ಫಾಸ್ಟ್ ಫುಡ್ ಆರೋಗ್ಯಕ್ಕೆ ಒಳ್ಳೆಯದಲ್ಲ : ಡಾ.ಶ್ರೀಕಾಂತ ರಾವ್
ಪುತ್ತೂರು: ಇತ್ತೀಚಿನ ದಿನಗಳಲ್ಲಿ ನಾವು ಸೇವಿಸುವ ಫಾಸ್ಟ್ ಫುಡ್ಗಳು ದೇಹಕ್ಕೆ ಯಾವುದೇ ರೀತಿಯ ಪ್ರಯೋಜನಗಳನ್ನು ಕೊಡಲಾರವು. ಬದಲಿಗೆ ಅತ್ಯಂತ ಹಾನಿಯನ್ನು ಉಂಟುಮಾಡುತ್ತವೆ. ಆರೋಗ್ಯವಂತ ವ್ಯಕ್ತಿಯ ಹಲ್ಲುಗಳ ಆರೋಗ್ಯವು ಇಂತಹ ಆಹಾರ ಸೇವನೆಯಿಂದ ನಶಿಸುತ್ತದೆ ಎಂದು ಮಕ್ಕಳ ತಜ್ಞ ಡಾ.ಶ್ರೀಕಾಂತ ರಾವ್ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯ ಹತ್ತನೆಯ ವರ್ಷಾಚರಣೆ ದಶಾಂಬಿಕೋತ್ಸವದ ಪ್ರಯುಕ್ತ ಶನಿವಾರದಂದು ಆಯೋಜಿಸಲಾದ ‘ಉಚಿತ ದಂತ ತಪಾಸಣೆ’ ಕಾರ್ಯಕ್ರಮವನ್ನು ಶಾಲೆಯ ಆವರಣದಲ್ಲಿನ ಶ್ರೀ ಶಂಕರ ಸಭಾಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಮಣಿಪಾಲ ದಂತ ಮಹಾವಿದ್ಯಾಲಯದ ಪಬ್ಲಿಕ್ ಹೆಲ್ತ್ ಡೆಂಟಿಸ್ಟ್ರಿಯ ಪ್ರಾಧ್ಯಾಪಕ ಡಾ.ಪ್ರವೀಣ್ ಜೋಡಳ್ಳಿ ಅವರು ಹಲ್ಲಿನ ಆರೋಗ್ಯದ ಬಗ್ಗೆ ಮಾಹಿತಿಯನ್ನು ನೀಡಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯ ಸುರೇಶ್ ಶೆಟ್ಟಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ಬರುವ ಜಾಹೀರಾತುಗಳು ನಮ್ಮ ದಾರಿ ತಪ್ಪಿಸುತ್ತಿವೆ. ಆದ್ದರಿಂದ ಜಾಗರೂಕರಾಗಿರಬೇಕು ಎಂದು ತಿಳಿ ಹೇಳಿದರು.
ಕಾರ್ಯಕ್ರಮದಲ್ಲಿ ಸುಳ್ಯದ ಕೆ.ವಿ.ಜಿ ಡೆಂಟಲ್ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಾ. ಚರಣ್ ಕಜೆ, ದಶಾಂಬಿಕೋತ್ಸವ ಸಮಿತಿ ಅಧ್ಯಕ್ಷ ಮಹೇಶ್ ಕಜೆ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಸೀಮಾ ನಾಗರಾಜ್, ಪ್ರಾಂಶುಪಾಲೆ ಮಾಲತಿ ಡಿ ಉಪಸ್ಥಿತರಿದ್ದರು. ಸನ್ಮಯ್ ಸ್ವಾಗತಿಸಿ ಕುಮಾರಿ ಕುವೀರಾ ವಂದಿಸಿದರು. ವಿದ್ಯಾರ್ಥಿನಿ ಕು.ಸಾರಿಕಾ ಪೈ ಕಾರ್ಯಕ್ರಮವನ್ನು ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಮಣಿಪಾಲ ದಂತ ಮಹಾವಿದ್ಯಾಲಯದ ವೈದ್ಯರಿಂದ ದಂತ ತಪಾಸಣೆಯು ನಡೆಯಿತು.