ಬಿಜೆಪಿ-ಪುತ್ತಿಲ ಪರಿವಾರ ನಡುವಿನ ಮಾತುಕತೆ ನಿರ್ಣಾಯಕ ಹಂತಕ್ಕೆ-ಎರಡ್ಮೂರು ದಿನಗಳೊಳಗೆ ಅರುಣ್ ಕುಮಾರ್ ಪುತ್ತಿಲ ಬಿಜೆಪಿಗೆ ?

0

ಪುತ್ತೂರು: ಕಳೆದ ವಿಧಾನಸಭಾ ಚುನಾವಣೆ ನಂತರದ ರಾಜಕೀಯ ಬೆಳವಣಿಗೆಯಲ್ಲಿ ದೂರವಾಗುತ್ತಾ ಸಾಗಿದ ಬಿಜೆಪಿ ಮತ್ತು ಪುತ್ತಿಲ ಪರಿವಾರದ ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲ ನಡುವಿನ ಅಂತರ ಇದೀಗ ಮತ್ತೆ ಹತ್ತಿರವಾಗುವ ಸೂಚನೆ ಕಂಡು ಬಂದಿದ್ದು, ಬಿಜೆಪಿ ಮತ್ತು ಪುತ್ತಿಲ ಮತ್ತೆ ಒಂದಾಗುವ ನಿಟ್ಟಿನಲ್ಲಿ ನಡೆದ ಮಾತುಕತೆ ಬಹುತೇಕ ಫಲಪ್ರದವಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ಎರಡು-ಮೂರು ದಿನಗಳೊಳಗೆ ಅರುಣ್ ಕುಮಾರ್ ಪುತ್ತಿಲ,ಪರಿವಾರ ಬಿಜೆಪಿಯೊಂದಿಗೆ ವಿಲೀನವಾಗುವುದು ಬಹುತೇಕ ಖಚಿತವಾಗಿದೆ.ಈ ಕುರಿತು ನಡೆದ ಮಾತುಕತೆ ನಿರ್ಣಾಯಕ ಹಂತ ತಲುಪಿದ್ದು ಸಂಘದ ಪ್ರಮುಖರ ಒಪ್ಪಿಗೆ ದೊರೆತ ಬಳಿಕ ಎಲ್ಲವೂ ಸುಖಾಂತ್ಯವಾಗಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಡಾ. ಸುರೇಶ್ ಪುತ್ತೂರಾಯ ಹಾಗೂ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತುಕತೆಯ ನೇತೃತ್ವ ವಹಿಸಿದ್ದರು.

ಬಿಜೆಪಿ ಮತ್ತು ಅರುಣ್ ಕುಮಾರ್ ಪುತ್ತಿಲ,ಪರಿವಾರ ಒಂದಾಗಿಸುವ ನಿಟ್ಟಿನಲ್ಲಿ ಕಳೆದ ಕೆಲವು ಸಮಯದಿಂದ ನಿರಂತರ ಮಾತುಕತೆ ನಡೆಯುತ್ತಿದ್ದು ಇನ್ನೇನು ಎಲ್ಲವೂ ಸರಿಯಾಗಿ ಅಂತಿಮ ತೀರ್ಮಾನವಾಗುವಷ್ಟರಲ್ಲಿ ಮತ್ತೆ ಅದ್ಯಾವುದೋ ಕಾರಣದಿಂದಾಗಿ ಮಾತುಕತೆ ಮುರಿದು ಬಿರುಕು ಮುಂದುವರಿದಿತ್ತಲ್ಲದೆ, ಒಂದು ಹಂತದಲ್ಲಿ ಪುತ್ತಿಲ ಪರಿವಾರಕ್ಕಿನ್ನು ಬಿಜೆಪಿ ಬಾಗಿಲು ಬಂದ್ ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು.ಇದೀಗ ಮತ್ತೆ ಮಾತುಕತೆ ನಡೆದು ನಿರ್ಣಾಯಕ ಹಂತ ತಲುಪಿದೆ.ಜ.೧೫ರಂದು ರಾಜ್ಯ ಬಿಜೆಪಿ ನಿಕಟಪೂರ್ವಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಪುತ್ತೂರು ಐಬಿ ಬಳಿ ಮಾತುಕತೆ ನಡೆದಿದೆ.ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಜಿಲ್ಲಾ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ಬಿಜೆಪಿ ಹಿರಿಯರಾದ ಎಸ್.