ರಾಮಕುಂಜ: ಖೇಲೋ ಇಂಡಿಯಾ ತಂಡಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸ್ವಾಗತ-ಅದ್ದೂರಿ ಮೆರವಣಿಗೆ

0

ರಾಮಕುಂಜ: ತೆಲಂಗಾಣದ ಕಾಮರೆಡ್ಡಿಯಲ್ಲಿ ನಡೆದ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ 67ನೇ ರಾಷ್ಟ್ರಮಟ್ಟದ 17ರ ವಯೋಮಾನದ ಬಾಲಕರ ಕಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದ್ದು ರಾಜ್ಯ ತಂಡವನ್ನು ಪ್ರತಿನಿಧಿಸಿದ್ದ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಕಾರ್ತಿಕ್ ಹಾಗೂ ಹಿತೇಶ್ ಎನ್.ಕೆ.ಅವರು ಖೇಲೋ ಇಂಡಿಯಾ ತಂಡಕ್ಕೆ ಆಯ್ಕೆಗೊಂಡಿದ್ದಾರೆ.

ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಊರಿಗೆ ಆಗಮಿಸಿದ ಇಬ್ಬರೂ ವಿದ್ಯಾರ್ಥಿಗಳನ್ನು ಆತೂರಿನಲ್ಲಿ ಸ್ವಾಗತಿಸಿ ಅಲ್ಲಿಂದ ಅದ್ದೂರಿ ಮೆರವಣಿಗೆ ಮೂಲಕ ಶಾಲೆಗೆ ಕರೆತರಲಾಯಿತು. ಆತೂರಿನಲ್ಲಿ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಧರ್ಮಪಾಲ ರಾವ್ ಕಜೆ, ಉಪಾಧ್ಯಕ್ಷ ಪ್ರದೀಪ್ ರೈ ಮನವಳಿಕೆ, ರಾಮಕುಂಜ ಗ್ರಾ.ಪಂ.ಅಧ್ಯಕ್ಷೆ ಸುಚೇತ, ಮಾಜಿ ಅಧ್ಯಕ್ಷ ಆರ್.ಕೆ ಪ್ರಶಾಂತ್ ಹಾಗೂ ಸಹಕಾರಿ ಸಂಘದ ಸಿಬ್ಬಂದಿಗಳು ಸಾಧಕ ವಿದ್ಯಾರ್ಥಿಗಳಿಗೆ ಮಾಲಾರ್ಪಣೆ ಮಾಡಿ ಅಭಿನಂದಿಸಿದರು.

ಅದ್ದೂರಿ ಮೆರವಣಿಗೆ:
ಆತೂರಿನಲ್ಲಿರುವ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕೊಯಿಲ ಶಾಖಾ ಮುಂಭಾಗದಿಂದ ಆರಂಭಗೊಂಡ ಮೆರವಣಿಗೆ ಗೋಳಿತ್ತಡಿಗೆ ತೆರಳಿ ಅಲ್ಲಿಂದ ಮತ್ತೆ ಆತೂರಿಗೆ ಬಂದು ಕಾಜರೊಕ್ಕು ಮೂಲಕ ಶಾಲೆಗೆ ಆಗಮಿಸಿತು. ಸಾಧಕ ವಿದ್ಯಾರ್ಥಿಗಳಾದ ಕಾರ್ತಿಕ್, ಹಿತೇಶ್ ಎನ್.ಕೆ., ತರಬೇತುದಾರ ಮಾಧವ ಬಿ.ಕೆ ಹಾಗೂ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಪ್ರಫುಲ್ಲ ರೈಯವರಿಗೆ ಮಾಲಾರ್ಪಣೆ ಮಾಡಿ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಶಾಲೆಗೆ ಕರೆ ತರಲಾಯಿತು.

ಮೆರವಣಿಗೆಯಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಲಕ್ಷ್ಮಿನಾರಾಯಣ ರಾವ್, ತರಬೇತುದಾರ ಜಸ್ವಂತ್, ಸಿ.ಎ ಬ್ಯಾಂಕ್‌ನ ಸಿಬ್ಬಂದಿ ಲೋಕನಾಥ್ ರೈ ಕೆ., ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಕೆ, ಪ್ರೌಢಶಾಲಾ ಮುಖ್ಯಗುರು ಸತೀಶ್ ಭಟ್, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಮಾಧವ ಭಟ್, ಸಾಧಕ ವಿದ್ಯಾರ್ಥಿ ಕಾರ್ತಿಕ್ ಅವರ ತಾಯಿ ಶೋಭಾ ಅಂಬರ್ಜೆ, ಹಿತೇಶ್ ಎನ್.ಕೆ.ಅವರ ತಾಯಿ ಮಾಲತಿ ಎನ್.ಕೆ.ಕದ್ರ, ಶಾಲಾ ಹಿರಿಯ ವಿದ್ಯಾರ್ಥಿಗಳು, ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಗೊಂಬೆ ಕುಣಿತ, ತಾಸೆ ಮೆರವಣಿಗೆಯಲ್ಲಿ ಗಮನ ಸೆಳೆಯಿತು. ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಶಾಲಾ ಶಿಕ್ಷಕ ಪವನ್ ಮೆರವಣಿಗೆಯಲ್ಲಿ ಉದ್ಘೋಷಣೆ ಮಾಡಿದರು. ಮೆರವಣಿಗೆಗೆ ಶಾಲೆಗೆ ಆಗಮಿಸಿದ ಬಳಿಕ ಕಾಲೇಜು ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು, ಅವರ ಪೋಷಕರನ್ನು ಹಾಗೂ ತರಬೇತುದಾರರನ್ನು ಗೌರವಿಸಲಾಯಿತು.

LEAVE A REPLY

Please enter your comment!
Please enter your name here