ಎರಡು ಗ್ರಾಮಕ್ಕೊಂದು ಕೆಪಿಎಸ್ ಮಾದರಿ ಶಾಲೆ: ಅಶೋಕ್ ಕುಮಾರ್ ರೈ
ಉಪ್ಪಿನಂಗಡಿ: ಮಕ್ಕಳಿಗೆ ಆಂಗ್ಲ ಮಾಧ್ಯಮದೊಂದಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಪ್ರತಿ ಎರಡು ಗ್ರಾಮಕ್ಕೊಂದು ಕೆಪಿಎಸ್ ಮಾದರಿಯ ಶಾಲೆಯನ್ನು ಆರಂಭಿಸಲು ಸರಕಾರ ಚಿಂತನೆ ನಡೆಸಿದ್ದು, ಎರಡು- ಮೂರು ತಿಂಗಳೊಳಗೆ ಇದು ಸಾಕಾರಗೊಳ್ಳಲಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.
34 ನೆಕ್ಕಿಲಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಹಾಗೂ ಶಿಕ್ಷಣ ಇಲಾಖೆಯ ಒಟ್ಟು 5.20 ಲಕ್ಷ ಅನುದಾನದಲ್ಲಿ ನಿರ್ಮಾಣವಾಗಿರುವ ನೂತನ ಶೌಚಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರತಿ ಎರಡು ಗ್ರಾಮಕ್ಕೆ ಒಂದರಂತೆ ಕೆಪಿಎಸ್ ಮಾದರಿಯ ಶಾಲೆಗಳನ್ನು ಆರಂಭಿಸಲು ರಾಜ್ಯಸರಕಾರ 2,500 ಕೋ. ರೂ. ಅನುದಾನವನ್ನು ಮೀಸಲಿಟ್ಟಿದೆ. ಇನ್ನು ಹೆಚ್ಚುವರಿಯಾಗಿ 1,000 ಕೋಟಿ ರೂ. ಹೆಚ್ಚುವರಿ ಅನುದಾನದ ಬೇಡಿಕೆಯನ್ನು ನಾವು ಸಲ್ಲಿಸಿದ್ದೇವೆ. ಅಲ್ಲಲ್ಲಿ ಒಂದೊಂದು ಕೆಪಿಎಸ್ ಮಾದರಿ ಶಾಲೆಗಳನ್ನು ಮಾಡಿದಾಗ ಗುಣಮಟ್ಟದ ಶಿಕ್ಷಣವನ್ನು ನೀಡಲು ಸಾಧ್ಯವಿಲ್ಲ. ಅದಕ್ಕಾಗಿ ಎರಡು ಗ್ರಾಮಕ್ಕೆ ಒಂದರಂತೆ ಕೆಪಿಎಸ್ ಮಾದರಿಯ ಶಾಲೆಗಳನ್ನು ಆರಂಭಿಸುತ್ತೇವೆ ಎಂದರು.
