ಪುತ್ತಿಗೆ ಶ್ರೀದ್ವಯರಿಗೆ ಪೌರ ಸನ್ಮಾನ – ಶ್ರೀ ಡಾ| ಸುಗುಣೇಂದ್ರ ತೀರ್ಥರಿಂದ ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ

0

ಪುತ್ತೂರು: ಚತುರ್ಥ ಬಾರಿಗೆ ಪರ್ಯಾಯ ಪೀಠಾರೋಹಣ ಮಾಡಲಿರುವ ಉಡುಪಿ ಪುತ್ತಿಗೆ ಮಠಾಧಿಶರಾದ 1008 ಶ್ರೀ ಡಾ| ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರಿಗೆ ಪೌರ ಸನ್ಮಾನ ಕಾರ್ಯಕ್ರಮ ಜ.4ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ಶ್ರೀಗಳ ಸಂಕಲ್ಪದಂತೆ ಆತ್ಮೋದ್ದಾರ ಮತ್ತು ಲೋಕಕಲ್ಯಾಣಾರ್ಥವಾಗಿ ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ ಕಾರ್ಯಕ್ರಮವೂ ನಡೆಯಿತು. ಶ್ರೀಗಳು ಸಾಂಕೇತಿವಾಗಿ ಭಗವದ್ಗೀತೆಯ ಪುಸ್ತಕ ಮತ್ತು ದೀಕ್ಷೆಯನ್ನು ನೀಡಿದರು.

ಕೃಷ್ಣನ ಅನುಗ್ರಹಕ್ಕಾಗಿ ಭಗದ್ಗೀತೆಯ ಪಠಣ ಮಾಡಿ: ಪೌರ ಸನ್ಮಾನ ಸ್ವೀಕರಿಸಿ ಆಶೀರ್ವಚನ ನೀಡಿದ ಪುತ್ತಿಗೆ ಶ್ರೀ ಡಾ| ಸುಗುಣೇಂದ್ರ ತೀರ್ಥ ಶ್ರೀಪಾದರು, ವಿಶ್ವ ಗೀತಾ ಪರ್ಯಾಯಕ್ಕೆ ಪುತ್ತೂರಿನ ಭಕ್ತರಿಗೆ ಸ್ವಾಗತ ಕೋರುತ್ತೇನೆ. ಭಗವಂತನ ಅನುಗ್ರಹಕ್ಕಾಗಿ ನಾವೆಲ್ಲರೂ ದೇವರ ಪೂಜೆ ಮಾಡಬೇಕು. ಭಗವದ್ಗೀತೆಯ ಮೂಲಕ ನಾವು ಗರಿಷ್ಟ ಪ್ರಮಾಣದ ಅನುಗ್ರಹ ಪಡೆಯಬಹುದು. ಕೃಷ್ಣನ ಅನುಗ್ರಹ ಬೇಕಾದರೆ ಕೃಷ್ಣನಿಗೆ ಪ್ರೀತಿಯಾಗಬೇಕು. ಕೃಷ್ಣನಿಗೆ ಪ್ರೀತಿಯಾಗಬೇಕಾದರೆ ಗೀತೆಯನ್ನು ಪಠಣ ಮಾಡಬೇಕು ಎಂದರು. ನನ್ನ ಗೀತೆಯನ್ನು ಯಾರು ಓದುತ್ತಾರೋ ಅವರಷ್ಟು ಇಷ್ಟವಾಗುವವರು ನನಗೆ ಬೇರೆ ಯಾರು ಇಲ್ಲ. ಅವನಿಗೆ ನಾನು ಸಂಪೂರ್ಣ ಅನುಗ್ರಹ ಮಾಡುತ್ತೇನೆ ಎಂದು ಶ್ರೀ ಕೃಷ್ಣನೇ ಗೀತೆಯ ಕೊನೆಯಲ್ಲಿ ಘೋಷಣೆ ಮಾಡಿದ್ದಾನೆ. ಹಾಗಾಗಿ ನಾವೆಲ್ಲ ಶ್ರೀಕೃಷ್ಣ ಅನುಗ್ರಹಕ್ಕಾಗಿ ಮಾಡುವ ಸೇವೆ ಪರಿಪೂರ್ಣವಾಗಿ ದೊರಕುವುದು ಭಗದ್ಗೀತೆಯ ಮೂಲಕ ಎಂದು ಅರ್ಥೈಸಬೇಕು. ಹಾಗಾಗಿ ಅಂತಹ ಗೀತೆಯನ್ನೇ ಸಮರ್ಪಣೆ ಮಾಡಿದಾಗ ನಮ್ಮ ಬದುಕು ಇನ್ನಷ್ಟು ಅರ್ಥಪೂರ್ಣವಾಗುತ್ತದೆ ಎಂದು ಹೇಳಿದರು. ಈ ನಿಟ್ಟಿನಲ್ಲಿ ನಾವು ನಮ್ಮ 4ನೇ ಪರ್ಯಾಯವನ್ನು ಭಗದ್ಗೀತಾ ಪರ್ಯಾಯ ಎಂದು ನಾಮಕರಣ ಮಾಡಿದ್ದೇವೆ ಎಂದರು.