ಅಪ್ಪಯ್ಯ ಮಣಿಯಾಣಿ ಮತ್ತಿತರ ಪ್ರಮುಖರು ಈ ವೇಳೆ ಉಪಸ್ಥಿತರಿದ್ದು, ಅರುಣ್ ಕುಮಾರ್ ಪುತ್ತಿಲ ಅವರಿಗೆ ಸೂಕ್ತ ಸ್ಥಾನಮಾನ ನೀಡಿ ಪಕ್ಷಕ್ಕೆ ಬರಮಾಡಿಕೊಳ್ಳಲು ನಿರ್ಧರಿಸಿದ ಪ್ರಮುಖರು, ಈ ಕುರಿತು ಸಂಘ ಪರಿವಾರದ ಪ್ರಮುಖರ ಗಮನಕ್ಕೆ ತಂದು ಅವರ ಸಲಹೆ ಪಡೆದುಕೊಂಡ ಬಳಿಕ ಅಂತಿಮ ತೀರ್ಮಾನಕ್ಕೆ ನಿರ್ಧರಿಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಅವರಿಗೆ ಪುತ್ತೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ದೊರೆಯದೇ ಇದ್ದುದರಿಂದ ಅಸಮಾಧಾನಗೊಂಡಿದ್ದ ಕಾರ್ಯಕರ್ತರ ಒತ್ತಾಯದ ಮೇರೆಗೆ ಹಿಂದುತ್ವ ಸಿದ್ಧಾಂತದಡಿ ಪಕ್ಷೇತರ ಅಭ್ಯರ್ಥಿಯಾಗಿ ಅರುಣ್ ಕುಮಾರ್ ಪುತ್ತಿಲ ಅವರು ಸ್ಪರ್ಧಿಸಿದ್ದರು.ಚುನಾವಣೆಯಲ್ಲಿ ಅವರು ಪರಾಜಯಗೊಂಡಿದ್ದರಾದರೂ ಮತಗಳಿಕೆಯಲ್ಲಿ ಎರಡನೇ ಸ್ಥಾನ ಪಡೆದು ವೀರೋಚಿತ ಸೋಲುಂಡಿದ್ದರು.ಮತಗಳಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಮೂರನೇ ಸ್ಥಾನಕ್ಕೆ ಕುಸಿದಿದ್ದರು.ಈ ವಿಚಾರ ರಾಜ್ಯದಾದ್ಯಂತ ಭಾರೀ ಸುದ್ದಿಯಾಗಿತ್ತಲ್ಲದೆ ಪಕ್ಷದ ರಾಷ್ಟ್ರೀಯ ನಾಯಕರವರೆಗೂ ತಲುಪಿತ್ತು.ಪರಿಣಾಮ ಪುತ್ತಿಲ ಪರಿವಾರ-ಬಿಜೆಪಿ ಒಂದಾಗುವ ನಿಟ್ಟಿನಲ್ಲಿ ಸಂಧಾನ,ಮಾತುಕತೆ ನಡೆಯುತ್ತಲೇ ಇತ್ತು.ಪುತ್ತಿಲ ಪರಿವಾರ ಸಂಘಟನೆ ಸ್ಥಾಪನೆಯಾದ ಬಳಿಕವಂತೂ ಅಂತರ ಇನ್ನೂ ಹೆಚ್ಚುತ್ತಲೇ ಹೋಯಿತು.ಪುತ್ತಿಲ ಪರಿವಾರ ಸಂಘಟನೆ ಮೂಲಕ ಹಲವು ಕಾರ್ಯಕ್ರಮಗಳು ನಡೆದವು.ಪುತ್ತಿಲ ಅವರು ಜಿಲ್ಲೆಯಾದ್ಯಂತ ವ್ಯಾಪಕ ಪ್ರವಾಸ ಕೈಗೊಂಡು ಬಲಪಂಥೀಯ ಕಾರ್ಯಕರ್ತರೊಂದಿಗೆ ಸಭೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.ಪುತ್ತಿಲ ಪರಿವಾರದಿಂದಲೂ ಸಾಕಷ್ಟು ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದೆ.ಇತ್ತೀಚೆಗೆ ಪುತ್ತಿಲ ಪರಿವಾರದ ಆಶ್ರಯದಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆದ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಸೇರಿದ ಭಕ್ತ ಸಮೂಹ ಇತಿಹಾಸ ಸೃಷ್ಟಿಸಿದೆ.ಈ ಎಲ್ಲ ಬೆಳವಣಿಗೆಗಳ ನಡುವೆ, ಅರುಣ್ ಕುಮಾರ್ ಪುತ್ತಿಲ ಅವರು ೨೦೨೪ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆ ಎಂಬ ಮಾತುಗಳೂ ಕೇಳಿಬರಲಾರಂಭಿಸಿತ್ತು.