ತೆಂಗಿನ ಕಾಯಿ ಒಡೆದ ಕೂಡಲೇ ರಸ್ತೆ ಆಗುವುದಿಲ್ಲ: ಈಗಾಗಲೇ ಬೇರಿಕೆಯಿಂದ ಬೊಳಂತಿಲದವರೆಗೆ 10 ಕೋಟಿ ರೂ. ಅನುದಾನದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಭರದಿಂದ ನಡೆಯುತ್ತಿದೆ. ಇನ್ನು 20 ಕೋಟಿಯಲ್ಲಿ ನೆಕ್ಕಿಲಾಡಿಯ ರಾಷ್ಟ್ರೀಯ ಹೆದ್ದಾರಿಯವರೆಗೆ ಹಾಗೂ ನೆಕ್ಕಿಲಾಡಿ – ಬೊಳುವಾರು ಬಾಕಿ ಉಳಿದ ರಸ್ತೆ ಕಾಮಗಾರಿಗಳು ನಡೆಯುತ್ತಿದೆ. ಕೆಲವರು ಹೇಳುತ್ತಾರೆ. ನಾವು ತೆಂಗಿನ ಕಾಯಿ ಒಡೆದಿದ್ದೇವೆ. ಈಗಿನ ಶಾಸಕರು ಪೋಟೋ ತೆಗೆಸಿಕೊಳ್ಳುತ್ತಾರೆ ಅಂತ. ಆದರೆ ತೆಂಗಿನ ಕಾಯಿ ಒಡೆದ ಕೂಡಲೇ ರಸ್ತೆ ಆಗುವುದಿಲ್ಲ. ಅನುದಾನ ತರುವ ಕೆಲಸವೂ ಆಗಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯರವರ ನೇತೃತ್ವದ ರಾಜ್ಯ ಸರಕಾರದ ಮೂಲಕ ಅನುದಾನ ತರಿಸಿಕೊಂಡು ರಸ್ತೆ ನಿರ್ಮಿಸುವ ಕೆಲಸವನ್ನು ನಾನು ಮಾಡುತ್ತಿದ್ದೇನೆ. ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ಪಿಡಬ್ಲ್ಯೂಡಿ ಇಲಾಖೆಯಿಂದ 40 ಕೋ.ರೂ. ಮುಖ್ಯಮಂತ್ರಿಯವರ ನಿಧಿಯಿಂದ 25 ಕೋ.ರೂ. ಅನುದಾನ ಬಂದಿದೆ. ಪ್ರತಿ ವಲಯಕ್ಕೆ 20 ಲಕ್ಷ ರೂ.ವನ್ನು ಅಭಿವೃದ್ಧಿಗಾಗಿ ನೀಡಲಾಗಿದೆ. ಸಣ್ಣ ನೀರಾವರಿ ಇಲಾಖೆಯಿಂದ 9 ಕೋ.ರೂ. ಅನುದಾನ ಬಿಡುಗಡೆಯಾಗಿದ್ದು, ಅದನ್ನು ಹಂತಹಂತವಾಗಿ ಕೊಡುವ ಕೆಲಸವಾಗಲಿದೆ. ಪಕ್ಕದ ಕೊಲ ಪಶುವೈದ್ಯಕೀಯ ಕಾಲೇಜಿಗೆ 40 ಕೋ.ರೂ. ಅನುದಾನ ಬಿಡುಗಡೆಯಾಗಿದ್ದು, ಮುಂದಿನ ವರ್ಷ ಅಲ್ಲಿ ಪಶು ವೈದ್ಯಕೀಯ ಕಾಲೇಜು ಉದ್ಘಾಟನೆಗೊಳ್ಳಲಿದೆ. ಇನ್ನೂ ಅಲ್ಲಿಗೆ 210 ಕೋ.ರೂ.ನ ಪ್ರಸ್ತಾವನೆ ಸಲ್ಲಿಸಿದ್ದು, ಮೂರು ವರ್ಷದಲ್ಲಿ ಇದು ಬರಬೇಕು. ಉಪ್ಪಿನಂಗಡಿ ಹಾಗೂ ಕಟಾರದಲ್ಲಿ ಕಿಂಡಿ ಅಣೆಕಟ್ಟಿಗೆ 370 ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ದೇವರ ಆಶೀರ್ವಾದ ಇದ್ದರೆ ಮುಂದಿನ ಬಜೆಟ್ನಲ್ಲಿ ಮೆಡಿಕಲ್ ಕಾಲೇಜು ಪುತ್ತೂರಿಗೆ ಬರಬಹುದು. ಇದರೊಂದಿಗೆ ಅಕ್ರಮ- ಸಕ್ರಮ, 94ಸಿ, 94ಸಿಸಿ ಕೊಡಿಸುವ ಕೆಲಸಗಳು ನಡೆಯುತ್ತಿದೆ. ಒಟ್ಟಿನಲ್ಲಿ ಅನುದಾನ- ಅಭಿವೃದ್ಧಿ- ಉದ್ಯಮಗಳು