ವಿವೇಕಾನಂದ ಸೆಂಟ್ರಲ್ ಸ್ಕೂಲಿನಲ್ಲಿ ‘ಶ್ರೀರಾಮನ ಆದರ್ಶಗಳು’ ವಿಶೇಷ ಉಪನ್ಯಾಸ ಕಾರ್ಯಕ್ರಮ

0

ಪುತ್ತೂರು: ಭಾರತವು ವೈವಿಧ್ಯಮಯವಾದ ವೈಶಿಷ್ಟ್ಯತೆಗಳನ್ನು ಹೊಂದಿದ ದೇಶ. ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಎರಡು ಮಹಾಕಾವ್ಯಗಳು, ರಾಮಾಯಣ ಮತ್ತು ಮಹಾಭಾರತ. ರಾಮನು ತನ್ನ ಬದುಕಿನಲ್ಲಿ ಅಳವಡಿಸಿಕೊಂಡಿದ್ದ ನೀತಿ, ತತ್ವಗಳು ಎಲ್ಲರಿಗೂ ಆದರ್ಶಪ್ರಾಯವಾಗಿವೆ ಎಂದು ನಿವೃತ್ತ ಅಧ್ಯಾಪಕ ಭಾಸ್ಕರ್ ಶೆಟ್ಟಿ ಹೇಳಿದರು. ಇವರು, ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮ ಪ್ರಾಣ ಪ್ರತಿಷ್ಠೆಯ ಪ್ರಯುಕ್ತ ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ನಡೆದ ಸರಣಿ ಕಾರ್ಯಕ್ರಮದಲ್ಲಿ, ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಆಯೋಜಿಸಲಾದ ‘ಶ್ರೀರಾಮನ ಆದರ್ಶಗಳು’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ನಮ್ಮ ಸಮಕಾಲೀನ ಜೀವನ ಶೈಲಿಯಲ್ಲಿ ನಾವು ಅಳವಡಿಸಿಕೊಂಡಿರುವ ಉತ್ತಮ ಮೌಲ್ಯಗಳನ್ನು ಹುಟ್ಟುಹಾಕಿದವನು ಶ್ರೀರಾಮ ಎನ್ನಬಹುದು. ಉತ್ತಮ ಮನೋಭಾವ ಮತ್ತು ಹೃದಯ ವೈಶಾಲ್ಯತೆಯುಳ್ಳವರು ಹೊಂದಾಣಿಕೆ, ತ್ಯಾಗ, ಪರೋಪಕಾರಗಳಂತಹ ಉನ್ನತ ಗುಣಗಳನ್ನು ಹೊಂದಿರುತ್ತಾರೆ. ರಾಮರಾಜ್ಯ ನಿರ್ಮಾಣವು ಎಲ್ಲರ ಬಹುಕಾಲದ ಕನಸಾಗಿದೆ. ರಾಮನ ಪ್ರಾಣ ಪ್ರತಿಷ್ಠೆ ಆದ ಕೂಡಲೇ ರಾಮರಾಜ್ಯ ನಿರ್ಮಾಣವಾಗುವುದಿಲ್ಲ. ಆತನ ಆದರ್ಶ ಗುಣಗಳನ್ನು ನಾವು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ನಮ್ಮ ದೇಶ ರಾಮರಾಜ್ಯವಾಗುತ್ತದೆ ಎಂದು ಅವರು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್ ಅವರು ಮಾತನಾw ರಾಮನ ಗುಣ ಎಲ್ಲರಿಗೂ ಮಾದರಿ. ನಾವು ನಮ್ಮ ಬದುಕಿನಲ್ಲಿ ಆದರ್ಶ ಗುಣಗಳನ್ನು ಕೇವಲ ಒಂದು ದಿನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗದು. ಅವುಗಳನ್ನು ಪದೇ ಪದೇ ಮನನ ಮಾಡಿಕೊಳ್ಳಬೇಕು. ಸನಾತನ ಧರ್ಮದ ಮಹಾಕಾವ್ಯಗಳು ನಮ್ಮ ಬದುಕಿಗೆ ಪೂರಕವಾದ ಉತ್ತಮ ಮೌಲ್ಯಗಳನ್ನು ಒಳಗೊಂಡಿವೆ. ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕಾಗಿ ನಡೆದ ಐದು ಶತಮಾನಗಳ ಕಾಲದ ಹೋರಾಟದಲ್ಲಿ ಅನೇಕ ಹಿಂದೂ ವೀರರು ಪ್ರಾಣ ತ್ಯಾಗ ಮಾಡಿದ್ದಾರೆ. ರಾಮನ ಪ್ರಾಣ ಪ್ರತಿಷ್ಠೆಗೆ ಎಲ್ಲರೂ ಕಾದಿರುವರು. ನಾವು ನಮ್ಮ ಸನಾತನ ಧರ್ಮ,ಸಂಸ್ಕೃತಿಯನ್ನು ಪಾಲಿಸೋಣ ಎಂದು ಹೇಳಿದರು.

ವೇದಿಕೆಯಲ್ಲಿ, ಆಡಳಿತ ಮಂಡಳಿಯ ಅಧ್ಯಕ್ಷೆ ವಸಂತಿ ಕೆ., ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ಸಂಚಾಲಕ ಭರತ್ ಪೈ, ಮುಖ್ಯೋಪಾಧ್ಯಾಯಿನಿ ಸಿಂಧೂ ವಿ.ಜಿ , ಪಿ.ಟಿ.ಎ ಅಧ್ಯಕ್ಷೆ ಅಕ್ಷತಾ ಶೆಣೈ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ, ಸಂಸ್ಕೃತ ಅಧ್ಯಾಪಕಿ ಅಪೂರ್ವ ಸ್ವಾಗತಿಸಿ, ಹಿಂದಿ ವಿಭಾಗದ ಅಧ್ಯಾಪಕಿ ಪ್ರಫುಲ್ಲಾ ವಂದಿಸಿದರು. ಸಹ ಶಿಕ್ಷಕಿ ಸ್ವಾತಿ ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.

LEAVE A REPLY

Please enter your comment!
Please enter your name here