ದೇವತಾರಾಧನೆ ನಡೆದಷ್ಟು ಒಳ್ಳೆಯದಾಗುತ್ತದೆ: ಉಡುಪಿಯಲ್ಲಿ ಶ್ರೀಕೃಷ್ಣನ ಪೂಜೆ ವೈಯುಕ್ತಿಕವಲ್ಲ. ಜಗದ್ಗುರು ಶ್ರೀ ಮಧ್ವಾಚಾರ್ಯರು ಜಗತ್‌ಕಲ್ಯಾಣಕ್ಕಾಗಿ ಉಡುಪಿಯಲ್ಲಿ ನಿರಂತರ ಕೃಷ್ಣನ ಆರಾಧನೆ ಆರಂಭಿಸಿದ್ದರು. ಲೋಕಕಲ್ಯಾಣಾರ್ಥವಾದ ಪೂಜೆಯನ್ನು ಎಲ್ಲರೂ ಸೇರಿ ಮಾಡಿದರೆ ಅದಕ್ಕೆ ವಿಶೇಷವಾದ ಅರ್ಥ ಬರುತ್ತದೆ. ವಿಶ್ವದ ಎಲ್ಲಾ ಭಕ್ತರು ಸೇರಿ ಮಾಡಬೇಕೆಂದು ಎಂಬ ಉದ್ದೇಶದಿಂದ ವಿಶ್ವಗೀತಾ ಪರ್ಯಾಯ ಮಾಡಿದ್ದೇವೆ. ಭಗವಂತನ ಅನುಗ್ರಹ ವಿಶ್ವಕ್ಕೆ ಅಗತ್ಯವಿದೆ. ದೇವತಾರಾಧನೆ ಎಷ್ಟು ಜಾಸ್ತಿ ನಡೆಯುತ್ತದೆಯೋ ಅಷ್ಟು ಒಳ್ಳೆಯದಾಗುತ್ತದೆ ಎಂದು ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.

ಪುತ್ತಿಗೆ ಶ್ರೀಗಳು ಇವತ್ತಿನ ಜಗದ್ಗುರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಮಾತನಾಡಿ, ನಾವೆಲ್ಲ ವಿದೇಶದಲ್ಲಿರುವ ನಮ್ಮವರಿಂದ ಕಾರ್ಯಕ್ರಮಗಳಿಗೆ ಆರ್ಥಿಕ ವ್ಯವಸ್ಥೆಯನ್ನು ಅಪೇಕ್ಷೆ ಪಡುತ್ತೇವೆ. ಆದರೆ ಅಲ್ಲಿ ನೆಲೆಸಿದ ನಮ್ಮವರಿಗೆ ಸೂಕ್ತ ಮಾರ್ಗದರ್ಶನ ನೀಡುವ ಕಾರ್ಯ ಮಾಡುತ್ತಿರುವ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರಿಗೆ ಎಷ್ಟು ಸಾಷ್ಟಾಂಗ ನಮಸ್ಕಾರ ಮಾಡಿದರೂ ಕಡಿಮೆಯಾದಿತು. ಹಾಗಾಗಿ ಶ್ರೀಗಳು ಇವತ್ತಿನ ಜಗದ್ಗುರು ಎಂದರು.