ಪುತ್ತೂರಿಗೆ ಬರಬೇಕು. ಈ ಮೂಲಕ ಪುತ್ತೂರು ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಮ್ಮ ಆದ್ಯತೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ 34 ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷೆ ಸುಜಾತ ಆರ್. ರೈ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸತೀಶ್ ಕೆ. ಬಂಗೇರ, ಶಾಲಾ ಮುಖ್ಯಗುರು ಕಾವೇರಿ, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ., ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಯುನಿಕ್, 34 ನೆಕ್ಕಿಲಾಡಿ ಗ್ರಾ.ಪಂ. ಕಾಂಗ್ರೆಸ್ ವಲಯಾಧ್ಯಕ್ಷೆ ಅನಿ ಮಿನೇಜಸ್, ಕಾರ್ಯದರ್ಶಿ ಕಲಂದರ್ ಶಾಫಿ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಂ ಕೊಪ್ಪಳ, ಪಕ್ಷದ ಪ್ರಮುಖರಾದ ವೆಂಕಪ್ಪ ಪೂಜಾರಿ ಮರುವೇಲು, ನಝೀರ್ ಮಠ, ಜಯಪ್ರಕಾಶ್ ಕೋಡಿಂಬಾಡಿ, ಜಯಶೀಲ ಶೆಟ್ಟಿ, ಆನಂದ ಸಾಂತ್ಯಡ್ಕ, ಸೋಮನಾಥ, ಪ್ರಹ್ಲಾದ್ ಬೆಳ್ಳಿಪ್ಪಾಡಿ, ನವಾಝ್ ಕರ್ವೇಲು, ಯೊಗೀಶ್ ಸಾಮಾನಿ, ಖಾದರ್ ಆದರ್ಶನಗರ, ಇಸಾಕ್ ಮತ್ತಿತರರು ಉಪಸ್ಥಿತರಿದ್ದರು.
ಮಹಿಳೆಯೋರ್ವರು ಶಾಸಕರಲ್ಲಿ ನನಗೆ ಮನೆ ಕಟ್ಟಲು ಜಾಗ ನೀಡಿ ಎಂದು ಮನವಿ ಮಾಡಿದಾಗ, ಗ್ರಾ.ಪಂ.ನವರು ಖಾಲಿ ಜಾಗವಿದ್ದರೆ ಹುಡುಕಿ ಕೊಡಿ. ಅದನ್ನು ನಿವೇಶನಕ್ಕೆ ವ್ಯವಸ್ಥೆ ಮಾಡೋಣ. ಸುಂದರವಾದ ಲೇ ಔಟ್ ನಿರ್ಮಾಣ ಮಾಡುವುದಕ್ಕೆ ನಾನು ಕೂಡ 5 ಲಕ್ಷ ರೂ.ನಷ್ಟು ಅನುದಾನವನ್ನು ಭರಿಸುತ್ತೇನೆ. ಆದರೆ ಅಕ್ರಮ- ಸಕ್ರಮಕ್ಕೆ ಅರ್ಜಿ ಕೊಟ್ಟವರ, ಕೃಷಿ ಮಾಡಿದವರ ಜಾಗವನ್ನು ಗುರುತಿಸಬೇಡಿ. ಅವರಿಗೆ ಉಪದ್ರ ಕೊಡುವ ಕೆಲಸ ಬೇಡ. ಎಲ್ಲಿ ಖಾಲಿ ಸರಕಾರಿ ಜಾಗವಿದೆಯೋ, ಮಿತಿಗಿಂತ ಜಾಸ್ತಿ ಜಾಗವಿದೆಯೋ ಅಂತಹ ಜಾಗವಿದ್ದರೆ ತಿಳಿಸಿ, ತಹಶೀಲ್ದಾರ್, ಎಸಿಯವರ ಮೂಲಕ ಮಾತನಾಡಿ ನಿವೇಶನಕ್ಕೆ ಒದಗಿಸಿಕೊಡುತ್ತೇನೆ ಎಂದು ಸ್ಥಳದಲ್ಲೇ ಇದ್ದ 34 ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷೆ ಸುಜಾತ ರೈ ಅವರ ಬಳಿ ತಿಳಿಸಿದರು.