರೋಡಾದ ಮೇನೆಜರ್ ಭಾವನಾ, ಪಿಡಿಒ ಸಂಧ್ಯಾಲಕ್ಷ್ಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೃದ್ದಿ ಕೊಪ್ಪಳ ಪ್ರಾರ್ಥಿಸಿ, ಪಂಚಾಯತ್ ಸದಸ್ಯೆ ಗೀತಾ. ಡಿ ವಂದಿಸಿದರು. ಪ್ರಿಯದರ್ಶಿನಿ ಅಂಗ್ಲ ಮಾಧ್ಯಮ ಶಾಲಾ ಮುಖ್ಯ ಗುರು ರಾಜೇಶ್ ನೆಲ್ಲಿತ್ತಡ್ಕ ಕಾರ್ಯಕ್ರಮ ನಿರೂಪಿಸಿದರು.ಕೇಶವ ಆಚಾರ್ಯ ಕೊಪ್ಪಳ,ಗ್ರೆಟಾ ಡಿ’ ಸೋಜಾ, ರೇವತಿ ಅತಿಥಿಗಳಿಗೆ ಹೂ ನೀಡಿ ಗೌರವಿಸಿದರು. ಬ್ಯಾಂಕ್ ಸಿಬ್ಬಂದಿಗಳಾದ ಧನ್ಯಶ್ರೀ, ಭುವನೇಶ್ವರಿ , ಪ್ರಭಾಕರ ರೈ ಬಾಜುವಳ್ಳಿ,ಪಂಚಾಯತ್ ಸಿಬ್ಬಂದಿಗಳಾದ ಸಂಶೀನಾ, ವಿನೀತ್ ಕುಮಾರ್ ಸಹಕರಿಸಿದರು. ಆರೋಗ್ಯ ಇಲಾಖೆಯಿಂದ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಅಂಗನವಾಡಿ ಕಾರ್ಯಕರ್ತೆಯರು,ಆರೋಗ್ಯ ಸಹಾಯಕಿಯರು ,ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡರು. 

ಸಾಧಕರಿಗೆ ಗೌರವಾರ್ಪಣೆ; ಗ್ರಾಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಲಾಯಿತು. ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಖ್ಯಾತ ಲೇಖಕ ನಿವೃತ್ತ ಕನ್ನಡ ಪಂಡಿತ ವಿದ್ವಾನ್ ಡಾ.ಸದಾಶಿವ ಭಟ್ ಪಳ್ಳು,ಕೃಷಿ ಕ್ಷೇತ್ರದಲ್ಲಿ ಪ್ರಗತಿಪರ ಕೃಷಿಕ, ಉತ್ತಮ ಕೃಷಿಕ ಜಿಲ್ಲಾ ಪ್ರಶಸ್ತಿ ವಿಜೇತ ಕಾನ ಸಂಜೀವ ಪೂಜಾರಿ ಇವರನ್ನು ಗೌರವಿಸಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಬೆಟ್ಟಂಪಾಡಿ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿನಿ ಶ್ರೇಯಾ ಸಿ.ಎಚ್ ಚೆಲ್ಯರಮೂಲೆ, ದ್ವಿತೀಯ ಪಿ.ಯು.ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಬೆಟ್ಟಂಪಾಡಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ಮುಫೀದಾ ಇವರನ್ನು ಗೌರವಿಸಲಾಯಿತು. ಅಲ್ಲದೆ ಮುದ್ರಾ ಯೋಜನೆಯ ಫಲಾನುಭವಿ ಪವಿತ್ರ ಚೆಲ್ಯರಮೂಲೆ ಇವರನ್ನು ಗೌರವಿಸಲಾಯಿತು.

LEAVE A REPLY

Please enter your comment!
Please enter your name here