ಮುಕ್ವೆ: ಧಾರ್ಮಿಕ ಮತ ಪ್ರವಚನ ಸಮಾರೋಪ

0

ಪುತ್ತೂರು: ನಮ್ಮ ಮರಣವನ್ನು ನೆನಪಿಸುತ್ತಾ ಜೀವನ ನಡೆಸಿದರೆ ಯಾವುದೇ ಕೆಡುಕಿನ ಕ್ಷೇತ್ರದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅಂತರ್‌ರಾಷ್ಟ್ರೀಯ ಖ್ಯಾತಿಯ ಪ್ರಭಾಷಣಗಾರ ಎ.ಎಂ ನೌಶಾದ್ ಬಾಖವಿ ತಿರುವನಂತಪುರಂ ಹೇಳಿದರು.
ಮುಕ್ವೆ ರಹ್ಮಾನಿಯಾ ಜುಮಾ ಮಸೀದಿ ಅಧಿನದಲ್ಲಿ ನೂತನ ಮದ್ರಸ ಕಟ್ಟಡ ನಿರ್ಮಾಣದ ಅಂಗವಾಗಿ ಹಮ್ಮಿಕೊಂಡಿದ್ದ ಮೂರು ದಿನಗಳ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮದ ಸಮಾರೋಪ ದಿನವಾದ ಡಿ.31ರಂದು ಅವರು ಮುಖ್ಯ ಪ್ರಭಾಷಣ ನಡೆಸಿದರು.
ಈ ಭೂಮಿಯಲ್ಲಿ ಯಾರೂ ಶಾಶ್ವತ ಅಲ್ಲ, ನಮ್ಮ ಆಸ್ತಿ, ಸಂಪತ್ತು ಎಲ್ಲವೂ ಅಲ್ಲಾಹು ನಮಗೆ ನೀಡುವ ಅನುಗ್ರಹ. ಮರಣ ನಮ್ಮ ಬೆನ್ನ ಹಿಂದೆಯೇ ಹಿಂಬಾಲಿಸುತ್ತಿರುವಾಗ ಪರಿಶುದ್ಧ ಜೀವನ ನಡೆಸಬೇಕು. ನಾವು ಮಾಡುವ ದಾನ ಧರ್ಮಗಳು ಪಾರತ್ರಿಕ ವಿಜಯಕ್ಕೆ ಕಾರಣವಾಗಲಿದೆ ಎಂದು ಅವರು ಹೇಳಿದರು.

ಮದ್ರಸ ಕಟ್ಟಡಕ್ಕೆ ಎಲ್ಲರೂ ಸಹಕರಿಸಿ-ಹುಸೈನ್ ದಾರಿಮಿ
ಪ್ರಸ್ತಾವಿಕವಾಗಿ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ ಮಾತನಾಡಿ ತನ್ನದೇ ಆದ ಇತಿಹಾಸ ಹೊಂದಿರುವ ಮುಕ್ವೆ ಮಸೀದಿ, ದರ್ಗಾ ಪರಿಸರದಲ್ಲಿ ನೂತನವಾಗಿ ಮದ್ರಸ ಕಟ್ಟಡವೊಂದನ್ನು ನಿರ್ಮಿಸಲು ಇಲ್ಲಿನ ಮಸೀದಿಯವರು ತೀರ್ಮಾನಿಸಿದ್ದು ಇದಕ್ಕೆ ಎಲ್ಲರೂ ಮುಕ್ತ ಮನಸ್ಸಿನಿಂದ ಸಹಕಾರ ಕೊಡಬೇಕು, ದಾನ ಮಾಡುವವರು ಸೋತ ಇತಿಹಾಸವಿಲ್ಲ ಎಂದು ಹೇಳಿದರು.

ಎಲ್ಲರೂ ಒಟ್ಟಾಗಿ ಜೀವನ ನಡೆಸಿದಾಗ ದೇಶ ವಿಶ್ವಗುರುವಾಗಲು ಸಾಧ್ಯ-ಅಶೋಕ್ ರೈ
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ಪರಸ್ಪರ ಅನ್ಯೋನ್ಯತೆಯಿಂದ ಎಲ್ಲ ಧರ್ಮದವರು ಜೀವಿಸುತ್ತಿದ್ದ ನಾಗರಿಕ ಸಮಾಜದಲ್ಲಿ ರಾಜಕೀಯ ಲಾಭಕ್ಕಾಗಿ ಪರಸ್ಪರ ಸಂಬಂಧಗಳು ದೂರವಾಗುತ್ತಿದೆ. ಸಾಹೋದರ್ಯತೆಯಿಂದ ಜಾತಿ, ಧರ್ಮಗಳನ್ನು ಬದಿಗಿಟ್ಟು ಒಟ್ಟಾಗಿ ಜೀವನ ನಡೆಸಿದಾಗ ಮಾತ್ರ ದೇಶ ವಿಶ್ವಗುರುವಾಗಲು ಸಾಧ್ಯ ಎಂದು ಅವರು ಹೇಳಿದರು. ಯುವಕರು ಉತ್ತಮ ಹಾದಿಯಲ್ಲಿ ಮುನ್ನಡೆದಾಗ ಸಮಾಜವೂ ನೆಮ್ಮದಿ ಕಾಣುತ್ತದೆ, ಹಾಗಾಗಿ ಯುವ ಸಮೂಹ ಸಮಾಜಕ್ಕೆ ಆದರ್ಶವಾಗುವ ರೀತಿಯಲ್ಲಿ ಜೀವನ ನಡೆಸಬೇಕು ಎಂದು ಅವರು ಕಿವಿಮಾತು ಹೇಳಿದರು.
ಬಳಿಕ ಶಾಸಕರನ್ನು ಮಸೀದಿ ವತಿಯಿಂದ ಸನ್ಮಾನಿಸಲಾಯಿತು. ಶಾಸಕರು ತಮ್ಮ ವೈಯಕ್ತಿಕ ನೆಲೆಯಲ್ಲಿ 25 ಸಾವಿರ ರೂ ಮಸೀದಿಗೆ ನೀಡಿದರು. ಇದೇ ಸಂದರ್ಭದಲ್ಲಿ ಶುಭ ಹಾರೈಸಿದ ಕಾವು ಹೇಮನಾಥ ಶೆಟ್ಟಿಯವರು ತಮ್ಮ ವೈಯಕ್ತಿಕ ನೆಲೆಯಲ್ಲಿ 10 ಸಾವಿರ ರೂ. ದೇಣಿಗೆ ನೀಡಿದರು.