ಶ್ರೀಗಳ ಪೌರ ಸನ್ಮಾನ ನಮ್ಮ ಜನ್ಮದ ಪುಣ್ಯದ ಫಲ: ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ, ಋಷಿ ಪರಂಪರೆ ಇವತ್ತು ಜಗತ್ತಿಗೆ ಮತ್ತೊಮ್ಮೆ ಮಾರ್ಗದರ್ಶನ ಮಾಡುತ್ತಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಿ ಲೋಕಾರ್ಪಣೆಯಾಗುವ ಸಂದರ್ಭ ಪುತ್ತಿಗೆ ಶ್ರೀಗಳ ಪರ್ಯಾಯ ನಡೆಯುತ್ತಿರುವುದು ವಿಶೇಷವಾಗಿದೆ. ಶ್ರೀರಾಮ ರಾಕ್ಷಸರ ಸಂಹಾರಕ್ಕಾಗಿ ಸಾಗರೋಲ್ಲಂಘನೆ ಮಾಡುತ್ತಾನೆ. ಸ್ವಾಮಿ ವಿವೇಕಾನಂದರು ವಿದೇಶಕ್ಕೆ ತೆರಳಿ ಜಗತ್ತಿಗೆ ಸನಾತನ ಧರ್ಮವನ್ನು ಪರಿಚಯಿಸಿದ್ದಾರೆ. ಅದೇ ರೀತಿ ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ಶ್ರೀಗಳು 20ನೇ ಶತಮಾನದಲ್ಲಿ ಸಾಗರೋಲ್ಲಂಘನೆ ಮಾಡಿ ಮತ್ತೊಮ್ಮೆ ಸನಾತನಾ ಹಿಂದೂ ಧರ್ಮವನ್ನು ಜಗತ್ತಿಗೆ ಪರಿಚಯಿಸುವ ಕೆಲಸ ಮಾಡಿದ್ದಾರೆ. ಶ್ರೀಕೃಷ್ಣ ಜಗದ್ಗುರು ಆಗಬೇಕೆನ್ನುವ ದೃಷ್ಟಿಯಿಂದ ಅಷ್ಠಮಠಗಳ ಜೊತೆಯಲ್ಲಿ ನಮ್ಮ ತುಳುನಾಡಿನ ಹಿರಿಮೆ ಗರಿಮೆಯನ್ನು ಹೆಚ್ಚಿಸುವ ಕೆಲಸ ಮಾಡಿದ್ದಾರೆ. ಅಂತಹ ಶ್ರೀಗಳಿಗೆ ಪರ್ಯಾಯದ ಪೌರ ಸನ್ಮಾನ ಮಾಡುವುದು ನಮ್ಮೆಲ್ಲರಿಗೂ ಈ ಜನ್ಮದ ಪುಣ್ಯದ ಫಲ ಎಂದರು.

ಉಡುಪಿಯ ಅಷ್ಟಮಠಗಳಿಂದಾಗಿ ಹಿಂದೂ ಸಮಾಜಕ್ಕೆ ಗೌರವ: ಧಾರ್ಮಿಕ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಮಾತನಾಡಿ, ಗೀತಾ ಯಜ್ಞದ ಮೂಲಕ ಭಗವದ್ಗೀತೆಯ ಮಹತ್ವವನ್ನು ಹಿಂದೂ ಸಮಾಜಕ್ಕೆ ಕೊಡಬೇಕು ಮತ್ತು ಗೀತಾ ಯಜ್ಞದಲ್ಲಿ ಎಲ್ಲಾ ಹಿಂದೂಗಳು ಪಾಲ್ಗೊಳ್ಳುವ ಮೂಲಕ ಭಗವದ್ಗೀತೆಗೆ ವಿಶೇಷವಾದ ಶಕ್ತಿಯನ್ನು ಕೊಟ್ಟು ಬದುಕಿನ ಕೃತಾರ್ಥನೆಯನ್ನು ಕಾಣಬೇಕೆಂಬ ಆಶಯದಡಿಯಲ್ಲಿ ಶ್ರೀಗಳು ಪರ್ಯಾಯ ಪೀಠವನ್ನು ಏರಲಿದ್ದಾರೆ. ಹಿಂದೂ ಸಮಾಜಕ್ಕೆ ದೊಡ್ಡ ಶಕ್ತಿಯನ್ನು ಕೊಡುವ ಮೂಲಕ ಹಿಂದೂ ಸಮಾಜ ಗೌರವದಿಂದ ಬದುಕುವಂತೆ ಆಗಿದ್ದರೆ ಅದು ಉಡುಪಿಯ ಅಷ್ಟಮಠದ ಸ್ವಾಮೀಜಿಗಳಿಂದ ಅನ್ನುವಂತಹದನ್ನು ಒಪ್ಪಿಕೊಳ್ಳಬೇಕು. ನೂರಾರು ಸವಾಲುಗಳಿದ್ದರೂ ಧರ್ಮವನ್ನು ಉಳಿಸಿಕೊಂಡಿರುವುದು ಶ್ರೀಗಳ ತ್ಯಾಗ ಮನೋಭಾವದಿಂದ. ಈ ನಿಟ್ಟಿನಲ್ಲಿ ನಾವೆಲ್ಲ ಸನಾತವಾದ ಧರ್ಮದ ಪರಂಪರೆಯನ್ನು ಉಳಿಸುವ ಸಂಕಲ್ಪ ಮಾಡೋಣ ಎಂದರು.