ಮಾತುಕತೆಗಳು ಫಲಪ್ರದವಾಗದೇ ಇದ್ದುದರಿಂದ, ಬಿಜೆಪಿ ಬೆಂಬಲಿತರ ಸ್ಪರ್ಧೆಯ ನಡುವೆಯೇ ಪುತ್ತಿಲ ಪರಿವಾರ ಕೂಡಾ ಗ್ರಾಮ ಪಂಚಾಯತ್ ಉಪ ಚುನಾವಣೆ, ಸಹಕಾರಿ ಸಂಘಗಳ ಆಡಳಿತ ಮಂಡಳಿ ಚುನಾವಣೆಯಲ್ಲೂ ಸ್ಪರ್ಧಿಸಿತು.ಕೆಲ ದಿನಗಳ ಹಿಂದೆ ನಡೆದ ಪುತ್ತೂರು ನಗರಸಭೆಯ ಉಪಚುನಾವಣೆ ಸಂದರ್ಭ ಮತ್ತೊಂದು ಸುತ್ತಿನ ಮಾತುಕತೆ ನಡೆದು ಇನ್ನೇನು ಎಲ್ಲವೂ ಸರಿಯಾಯಿತು ಎನ್ನುವ ಹಂತದಲ್ಲಿ ಮತ್ತೆ ಮಾತುಕತೆ ಮುರಿದು ಬಿದ್ದ ಪರಿಣಾಮ ಪುತ್ತಿಲ ಪರಿವಾರ ಬಿಜೆಪಿಗೆ ಸಡ್ಡುಹೊಡೆದು ಸ್ಪರ್ಧೆ ಮಾಡಿತ್ತು.ಮುಂದೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಚಿಂತನೆ ಇದ್ದರೂ, ಮೋದಿಯವರ ವಿರುದ್ಧ ಹೋಗುವುದು ಸರಿಯಲ್ಲ ಎಂದು ಅರುಣ್ ಕುಮಾರ್ ಪುತ್ತಿಲ ಅವರು ಹೇಳಿಕೊಂಡಿದ್ದರಾದರೂ, ಪುತ್ತಿಲ ಅವರಿಗೆ ಬಿಜೆಪಿಯಲ್ಲಿ ಸೂಕ್ತ ಸ್ಥಾನ ದೊರೆಯದೇ ಇದ್ದಲ್ಲಿ ಲೋಕಸಭಾ ಚುನಾವಣೆಯಲ್ಲಿಯೂ ಸ್ಪರ್ಧೆ ಮಾಡುವ ನಿಟ್ಟಿನಲ್ಲಿ ಪುತ್ತಿಲ ಪರಿವಾರದ ಕಾರ್ಯಕರ್ತರಿಂದ ಪುತ್ತಿಲ ಅವರಿಗೆ ಒತ್ತಡ ವ್ಯಕ್ತವಾಗುತ್ತಿದೆ ಎನ್ನಲಾಗುತ್ತಿದೆ.