ಶಾಸಕರಿಗೆ ಮನವಿ ಸಲ್ಲಿಕೆ:
ಮಸೀದಿ ಆಡಳಿತ ಕಮಿಟಿ ವತಿಯಿಂದ ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಮುಕ್ವೆ ಮಸೀದಿಯ ಅಧ್ಯಕ್ಷ ಇಬ್ರಾಹಿಂ ಮುಲಾರ್ ಶಾಸಕ ಅಶೋಕ್ ರೈಯವರಿಗೆ ನೀಡಿದರು.

ಮದ್ರಸ ಸಂಸ್ಕಾರ ಕಲಿಸುವ ಕೇಂದ್ರ-ನಯೀಂ ಫೈಝಿ
ಸ್ವಾಗತಿಸಿದ ಕಲ್ಲುಗುಂಡಿ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಎಚ್.ಎಂ ಅಹ್ಮದ್ ನಯೀಂ ಫೈಝಿ ಮಾತನಾಡಿ ಮದ್ರಸಗಳು ಸಂಸ್ಕಾರ, ಸಂಸ್ಕೃತಿ ಕಲಿಸುವ ಕೇಂದ್ರವಾಗಿದ್ದು ತೆರೆದ ಪುಸ್ತಕವಾಗಿದೆ ಎಂದು ಹೇಳಿದರು.

ಅಬ್ದುಲ್ ಖಾದರ್ ಹಾಜಿ ಉಸ್ತಾದ್ ದುವಾ ಮಾಡಿದರು. ಸ್ವಾಗತ ಸಮಿತಿ ಅಧ್ಯಕ್ಷ ಅಶ್ರಫ್ ಗ್ಯಾಲಕ್ಸಿ ಚಿಕ್ಕಾಲ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮುಕ್ವೆ ಮಸೀದಿಯ ಖತೀಬ್ ಅನ್ವರ್ ಅಲಿ ದಾರಿಮಿ ಅಜ್ಜಾವರ, ಮುಕ್ವೆ ಮಸೀದಿಯ ಅಧ್ಯಕ್ಷ ಇಬ್ರಾಹಿಂ ಮುಲಾರ್, ಸುಲ್ತಾನ್ ಗ್ರೂಪ್ ಮಂಗಳೂರು ಇದರ ಎಂಡಿ ಡಾ.ಅಬ್ದುಲ್ ರವೂಫ್, ಯೂಸುಫ್ ಹಾಜಿ ಬೇರಿಕೆ, ಪುತ್ತುಹಾಜಿ ಸವಣೂರು, ಯಾಕೂಬ್ ಮುಲಾರ್, ಖಾಸಿಂ ಹಾಜಿ ಶಿಬರ, ಅಬ್ದುಲ್ ರಹಿಮಾನ್ ಹಾಜಿ ಬಾಳಾಯ, ಅಬ್ದುಲ್ಲ ಹಾಜಿ ಶಿಬರ, ಹನೀಫ್ ಟಿಂಬರ್ ಮುಕ್ವೆ, ಎಲ್.ಟಿ ಅಬ್ದುಲ್ ರಝಾಕ್ ಹಾಜಿ, ಜಮಾಲುದ್ದೀನ್ ಹಾಜಿ, ಸಿದ್ದೀಕ್ ಕೂರ್ನಡ್ಕ, ರಫೀಕ್ ಮಣಿಯ, ಅಬೂಬಕ್ಕರ್ ಮುಲಾರ್, ಅಬೂಬಕ್ಕರ್ ಮಾಯಂಗಲ, ಇಬ್ರಾಹಿಂ ಹಾಜಿ ಶಿಬರ, ಉಮ್ಮರ್ ಸಾಗರ್ ಮುಕ್ವೆ, ಅಬ್ದುಲ್ ರಹ್ಮಾನ್ ಹಾಜಿ ಮುಲಾರ್, ಉಮ್ಮರ್ ಪಟ್ಟೆ, ಜುನೈದ್ ಪಿಕೆ, ಮಜೀದ್ ಮಾಡಾವು, ಉಮ್ಮರ್ ಹಾಜಿ ಕೆನರಾ, ರಿಯಾಝ್ ಫೈಝಿ, ಹಮೀದ್ ಹಾಜಿ ಸುಳ್ಯ, ಫೈರೋಝ್ ಪರ್ಲಡ್ಕ, ಅಬ್ದುರ್ರಹ್ಮಾನ್ ಬೆದ್ರಾಳ, ಝುಬೈರ್ ಮರೀಲ್, ಶರೀಫ್, ಇಕ್ಬಾಳ್ ಬಾಳಿಲ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here