ಶ್ರೀಗಳಿಂದ ಸನಾತನ ಧರ್ಮದ ತಿರುಳನ್ನು ತಿಳಿಸುವ ಉದ್ದೇಶ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪೌರ ಸನ್ಮಾನ ಸಮಿತಿ ಅಧ್ಯಕ್ಷರಾಗಿರುವ ಸ್ವರ್ಣೋದ್ಯಮಿ ಬಲರಾಮ ಆಚಾರ್ಯ ಅವರು ಮಾತನಾಡಿ, ನಮ್ಮ ಯೋಗ ಭಾಗ್ಯ ಎಂಬಂತೆ ಪುತ್ತಿಗೆ ಶ್ರೀಗಳು ಇವತ್ತು ಪರ್ಯಾಯ ಎರುವ ಮೊದಲು ನಮ್ಮ ಸನ್ಮಾನ ಸ್ವೀಕರಿಸಲು ಬಂದಿರುವುದು ಪುತ್ತೂರಿನ ಜನತೆಗೆ ಹೆಮ್ಮೆಯ ದಿನವಾಗಿದೆ. ಶ್ರೀಗಳ ಸಾಧನೆಯೇ ಅಂತಹದ್ದು, ಶ್ರೀಗಳು ಪರ್ಯಾಯಕ್ಕೆ ವಿಶ್ವಗೀತ ಪರ್ಯಾಯ ಎಂದು ಹೆಸರಿಟ್ಟಿರುವುದರಿಂದ ಅವರ ದೂರ ದೃಷ್ಟಿ, ಸಮಾಜದ ಬಗ್ಗೆ ಅವರ ಚಿಂತನೆಯನ್ನು ಅರಿಯಬಹುದು. ಜನತೆಗೆ ಸನಾತನ ಧರ್ಮದ ತಿರುಳನ್ನು ತಿಳಿಸಬೇಕು. ಅದನ್ನು ತಿಳಿದಾಗ ಮಾತ್ರ ನಮ್ಮ ಧರ್ಮ ಗಟ್ಟಿಯಾಗಲು ಸಾಧ್ಯ ಎಂಬ ನಂಬಿಕೆಯೊಂದಿಗೆ ಇವತ್ತು ಅವರು ಪರ್ಯಾಯವನ್ನೇ ವಿಶ್ವಗೀತಾ ಪರ್ಯಾಯವನ್ನಾಗಿಸಿದ್ದಾರೆ. ಈ ನಿಟ್ಟಿನಲ್ಲಿ ಶ್ರೀಗಳ ಕೋಟಿ ಗೀತಾ ಲೇಖನ ಯಜ್ಞಕ್ಕೆ ನಾವೆಲ್ಲ ಸಹಕಾರಿಯಾಗಬೇಕೆಂದರು.

ಪುತ್ತಿಗೆ ಶ್ರೀಗಳು ಅಜಾತ ಶತ್ರು: ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.| ಎಚ್ ಮಾಧವ ಭಟ್ ಅವರು ಅಭಿವಂದನಾ ಭಾಷಣ ಮಾಡಿದರು. ಧರ್ಮದ ಸತ್ವ ಇರುವುದು ಅದರ ತಿರುಳಿನಲ್ಲಿ. ಉಪಾಸನ ವಿಧಾನ ಬೇರೆ ಬೇರೆ ಇರಬಹುದು. ಧರ್ಮ ಅನ್ನುವುದು ಅಸೀಮ ಸಾಗರ. ಸ್ವಾಮೀಜಿಯವರು ಸಾಗರ ಉಲ್ಲಂಘನೆ ಮಾಡಿ ವಿಶ್ವದಲ್ಲಿ ಧರ್ಮ ಪ್ರಚಾರದಲ್ಲಿ ತೊಡಗಿರುವುದರಿಂದ ನಿಜವಾಗಿ ಅವರು ದೇವರು ಮೆಚ್ಚಿದ ಹಾಗೂ ಲೌಕಿಕವಾಗಿ ಅವರು ಮಾಡಿರುವಂತಹದ್ದು ಈ ಕಾಲಕ್ಕೆ ನಿಜವಾಗಿಯೂ ಅತ್ಯಂತ ಸೂಕ್ತವಾಗಿದೆ. ಹಾಗಾಗಿ ಅವರು ಎಲ್ಲರಿಗೂ ಸರ್ವಸಮ್ಮತವಾದ ಶ್ರೀಗಳಾದರು. ಸ್ವಧರ್ಮ ಶ್ರದ್ದೆ ಹಾಗೂ ಪರಧರ್ಮವನ್ನು ಪ್ರೀತಿಯಿಂದ ಕಾಣುವ ಅವರನ್ನು ಅಜಾತ ಶತ್ರುವಾಗಿ ಎಲ್ಲರೂ ಸ್ವೀಕರಿಸುತ್ತಾರೆ ಎಂದರು.

