ಪುತ್ತೂರು: ಸುಳ್ಯದಲ್ಲಿ ಅಡಿಕೆಗೆ ಹಳದಿ ರೋಗ ಬಂದಿದೆ ಎಂದು ಮನನೊಂದು ಆಲೆಟ್ಟಿ ಗ್ರಾಮದ ಬಡ್ಡಡ್ಕದ ಜಗೀಶ್ ಚಳಗಾರು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಅವರ ಆತ್ಮಹತ್ಯೆಗೆ ಸರಕಾರ ಮತ್ತು ಕೃಷಿ ವಿಜ್ಞಾನಿಗಳೇ ನೇರ ಹೊಣೆಯಾಗಿದ್ದು ಮೃತರ ಕುಟುಂಬಕ್ಕೆ ಸರಕಾರ ರೂ.25 ಲಕ್ಷ ಪರಿಹಾರ ನೀಡಬೇಕೆಂದು ಕೆ.ಎಸ್ ಪುಟ್ಟಣ್ಣಯ್ಯ ಅವರ ನೇತೃತ್ವದ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಮತ್ತು ಸುಳ್ಯ ತಾಲೂಕು ಸಮಿತಿ ಒತ್ತಾಯಿಸಿದೆ.
ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಓಸ್ವಾಲ್ಡ್ ಪ್ರಕಾಶ್ ಫೆರ್ನಾಂಡೀಸ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಎಷ್ಟೋ ವರ್ಷದ ಮೊದಲೇ ಕಾಣಿಸಿಕೊಂಡ ಅಡಿಕೆಗೆ ಹಳದಿ ರೋಗವನ್ನು ನಿಯಂತ್ರಿಸುವಲ್ಲಿ ಮತ್ತು ಪರ್ಯಾಯ ವ್ಯವಸ್ಥೆ ಕಲ್ಪಿಸುವಲ್ಲಿ ಕೃಷಿ ಅಧಿಕಾರಿಗಳು ಮತ್ತು ವಿಜ್ಞಾನಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಹಳದಿ ರೋಗದಿಂದಾಗಿ ಕೃಷಿಯನ್ನು ಕಳೆದುಕೊಂಡು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಜಗದೀಶ್ ಅವರ ಕುಟುಂಬಕ್ಕೆ, ಕೋಮು ಘರ್ಷಣೆಗಳಲ್ಲಿ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ನೀಡಿದ ಮಾದರಿಯಲ್ಲಿ ರೂ.25 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. 9 ತಿಂಗಳ ಹಿಂದೆ ಇಡ್ಕಿದು ಗ್ರಾಮದ ರೈತ ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ವಿಚಾರದಲ್ಲಿ ಆ ಕುಟುಂಬಕ್ಕೆ ಸರಕಾರ ರೂ.5 ಲಕ್ಷ ಮಾತ್ರ ಪರಿಹಾರ ನೀಡಿದೆ.ಅವರಿಗೂ ರೂ.25 ಲಕ್ಷ ಪರಿಹಾರ ನೀಡಬೇಕು ಎಂದ ಅವರು,ಈ ಕುರಿತು ನಾವು ಸರಕಾರವನ್ನು ಒತ್ತಾಯಿಸಲಿದ್ದೇವೆ ಎಂದರು.
ಪರ್ಯಾಯ ಬೆಳೆಗೆ ಸರಕಾರ ಹಣಕೊಡಲಿ: ರೈತ ಸಂಘದ ರಾಜ್ಯ ಖಾಯಂ ಆಹ್ವಾನಿತರಾಗಿರುವ ಸನ್ನಿ ಡಿ ಸೋಜ ಅವರು ಮಾತನಾಡಿ ಸರಕಾರ ಸಂಶೋಧನೆಗೆಂದು ಕೋಟಿ ಕೋಟಿ ಹಣ ಖರ್ಚುಮಾಡುತ್ತಿದೆ.ಅದರ ಬದಲು ಮಾದರಿ ತೋಟಗಳನ್ನು ನಿರ್ಮಾಣ ಮಾಡಲು ಮತ್ತು ಪರ್ಯಾಯ ಬೆಳೆ ಬೆಳೆಸಲು ಎಕ್ರೆಗೆ ರೂ.25 ಸಾವಿರದಂತೆ ರೈತರಿಗೆ ಕೊಡಲಿ.ಇದರ ಜೊತೆಗೆ ಬರ ಪರಿಹಾರದ ವಿಚಾರದಲ್ಲಿ ರೈತಕುಲವನ್ನು ಅವಮಾನ ಮಾಡಿರುವ ಹೇಳಿಕೆಯನ್ನು ನೀಡಿದ ಸಚಿವ ಶಿವಾನಂದ ಪಾಟೀಲ್ ಅವರನ್ನು ಸರಕಾರ ಸಚಿವ ಸ್ಥಾನದಿಂದ ವಜಾಗೊಳಿಸಬೇಕು.ನಾವೇನು ಗುಲಾಮರಲ್ಲ. ನಾವು ಸ್ವಾಭಿಮಾನಿಗಳು. ಸರಕಾರದ ಕೃಷಿ ನೀತಿಯಿಂದ ನಮ್ಮ ಸಾಲ ಹೆಚ್ಚಾಗಿದೆ. ಹಸಿರು ಕ್ರಾಂತಿ ಎಂದು ನಮ್ಮನ್ನು ಮೋಸ ಮಾಡಿದ್ದಾರೆ. ಒಟ್ಟಿನಲ್ಲಿ ಬಹುರಾಷ್ಟ್ರ ಕಂಪೆನಿಗಳನ್ನು ಉದ್ದಾರ ಮಾಡಲು ರೈತರನ್ನು ಬಲಿಕೊಡುತ್ತಿದ್ದಾರೆ ಎಂದರು.
ಪುತ್ತೂರು ಶಾಸಕರಿಗೆ ಅಭಿನಂದನೆ: ರೈತರ ಪರ ವಿಧಾನಸಭೆಯಲ್ಲಿ ಮಾತನಾಡಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅಧಿವೇಶನ ಸಂದರ್ಭವೇ ನಾನು ಅವರಿಗೆ ಕರೆ ಮಾಡಿ ರೈತರ ಸಮಸ್ಯೆಗಳನ್ನು ತಿಳಿಸಿದ್ದೆ. ಈ ಕುರಿತು ಅವರು ಸದನದಲ್ಲಿ ಮಾತನಾಡಿದ್ದಾರೆ ಎಂದು ಸುಳ್ಯ ತಾಲೂಕು ರೈತ ಸಂಘದ ಲೋಲಾಕ್ಷ ಭೂತಕಲ್ಲು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸುಳ್ಯ ತಾಲೂಕು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಆಲ್ವಿನ್ ಮಿನೇಜಸ್ ಉಪಸ್ಥಿತರಿದ್ದರು.