ಪುತ್ತಿಲ ಪರಿವಾರ ಮತ್ತು ಬಿಜೆಪಿ ನಡುವಿನ ಅಭಿಪ್ರಾಯದ ವ್ಯತ್ಯಾಸಗಳನ್ನು ಸರಿಪಡಿಸಿ ಪುತ್ತಿಲ ಮತ್ತು ಬಿಜೆಪಿ ಮತ್ತೆ ಒಂದಾಗುವ ನಿಟ್ಟಿನಲ್ಲಿ ನಿರಂತರ ಮಾತುಕತೆಗಳು ನಡೆದರೂ ಇನ್ನೂ ಅಂತಿಮ ಹಂತ ತಲುಪಿರಲಿಲ್ಲ.ಇದೀಗ ಮಾತುಕತೆ ನಿರ್ಣಾಯಕ ಹಂತ ತಲುಪಿದ್ದು ಇನ್ನು ಎರಡ್ಮೂರು ದಿನಗಳೊಳಗೆ ಅರುಣ್ ಕುಮಾರ್ ಪುತ್ತಿಲ, ಪರಿವಾರದವರು ಬಿಜೆಪಿಯಲ್ಲಿ ಸಕ್ರಿಯರಾಗಲಿರುವುದು ಬಹುತೇಕ ಖಚಿತವಾಗಿದೆ ಎಂದು ಮೂಲದಿಂದ ತಿಳಿದು ಬಂದಿದೆ.ಪುತ್ತಿಲ ಪರಿವಾರ ಮತ್ತು ಬಿಜೆಪಿ ನಡುವಿನ ಮಧ್ಯಸ್ಥರ ರೀತಿಯಲ್ಲಿ ಡಾ.ಸುರೇಶ್ ಪುತ್ತೂರಾಯ ಮತ್ತು ಬಿಜೆಪಿ ಕಡೆಯಿಂದ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಈ ಮಾತುಕತೆಯಲ್ಲಿ ಮುಂಚೂಣಿ ಪಾತ್ರದಲ್ಲಿದ್ದರು.ಜೊತೆಗೆ ಸಾಜ ರಾಧಾಕೃಷ್ಣ ಆಳ್ವ, ಭಾಸ್ಕರ್ ಆಚಾರ್ಯ ಹಿಂದಾರು, ಗೋಪಾಲಕೃಷ್ಣ ಹೇರಳೆ, ಕೆ.ಜೀವಂಧರ್ ಜೈನ್, ಎಸ್.ಅಪ್ಪಯ್ಯ ಮಣಿಯಾಣಿ ಸಹಿತ ಇನ್ನೂ ಕೆಲವು ಪ್ರಮುಖರು ಮಾತುಕತೆಯಲ್ಲಿ ಇದ್ದರೆಂದು ತಿಳಿದು ಬಂದಿದೆ.

ಪುತ್ತಿಲರಿಗೆ ಪುತ್ತೂರು ಬಿಜೆಪಿ ಅಧ್ಯಕ್ಷ ಸ್ಥಾನ ಸಂಘ ಪರಿವಾರದ ಪ್ರಮುಖರ ಒಪ್ಪಿಗೆ ಬಾಕಿ
ಅರುಣ್ ಕುಮಾರ್ ಪುತ್ತಿಲ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದರ ಜೊತೆಗೆ ಅವರಿಗೆ ಪುತ್ತೂರು ಬಿಜೆಪಿ ಅಧ್ಯಕ್ಷ ಸ್ಥಾನ ನೀಡುವ ಕುರಿತು ನಳಿನ್ ಕುಮಾರ್ ಕಟೀಲ್ ಸಹಿತ ಪಕ್ಷದ ಪ್ರಮುಖರಿಂದ ಸಹಮತ ವ್ಯಕ್ತವಾಗಿದೆ.ಸಂಘ ಪರಿವಾರದ ಈ ಭಾಗದ ಪ್ರಮುಖರ ಗಮನಕ್ಕೆ ಈ ವಿಚಾರವನ್ನು ತಂದು ಅವರ ಒಪ್ಪಿಗೆ ದೊರೆತ ಬಳಿಕ ಇದನ್ನು ಘೋಷಣೆ ಮಾಡುವ ಕುರಿತೂ ತೀರ್ಮಾನವಾಗಿದೆ. ಅರುಣ್ ಕುಮಾರ್ ಪುತ್ತಿಲ ಅವರಿಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಪುತ್ತಿಲ ಪರಿವಾರದವರು ಮೊದಲು ಬೇಡಿಕೆ ಇಟ್ಟಿದ್ದರು.