ತೆರೆದ ವಾಹನದಲ್ಲಿ ಮೆರವಣಿಗೆ, ವಿವಿಧ ಸಂಘ-ಸಂಸ್ಥೆಗಳಿಂದ ಅಭಿನಂದನೆ
ಪುತ್ತೂರು:ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ 67ನೇ ರಾಷ್ಟ್ರಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದು ಶಾಲೆ ಹಾಗೂ ಊರಿಗೆ ಕೀರ್ತಿ ತಂದ ಗುಮ್ಮಟೆಗದ್ದೆಯ ಜಿ.ಎಂ ಕೀರ್ತಿ ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕ ದಾಮೋದರ ಕಜೆಯವರನ್ನು ಡಿ.24ರಂದು ಭವ್ಯ ಸ್ವಾಗತ, ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿ ಅಭಿನಂದಿಸಲಾಯಿತು.
ಉತ್ತರ ಪ್ರದೇಶದಿಂದ ಆಗಮಿಸಿ ಕೀರ್ತಿ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ದಾಮೋದರರವರನ್ನು ಸಂಟ್ಯಾರ್ನಲ್ಲಿ ಸ್ವಾಗತಿಸಲಾಯಿತು. ಬಳಿಕ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯನ್ನು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಚಾಲನೆ ನೀಡಿದರು. ಸಂಟ್ಯಾರ್ನಿಂದ ಹೊರಟ ಮೆರವಣಿಗೆಯು ಚೆಲ್ಯಡ್ಕ, ರೆಂಜ ಭಜನಾ ಮಂದಿರ ಬಳಿ ತನಕ ಸಾಗಿ ನಂತರ ಹಿಂತಿರುಗಿ ಹುಟ್ಟೂರು ಗುಮ್ಮಟೆಗದ್ದೆಯ ತನಕ ಸಾಗಿತು. ಗುಮ್ಮಟೆಗದ್ದೆಯಲ್ಲಿ ಸಮೃದ್ಧಿ ಯುವ ವೇದಿಕೆ, ವೀರ ಕೇಸರಿ ಸ್ಪೋರ್ಟ್ಸ್ ಕ್ಲಬ್ ಬೈರೋಡಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಹಾಗೂ ಊರವರನ್ನು ಕೀರ್ತಿ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ದಾಮೋದರರವರನ್ನು ಅಭಿನಂದಿಸಿದರು.
ಸಮೃದ್ಧಿ ಯುವ ವೇದಿಕೆ ಗೌರವಾಧ್ಯಕ್ಷ ದಿನೇಶ್ ಮರಡಿತ್ತಾಯ ಅಭಿನಂದನಾ ಭಾಷಣ ಮಾಡಿದರು. ಬೆಟ್ಟಂಪಾಡಿ ಗ್ರಾ.ಪಂ ಅಧ್ಯಕ್ಷೆ ವಿದ್ಯಾಶ್ರೀ ಸುರೇಶ್ ಸರಳಿಕಾನ, ಸದಸ್ಯರಾದ ಪ್ರಕಾಶ್ ರೈ ಬೈಲಾಡಿ, ಉಮಾವತಿ ಎಸ್ ಮಣಿಯಾಣಿ, ಬೆಳಿಯೂರುಕಟ್ಟೆ ಸ.ಪ.ಪೂ ಕಾಲೇಜಿನ ಪ್ರಾಂಶುಪಾಲ ಹರಿಪ್ರಕಾಶ್ ಬೈಲಾಡಿ, ಗುಮ್ಮಟೆಗದ್ದೆ ಸಮೃದ್ಧಿ ಯುವ ವೇದಿಕೆ ಅಧ್ಯಕ್ಷ ಹರೀಶ್ ಗೌಡ, ಕೀರ್ತಿಯವರ ತಂದೆ ಮೋನಪ್ಪ ಗೌಡ ಮತ್ತು ತಾಯಿ ಲಲಿತಾ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.