ವಿದೇಶದಲ್ಲಿ ಧಾರ್ಮಿಕ ಜಾಗೃತಿ ಮೂಡಿಸಿದ ಶ್ರೀಗಳು: ಪೌರ ಸನ್ಮಾನ ಸಮಿತಿ ಗೌರವಾಧ್ಯಕ್ಷ ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರು ಅವರು ಸ್ವಾಗತಿಸಿ ಮಾತನಾಡಿ, ಶ್ರೀ ಡಾ| ಸುಗುಣೇಂದ್ರ ಶ್ರೀಗಳಿಗೆ 2008ರಲ್ಲಿ ಪುತ್ತೂರಿನಲ್ಲಿ ಪೌರ ಸನ್ಮಾನ ಕಾರ್ಯಕ್ರಮ ನಡೆದಿತ್ತು. ಇದೀಗ 2ನೇ ಬಾರಿ ಪುತ್ತೂರಿನಲ್ಲಿ ಪೌರ ಸನ್ಮಾನ ಕಾರ್ಯಕ್ರಮ ನಡೆಯುತ್ತಿದೆ. ವಿಶೇಷವಾಗಿ ಶ್ರೀಗಳು ಅಮೇರಿಕದಲ್ಲಿ ಅನೇಕ ಪಾಲು ಬಿದ್ದ ಚರ್ಚ್‌ಗಳನ್ನು ಪಡೆದುಕೊಂಡು ಅಲ್ಲಿ ಅನೇಕ ಮಠಗಳನ್ನು ನಿರ್ಮಾಣ ಮಾಡುವ ಮೂಲಕ ಧಾರ್ಮಿಕ ಕಲ್ಪನೆ ಮೂಡಿಸಿದ್ದಾರೆ. ಯಕ್ಷದ್ರುವ ಪಟ್ಲ ಸತೀಶ್ ಅವರ ಗುಂಪಿನೊಂದಿಗೆ ಅಮೇರಿಕಾಕ್ಕೆ ಹೋದಾಗ ಸುಮಾರು 35 ಜಾಗದಲ್ಲಿ ಮಠಗಳ ನಿರ್ಮಾಣ ಮಾಡಿರುವುದನ್ನು ನೋಡಿದ್ದೇನೆ. ಈ ಪೈಕಿ ವಾಷಿಂಗ್‌ಟನ್, ನ್ಯೂಯಾರ್ಕ್, ಪಿಲಿಕ್ಸ್‌ನಲ್ಲಿರುವ ಮಠಕ್ಕೆ ಭೇಟಿ ನೀಡಿದ್ದು, ವಿದೇಶದಲ್ಲಿ ಶ್ರೀಗಳ ಧರ್ಮ ಜಾಗೃತಿ, ಅಲ್ಲಿ ಅವರಿಗೆ ಸಿಗುವ ಗೌರವ ಬಹಳ ಅದ್ಭುತವಾಗಿತ್ತು. ಈ ಭಾರಿ ಅವರು ಪರ್ಯಾಯ ಪೀಠ ಎರುವ ಸಂದರ್ಭ ಅವರಿಗೆ ನಾವು ಪೌರ ಸನ್ಮಾನ ಮಾಡಿರುವುದು ಪುತ್ತೂರಿಗೆ ಹೆಮ್ಮೆ ಎಂದರು.