ಆದರೆ ಇದು ಅಸಾಧ್ಯ ಎಂದು ಪಕ್ಷ ಸ್ಪಷ್ಟಪಡಿಸಿದ ಬಳಿಕ, ಪುತ್ತೂರು ಗ್ರಾಮಾಂತರ ಮತ್ತು ನಗರ ಮಂಡಲವನ್ನು ಒಟ್ಟು ಸೇರಿಸಿ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಸ್ಥಾನವನ್ನಾದರೂ ನೀಡಬೇಕು ಎನ್ನುವ ಬೇಡಿಕೆ ಪುತ್ತಿಲ ಪರಿವಾರದ ಪ್ರಮುಖರಿಂದ ವ್ಯಕ್ತವಾಗಿತ್ತು.ಪಕ್ಷದ ಪ್ರಮುಖರಿಂದ ಇದಕ್ಕೆ ಸಹಮತ ವ್ಯಕ್ತವಾಗಿತ್ತು.ಕೆಲ ದಿನಗಳ ಹಿಂದೆ ನಗರಸಭೆಯ ಉಪಚುನಾವಣೆ ಸಂದರ್ಭವೇ ಈ ವಿಚಾರ ಪ್ರಸ್ತಾಪವಾಗಿ ಇನ್ನೇನು ಪುತ್ತಿಲ ಅವರಿಗೆ ಅಧ್ಯಕ್ಷ ಸ್ಥಾನ ಘೋಷಣೆಯಾಗುತ್ತದೆ ಎನ್ನುವಷ್ಟರಲ್ಲಿ ಮತ್ತೆ ಮಾತುಕತೆ ಮುರಿದು ಬಿದ್ದಿತ್ತು.ಈ ರೀತಿಯ ಗೊಂದಲಗಳು ಮರುಕಳಿಸದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಈ ಬಾರಿ ಸಂಘ ಪರಿವಾರದ ಪ್ರಮುಖರ ಗಮನಕ್ಕೆ ತಂದು ಅವರ ಒಪ್ಪಿಗೆ ದೊರೆತ ಬಳಿಕವೇ ಪುತ್ತಿಲ ಅವರಿಗೆ ಸ್ಥಾನ ಘೋಷಣೆಯಾಗಲಿದೆ ಎನ್ನಲಾಗುತ್ತಿದೆ.

ಯಾವುದೇ ಅಂತಿಮ ನಿರ್ಧಾರ ಆಗಿಲ್ಲ
ಸಂಘದ, ಪಕ್ಷದ ಹಿರಿಯರ ನಿರ್ಧಾರ ಏನೆಂಬುದು ನಮಗೆ ಗೊತ್ತಿಲ್ಲ.ಅವರ ನಿರ್ಧಾರದ ಬಳಿಕ ನಮ್ಮ ಪರಿವಾರದ ಕಾರ್ಯಕರ್ತರ ಸಲಹೆ ಪಡೆದು ನಮ್ಮ ಯೋಚನೆ.ಮಾತುಕತೆ ಆಗುತ್ತಾ ಇದೆ.ಆದರೆ ಈ ಕುರಿತು ನನಗೇನೂ ಗೊತ್ತಿಲ್ಲ.ಯಾವುದೇ ಅಂತಿಮ ನಿರ್ಧಾರ ಇನ್ನೂ ಆಗಿಲ್ಲ.ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿರುವ ನಮ್ಮ ಸ್ನೇಹಿತರೊಬ್ಬರನ್ನು ನೋಡಲು ಮಧ್ಯಾಹ್ನ ಆಸ್ಪತ್ರೆಗೆ ಹೋಗಿದ್ದೆ ಹೊರತು ಬೇರೇನೂ ಇಲ್ಲ
-ಅರುಣ್ ಕುಮಾರ್ ಪುತ್ತಿಲ


