ಉಪ್ಪಿನಂಗಡಿ: ದ್ವಿಚಕ್ರ ವಾಹನವೊಂದಕ್ಕೆ ಬೆಂಕಿ ಹಚ್ಚಿದ ಪ್ರಕರಣವನ್ನು ಉಪ್ಪಿನಂಗಡಿ ಪೊಲೀಸರು ಭೇದಿಸಿದ್ದು, ಏಕಮುಖ ಪ್ರೀತಿಯೇ ಈ ಘಟನೆಗೆ ಕಾರಣವೆನ್ನಲಾಗಿದೆ.
ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಉಪ್ಪಿನಂಗಡಿ ಗ್ರಾಮದ ನಿನ್ನಿಕಲ್ಲುವಿನ ಪಾದಾಳದ ಸಂದೀಪ್ ಬಂಧಿತ ಆರೋಪಿ. ಹಿರೇಬಂಡಾಡಿ ಗ್ರಾಮದ ಅಡೆಕಲ್ಲ್ನ ಮುಳ್ಳುಗುಡ್ಡೆ ಎಂಬಲ್ಲಿ ಜ.6ರಂದು ರಾತ್ರಿ ಬರಿಮಾರು ಗ್ರಾಮದ ಕಡವಿನ ಬಳಿ ಮನೆಯ ಲಿಖಿತ್ ಕುಮಾರ್ ಎಂಬವರ ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಲಾಗಿತ್ತು. ಇವರಿಗೆ ಮುಳ್ಳುಗುಡ್ಡೆಯ ಯುವತಿಯೊಂದಿಗೆ ಜ.3ರಂದು ಮದುವೆಯಾಗಿದ್ದು, ಜ.6ರಂದು ಪತ್ನಿಯ ಮನೆಗೆ ಬಂದಿದ್ದರು. ರಾತ್ರಿ ರಾತ್ರಿ ಊಟ ಮಾಡಿ ಮನೆಯವರೆಲ್ಲಾ 10:3೦ರ ಸುಮಾರಿಗೆ ಮಲಗಿದ್ದರು. ಇವರ ಭಾವ ಕೀರ್ತನ್ ಎಂಬವರು ಬಹಿರ್ದೆಸೆಗೆಂದು ರಾತ್ರಿ ಎದ್ದು ಹೊರ ಬಂದಾಗ ಮನೆಯಿಂದ ಸುಮಾರು 100 ಮೀಟರ್ ದೂರದಲ್ಲಿ ರಸ್ತೆಯಲ್ಲಿ ಮೋಟಾರು ಸೈಕಲ್ಲೊಂದು ಬೆಂಕಿಯಿಂದ ಉರಿಯುತ್ತಿರುವುದು ಕಂಡು ಬಂತು. ಇದನ್ನು ನೋಡಿದ ಕೀರ್ತನ್ ಮನೆಯವರನ್ನು ಎಬ್ಬಿಸಿದ್ದು, ಹೊರಗೆ ಬಂದು ನೋಡಿದಾಗ ಅಲ್ಲಿ ಮನೆಯ ಮುಂದೆ ವಾಹನ ನಿಲ್ಲಿಸುವ ಶೆಡ್ನಲ್ಲಿ ಲಿಖಿತ್ ಅವರು ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಮನೆಯಿಂದ ತೆಗೆದುಕೊಂಡು ಹೋಗಿ ರಸ್ತೆಯಲ್ಲಿ ಉರಿಸಲಾಗಿತ್ತು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ಲಿಖಿತ್ ಅವರು ದೂರು ನೀಡಿದ್ದು, ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಈತ ಈ ಹುಡುಗಿಯನ್ನು ಏಕಮುಖವಾಗಿ ಪ್ರೀತಿ ಮಾಡುತ್ತಿದ್ದು, ಆಕೆಗೆ ಮದುವೆಯಾಗಿದ್ದರಿಂದ ಆಕೆಯ ಪತಿಯ ಮೇಲಿನ ಸಿಟ್ಟಿನಿಂದ ಈ ಕೃತ್ಯ ಎಸಗಿದ್ದ ಎನ್ನಲಾಗಿದೆ.