ಪೌರ ಸನ್ಮಾನ- ನಿಧಿ ಸಮರ್ಪಣೆ: ಪರ್ಯಾಯ ಪೀಠ ಏರಲಿರುವ ಶ್ರೀ ಡಾ| ಸುಗುಣೇಂದ್ರ ತೀರ್ಥರನ್ನು ಮತ್ತು ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರನ್ನು ಪೌರ ಸನ್ಮಾನ ಸಮಿತಿಯಿಂದ ಪೇಟ, ಮಾಲೆ ಮತ್ತು ಸನ್ಮಾನ ಪತ್ರ ಫಲವಸ್ತು ನೀಡಿ ಗೌರವಿಸಲಾಯಿತು. ಎ.ಅವಿನಾಶ್ ಕೊಡೆಂಕಿರಿ ಅವರು ಸನ್ಮಾನ ಪತ್ರ ವಾಚಿಸಿದರು. ಸನ್ಮಾನದಲ್ಲಿ ಸುಮಾರು ರೂ. 1.75ಲಕ್ಷ ನಿಧಿ ಸಮರ್ಪಣೆ ಮಾಡಲಾಯಿತು.
ಸಮಿತಿ ಸಂಚಾಲಕರಾದ ಕಾವು ಹೇಮನಾಥ ಶೆಟ್ಟಿ, ಭಾಸ್ಕರ್ ಬಾರ್ಯ, ಕಾರ್ಯದರ್ಶಿ ಮಹಾಬಲ ರೈ ವಳತ್ತಡ್ಕ, ಕೋಶಾಧಿಕಾರಿ ಶ್ರೀಧರ್ ಬೈಪಾಡಿತ್ತಾಯ, ಸದಸ್ಯರಾದ ಪುತ್ತೂರು ಸಿಟಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಭಾಸ್ಕರ ಎಸ್, ದಿವಾಕರ ಆಚಾರ್ಯ ಗೇರುಕಟ್ಟೆ, ಉಪಾಧ್ಯಕ್ಷ ಚಂದ್ರಶೇಖರ್ ಆಳ್ವ ಅತಿಥಿಗಳನ್ನು ಗೌರವಿಸಿದರು. ರೇಣುಕಾ ಕಲ್ಲೂರಾಯ ಪ್ರಾರ್ಥಿಸಿದರು.

ಸಮಿತಿ ಪ್ರಧಾನ ಕಾರ್ಯದರ್ಶಿ ದಿವಾಕರ ನಿಡ್ವಣ್ಣಾಯ ವಂದಿಸಿದರು. ಸಮಿತಿ ಸದಸ್ಯರಾದ ರಾಜೇಶ್ ಬನ್ನೂರು, ದಿವಾಕರ ಆಚಾರ್ಯ ಗೇರುಕಟ್ಟೆ ಮತ್ತು ಮನ್ಮಥ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸಾರ್ವಜನಿಕರಿಂದ ಶ್ರೀಗಳಿಗೆ ಗೌರವ ಕಾರ್ಯಕ್ರಮ ನಡೆಯಿತು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸದಸ್ಯರಾದ ಶೇಖರ್ ನಾರಾವಿ, ರಾಮದಾಸ್ ಗೌಡ, ಬಿ.ಐತ್ತಪ್ಪ ನಾಯ್ಕ್, ರವೀಂದ್ರನಾಥ ರೈ ಬಳ್ಳಮಜಲು, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯವರು, ಸಂಘ ಸಂಸ್ಥೆಗಳ ಮತ್ತು ಸಾರ್ವಜನಿಕರು ಶ್ರೀಗಳಿಗೆ ಹಾರಾರ್ಪಣೆ ಮಾಡಿದರು. ಇದೇ ಸಂದರ್ಭ ಶ್ರೀಗಳು ಕೋಟಿ ಗೀತಾ ಲೇಖನ ದೀಕ್ಷೆಯನ್ನು ಸಾಂಕೇತಿಕವಾಗಿ ಪುಸ್ತಕ ನೀಡುವ ಮೂಲಕ ವಿತರಣೆ ಮಾಡಿದರು. ಶ್ರೀಗಳನ್ನು ಮಹಾಲಿಂಗೇಶ್ವರ ದೇವಸ್ಥಾನದ ದ್ವಾರದ ಬಳಿ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡು ದೇವಾಲಯದಲ್ಲಿ ಪ್ರಸಾದ ನೀಡಲಾಯಿತು. ಬಳಿಕ ಪೂರ್ಣಕುಂಭ ಸ್ವಾಗತದೊಂದಿಗೆ ನಟರಾಜ ವೇದಿಕೆಗೆ ಬರಮಾಡಿಕೊಳ್ಳಲಾಯಿತು.

LEAVE A REPLY

Please enter your comment!
Please enter your name here