ಪುತ್ತಿಲ ಉಪಸ್ಥಿತಿಯಲ್ಲಿ ೨ ಬಾರಿ, ಅನುಪಸ್ಥಿತಿಯಲ್ಲಿ 4 ಬಾರಿ ಮಾತುಕತೆ
ಪುತ್ತೂರು ನಗರಸಭೆ ಉಪಚುನಾವಣೆ ಹತ್ತಿರ ಬರುವ ಸಂದರ್ಭ ಪುತ್ತಿಲ ಪರಿವಾರ ಮತ್ತು ಬಿಜೆಪಿ ನಡುವೆ ವಿವಿಧ ಸುತ್ತುಗಳ ಮಾತುಕತೆ ನಡೆದಿದೆ.ಡಾ.ಸುರೇಶ್ ಪುತ್ತೂರಾಯ ಅವರ ಮನೆಯಲ್ಲಿ ನಗರಸಭೆ ನಿಕಟಪೂರ್ವ ಅಧ್ಯಕ್ಷ ಕೆ.ಜೀವಂಧರ್ ಜೈನ್ ಸಹಿತ ಬಿಜೆಪಿಯ ಹಲವು ಹಿರಿಯ ಪ್ರಮುಖರು, ಪುತ್ತಿಲ ಪರಿವಾರದ ಭಾಸ್ಕರ್ ಆಚಾರ್ಯ ಹಿಂದಾರು ಮತ್ತಿತರರ ನಡುವೆ ಮಾತುಕತೆ ನಡೆದಿದೆ.ಡಾ.ಸುರೇಶ್ ಪುತ್ತೂರಾಯ ಅವರ ಮನೆಯಲ್ಲಿ ಮೂರು ಬಾರಿ, ಶಶಿಕುಮಾರ್ ರೈ ಬಾಲ್ಯೊಟ್ಟು ಅವರ ಪುತ್ತೂರು ಮನೆಯಲ್ಲಿ ಒಂದು ಬಾರಿ, ಪುತ್ತೂರು ನಿರೀಕ್ಷಣಾ ಮಂದಿರದ ಬಳಿ ಒಂದು ಬಾರಿ ಹಾಗೂ ದ.ಕ.ಸಂಸದ, ರಾಜ್ಯ ಬಿಜೆಪಿ ನಿಕಟಪೂರ್ವ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಮನೆಯಲ್ಲಿ ಒಂದು ಬಾರಿ ಮಾತುಕತೆ ನಡೆದಿದೆ.ಡಾ.ಸುರೇಶ್ ಪುತ್ತೂರಾಯ ಅವರ ಮನೆಯಲ್ಲಿ ಮತ್ತು ಮಹಾವೀರ ಮೆಡಿಕಲ್ ಆಸ್ಪತ್ರೆಯಲ್ಲಿ ಡಾ. ಸುರೇಶ್ ಪುತ್ತೂರಾಯ ಅವರ ಛೇಂಬರ್‌ನಲ್ಲಿಯೂ ತಲಾ ಒಂದೊಂದು ಬಾರಿ ಮಾತುಕತೆ ನಡೆದಿದೆ.ಇದು ಅರುಣ್ ಕುಮಾರ್ ಪುತ್ತಿಲ ಅವರ ಉಪಸ್ಥಿತಿಯಲ್ಲಿ ನಡೆದಿದೆ.ಜ.೧೫ರಂದು ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ಡಾ.ಸುರೇಶ್ ಪುತ್ತೂರಾಯ, ಅರುಣ್ ಕುಮಾರ್ ಪುತ್ತಿಲ, ಶಶಿಕುಮಾರ್ ರೈ ಬಾಲ್ಯೊಟು ಅವರು ಮಾತುಕತೆ ನಡೆಸಿದ್ದಾರೆ.ಸಂಜೆ ಸಂಘ ಪರಿವಾರದ ಪ್ರಮುಖರೂ ಈ ವಿಚಾರದಲ್ಲಿ ಚರ್ಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

LEAVE A REPLY

Please enter your comment!
Please enter your name here